ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ

ಸಿರಾಜ್ ಅಹಮದರ ಗಜಲ್ ಗಳಲ್ಲಿ

ಪ್ರೀತಿಯ ಬಂಧ

ಹಲೋ, ಗಜಲ್ ಪ್ರೀತಿಸುವ, ಪೂಜಿಸುವ, ಉಸಿರಾಡುವ ಮನಸುಗಳೇ ಹೇಗಿದ್ದೀರಾ.. ‘ಗಜಲ್’ ಕಾರವಾನ್ ನಲ್ಲಿ ಸುತ್ತಾಡುತಿದ್ದೀರಾ.. ನಮ್ಮನ್ನೂ ಕರಿಯೋದಲ್ವಾ, ನಾನು ಬರುತಿದ್ದೆ.. ಸರಿ, ಇವಾಗಲೂ ಕಾಲ ಏನೂ ಮಿಂಚಿಲ್ಲ. ನಮ್ಮ ಮಧ್ಯೆಯಿರುವ ಒಬ್ಬ ವಿಶಿಷ್ಟ ಸುಖನವರ್ ಒಬ್ಬರ ಹೆಜ್ಜೆ ಗುರುತುಗಳೊಂದಿಗೆ ಬಂದು ನಿಮ್ಮೊಂದಿಗೆ ಸೇರುವೆ, ಓಕೆ ನಾ,.. ಲೆಟಸ್ ಎಂಜಾಯ್..!!

ಚಿಕ್ಕ ಚಿಕ್ಕ ವಿಷಯಗಳಿಗೂ ಖುಷಿ ಪಡಲು ಬರುತಿತ್ತು ನನಗೆ
ದೊಡ್ಡ ವಿಷಯಗಳಿಗೂ ಮೌನವಾಗಿರಲು ನಿನ್ನಿಂದಲೇ ಕಲಿತಿರುವೆ”
ಜೆಹರಾ ನಿಗಾಹ

      ‘ಬದುಕು’ ಎಂದಾಗ ತಟ್ಟನೆ ನಮ್ಮ ಕಣ್ಣ ಮುಂದೆ ಬರೋದು ಮನುಷ್ಯನ ಜೀವನ. ಅವನು, ಅವಳು; ಅವರು ತಮ್ಮ ಬದುಕನ್ನು ಹೇಗೆ ಕಟ್ಟಿಕೊಂಡರು, ಕಟ್ಟಿಕೊಳ್ಳುವರು ಎಂಬುದು. ಆದರೆ ‘ಬದುಕು’ ಎಂಬುದು ಕೇವಲ ಮನುಷ್ಯನ ಸ್ವತ್ತಲ್ಲ, ಪ್ರಾಣಿ-ಪಕ್ಷಿಗಳ ಜೊತೆಗೆ ಇತರ ಜೀವಸಂಕುಲಕ್ಕೂ ಇರುತ್ತದೆ. ಆದಾಗ್ಯೂ ಹೆಚ್ಚು ಹೆಚ್ಚು ಚರ್ಚೆಗೆ ಈಡಾಗುವುದು ಮಾತ್ರ ಮನುಷ್ಯನ ಜೀವನ ಎಂಬುದು ಸರ್ವವಿದಿತ. ಇದಕ್ಕೆ ‘ಏಕೆ’ ಎಂದು ಪ್ರಶ್ನೆ ಮಾಡಿದಾಗ ಎಲ್ಲರ ಉತ್ತರ ‘ಮನುಷ್ಯ ವಿವೇಚನಾ ಜೀವಿ, ಯೋಚಿಸುವ ಶಕ್ತಿ ಉಳ್ಳವನು; ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿದವನು’ ಎಂಬುದೇ ಆಗಿರುತ್ತದೆ ಅಲ್ಲವೇ? ಬೆಳಕು ಕೊಡುವ ದೀಪದ ಕೆಳಗಡೆಯೇ ಕತ್ತಲೆ ಇರುವುದು ಎಷ್ಟು ನಿಜವೋ ಅಷ್ಟೇ ನಿಜ ಬುದ್ಧಿವಂತ ಮನುಷ್ಯ ಹಲವೊಮ್ಮೆ ಇತರ ಜೀವಸಂಕುಲಗಿಂತಲೂ ಹೀನಾಯವಾಗಿ ಜೀವನ ಸಾಗಿಸಿದ್ದಾನೆ, ಸಾಗಿಸುತಿದ್ದಾನೆ ಎಂಬುದು! ಬಹುಬೇಗನೆ ಬದುಕಿನಿಂದ ವಿಮುಖವಾಗುವ, ಎಲ್ಲವೂ ತನಗೆ ಮಾತ್ರ ಬೇಕೆನ್ನುವ ಹಪಾಹಪಿ ಏರುಮುಖವಾಗಿದೆ. ಇದಕ್ಕೆಲ್ಲ ಕೊನೆ ಇಲ್ವಾ ಎಂಬ ಭಾವ ಸೂಕ್ಷ್ಮ ಸಂವೇದನೆಯ ಮನಗಳಗೆ ಕಾಡುವುದುಂಟು. ಹಾಗಂತ ಕಾಡುವುದು ‘ಹತಾಶೆ’ಯ ರೂಪವನ್ನು ಧರಿಸಬಾರದು. ಎಚ್ಚರಿಕೆಯ ನೆಲೆಯಲ್ಲಿ ನಕಾರಾತ್ಮಕತೆಯ ಒಂದು ಹಂತ ಸಹಿಸಬಹುದೆ ಹೊರತು ಅದುವೇ ಉಸಿರಾದಾಗ ಆ ‘ಉಸಿರು’ ಇರುವುದಾದರೂ ಹೇಗೆ ಹೇಳಿ..? ಇನ್ನೊಂದು ವಿಷಯ, ಯೋಚಿಸುವ ಶಕ್ತಿಯೇ ಕೆಲವು ಬಾರಿ ಮನುಷ್ಯನ ನೆಮ್ಮದಿಗೆ ಕಫನ್ ತೊಡಿಸಿದ್ದೂ ಉಂಟು. ಬುದ್ಧಿಶಕ್ತಿ ಎನ್ನುವುದು ಬಾಳಿಗೆ ಉಯ್ಯಾಲೆ ಆಗಬೇಕೆ ವಿನಃ ಮಸಣದತ್ತ ಮುಖ ಮಾಡಿರುವ ಶವಯಾತ್ರೆಗೆ ಮುನ್ನುಡಿ ಬರೆಯಬಾರದು. ಇದಕ್ಕೆಲ್ಲ ಒಂದು ಆಶಾಭಾವ, ಸಮತೋಲನದ ಸೇತುವೆ; ನೆಮ್ಮದಿಯ ನಿಟ್ಟುಸಿರು ಎಂದರೆ ಸಾಹಿತ್ಯ-ಸಂಗೀತ-ಸಾಂಸ್ಕೃತಿಕ ಚಟುವಟಿಕೆಗಳ ಮೆದು ಆಲಿಂಗನ ಎನ್ನಬಹುದು. ಸಾಹಿತ್ಯ ಎನ್ನುವಂತದ್ದು ಹೇಗೆ ದಾನವನನ್ನೂ ಮಾನವನನ್ನಾಗಿಸುವ ಕಲೆ ಕರಗತ ಮಾಡಿಕೊಂಡಿದೆ ಎಂಬುದನ್ನು ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ನಮಗೆ ತಿಳಿಯುತ್ತದೆ. ಬರಹ ಭಾವನೆಗಳ ಜೋಕಾಲಿಗೆ ಹಗ್ಗವಾಗಬಲ್ಲದು, ಬದುಕಿಗೆ ಕೈದೀವಿಗೆಯೂ ಆಗಬಲ್ಲದು. ಈ ಹಿನ್ನೆಲೆಯಲ್ಲಿ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ‘ಗಜಲ್’ ಎಂಬುದು ತನ್ನ ಅಶಅರ್ ಮೂಲಕ ಹಲ್ಲುಗಳ ಮಧ್ಯೆ ನಾಲಿಗೆ ತನ್ನ ಅಸ್ಮಿತೆಯನ್ನು ಉಳಿಸಿಕೊಂಡಂತೆ ಕೋಮಲತೆಯಿಂದಲೆ ಜೀವನ ಪ್ರೀತಿಯನ್ನು ಸಾರುತ್ತ ಬಂದಿದೆ, ಸದಾ ಲವಲವಿಕೆಯನ್ನು ಹಂಚುತ್ತ ಜಾಗತಿಕವಾಗಿ ಹೆಸರು ಮಾಡಿರುವುದು ಮುನ್ನೆಲೆಗೆ ಬಂದಿದೆ. ಅಂತೆಯೇ ಗಜಲ್ ಇಂದು ಬರಹಗಾರರ ಹಾಟ್ ಫೇವರಿಟ್ ಆಗಿದೆ. ಕನ್ನಡ ಅಕ್ಷರಧಾಮದಲ್ಲಿ ಅಸಂಖ್ಯಾತ ಸೃಜನಶೀಲ ಮನಸುಗಳು ಗಜಲ್ ಕೃಷಿಯಲ್ಲಿ ನಿರತವಾಗಿವೆ. ಅಂಥಹ ಮನುಸುಗಳಲ್ಲಿ ಶ್ರೀ ಯು. ಸಿರಾಜ್ ಅಹಮದ್ ಅವರೂ ಒಬ್ಬರು.

        ಶ್ರೀ ಅಬ್ದುಲ್ ಸತ್ತಾರ್ ಸಾಬ್ ಮತ್ತು ಶ್ರೀಮತಿ ಜರೀನಾ ಬೇಗಮ್ ದಂಪತಿಗಳ ಮಗನಾಗಿ ಶ್ರೀಯುತ ಯು. ಸಿರಾಜ್ ಅಹಮದ್ ಅವರು ಶಿಕಾರಿಪುರ ತಾಲೂಕಿನ ಉಡುತಡಿ ಗ್ರಾಮದಲ್ಲಿ ಜನಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ವ್ಯಾಸಂಗ ಮಾಡಿರುವ ಶ್ರೀಯುತರು ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ವ್ಯಾಪಾರಿಯಾಗಿರುವ ಇವರು ಪ್ರವೃತ್ತಿಯಲ್ಲಿ ಉತ್ತಮ ಬರಹಗಾರರು ಹಾಗೂ ಸಂಘಟಕರು. ಕಾವ್ಯ, ಲೇಖನ, ಪ್ರಬಂಧ, ಭಾವಗೀತೆ, ಚುಟುಕು, ಹೈಕು, ಹನಿಗವನ, ರುಬಾಯಿ, ಶಾಯರಿ ಹಾಗೂ ಗಜಲ್ ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ. ‘ಮನದ ಮಾತು’ ಎಂಬ ಕವನ ಸಂಕಲನ, ‘ನವಿಲಿಗೆ ಸಾವಿರ ನಯನಗಳು’ ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

      ಸದಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಇವರ ಹಲವು ಸಾಹಿತ್ಯ ಪ್ರಕಾರಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಶ್ರೀಯುತರು ನಾಡಿನಾದ್ಯಂತ ಜರುಗಿರುವ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅನೇಕ ಕವಿಗೋಷ್ಟಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯದ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇವರ ಕ್ರಿಯಾಶೀಲತೆಗೆ ಹತ್ತು ಹಲವಾರು ಬಹುಮಾನ, ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.‌ ಅವುಗಳಲ್ಲಿ ಕಾವ್ಯ ರತ್ನ ಪ್ರಶಸ್ತಿ, ಕನ್ನಡ ಕಟ್ಟಾಳು ಪ್ರಶಸ್ತಿ, ಕರುನಾಡು ಸೇವಾ ರತ್ನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಭೂಷಣ ಪ್ರಶಸ್ತಿ, ಕನ್ನಡ ಸಾಹಿತ್ಯ ಕೌಸ್ತುಭ ಪ್ರಶಸ್ತಿ, ಕರುನಾಡ ಚೇತನ ಪ್ರಶಸ್ತಿ, ನೆಲಮಂಗಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಭೂಷಣ ಪ್ರಶಸ್ತಿ.. ಪ್ರಮುಖವಾಗಿವೆ. ಇವುಗಳಲ್ಲದೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನಗಳನ್ನು ಪಡೆದಿದ್ದಾರೆ.

     ಅರಾಜಕತೆ, ಅನೈತಿಕತೆ, ಅನ್ಯಾಯ, ಅಸಮತೋಲನ ತಾಂಡವವಾಡುತ್ತಿರುವ ಈ ದುನಿಯಾದಲ್ಲಿ ಪ್ರೀತಿಯ ತಂಗಾಳಿ ಎಲ್ಲಿಯಾದರೂ ಬೀಸುತ್ತಿದೆ ಎಂದರೆ ಅದು ಗಜಲ್ ಮನಸುಗಳಲ್ಲಿ ಮಾತ್ರ. ಕಾರಣ, ನವರಸಗಳ ಸಂಜೀವಿನಿಯಾದ ಪ್ರೀತಿಯನ್ನು ಗಜಲ್ ಉಸಿರಾಡುತ್ತಿದೆ, ಇಬಾದತ್ ಮಾಡುತ್ತಿದೆ. ಈ ನೆಲೆಯಲ್ಲಿ ಗಜಲ್ ಎಂದರೆ ಅನುರಾಗದ ಅಲೆಗಳ ನಡುವೆ ಜೀವನದ ಪಯಣಕ್ಕೆ ಅರ್ಥ ನೀಡುವ ಅನುಪಮ ನೌಕೆ.‌ ಇದು ಮನಸುಗಳನ್ನು ಬೆಸೆಯುವ, ಕನಸುಗಳನ್ನು ಹಂಚುವ ಹಾಗೂ ಸಂಸಾರವನ್ನು ಉಲ್ಲಾಸದಲ್ಲಿಡುವ ಕೆಲಸವನ್ನು ಮಾಡುತ್ತಿದೆ. ಮೃದು, ಮೋಹಕತೆ, ಮಲ್ಹಾರವೇ ಇದರ ಜೀವಾಳ.‌ ಒಲವಿನ ಬುಟ್ಟಿಯನ್ನು ತನ್ನ ಅಶಅರ್ ಮೂಲಕ ನೇಯುತ್ತ ಮನುಕುಲಕ್ಕೆ ಪ್ರೀತಿಯನ್ನು ಉಣಬಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗಜಲ್ ಗೋ ಸಿರಾಜ್ ಅಹಮದ್ ಅವರ ‘ನವಿಲಿಗೆ ಸಾವಿರ ನಮನಗಳು’ ಗಜಲ್ ಸಂಕಲನ ಗಮನಿಸಿದಾಗ ಇಲ್ಲಿ ನಾಡು ನುಡಿಯ ಅಭಿಮಾನ, ಪ್ರೀತಿ, ಪ್ರೇಮ, ಪ್ರಣಯ, ಶೃಂಗಾರ, ವಿರಹ, ಮಿಲನ ಮಹೋತ್ಸವ, ದಾಂಪತ್ಯದ ಸಾಂಗತ್ಯ, ಸಾಮಾಜಿಕ ವ್ಯವಸ್ಥೆಯ ಶೋಷಣೆ, ಮುಖವಾಡಗಳ ಅಟ್ಟಹಾಸ, ರಾಜಕೀಯ, ಧಾರ್ಮಿಕ ಡಾಂಭಿಕತೆ, ಕೋಮುಸೌಹಾರ್ದತೆಯ ಹಂಬಲ… ಎಲ್ಲವೂ ಇಲ್ಲಿ ಮುಪ್ಪರಿಗೊಂಡಿರುವುದು ಮನವರಿಕೆಯಾಗುತ್ತದೆ.

     ‘ಭಾಷೆ’ ಎಂಬುದು ಭಾವನೆಗಳ ನಿಲ್ದಾಣ. ಭಾವನೆಗಳ ಅಭಿವ್ಯಕ್ತಿಗೆ ಭಾಷೆಯ ಅವಶ್ಯಕತೆ ಇದೆ.‌ ಪ್ರಪಂಚದಲ್ಲಿ ಅಸಂಖ್ಯಾತ ಭಾಷೆಗಳಿವೆ. ಎಲ್ಲ ಭಾಷೆಗಳಿಗೂ ಅದರದೇ ಆದ ಸೊಗಡು, ಮಹತ್ವ ಇದೆ. ಶಾಯರ್ ಸಿರಾಜ್ ಅಹಮದ್ ಅವರ ಕನ್ನಡ ಭಾಷೆಯ ಅಭಿಮಾನವು ಈ ಕೆಳಗಿನ ಷೇರ್ ನಲ್ಲಿ ತುಂಬಾ ಆಪ್ತವಾಗಿ ಮೂರ್ತರೂಪ ಪಡೆದಿದೆ.

“ದುಂಡು ಮಲ್ಲಿಗೆಯಂತೆ ಕನ್ನಡದ ಅಕ್ಕರ
ಲೇಖನಿಯ ಹರವನ್ನು ತಿಳಿದವನೇ ಬಲ್ಲ”

ಪ್ರಕೃತಿಯಲ್ಲಿ ಒಂದಕ್ಕಿಂತ ಒಂದು ಭಿನ್ನವಾದ, ಸುಂದರವಾದ ಮತ್ತು ಅನುಪಮವಾದ ಹೂವುಗಳಿವೆ. ಆದರೆ ಅದರಲ್ಲಿ ‘ದುಂಡು ಮಲ್ಲಿಗೆ’ ತನ್ನ ಶ್ವೇತ ವರ್ಣದಿಂದ, ಮೃದುತನದಿಂದ ರಸಿಕರ ಹೃದಯವನ್ನು ಸೂರೆಗೊಳ್ಳುತ್ತದೆ. ಆ ನೆಲೆಯಲ್ಲಿ ಕನ್ನಡದ ಸೊಗಡನ್ನು ವಿವರಿಸುತ್ತ, ಆ ಪದಗಳಿಂದಾದ ಲೇಖನಿಯ ಹಾರವ ಯೂನಿಕ ಎನಿಸುತ್ತದೆ ಎಂಬುದನ್ನು ಗಜಲ್ ಕಾರ ಸಿರಾಜ್ ಅಹಮದ್ ಅವರು ತಮ್ಮ ಷೇರ್ ನಲ್ಲಿ ಸೆರೆ ಹಿಡಿದಿದ್ದಾರೆ.

ಚರಿತೆಯನೇ ತಿರುಚಿ ಶಾಂತಿ ದೂತರನು ಸರಿಸಿದವರು ಯಾರು
ಕಲುಷಿತಗಳನೇ ಹರಡುತ ಮನಸುಗಳನು ಉರಿಸಿದವರು ಯಾರು”

ಈ ಮೇಲಿನ ಷೇರ್ ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ಪೊರೆ ಕಳಚುತ್ತದೆ‌. ‘ಇತಿಹಾಸ’ ಎಂಬುದು ಆಳರಸರು ಹೆತ್ತ ಮಗುವಲ್ಲ, ಅದೊಂದು ಹಂಸಕ್ಷೀರ ನ್ಯಾಯದ ಬಳುವಳಿ. ಆದರೆ ದುರಂತವೆಂದರೆ ಇಂದು ಬಲಾಢ್ಯತನವನ್ನು ಮೈಗೂಡಿಸಿಕೊಂಡವರು, ಮಾನವೀಯತೆಯ ಹೊಸ್ತಿಲನು ದಾಟಿದವರು, ಮುಖವಾಡ ಧರಿಸಿದವರು ತಮ್ಮ ಹಿಡನ್ ಅಜೆಂಡಾಗಳ ಮುಖಾಂತರ ವಾಸ್ತವದಲ್ಲಿ ಕುಳಿತು ಭವಿಷ್ಯತ್ತಿನ ಲಾಲಸೆ ತೋರಿಸುತ್ತ ಇತಿಹಾಸವನ್ನು ಬರೆಯುತ್ತಿದ್ದಾರೆ. ಇಂದು ತಪ್ಪುಗಳನ್ನು ಖಂಡಿಸುವ ಬದಲಿಗೆ ಅವುಗಳನ್ನು ಸಮರ್ಥಿಸುತ್ತದೆ ಮಟ್ಟಿಗೆ ಸಮಾಜ ಮುಂದುವರೆದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸುಖನವರ್ ಸಿರಾಜ್ ಅಹಮದ್ ಅವರು ತಮ್ಮ ಈ ಷೇರ್ ನಲ್ಲಿ ಕರಾಳ ಸತ್ಯವನ್ನು ತೆರೆದಿಡುತ್ತ, ಅನ್ಯಾಯವೇ ನ್ಯಾಯದ ಉಡುಪನ್ನು ಧರಿಸಿ ಎಲ್ಲರನ್ನೂ ಸನ್ನಿ ಹಿಡಿದಂತೆ ಆವರಿಸಿರುವುದು ವಿಷಾದನೀಯ ಎಂಬುದನ್ನು ದಾಖಲಿಸಿದ್ದಾರೆ.

      ಮನುಷ್ಯ ವೈಜ್ಞಾನಿಕವಾಗಿ ಏನೆಲ್ಲಾ ಸಾಧಿಸಿದ್ದರೂ, ಸಾಧಿಸುತಿದ್ದರೂ ಶಾಂತಿಯ ತಪೋವನ ನಿರ್ಮಿಸುವಲ್ಲಿ ಎಡವುತಿದ್ದಾನೆ. ತಾಂತ್ರಿಕ ನೆರವಿನಿಂದ ಮನೆಯ ಮಾಳಿಗೆ ಮೇಲೂ ಕೃಷಿ ಮಾಡುತಿದ್ದಾನೆ. ಆದರೆ ಹೃದಯಗಳಲಿ ಪ್ರೀತಿಯನ್ನು ಬಿತ್ತಲು, ಬೆಳೆಯಲು ಮರೆಯುತಿದ್ದಾನೆ. ಅವನಿಂದ ಆಗಲ್ಲ ಅಂತೇನಿಲ್ಲ, ಮನಸು ಮಾಡುತ್ತಿಲ್ಲವಷ್ಟೇ. ಈ ಹಿನ್ನೆಲೆಯಲ್ಲಿ ಮೊಹಬ್ಬತ್ ನ ಖುಷ್ಬು ಹರಡುವ ಗಜಲ್ ನ ಗುಲ್ಮೋಹರ್ ಎಲ್ಲೆಡೆ ಪಸರಿಸಲಿ, ಗಜಲ್ ಗೋ ಶ್ರೀ ಸಿರಾಜ್ ಅಹಮದ್ ಅವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ಕೃಷಿ ಸಾಗಲಿ ಎಂದು ದಿಲ್ ಸೇ ಶುಭ ಕೋರುತ್ತೇನೆ.

ಪ್ರಳಯದ ಭಯವಿಲ್ಲದೆ ಸಮಾಧಿಯಲ್ಲಿ ನೆಮ್ಮದಿಯಿಂದ ಮಲಗಿದ್ದೆ
ಓ ದೇವದೂತನೇ ಗಿಡುಗ ಬಂದಿದೆ ನಿನ್ನ ಚಮತ್ಕಾರದಿಂದ”
-ಭಾರತೇಂದು ಹರಿಶ್ಚಂದ್ರ

     ಅದೇನೋ ಗೊತ್ತಿಲ್ಲ, ಗಜಲ್ ಬಗ್ಗೆ, ಗಜಲ್ ಕಾರರ ಬಗ್ಗೆ ಮಾತಾಡುತಿದ್ದರೆ, ಬರೆಯುತಿದ್ದರೆ ಗಡಿಯಾರದ ಮುಳ್ಳಿಗೆ ಕಾಲಿವೆ ಎಂಬುದನ್ನೇ ಮರೆಯುತ್ತೇನೆ. ಆದಾಗ್ಯೂ ಆ ಮುಳ್ಳು ಚುಚ್ಚಿ ಚುಚ್ಚಿ ತನ್ನ ಇರುವಿಕೆಯನ್ನು ನೆನಪಿಸುತ್ತಿದೆ. ಹಾಗಾಗಿ ಇಂದು ಈ ಲೇಖನಿಗೆ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಹೋಗಿ ಬರಲೇ ಬರುವೆ, ಬಾಯ್, ಸಿಯುವ್…!!
ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ,

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top