ಕಾವ್ಯ ಸಂಗಾತಿ
ರೋಹಿಣಿ ಯಾದವಾಡ
ಗಜಲ್
ಮಧ್ಯರಾತ್ರಿ ಎದ್ದು ಹೋದವರೆಲ್ಲ ಬುದ್ಧರಾಗಲು ಸಾಧ್ಯವಿಲ್ಲ ಕೇಳಿಲ್ಲಿ
ಬುದ್ಧನಾಗುವುದು ಸಾಮಾನ್ಯವಲ್ಲ ಕಠಿಣ ಸಾಧನೆ ಬೇಕಲ್ಲ ಕೇಳಿಲ್ಲಿ
ದುಃಖಕ್ಕೆ ಕಾರಣಗಳೆನೆಂದು ತಿಳಿಯಬೇಕಾದುದು ನಿಜವಲ್ಲವೇ
ಆಸೆಯೇ ದುಃಖಕ್ಕೆ ಮೂಲ ಕಾರಣವೆಂದು ಹೇಳಿದನಲ್ಲ ಕೇಳಿಲ್ಲಿ
ಸತ್ಯಾನೇಶ್ವಣೆಗೆ ಹುಡುಕಿ ಹೊರಟಿದ್ದರು ಪುಣ್ಯ ಪುರುಷರೆಲ್ಲ
ರಾಜ್ಯ ಅರಮನೆ ಹೆಂಡತಿ ಮಗ ಎಲ್ಲರನ್ನು ಬಿಟ್ಟು ಹೋದನಲ್ಲ ಕೇಳಿಲ್ಲಿ
ಬದುಕಿನ ನೋವು ನಲಿವುಗಳಿಂದ ಮುಕ್ತರಾಗಲು ಹೆಣಗಿದರು ಹಲವರು
ತಪದ ನಿಯಮ ತಿಳಿದು ನಿರಾಹಾರ ಧ್ಯಾನಸ್ಥ ಸ್ಥಿತಿ ತಲುಪಿದನಲ್ಲ ಕೇಳಿಲ್ಲಿ
ಧ್ಯಾನಸ್ಥ ಸ್ಥಿತಿಯಲ್ಲಿ ಬದುಕಿನ ಸತ್ಯದ ಸಾಕ್ಷಾತ್ಕಾರ ಪಡೆದನು ಸಿದ್ದಾರ್ಥ
ಅಶ್ವಥ್ ಮರದಡಿ ಜ್ಞಾನೋದಯ ಆಯಿತಲ್ಲ ಕೇಳಿಲ್ಲಿ
ಬೋಧಿವೃಕ್ಷವು ಧನ್ಯತೆ ಪಡೆಯಿತು ಬುದ್ಧನ ತಪಃಶಕ್ತಿಯಿಂದ
ಸಿದ್ದಾರ್ಥ ಬುದ್ಧನಾಗಿ ಉಪದೇಶ ಮಾಡಲು ಸಿದ್ದನಾದನಲ್ಲ ಕೇಳಿಲ್ಲಿ
ಸಾವಿಲ್ಲದ ಮನೆಯ ಸಾಸಿವೆ ತಾರೆಂದು ಭವದ ಬಂಧನ ಬಿಡಿಸಿದ ಬುದ್ಧ
ಬುದ್ಧ ಮೆಟ್ಟಿದ, ಮುಟ್ಟಿದ ಎತ್ತರ ಸಾಗುವುದು ಸುಲಭವಲ್ಲ ಕೇಳಿಲ್ಲಿ
ದುಃಖದಿಂದ ಪಾರಾಗಲು ಅಷ್ಟಾಂಗ ಮಾರ್ಗ ಸೂಚಿಸಿದ ಬುದ್ಧ
ಬುದ್ಧ ಎಂದರೆ ಎಚ್ಚರ, ಜಾಗೃತನಾದವ ಎನ್ನುವರಲ್ಲ ಕೇಳಿಲ್ಲಿ
ಏಷ್ಯಾದ ಬೆಳಕು ಎಂದಿರುವುದು ಸಾರ್ಥಕ ಎಂದಳು ರೋಹಿ
ಶಾಂತಿಯ ಮಂತ್ರವಿಡಿದು ಜನಮಾನಸಕ್ಕೆ ಗೌತಮ ಬುದ್ಧನಾದನಲ್ಲ ಕೇಳಿಲ್ಲಿ.
ರೋಹಿಣಿ ಯಾದವಾಡ
ನಿಜ ರೋಹಿಣಿ…. ಬುದ್ಧ ಮೆಟ್ಟಿದ , ಮುಟ್ಟಿದ ಎತ್ತರಕ್ಕೇರಲು ಅಸಾಧ್ಯವೇ ಸರಿ.. ಅಭಿನಂದನೆಗಳು