ಕಾವ್ಯ ಸಂಗಾತಿ
ಪ್ರಭಾ ಬೋರಗಾಂವಕರ
ಮಹಾಯೋಗಿ ಬುದ್ದ
ಕಪಿಲವಸ್ತುವಿನ ಸಿಮ್ಹನನ ಮುದ್ದಾದ ಮೊಮ್ಮಗ
ಶುದ್ಧೋಧನ ಮಾಯಾವತಿಯ ವರಪುತ್ರ ಸಿದ್ಧಾರ್ಥ
ರಾಜವೈಭೋಗದ ಸುಖಸುಪತ್ತಿಗೆಯಲಿ ಮೆರೆದೆ
ದುಃಖ ಕಷ್ಟ ನೋವು ಸಾವುಗಳ ಅರಿವಿಲ್ಲದೇ
ಕೆಲದಿನಗಳಲಿ ಅಸೌಖ್ಯದಿ ಜನ್ಮಜಾತೆ ಅಸುನೀಗಲು
ಬೆಳೆದೆ ನೀ ಪ್ರಜಾಪತಿಯ ವಾತ್ಸಲ್ಯದ ಮಡಿಲಲಿ
ಸುಕೋಮಲ ಸುಕುಮಾರ ಚಂದಿರನಂತೆ ನೀ
ಬಾಲ್ಯದಾಟ ಸೆಳೆಯಿತು ಅರಮನೆಯಲಿ ಎಲ್ಲರ
ಸರ್ವವಿದ್ಯಾಪಾರಂಗತನು ಸಕಲ ಕಲಾವೀರನು
ರಾಜ್ಯ ಕೋಶದ ಅಧಿಕಾರವನು ಬಯಸದವನು
ಬದುಕಿನ ಜಂಜಾಟ ಬಿಸುಟು ಮಹಾಯೋಗಿಯಾಗಲು
ಅರಮನೆ ತೊರೆವನೆಂಬ ಕುಲಗುರುವಿನ ಭವಿಷ್ಯವಾಣಿ
ಸಂಸಾರ ವ್ಯಾಮೋಹಕೆಳೆಸಲು ಸುತನ ವಿವಾಹ
ಸತಿ -ಸುತರ ಪ್ರೀತಿಯಲಿ ಬಂಧಿಸಲು ರಾಜತಂತ್ರ
ಕನ್ಯೆಯರ ಕರೆಯಿಸಿ ನೆಡೆಯಿತು ಸ್ವಯಂವರ
ಮೋಹಗೊಳ್ಳಲಿಲ್ಲ ವರಿಸಲಿಲ್ಲ ಅವನಾರನು
ಸಚಿವ ದಂಡಪಾನೀಯ ಸುಂದರ ಸುಕನ್ಯೆ
ಯಶೋಧರೆಯ ರೂಪಲಾವಣ್ಯಕೆ ಸೋತ ಸಿದ್ಧಾರ್ಥ
ಸುಮೂಹರ್ತದಿ ವಿವಾಹವಾಗಿ ಸತಿಪತಿ ಒಂದಾಗಲು
ಪುತ್ರೋತ್ಸವದ ಸಂಭ್ರಮ ಕಂದ ರಾಹುಲನ ಆಗಮನ
ಅರಿವಿಲ್ಲದೆಯೆ ಹೊರಸಂಚಾರ ಸಾರಥಿ ಚನ್ನನೊಡನೆ
ಹಿಂದೆಂದೂ ಕಾಣದ ರೋಗಿ ಮುದುಕ ಶವದ ದರ್ಶನ
ಮುಂದಡಿಯಿಡಲು ಸನ್ಯಾಸಿಯ ಭೇಟಿ ನೀನ್ಯಾರೆಂಬ ಪ್ರಶ್ನೆ
ಜನನ ಮರಣಗಳೆ ದುಃಖಕ್ಕೆ ಕಾರಣ ಬಂತು ಉತ್ತರ
ಯೋಗಿಯ ದಿಟ ಮಾತುಗಳು ಮನಸೂರೆಗೊಂಡಿತು
ಮನ ಜಿಗುಪ್ಸೆಗೊಳಗಾಗಿ ಶಾಂತಚಿತ್ತನಾದನು ಅರೆಕ್ಷಣ
ರಾಜ ವೈಭವ ತ್ಯಾಗಕೆ ನಿಂತ ಪಿತನ ಅನುಮತಿಗಾಗಿ
ಕೆಲ ಷರತ್ತುಗಳ ಹಾಕಿ ಹೊರಟೇ ಬಿಟ್ಟ ಸಿದ್ಧಾರ್ಥ
ಕೊನೆ ಗಳಿಗೆಯಲ್ಲಿ ಯಶೋಧರೆ ರಾಹುಲನ ಕಾಣುವಾಸೆ
ಅವರ ನಿದ್ರೆಗೆ ಭಂಗ ಬರದಿರಲೆಂದು ಹಿರಿಯಾಸೆ
ನಿರವ ನಿಶೆಯಲಿ ಅರಮನೆಯ ಬಿಟ್ಟು ಹೊರಟ
ಬಂಧು ಬಳಗ , ಸುಖ ಭೋಗ ತ್ಯಜಿಸಿ ಮಹಾಯೋಗಿಯಾಗಲು….-
ಪ್ರಭಾ ಬೋರಗಾಂವಕರ.
ಪ್ರಕಟಿಸಿ ಪ್ರೋತ್ಸಾಹ ನೀಡುವ ಪತ್ರಿಕಾ ಬಳಗಕ್ಕೆ ಧನ್ಯವಾದಗಳು