ಶಮಾ. ಜಮಾದಾರ ಗಜಲ್

ಕಾವ್ಯ ಸಂಗಾತಿ

ಶಮಾ. ಜಮಾದಾರ

ಗಜಲ್

ಜಾನಕಿ ರಾವ್.. ಅವರ ಸಾಲಿಗೆ ತರಹಿ ಬರೆದಿರುವೆ. (ಅವರ ಮಿಸ್ರ ಊಲಾಮಿಸ್ರಾ ಆಗಿ ನನ್ನ ಗಜಲ್ ನಲ್ಲಿ)

ಹಿಡಿ ಒಲವ ಬೇಡಿಬಂದವಳು ನಾನು ಬಾಳ ಜೋಳಿಗೆಗೆ ಭಿಕ್ಷೆ ಸುರಿಯಲಿಲ್ಲ
ಇಡಿ ಬದುಕ ಎಡೆಹಿಡಿದವಳು ನಾನು ನೋಟದಲಿ ಪ್ರೀತಿಯ ಮಳೆ ಸುರಿಸಲಿಲ್ಲ

ತಪದಂತೆ ಕಳೆದಿವೆ ಹಲವು ದಿನಗಳು ಆಸರೆಯ ಭರವಸೆಯಲಿ ದೀಪ ಬೆಳಗಿ
ಕುಡಿ ಒಡೆದ ಆಶೆಗಳ ಕತ್ತುಮುರಿದವಳು ನಾನು ಬಾಳ ಬಯಲಿಂದ ದೂರ ಸರಿಸಲಿಲ್ಲ

ಕಡು ನೀಲಿಯಾಗಸದ ತಾರೆ ಬಯಸಿದೆನೆ ಕೊಡ ಮಾಡುವ ಮನಸು ನಿನದಾಗಲಿಲ್ಲ
ತಡೆ ಗೋಡೆಯೆತ್ತರಕೆ ಬೆಳೆದು ನಿಂತವಳು ನಾನು ಕಣ್ಣುಗಳಲಿ ಕಣ್ಣು ಬೆರೆಸಲಿಲ್ಲ

ಎದೆಯಾಳದ ಕೊಳದಲ್ಲಿ ಸಲುಗೆಯಲಿ ಸಾಕಿದ ಮೀನು ಮೊಸಳೆಯಾಗಿದೆ ಈಗ
ಉಡಿ ಒಡ್ಡಿ ನಗುವಿಗಾಗಿ ಕಾದವಳು ನಾನು ಕಲ್ಲೆದೆಯಲಿ ಮರುಕ ಒಸರಲಿಲ್ಲ

ನಂಬಿಕೆಯ ಕಂಬದಲಿ ಕರುಣೆಯಿರದ ನೇಣುಕುಣಿಕೆ ನೇತಾಡುತಿದೆ ಶಮಾ
ಉಡದಪಟ್ಟಿನಲಿ ಸಾವಿನೊಡನೆ ಸೆಣಸಿದವಳು ನಾನು ಬದುಕೆಂದು ಒಮ್ಮನದಿ ಹರಸಲಿಲ್ಲ


ಶಮಾ. ಜಮಾದಾರ.

Leave a Reply

Back To Top