ಆದಪ್ಪ ಹೆಂಬಾರವರ-ಅವನಿ – (ಕಾದಂಬರಿ)ಅವಲೋಕನ,ಮಂಡಲಗಿರಿ ಪ್ರಸನ್ನರಬರಿಂದ

ಪುಸ್ತಕ ಸಂಗಾತಿ

ಆದಪ್ಪ ಹೆಂಬಾರವರ-ಅವನಿ

(ಕಾದಂಬರಿ)ಅವಲೋಕನ

ಮಂಡಲಗಿರಿ ಪ್ರಸನ್ನ

ಅವನಿ – (ಕಾದಂಬರಿ)
ಲೇಖಕರು- ಆದಪ್ಪ ಹೆಂಬಾ
ತೇಜಸ್ ಪ್ರಕಾಶನ, ಮಸ್ಕಿ ರಾಯಚೂರು ಜಿಲ್ಲೆ
ಪುಟಗಳು: ೧೦೮
ಬೆಲೆ: ರೂ. ೧೦೦/-
ಪುಸ್ತಕಕ್ಕೆ ಸಂಪರ್ಕ: ೯೮೪೫೬೭೬೫೯೧

…….
ಅವನಿ ಕಾದಂಬರಿ: ಧರ್ಮದ ಹೆಸರಲ್ಲಿ ಪ್ರೀತಿ ಸೋಲುವುದೆಲ್ಲಿ?

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾದಂಬರಿ ರಚನೆ ಅಪರೂಪ ಹಾಗೂ ತೀರ ವಿರಳ ಎಂಬ ಸಂದರ್ಭದಲ್ಲಿ ಆದಪ್ಪ ಹೆಂಬಾ ಮಸ್ಕಿ ಅವರ ಅವನಿ' ಕಾದಂಬರಿ ರಚನೆಗೊಂಡಿದೆ. ಅದಕ್ಕಾಗಿ ಮೊದಲು ಅವರಿಗೆ ಅಭಿನಂದನೆಗಳು. ಎಡದೊರೆಯ ಬಿಸಿಲ ನಾಡು ರಾಯಚೂರು ಭಾಗದಲ್ಲಿ ಸಣ್ಣಕಥೆ, ಕಾವ್ಯ ಸದಾ ಕಾಲ ಮುನ್ನಲೆಯಲ್ಲಿದೆ. ಈ ಭಾಗದಲ್ಲಿ ಕಾದಂಬರಿ, ಮಹಾಕಾವ್ಯ, ಲಲಿತ ಪ್ರಬಂಧ, ನಾಟಕ ರಚನೆಗಳಿಗೆ ಬರಹಗಾರರು ಹೆಚ್ಚಿನ ಮಹತ್ವ ನೀಡಿದಂತಿಲ್ಲ. ಕಾದಂಬರಿ ಎಂಬುದು ಒಂದು ವಿಸ್ತಾರವಾದ ಹರವಿನ ಸಾಹಿತ್ಯ ಸೃಷ್ಟಿ. ಈ ಹಿನ್ನೆಲೆಯಲ್ಲಿ ಸಹಜವಾಗೆ ಬರಹಗಾರರಿಗೆ ವಿಸ್ತೃತ ಓದು, ಅಧ್ಯಯನ, ವಸ್ತು-ವಿನ್ಯಾಸ, ಪಾತ್ರಗಳ ಸೃಷ್ಟಿ, ಪಾತ್ರಗಳ ನವಿರಾದ ಪೋಷಣೆಯಂತಹ ಅಂಶಗಳು ಮುಖ್ಯವಾಗುತ್ತವೆ. ಅಲ್ಲಲ್ಲಿ ಸಣ್ಣ ಕಥೆ, ಕವಿತೆಗಳನ್ನು ಬರೆದ ಆದಪ್ಪ ಹೆಂಬಾ ಅವರಿಗೆ ಸಹಜವಾಗೆ ಈ ಚೊಚ್ಚಲ ಕಾದಂಬರಿ ರಚನೆ ಸವಾಲಾಗಿ ಕಂಡಿರಲಿಕ್ಕೆ ಸಾಕು. ಅವನಿ’ (ಇದು ಕಥಾ ನಾಯಕಿಯ ಹೆಸರೂ ಹೌದು) ಒಂದು ಸಂಕೀರ್ಣ ವಸ್ತುವಿನ ಕಾದಂಬರಿ. ಸರಳ ಪ್ರೇಮವೊಂದು ನಂತರ ಕುತೂಹಲಕಾರಿ ತಿರುವುಗಳಿಗೆ ಕಾರಣವಾಗುತ್ತಾ ಹೋಗುತ್ತದೆ. ಸತ್ಯದ ಒಂದು ಎಳೆ ಸೃಜನಶೀಲತೆಯಲ್ಲಿ ಕವಲೊಡೆದು ಬರಹಗಾರನ ಮೂಲ ವಿಷಯಕ್ಕೆ ಬಂದು ನಿಲ್ಲುತ್ತದೆ, ಹಲವು ಒಳನೋಟಗಳ ಮೂಲಕ. ಕೆಲವು ಸಾರಿ ಇಡಿ ಕಾದಂಬರಿಯಲ್ಲಿ ಬರಹಗಾರ ತನ್ನ ಅನುಭವದ ವ್ಯಾಪ್ತಿಯನ್ನೆ ಆಧರಿಸಿ ಬರೆದರೂ ಅದು ಓದುಗನ ಸಂವಹನ ಕ್ರೀಯೆಯನ್ನು ಗೆಲ್ಲುವಲ್ಲಿ ಸೋಲುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಅವನಿ’ ಕಾದಂಬರಿ ಪ್ರೇಮಿಗಳ ಘಟನೆಯಿಂದ ಆರಂಭವಾಗುತ್ತದೆ. ನಂತರ ಸಿನಿಮೀಯ ತಿರುವು ಧರ್ಮದ ನೆಲೆಯ ಹಂತಕ್ಕೆ ತಲುಪುತ್ತದೆ. ವಿಭಿನ್ನ ಎರಡು ಧರ್ಮಗಳ ತೇಜಸ್ ಹಾಗೂ ಮಿಸ್ಬಾಳ ಸ್ನೇಹ ಪ್ರೀತಿಗೆ ತಿರುಗುವುದು, ಅಕ್ಕ 'ಅವನಿ'ಗೆ ಈ ವಿಷಯ ತಿಳಿದುಪ್ರೀತಿ, ಮದುವೆಗಿಂತಲೂ ಬದುಕಲ್ಲಿ ಸಾಧನೆ ಮುಖ್ಯ’ ಎಂದು ನೀಡುವ ಸಲಹೆ ಸೂಕ್ತವೆ ಆದರೂ, ಎನ್‌ಜಿಓ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕಥಾನಾಯಕಿ ‘ಅವನಿ’ ತಮ್ಮನ ಪ್ರೇಮ ಪ್ರಕರಣವನ್ನು ಸರಳೀಕರಿಸಿ, ಅಧಿಕೃತಗೊಳಿಸಿ, ಸಂಬಂಧ ಕುದುರಿಸಲು ಮಿಸ್ಬಾಳ ಅಣ್ಣ ಅರ್ಮಾನ್ ಬಳಿ ಪ್ರಯತ್ನಿಸುತ್ತಾಳೆ.
ಪ್ರೀತಿಯ ಕಾರಣದಿಂದ ಏನೂ ತಿಳಿಯದ ಕುಟುಂಬವೊಂದರ ಜೊತೆ ಸಂಬಂಧ ಬೆಳೆಸಲು ಹೋಗುವ ತೇಜಸ್, ಮಿಸ್ಬಾಳನ್ನು ಮದುವೆಯಾಗುವ ಹಂತಕ್ಕೆ ತಲುಪಿದ ನಂತರದ ತಿರುವುಗಳೆಲ್ಲ ಸಿನಿಮೀಯ! ಎರಡು ಬೇರೆ ಧರ್ಮದ ಯುವ ಮನಸುಗಳ ತಾಕಲಾಟ ಶುರುವಾಗಿ ತಮ್ಮನ ಪ್ರೀತಿಯನ್ನು ಅವರ ಧರ್ಮ, ಸಮಾಜ ಒಪ್ಪುತ್ತವೆಯೆ?’ ಎಂಬ ಬಹುದೊಡ್ಡ ಪ್ರಶ್ನೆ 'ಅವನಿ'ಗೆ ಸವಾಲಾಗಿ ನಿಲ್ಲುತ್ತದೆ. ಅಕ್ಕ ಅವನಿ ಈ ಸಮಾಜ ತುಂಬಾ ಕ್ರೂರಿ…..’ ಎನ್ನುವ ನಿರ್ಧಾರಕ್ಕೆ ಬರುತ್ತಾಳೆ.
ಆದರೆ ಮಿಸ್ಬಾ ನಮ್ಮ ಸಾಧನೆಗಳು ಎಷ್ಟೇ ದೊಡ್ಡವಾಗಿದ್ದರೂ ಅವನ್ನು ನನ್ನ (ಮಿಸ್ಬಾಳ) ಸಮಾಜದಲ್ಲಿ ಗುರುತಿಸುವುದು ಕಡಿಮೆ’ ಎಂಬ ವಾಸ್ತವದ ಮಾತು, ಆಕೆ ತನ್ನ ಧರ್ಮದಲ್ಲಿನ ಲೋಪದೋಷಗಳನ್ನು ನೇರವಾಗೆ ತಿಳಿಸಲು ಪ್ರಯತ್ನಿಸುವುದು ನಿಜಕ್ಕೂ ಒಪ್ಪುವ ವಿಚಾರವೆ. ಆದರೂಜಾತಿ, ಧರ್ಮ, ಎನ್ನುವ ಬದಲು ಮನುಷ್ಯ ಧರ್ಮ ಮುಖ್ಯ’ ಎನ್ನುವ ಸಂದೇಶವನ್ನು ಮಿಸ್ಬಾ ಅಣ್ಣ ಅರ್ಮಾನ ಮೂಲಕ ಅವನಿಗೆ ತಿಳಿಸಲು ಪ್ರಯತ್ನಿಸುತ್ತಾಳೆ. ಬಿಡದ ಪ್ರಯತ್ನದಲ್ಲಿ ‘ಅವನಿ’ ತೇಜಸ್ ಹಾಗೂ ಮಿಸ್ಬಾಳ ಮದುವೆ ಪ್ರಸ್ತಾಪವನ್ನು ಅರ್ಮಾನ್ ಬಳಿ ತಿಳಿಸುತ್ತಲೆ, ಅರ್ಮಾನ್ ತನ್ನ ಧರ್ಮದ ಗೌರವ-ನಿಷ್ಠೆ ತೋರಿಸಿ ತನ್ನ ಧರ್ಮವೆ ಶ್ರೇಷ್ಠ ಎನ್ನುವುದನ್ನು ಪ್ರಕಟಿಸುತ್ತಾನೆ. ಆತನಿಗೆ ತನ್ನ ಧರ್ಮದ ಕಾಳಜಿ ಎಷ್ಟರಮಟ್ಟಿಗೆ ಇರುತ್ತದೆಂದರೆ, ತಂಗಿಯ ಮದುವೆಯನ್ನು ಕುರಿ ಕೇಳಿ ಮಸಾಲೆ ಅರೆಯಲ್ಲ’ ಅನ್ನುವ ಮೂಲಕ ತಂಗಿಯ ಆಶಯಗಳನ್ನು ಧಿಕ್ಕರಿಸುವ ಸೂಚನೆ ನೀಡುತ್ತಾನೆ. ತಮ್ಮನ ಮದುವೆ ಇಷ್ಟಪಟ್ಟ ಹುಡುಗಿ ಮಿಸ್ಬಾ ಜೊತೆ ನೆರವೇರಿಸಬೇಕೆಂಬ ಅವನಿಯ ಅತಿಯಾದ ಆತ್ಮವಿಶ್ವಾಸ ಯಾವ ಹಂತ ತಲುಪುತ್ತದೆ ಎಂದರೆ ಅವನಿನನ್ನ ಪ್ರಾಣ ಹೋದರೂ ಸರಿ ನಿನ್ನ ಪ್ರೀತಿಯನ್ನು ಸಾಯಲು ಬಿಡುವುದಿಲ್ಲ’ ಎಂದು ತಮ್ಮನಿಗೆ ಭರವಸೆ ನೀಡುತ್ತಾಳೆ. ಮರುಪ್ರಯತ್ನದಲ್ಲಿ ಮತ್ತೆ ಅವನಿ ಅರ್ಮಾನ್‌ಗೆ ತೇಜಸ್-ಮಿಸ್ಬಾಳ ಮದುವೆ ಪ್ರಸ್ತಾಪ ತೆಗೆದುಕೊಂಡು ಹೋದಾಗ ಅರ್ಮಾನ್ ಧರ್ಮಾಂಧತೆಯ ಮಾತಲ್ಲಿ ನನ್ನ ಧರ್ಮ ನನಗೆ ಸರ್ವಸ್ವ, ಬೇರಾವ ಧರ್ಮವನ್ನೂ ನಾನೂ ಇಷ್ಟಪಡುವುದಿಲ್ಲ....ಈ ಮದುವೆ ಸಾಧ್ಯವಿಲ್ಲ’ ಎಂದು ನಿರಾಕರಿಸಿ, ಮದುವೆ ಒಂದು ವೇಳೆ ನಡೆಯಬೇಕೆಂದರೆನೀವು ನನ್ನನ್ನು ಮದುವೆಯಾಗಿ, ನನ್ನ ಧರ್ಮಕ್ಕೆ ಮತಾಂತರವಾಗಿ’ ಎಂದು ‘ಅವನಿ’ ಗೆ ಸೂಚಿಸುತ್ತಾನೆ. ಆಗಲೆ ಕಾದಂಬರಿಯಲ್ಲಿ ಮಹತ್ವದ ತಿರುವು…. ತಮ್ಮ ತೇಜಸ್ ಹಾಗೂ ಮಿಸ್ಬಾಳ ಮದುವೆಗಾಗಿ ಅರ್ಮಾನ್‌ನನ್ನು ಮದುವೆಯಾಗಲು ಒಪ್ಪಿಗೆ ಸೂಚಿಸುತ್ತಾಳೆ ಅವನಿ.
ಅರ್ಮಾನ್ ವಾಸ್ತವದಲ್ಲಿ ಭಯೋತ್ಪಾದಕ! ಸಮಾಜ ದ್ರೋಹ ಚಟುವಟಿಕೆಗಳಿಗೆ ಬೆಂಬಲ ಕೊಡುವ ಸಂಘಟನೆಯ ಮೂಲಭೂತವಾದಿ, ಸಮಾಜಘಾತುಕ ವ್ಯಕ್ತಿ ಎಂದು ಗೊತ್ತಾಗುತ್ತದೆ. ಇದನ್ನು ತಿಳಿದ ಪೊಲೀಸ್ ಅಧಿಕಾರಿ ತೇಜಸ್ ಅರ್ಮಾನ್ ಮೇಲೆ ಕಾನೂನು ಕ್ರಮಕ್ಕೆ ಮುಂದಾಗುತ್ತಾನೆ. ಈ ಮಧ್ಯೆ ಅವನಿ’ಗೂ ವಿಚಿತ್ರ ಪರಿಸ್ಥಿತಿ ಎದುರಾಗಿ ಅವಳ ಮೇಲೆ ಅತ್ಯಾಚಾರ ನಡೆಯುವ ಮೂಲಕ ಮತ್ತೊಂದು ತಿರುವು ಕಥೆಯಲ್ಲಿ; ಅಂತಿಮವಾಗಿ ಸಿಗುವ ಅರ್ಮಾನ್‌ ಪತ್ರದಲ್ಲಿ ಉಗ್ರ ಮಸೂದ್ ಎಂಬುವನನ್ನು ಮಟ್ಟಹಾಕಲು ತಾನು ಸಮಾಜಘಾತುಕ ವ್ಯಕ್ತಿಯ ನಾಟಕವಾಡಿದ್ದರ ಬಗ್ಗೆ ಅರ್ಮಾನ್ ಅಂತರಂಗ ಬಹಿರಂಗಗೊಳ್ಳುತ್ತದೆ. ತಮ್ಮನಿಗಾಗಿ ಅಕ್ಕ ಪಡುವ ಪಾಡು, ಅವನ ಪ್ರೀತಿಯನ್ನು ಅಧೀಕೃತಗೊಳಿಸಲು ಅಕ್ಕನೆ ಬಲಿಯಾಗುವುದು. ನಂತರ ತನ್ನ ಪ್ರೇಯಸಿಯ ಅಣ್ಣನಿಗೆ ಭಯೋತ್ಪಾದಕನಂತೆ ಕಾಣುವ, ಕೊನೆಗೆ ಅರ್ಮಾನ್ ದೇಶಭಕ್ತನಾಗುವ ತಿರುವುಗಳು ಕಥೆಯಲ್ಲಿ ಹೇರಳವಾಗಿವೆ. ಆದರೆ, ಕುಟುಂಬದ ಹಿನ್ನೆಲೆ ಅರಿಯದೆ ಜಾಣ ಹುಡುಗಿಅವನಿ’ ತಮ್ಮನ ಮದುವೆ ಮಾಡುವುದು ವಿಚಿತ್ರ ಸಂಗತಿ!
‘ಬೇರೆ ಧರ್ಮ ನನಗೆ ಅಗತ್ಯವಿಲ್ಲ’ ಎನ್ನುವ ಧಾವಂತದಲ್ಲೆ ಸಾಗುವ ಅರ್ಮಾನ್ ತಿಳುವಳಿಕೆ ‘ವ್ಯಕ್ತಿ ಯಾವುದೆ ಧರ್ಮಕ್ಕೆ ಸೇರಿರಲಿ, ಇತರೆ ಧರ್ಮವನ್ನು ಗೌರವಿಸಬೇಕು’ ಎಂಬ ಕನಿಷ್ಟ ಯೋಚನೆ ಇಲ್ಲದಿರುವುದು ವ್ಯತಿರಿಕ್ತವಾಗಿದೆ. ಧರ್ಮ, ಜಾತಿಗಳು ಮುಖ್ಯವಾಗುವುದಿಲ್ಲ ಎಂಬ ಸಂದೇಶ ನೀಡುತ್ತದೆ.
ಇದೊಂದು ಪ್ರೇಮ ಕಥೆಯಾದರೂ ಕೆಲವು ಪಾತ್ರಗಳ ಪೋಷಣೆ ಕಥೆಯ ಗಟ್ಟಿತನದ ಓಟಕ್ಕೆ ಅಡ್ಡಗಾಲು ಹಾಕಿದೆ. ನಗರ ಪ್ರಜ್ಞೆಯ ಭಾಷೆ ಸರಿ ಎನಿಸಿದರೂ, ಸಂಭಾಷಣೆ ತುಸು ಹೆಚ್ಚಾಯಿತು ಎಂಬ ಭಾವ ಮೂಡುತ್ತದೆ. ಆದಪ್ಪ ಹೆಂಬಾ, ತಮ್ಮ ಅನುಭವ ಹಾಗೂ ಆಲೋಚನೆಗಳ ಮೂಲಕ ಗದ್ಯ ಬರವಣಿಗೆಗೆ ಶಕ್ತಿ ತುಂಬಬಲ್ಲವರಾಗಿದ್ದಾರೆ, ಅವರ ಅನುಭವ ತೊರೆಯಿಂದ ಹೊಸ ಬಗೆಯ ಗಟ್ಟಿ ಕಾದಂಬರಿಗಳು ಬರಲಿ.


ಮಂಡಲಗಿರಿ ಪ್ರಸನ್ನ

Leave a Reply

Back To Top