ಪಾರ್ವತಿ ಎಸ್ ಬೂದೂರು ಅವರ ‘ನನ್ನೊಳಗಿನ ನಾನು’ ಸಂಕಲನದ ಅವಲೋಕನ

ಪುಸ್ತಕ ಅವಲೋಕನ

ಪಾರ್ವತಿ ಎಸ್ ಬೂದೂರು ಅವರ

‘ನನ್ನೊಳಗಿನ ನಾನು’ ಸಂಕಲನದ ಅವಲೋಕನ

ಕೃತಿಯ ಶೀಷಿ೯ಕೆ…. ನನ್ನೊಳಗಿನ ನಾನು
ಲೇಖಕರು….. ‌‌‌‌‌‌‌‌‌ ಶ್ರೀಮತಿ ಪಾರ್ವತಿ ಎಸ್ ಬೂದೂರು ೯೯೦೦೧೬೯೪೦೦
ಪ್ರಕಾಶಕರು……..ನಿಶಾ ಪ್ರಕಾಶನ ನಗನೂರು ಕೆಂಭಾವಿ ೯೭೪೦೪೯೨೯೯೯
ಪ್ರಕಟಿತ ವರ್ಷ….೨೦೨೧. ಬೆಲೆ ೧೦೦₹

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದ ಶ್ರೀಮತಿ ಪಾರ್ವತಿ ಎಸ್ ಬೂದೂರು ಅವರು ಬದುಕನ್ನು ಪ್ರೀತಿಸುತ್ತಾ ಆದರ್ಶ ಗೃಹಿಣಿಯಾಗಿ ತಮ್ಮ ಸುತ್ತಮುತ್ತ ನಡೆಯುವ ಘಟನೆಗಳನ್ನು ಅವಲೋಕಿಸುತ್ತಾ ಬಾಲ್ಯದಿಂದಲೂ ಸಾಹಿತ್ಯದ ಗೀಳು ಹಚ್ಚಿಕೊಂಡವರು. ತಮ್ಮ ಜೀವನ ಅನುಭವಗಳನ್ನು ಕವಿತೆಯಾಗಿಸಿ ರೂಪಿಸಿದವರು. ವಾಟ್ಸಾಪ್ ಮತ್ತು ಫೇಸ್ಬುಕ್ ಗಳಲ್ಲಿ ತಾವು ಬರೆದ ಕವಿತೆ,
ಗಜಲ್ ಗಳನ್ನು ಹಾಕುತ್ತಾ ಓದುಗರ ಗಮನ ಸೆಳೆದವರು.
ಈಗ ನನ್ನೊಳಗಿನ ನಾನು ಎಂಬ ಪ್ರಥಮ ಕವನ ಸಂಕಲನವನ್ನು ಪ್ರಕಟಿಸಿ ಲೋಕಾರ್ಪಣೆ ಮಾಡಿ ಓದುಗರಿಗೆ ಕೈಗೆ ಕೊಟ್ಟಿದ್ದಾರೆ. ಇವರ ಎರಡನೇ ಕವನ ಸಂಕಲನ ಭಾವ ಬಾಂದಳ ಎಂಬುವುದು 2022 ರಲ್ಲಿ ಪ್ರಕಟವಾಗಿದೆ. *ಶಿವೆ ಎಂಬ ಕಾವ್ಯನಾಮದಿಂದ ಗಜಲ್ ಗಳನ್ನು ಬರೆಯುತ್ತಿದ್ದಾರೆ .ಕೆಲವು ಗಜಲ್ ಗಳು, ಪುಸ್ತಕ ಅವಲೋಕನಗಳು ಲೇಖನಗಳು, ವ್ಯಕ್ತಿ ಪರಿಚಯ ಬರಹಗಳು ಸಂಪಾದಿಕೆಯ ಕೃತಿಗಳಲ್ಲಿ ಹಾಗೂ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ.

ಕವಿತೆ ಅಥವಾ ಕಾವ್ಯವೆಂದರೆ ಹೃದಯದ ನೋಟವಾಗಿದೆ ಎನ್ನಬಹುದು,
ಗ್ರಹಿಸಿದ್ದು, ಅನುಭವಿಸಿದ್ದು ಹೃದಯದಲ್ಲಿ ಕುದ್ದು ಕುದ್ದು ಪಾಕವಾದ ಅನುಭವವು ಅನುಭಾವಸಾರವಾಗಿ ಇನ್ನೊಂದು ಹೃದಯವನ್ನು ತಟ್ಟುವಂತೆ ಮೃದು ಭಾಷೆಯ ಅಕ್ಷರಗಳ ಮುಖಾಂತರ ಹೊರಬರುವ ಸಾಲುಗಳೇ ಕಾವ್ಯವೆಂದು ಹೇಳಬಹುದು.
ಕಾವ್ಯ ಕೇವಲ ಶಬ್ದಗಳ ಸರಮಾಲೆಯಾಗದೆ ಭಾವಗಳ ಸಮ್ಮಿಲನವಾಗಿ ರಸವಾಗಿ ಹರಿದು ಹೃದಯ ಸೇರಬೇಕು ,ಆಗ ಅದು ಕಾವ್ಯವಾಗುತ್ತದೆ. ಕವಿಯಾದವನಿಗೆ ಎಷ್ಟು ಸೂಕ್ಷ್ಮ ಕಣ್ಣುಗಳಿದ್ದರೂ ಸಾಲದು ನೋಡಿದ್ದು ಅರ್ಥೈಸಿಕೊಂಡದ್ದು ಅಲ್ಲದೆ ಅನುಭವಿಸಿದ ನೋವು ನಲಿವುಗಳನ್ನು ಮೃದು ಮಧುರ ಭಾಷೆಯ ಮೂಲಕ ಅಕ್ಷರದಲ್ಲಿ ಬಿತ್ತಿ ಇನ್ನೊಂದು ಹೃದಯ ಹೊಲದಲ್ಲಿ ಅರಳಿಸಿದಾಗ ಆ ಕವಿತೆ ಸಾರ್ಥಕವಾಗುತ್ತದೆ .
ಇಂತಹ ಸಾರ್ಥಕತೆಯ ಯತ್ನದಲಿ ತೊಡಗಿದ ಕವಿಯತ್ರಿಯಾದ ಶ್ರೀಮತಿ ಪಾರ್ವತಿ ಎಸ್ ಬೂದೂರು ಅವರ ಕೃತಿ ನನ್ನೊಳಗಿನ ನಾನು ಕವನ ಸಂಕಲನ ಓದುತ್ತ ಹೋದಂತೆ ಕವಿಯತ್ರಿಯವರು ತಮ್ಮ ಸುತ್ತಮುತ್ತ ನಡೆದ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಹೃದಯದಲ್ಲಿ ಆ ಘಟನೆಗಳನು ಮಂಥಿಸಿರುವದೆ ಕವಿತೆಗಳಾಗಿವೆ ಎಂದು ಹೇಳಬಹುದು. ಪಾರ್ವತಿ ಅವರ ಕವನ ಸಂಕಲನದಲ್ಲಿ ಮಹಿಳಾ ಸಂವೇದನೆ, ಮಹಿಳಾಪರ ಧ್ವನಿ ,ಸಾಮಾಜಿಕ ವ್ಯವಸ್ಥೆಯಲ್ಲಿ ತಾರತಮ್ಯಕೆ ಪ್ರತಿರೋಧ, ಪುರುಷ ಪ್ರಧಾನ ಶೋಷಣೆಯ ವ್ಯವಸ್ಥೆಯನ್ನು ಖಂಡಿಸುವ, ಶ್ರಮ ಜೀವಿಗಳ ಬದುಕಿನ ಬವಣೆ, ಅನ್ನದಾತನ ಗೋಳು, ಕಾರ್ಮಿಕರ ರೋಧನೆ, ಪ್ರೀತಿ ,ಪ್ರೇಮ, ಪ್ರಣಯ ಅಲ್ಲದೆ ಹತ್ತು ಹಲವು ವಿಷಯಗಳ ಕವಿತೆಯನ್ನು ರಚಿಸಿದ್ದಾರೆ, ಪ್ರವಾಹ ,ಬರಗಾಲ ,ಪ್ರಕೃತಿ ವಿಕೋಪ, ಹೀಗೆ ಪ್ರತಿಯೊಂದು ಸಂಗತಿಯನ್ನು ಕವಿತೆಯಾಗಿಸಲು ಪ್ರಯತ್ನಿಸಿದ್ದಾರೆಂದು ಸಂಕಲನದಲ್ಲಿರುವ ಎಲ್ಲಾ ಕವಿತೆಗಳನ್ನು ಓದಿದಾಗ ಅನಿಸುತ್ತದೆ, ಕವಿಯತ್ರಿಯು ಕಂಡ ಘಟನೆಗಳ ಬಗ್ಗೆ ತನ್ನ ಹೃದಯದೊಂದಿಗೆ ಪಿಸುಮಾತುಗಳಲ್ಲಿ ಹೇಳಿಕೊಳ್ಳುತ್ತಾ ಸಾಗುತ್ತಿರುವಂತೆ ಭಾಸವಾಗುತ್ತದೆ,
ಈ ಸಂಕಲನಕ್ಕೆ ನನ್ನೊಳಗಿನ ನಾನು ಎಂಬ ಶೀಷಿ೯ಕೆ ಸಾರ್ಥಕವಾಗಿದೆ ಎಂದು ಅನಿಸುತ್ತದೆ. ಪಾರ್ವತಿಯವರು ತಮ್ಮ ಭಾವನೆಗಳನ್ನು ಇನ್ನೊಬ್ಬರಿಗೆ ಹೇರದೆ ತಮ್ಮಷ್ಟಕ್ಕೆ ತಾವೇ ಮಾತಾಡಿಕೊಂಡಂತಹ ಕವಿತೆಗಳು ಇವೆ.
ಕೆಲವು ಕವಿತೆಗಳು ಭಾವಗೀತೆಯಂತಿದ್ದು ಹಾಡಲು ಸುಗಮವಾಗಿವೆ.

ಶ್ರೀಮತಿ ಪಾರ್ವತಿ ಎಸ್ ಬೂದೂರು ಅವರ ಕವನ ಸಂಕಲನ ನನ್ನೊಳಗಿನ ನಾನು ಕೃತಿಗೆ ಸಾಹಿತಿಗಳು, ಕವಿಗಳು, ವಿಮರ್ಶಕರು ,ನಾಟಕಕಾರರು ,ಪತ್ರಕರ್ತರು ,ಹೀಗೆ ಬಹುಮುಖ ಪ್ರತಿಭೆ ಉಳ್ಳವರಾದ ಶ್ರೀ ಮಹಿಪಾಲರೆಡ್ಡಿ ಮುುನ್ನೂರು ಅವರು ಅರ್ಥಪೂರ್ಣವಾದ ವಿವರಣೆಯೊಂದಿಗೆ ಮೌಲಿಕವಾದ ಮುನ್ನುಡಿಯನ್ನು ಬರೆದು ಕೃತಿಯ ಮೌಲ್ಯ ಹೆಚ್ಚಿಸಿದ್ದಾರೆ, ಹಾಗೂ ತುಲನಾತ್ಮಕವಾದ ಬೆನ್ನುಡಿಯನ್ನು ಪತ್ರಕರ್ತರು ಸಾಹಿತಿಗಳು ಆದ ಶ್ರೀ ವೀರಣ್ಣ ಕಲಿಕೆರಿ ಅವರು ಬರೆದು ಕೃತಿಯ ಘನತೆಯನ್ನು ಹೆಚ್ಚಿಸಿದ್ದಾರೆ. ಕೃತಿ ಪ್ರಕಟಣೆಗಿಂತ ಮುಂಚೆ ಕವಿತೆಗಳನ್ನು ಓದಿ ಶುಭಾಶೀರ್ವಾದಗಳನ್ನು ಷ.ಬ್ರ. ಶ್ರೀಗುರು ಮಡಿವಾಳೇಶ್ವರ ಶಿವಾಚಾರ್ಯರು, ಪಂಚರಂಗ ಸಂಸ್ಥಾನ ಗದ್ದಗಿಮಠ ಕಲಕೇರಿ ತಾಲೂಕ ಸಿಂದಗಿ ಸ್ವಾಮಿಜಿಯವರು ಬರೆದಿದ್ದಾರೆ,
ಶುಭ ಹಾರೈಕೆಯ ನುಡಿಯನ್ನು ಡಾ. ಯಂಕನಗೌಡ ಎಸ್ ಪಾಟೀಲ್ ಮಾಲಹಳ್ಳಿ ವಲಯ ಕ ಸಾ ಪ ದ ಅಧ್ಯಕ್ಷರು ಕೆಂಭಾವಿಯವರು ಬರೆದಿದ್ದು.
ಶ್ರೀ ಸಿದ್ದಪ್ಪ ಹೊಟ್ಟಿ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಯಾದಗಿರಿ ಅವರು ಸದಾಶಯದ ನುಡಿ ಬರೆದಿದ್ದಾರೆ, ಈ ಮಹನೀಯರೆಲ್ಲರೂ ತಮ್ಮ ಅಭಿಪ್ರಾಯಗಳನ್ನು ಬರೆದು ಪುಸ್ತಕ ಮೌಲ್ಯ ಹೆಚ್ಚಿಸಿದ್ದಾರೆಂದರೆ ತಪ್ಪಾಗದೆನಿಸಿತೆನಗೆ.

ಶ್ರೀಮತಿ ಪಾರ್ವತಿ ಎಸ್ ಬೂದೂರು ಅವರ ಕವನ ಸಂಕಲನ ನನ್ನೊಳಗಿನ ನಾನು ಕೃತಿಯಲ್ಲಿ ಒಟ್ಟು 82 ಕವಿತೆಗಳಿದ್ದು ಕವಿತೆಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಕೆಲವು ಕವಿತೆಗಳು ಚಿಂತನೆಗೂ ಹಚ್ಚುತ್ತವೆ.
ಹೂವಿಗಿರುವ ರಕ್ಷೆ ಎಂದು
ಮುಳ್ಳನ್ನೆ ತಬ್ಬಿನಿಂದ
ಮಡಿಲೊಳುದುಗಿದ ಮೊಗ್ಗನಿಸುಕಿ
ಗಂಡು ಅಲ್ಲೆನ್ನೇ ಮಬ್ಬಿಂದ

ಮೇಲಿನ ಕವಿತೆಯ ಸಾಲಗಳು ಮಹಿಳೆ ಎಂಬ ಕವನದ ಸಾಲುಗಳಾಗಿವೆ. ಕವಯತ್ರಿ ಅವರು ಇಲ್ಲಿ ಮಹಿಳೆಗೆ ಸಮಾಜ ಹಾಕಿದ ನಿರ್ಬಂಧ ಹಾಗೂ ಹೆಣ್ಣು ಅಬಲೆ ಎಂದು, ಭಾರವೆಂದು, ನಿತ್ಯ ನಡೆಯುವ ಹೆಣ್ಣು ಶಿಶು ಭ್ರೂಣಹತ್ಯೆಯನ್ನು ರೂಪಕದೊಂದಿಗೆ ವಿವರಿಸಿದ್ದಾರೆ .

ಶತಮಾನದಿಂದಲೂ ಹೆಣ್ಣೆಂದು ಜರಿದು ಹೊದಸಿದೆ ಪರದೆಯ
ನಿನ್ನಾಗೆಯೇ ಅವಳೊಳಗೂ ಇದೆ ಜಗ ಸುತ್ತುವ ಕಾತುರದ ಹೃದಯ

ಪುರುಷ ಪ್ರಧಾನವಾದ ಸಮಾಜದಲ್ಲಿ ಹೆಣ್ಣಗೆ ಯುಗ ಯುಗಗಳಿಂದ ಯಾವ ಸ್ವಾತಂತ್ರ್ಯ ವಿಲ್ಲದೆ ನಾಲ್ಕು ಗೋಡೆ ಮಧ್ಯೆ ಬಂದಿಯಾಗಿ ನರಳುತ್ತಿರುವಳು, ಆದರೆ ಇಲ್ಲಿ ಕವಿಯತ್ರಿ ನಿನ್ನ ಹಾಗೆ ಆಕೆಯು ಮನುಷ್ಯಳು ಆಕೆಗೂ ಆಸೆ ಆಕಾಂಕ್ಷೆಗಳು ಇವೆ. ಹಾಕಿದ ಮೂಢ ಸಂಪ್ರದಾಯದ ಪರದೆ ಸರಿಸಿ ಅವಳು ಜಗದ ಸೊಬಗನ್ನು ನೋಡುವ ಭಾಗ್ಯವಿರಲಿ ಎಂದು ಸಮಾಜಕ್ಕೆ ತಿಳಿ ಹೇಳಿದ್ದಾರೆ ಪರದೆ ಎಂಬ ಕವಿತೆಯಲ್ಲಿ.

ಒಡಲಿನ ಹಸಿವು ನೀಗಿಸಲೆಂದು
ಬದುಕಿನ ಬವಣೆಯ ಭಾಗಿಸಲೆಂದು
ದುಡಿಯಲು ಸವಾರಿ ಪಟ್ಟಣವರಸಿ
ಕರುಳ ಕುಡಿಗಳು ಒಟ್ಟಿಗೆ ಸೇರಿಸಿ

ಮೇಲಿನ ಸಾಲುಗಳು ಗುಳೆ ಎಂಬ ಕವಿತೆಯಲ್ಲಿದ್ದು ,ಗುಳೆ ಶೀರ್ಷಿಕೆಯೇ ಕವಿತೆಯ ಭಾವ ತಿಳಿಸುತ್ತದೆ. ಹಸಿವು, ಬಡತನ, ಬರಗಾಲದಿಂದ ಬಳಲಿದ ಉತ್ತರ ಕರ್ನಾಟಕದ ಬಡಜನರು ಹೊಟ್ಟೆ ತುಂಬಿಸಿಕೊಳ್ಳಲು ದೊಡ್ಡ ದೊಡ್ಡ ಪಟ್ಟಣಗಳಾದ ಮುಂಬೈ,ಪುಣೆ ,ಬೆಂಗಳೂರು ,ಗೋವಾ ,ಮಂಗಳೂರಿಗೆ ಕುಟುಂಬ ಸಮೇತ ಹೋಗುವುದು ಪ್ರತಿ ವರ್ಷ ನಡೆದೇ ಇರುತ್ತದೆ, ಗುಳೆ ಹೋದ ಜನರ ಪರಿಸ್ಥಿತಿ ಏನೆಂದು ಸವಿಸ್ತಾರವಾಗಿ ಕವಿತೆಯಲ್ಲಿ ಚಿತ್ರಿಸಿದ್ದಾರೆ, ಹೋದವರಲ್ಲಿ ಎಷ್ಟು ಜನ ಸುರಕ್ಷಿತವಾಗಿ ಮರಳಿ ಬರುತ್ತಾರೆ ಎಂಬುದು ಖಾತ್ರಿ ಇರುವುದಿಲ್ಲವೆಂದು ಅಪಘಾತ, ಕಾರ್ಖಾನೆಗಳಲ್ಲಿ ಅವಗಡಗಳಿಂದ ಸಾವು, ಸಾಲ ಹೆಚ್ಚಾಗಿ ಆತ್ಮಹತ್ಯೆಯಿಂದ ಎಷ್ಟೋ ಜನರ ಬದುಕು ಕೊನೆಗೊಳ್ಳುವುದೆಂದು ಕವಿತೆಯಲ್ಲಿ ಕವಯತ್ರಿ ಯವರು ಸುಂದರವಾಗಿ ನಿರೂಪಿಸಿದ್ದಾರೆ.

ಅಂಜಿಕೆಯಲಿ ಕಂಪಿಸುವ ಮನಕೆ ಧೈರ್ಯ ಕೊಡುವ ಕನಸು
ಕ್ರೌರ್ಯ ದ್ವೇಷಗಳ ತಾಣದಿ ನೇಹ ಪ್ರೇಮಗಳೆರಚೋ ಕನಸು

ಮೇಲಿನ ಸಾಲುಗಳು ಕನಸು ಎಂಬ ಕವಿತೆಯ ಸಾಲುಗಳಾಗಿದ್ದು ಕನಸು ಹೇಗಿರಬೇಕೆಂದು ಸುಂದರವಾಗಿ ವಿವರಿಸಿದ್ದಾರೆ. ಕವಯಿತ್ರಿ ಯವರು ಮನುಷ್ಯನಾದವನಿಗೆ ಒಂದಿಲ್ಲ ಒಂದು ರೀತಿ ಕನಸುಗಳು ಬೀಳುತ್ತವೆ. ಮನದ ಆಸೆಯೇ ಕನಸೆಂದು ಕೆಲವರು ಹೇಳುತ್ತಾರೆ. ಆದರೆ ಇಲ್ಲಿ ಕವಯತ್ರಿವರು ಎಂಥ ಕನಸುಗಳು ಬೀಳಬೇಕೆಂದು ಕಲ್ಪಿಸಿ ಕೊಳ್ಳುತ್ತಾರೆ. ಜಗದಲ್ಲಿ ಇರುವ ಕ್ರೌರ್ಯ, ದ್ವೇಷ ,ಜಗಳ ,ಉಗ್ರತೆ, ಮೌಢ್ಯ ,ಮೋಹ,
ಬೂಟಾಟಿಕೆಗಳಿಲ್ಲದ ಯಾವುದೇ ಭಯ, ಭೀತಿ ಇಲ್ಲದ ಸುಂದರವಾದ ಹಕ್ಕಿಗಳು ಬಾನಂಗಳದಲ್ಲಿ ಸ್ವಚ್ಛಂದವಾಗಿ ಹಾರಾಡುವದು ತೋರಿಸುವ ಕನಸುಗಳು ಬಯಸುತ್ತಾರೆ. ಇದರಿಂದ ಕವಯಿತ್ರಿ ಯವರ ಮನದ ಆಸೆ ಶಾಂತಿ, ಸೌಹಾರ್ದತೆಯ, ನೆಮ್ಮದಿಯ, ಕನಸುಗಳು ಬೀಳಲೆಂದು ಬಯಕೆ ಇರುವುದು ತಿಳಿದು ಬರುತ್ತದೆ.

ಮುನಿಸು ತೋರಿ ಸುರಿಯಲು ವರಣ
ಇಷ್ಟೊಂದು ನೆರೆಹಾವಳಿಗೆ ಕಾರಣ
ಸಕಲ ಜೀವಿಗಳ ಬದುಕಾಗಿಸಿದ ಧಾರುಣ

ಪ್ರವಾಹ ಎಂಬ ಕವಿತೆಯ ಸಾಲುಗಳಿವು ಅತಿವೃಷ್ಟಿಯಿಂದ ಪ್ರಕೃತಿಯ ವಿಕೋಪದಿಂದ ಮಳೆ ನೀರು ಪ್ರವಾಹ ರೀತಿಯಲ್ಲಿ ಹರಿದು ಬಂದು ಊರುಕೇರಿಯಲ್ಲಿ ಹರದಾಡಿ ಜನರ ಜೀವನ ಅಸ್ತವ್ಯಸ್ತವಾಗಿ ಮನೆಮಠಗಳು ಬಿದ್ದು, ಹೊಲದಲ್ಲಿ ನೀರು ನಿಂತು ಬೆಳೆ ಹಾನಿಯಾಗಿ ,ಉಣ್ಣಲು ಒಂದು ತುತ್ತು ಇರದೆ ,ಕುಡಿಯಲು ಹನಿ ನೀರು ಇರದೆ ಜನ ಹಸಿವಿನಿಂದ ಸಾಯಿತ್ತಿದ್ದು. ಪ್ರವಾಹದಲ್ಲಿ ಕೊಚ್ಚಿ ಹೋದ ಹಾಗೂ ಬಿದ್ದ ಮನೆ ಮಠಗಳ ಅಡಿಯಲ್ಲಿ ಶವವಾಗಿ ಬಿದ್ದುದ್ದು, ಮಾನವನ ಜೀವನದ ಬದುಕು ಅಸ್ತವ್ಯಸ್ತವಾದದ್ದನ್ನು ಕವಿತ್ರಿಯವರು ಕಣ್ಣಿಗೆ ಕಟ್ಟುವಂತೆ ಕವಿತೆಯಲ್ಲಿ ನಿರೂಪಿಸಿದ್ದಾರೆ.

ಚಾಡಿ ಮಾತಿಗೆ ಚೂರಾಗದಿರಲಿ
ಎದೆಯ ನಂಬಿಕೆ ಗೂಡು
ಸತ್ಯಾ ಸತ್ಯತೆ ಪರಮಾಶಿ೯ಸಿತಡೆಯಿರಿ* ಆಹ್ವಾನದ ಕೇಡು

ಹಿತ್ತಾಳೆ ಕಿವಿ ಎಂಬ ಕವಿತೆಯ ಸಾಲಗಳು ಇವಾಗಿದ್ದು ಇಲ್ಲಿ ಕವಿತ್ರಿಯವರು ಜನ ಹೇಳುವ ಚಾಡಿ ಮಾತಿನಿಂದ ಏನೆಲ್ಲಾ ಅನಾಹುತ ನಡೆಯುತ್ತವೆಂದು ಪುರಾಣ ಕಥೆಗಳ ಚಿತ್ರಣವನ್ನು ಕವಿತೆಯಲ್ಲಿ ರೂಪಕವಾಗಿ ಬಳಸಿಕೊಂಡಿದ್ದಾರೆ. ಅಗಸನ ಮಾತು ಕೇಳಿ ಸೀತೆಯು ಕಾಡಿಗೆ ಹೋಗಬೇಕಾಯಿತು . ಶೂರ್ಪನಕಿಯ ದ್ವೇಷದ ದಳ್ಳುರಿಯಿಂದ ರಾವಣ ಸೀತೆಯ ರೂಪಕ್ಕೆ ಮೋಹಿತನಾಗಿ ಸೀತೆಯನ್ನು ಅಪಹರಿಸಿ ಲಂಕಾ ನಾಶಕ್ಕೆ ಕಾರಣವಾಯಿತು . ಹೀಗೆ ಪುರಾಣ ಘಟನೆಯ ರೂಪಕಗಳನ್ನು ಉಲ್ಲೇಖಿಸಿ ಚಾಡಿ ಮಾತುಗಳನ್ನು ನಂಬಬೇಡಿ, ಸತ್ಯವನ್ನು ಅರಿತು ಬಾಳಿರೆಂದು ಕವಿತ್ರಿಯವರು ಚಾಡಿ ಹೇಳುವವರಿಗೆ ಕೇಳುವವರಿಗೆ ಕವಿ ಮಾತು ಕವಿತೆಯಲ್ಲಿ ಹೇಳಿದ್ದಾರೆ.

ನೀನಾದೆ ಜೀವ ನಿನ್ನಲ್ಲೆ ಭಾವ
ಕಲೆತಂತೆ ಭುವಿಗೆ ಬಾನು

ಕಾರ್ಮೋಡ ಎರಗಿ ಹನಿಯಾಗಿ ಕರಗಿ
ಇಳೆಯನ್ನ ಸೇರಿತೇನಾ

ಇವು ಒಲವುಎಂಬ ಕವಿತೆಯ ಸಾಲುಗಳಾಗಿದ್ದು ಕವಿತೆಯ ಶೀರ್ಷಿಕೆ ಹೇಳುವಂತೆ ಬದುಕಿನಲ್ಲಿ ಒಲವು ಬೇಕು ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ ಎಂಬಂತೆ ಪ್ರೀತಿಯು ಜಗವ ಆಳುತ್ತದೆ .ಅಂತಹ ಪ್ರೀತಿ ಒಲವಿನ ಭಾವ ನಾನು ನಿನ್ನಿಂದ ಪಡೆದಿದ್ದೇನೆ ನಮ್ಮ ಪ್ರೀತಿ ಹಾಲು ಜೇನಂತೆ ಎಂದು ಕವಿತ್ರಿ ಹೇಳುತ್ತಾ ಪ್ರಕೃತಿಯ ಸೊಬಗಿನ ವಿವರಿಸಿದ್ದಾರೆ .

ನೀ ಕೊಟ್ಟ ಕಾಲ್ಗೆಜ್ಜೆ
ನಾ ಧರಿಸಿ ನಡೆದಿರಲು
ಹೃದಯದೊಳಗಿಂದು ಮೂಡಿದೆ
ನವಿರಾದ ಭಾವವು

ಇದು ಕಾಲ್ಗೆಜ್ಜೆ ಎಂಬ ಕವಿತೆಯ ಸಾಲುಗಳು,
ಪ್ರೀತಿಯ ನಲ್ಲ ಕೊಟ್ಟ ಉಡುಗೊರೆ ಕಾಲ್ಗೆಜ್ಜೆ ಧರಿಸಿದ ನಲ್ಲೆ ಸಂತೋಷದಿಂದ ಹೃದಯ ಹಿಗ್ಗಿ ನವಿರಾದ ಭಾವ ಹೊರಹೊಮ್ಮುವದೆಂದು ಮನದ ನೋವು, ದುಗುಡ, ದಣಿವು ಎಲ್ಲವೂ ಮಾಯವಾಗಿದೆ ಎಂದು ಬಾಳಿನ ಕತ್ತಲೆ ಓಡಿಸಿದ ನೀನು ನನ್ನ ಜೀವನದ ನಂದಾದೀಪವಾಗಿರುವೆ ಎಂದು ನಲ್ಲೆ ತನ್ನ ನಲ್ಲನಿಗೆ ಒಲವಿಂದ ಹೇಳುವ ಒಲವಿನ ಕವಿತೆ ಇದಾಗಿದೆ.

ಶ್ರೀಮತಿ ಪಾರ್ವತಿ ಬೂದೂರು ಅವರ ನನ್ನೊಳಗಿನ ನಾನು ಕವನ ಸಂಕಲನದ ಕವಿತೆಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಹೆಣ್ಣಿನ ಮನದ ಕಳವಳ ನಿತ್ಯ ಬದುಕಿನಲ್ಲಿ ಕಾಣುವ ನೋವುಗಳನ್ನು ಕವಿತೆಯಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ. ಇವರ ಮೊದಲ ಕವನ ಸಂಕಲನವಾದರೂ ಪ್ರೌಢತೆಯಿಂದ ಕೂಡಿದ ಎಲ್ಲ ಕವನಗಳು ಬಹಳ ಸುಂದರವಾಗಿವೆ,
ಇವರಿಂದ ಇನ್ನೂ ಸಶಕ್ತವಾದ ಕವಿತೆಗಳು ಹುಟ್ಟಿ ಕೃತಿ ರೂಪದಲ್ಲಿ ಬರಲೆಂದು ಹಾರೈಸುತ್ತಾ ನನ್ನ ಬರಹಕ್ಕೆ ವಿರಾಮ ಕೊಡುವೆ.


ಪ್ರಭಾವತಿ ಎಸ್ ದೇಸಾಯಿ

Leave a Reply

Back To Top