ಗಜಲ್ (ಛೋಟಿ ಬೆಹರ್ ಗಜಲ್)-ಇಂದಿರಾ ಮೋಟೆಬೆನ್ನೂರ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ.

ಗಜಲ್ (ಛೋಟಿ ಬೆಹರ್ ಗಜಲ್)

ಬದುಕಿಗಾಗಿ ರೆಕ್ಕೆ ಬಡಿದು ದಣಿದೆ ನಾನು
ಒಲವಿಗಾಗಿ ಎದೆಯ ಮಿಡಿದು ಮಣಿದೆ ನಾನು.

ಹೆಪ್ಪಿಟ್ಟ ಭಾವ ಕಲಕುತ ದೂರತೀರಕೆ ಸಾಗಿದೆ
ತೇಲಿಬಂದ ನೋವಬೆಣ್ಣೆ ನುಂಗಿ ನುಡಿದೆ ನಾನು

ಅದುಮಿದ ಮನದ ಮಾತು ಮೌನರಾಗವಾಗಿದೆ
ಸ್ನೇಹಕರವ ಚಾಚಿ ಬಾಚಿ ಭಾವ ಮಿಡಿದೆ ನಾನು

ಜೀವಭಾವ ಚಿಗುರು ಹಬ್ಬ ಮುಗುಳು ಮೂಡಿದೆ
ಶಶಿಯ ಸೊಗದಿ ದುಗುಡ ಮರೆತು ನಡೆದೆ ನಾನು

ತಿಂಗಳನ ಅಂಗಳದಿ ಬೆಳದಿಂಗಳ ಮೆರವಣಿಗೆ
ಚುಕ್ಕಿಪಲ್ಲಕ್ಕಿ ಚಂದಿರನ ಸುಧೆಯ ಕುಡಿದೆ ನಾನು

ಅದುಮಿದ ಭಾವರಾಗ ನೋವ ಮಾಲೆಯಾಗಿದೆ
ಸೋತುಗೆಲುವ ಕಲೆಯ ಚೆಲುವ ಮುಡಿದೆ ನಾನು

ಇಂದು ಬಂದಿಳಿದ ಇಂದುವಿನ ಸಡಗರ ನೋಡಿದೆ
ಒಲವ ಹಣತೆ ಹಚ್ಚಿ ಬೆಳಕಿನಲ್ಲಿ ತಣಿದೆ ನಾನು


ಇಂದಿರಾ ಮೋಟೆಬೆನ್ನೂರ.

ಕವಿ ಪರಿಚಯ:

ಇಂದಿರಾ ಮೋಟೆಬೆನ್ನೂರ. ಬೆಳಗಾವಿ.ಭಾವ ಬೆಳಗು — ಕವನ ಸಂಕಲನ
ಸಮಾಗಮ– ಸಂಪಾದನಾ ಗ್ರಂಥಲೇಖಕಿ,.ಕವಯಿತ್ರಿ.
.

Leave a Reply

Back To Top