ಲಹರಿ ಸಂಗಾತಿ
ಪ್ರಜ್ವಲಾ ಶೆಣೈ ಲಹರಿ
‘ಹೆಪ್ಪುಗಟ್ಟಿದ ಮೌನ’
ಅಅದೊಂದು ಪ್ರಕ್ಷುಬ್ದವಾದ ಇರುಳು.
ಕಣ್ಮುಚ್ಚಿದೊಡನೆ ಮನಸ್ಸು ಅಲೆ ಅಲೆಯಾಗಿ ಸುರುಳಿ ಸುತ್ತತೊಡಗಿತು. ಸಾಗಿದ ದಾರಿ ಬಲುದೂರ ಹಿಂತಿರುಗಿ ನೋಡಿದರೆ ಅಲ್ಲೇನು ಇಲ್ಲ.ಎಲ್ಲವೂ ಬದಲಾಗಿದೆ.ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಜೊತೆಯಾಗಿ ಸಾಗಿದ ಹೆಜ್ಜೆ ಗುರುತುಗಳು ಮಾಯವಾಗಿದೆ.ಲಜ್ಜೆಯ ಮೊಗದ ನಾಚಿಕೆ ಹೂವು ಮುದುಡಿದೆ. ತುಟಿಯಂಚಿನ ಪಿಸುಮಾತುಗಳು ಸ್ವರದ ಅಬ್ಬರದಲ್ಲಿ ಕಳೆದುಹೋಗಿದೆ.ಆಕಾಶದೆತ್ತರಕ್ಕೆ ಏರುವ ಗಾಳಿಪಟ ಸೂತ್ರವಿಲ್ಲದೆ ದಿಕ್ಕು ತಪ್ಪಿದೆ.ಅರಳುವ ಪುಷ್ಪದಲ್ಲಿ ಸುಗಂಧವಿಲ್ಲ.ಕಣ್ಣಂಚಿನ ನೋಟದಲ್ಲಿ ಮೌನ ಹೆಪ್ಪುಗಟ್ಟಿದೆ. ಸಮುದ್ರದ ತಟದಲ್ಲಿ ಕಪ್ಪೆಚಿಪ್ಪು ಆರಿಸುವುದರಲ್ಲೆ ಜೀವನ ಕಳೆದುಹೋಗಿದೆ.ಮರಳಿನ ರಾಶಿಯಲ್ಲಿ ಬರೆದ ನನ್ನ ಹೆಸರು ಮತ್ತೆ ಮತ್ತೆ ಅಳಿಸಿ ಹೋಗುತ್ತಿದೆ.ಭೋರೆಂದು ಸುರಿದ ಮಳೆ ಧುತ್ತೆಂದು ನಿಂತಂತೆ.ಮನಸ್ಸಿನ ಗಾಜು ಪಟ್ಟೆಂದು ಒಡೆದ ಸದ್ದು ಕಿವಿಯೊಳಗೆ ಗುಯ್ ಗುಡುತ್ತಿದೆ.
ಕನವರಿಕೆ ವಿಚಿತ್ರವಾಗಿ ರೋಧಿಸುತ್ತಿದೆ.ಯಾಕೆ ಹೀಗೆ ಮಾಡಿದೆ ಭಗವಂತ ಎಂದು ಅಂಗಲಾಚಿ ಬೇಡುತ್ತಿದೆ. ಆದರೆ ಬಾಯಿಂದ ಸ್ವರವೆ ಹೊರ ಬರುತ್ತಿಲ್ಲ.ಎಷ್ಟೊಂದು ಪ್ರೀತಿಸಿದ್ದೆ ಈ ಜೀವವೇ ನಿನಗಾಗಿ ಮುಡಿಪಾಗಿಟಿದ್ದೆ.ಯಾವ ತಪ್ಪಿಗೆ ಈ ಶಿಕ್ಷೆ.ಮಾಡಿದ ಅಪರಾಧವಾದರೂ ಏನು? ಇಷ್ಟು ದಿನದ ಆತ್ಮೀಯತೆ ಒಂದೇ ಗುಟುಕಿಗೆ ಖಾಲಿ ಯಾಗಲು ಹೇಗೆ ಸಾಧ್ಯ? ಎಷ್ಟೊಂದು ಸೊಗಸಾಗಿತ್ತು ಬದುಕು.ಕಾರಣವಿಲ್ಲದೆ ಹೋಳಾಯಿತಲ್ಲಾ.ಕನಸಿನ ಲಹರಿ ಕನವರಿಸುತ್ತಲೆ ಇತ್ತು. ದೈತ್ಯಾಕಾರದ ಜೀವವೊಂದು ಎದುರಿಗೆ ಧುತ್ತೆಂದು ಪ್ರತ್ಯಕ್ಷ ವಾಯಿತು.ನಿನ್ನ ಆಯಸ್ಸು ಇಂದಿಗೆ ಕೊನೆಯಾಯಿತು.ಮರುಕ್ಷಣವೇ ದೇಹ ಬಿಟ್ಟು ನನ್ನೊಡನೆ ಬಾ ಎಂದಿತು. ಇಲ್ಲಾ…ಇಲ್ಲಾ…ನನ್ನನ್ನು ತುಂಬಾ ಪ್ರೀತಿಸುವ ಜೀವಗಳ ಬಿಟ್ಟು ನಾ ಬರಲಾರೆ.ನನ್ನನ್ನು ಬಿಟ್ಟು ಬಿಡು.ಆಕ್ರಂದನ ಮುಗಿಲು ಮುಟ್ಟಿತು.ಜವರಾಯ ಗಹ ಗಹಿಸಿ ನಗುತ್ತಿದ್ದಾನೆ. ಯಾರು ನಿನ್ನವರು.? ನೀನು ಸತ್ತೊಡನೆ ನಾಲ್ಕು ದಿನ ಅಳುತ್ತಾರೆ. ಮತ್ತೆ ನಿನ್ನನ್ನು ಮರೆತೇ ಬಿಡುತ್ತಾರೆ ನೋಡು ಬೇಕಾದರೆ ಎಂದಿತು. ಆದರೂ ಮನಸ್ಸು ಒಪ್ಪಲಿಲ್ಲ . ಒಲ್ಲದ ಮನಸ್ಸಿನಿಂದ ದೇಹದಿಂದ ಹೊರಬಂದೆ.ಅಯ್ಯೋ! ನಾಳೆ ಬೆಳಕಾದೊಡನೆ ನನ್ನ ಕಂದ ಅಮ್ಮನಿಲ್ಲದೆ ಎಲ್ಲೆಲ್ಲಿ ಹುಡುಕುವುದೋ? ನನ್ನ ಪತಿ ಪುಟ್ಟ ಕಂದಮ್ಮಗಳನ್ನು ಹೇಗೆ ನೋಡಿಕೊಳ್ಳುವರೋ? ಹೋಗುವ ಮುನ್ನ ನನಗೇನೋ ಕೇಳ ಬೇಕಿತ್ತು ಅವರಲ್ಲಿ.ಕಂದ ,ಅಮ್ಮಾ ಎಂದು ಯಾರನ್ನು ಕರೆಯುವುದು ಇನ್ನು.ಮನಸ್ಸು ಚೀರಾಡುತ್ತಲೆ ಇತ್ತು.ಎಲ್ಲರಿಗೂ ವಿಷಯ ತಿಳಿಯಿತು.ಮನೆಯ ತುಂಬಾ ಅಳುವ ಸದ್ದು.ಇಷ್ಟು ಸಣ್ಣ ವಯಸ್ಸಿಗೇ ಹೀಗಾಗಬಾರದಿತ್ತು.ಪಾಪ ಮಕ್ಕಳನ್ನು ಕಂಡರೆ ಕರುಳು ಚುರುಕ್ ಅನ್ನುತ್ತದೆ ಎನ್ನುವವರು ಕೆಲವರು.ಅಮ್ಮನಿಗೆ ಏನಾಗಿದೆ ಯಾಕೆ ಎಲ್ಲರೂ ಅಳುತ್ತಿದ್ದಾರೆ.ಎಂದು ಅರ್ಥವಾಗದಿದ್ದರೂ ಅಳುವ ಜೀವದ ಕುಡಿಗಳು.ಮನಸ್ಸಿನಲ್ಲಿ ಆಗುವ ದುಃಖವನ್ನು ನಿರ್ಲಿಪ್ತವಾಗಿ ಎದುರಿಸುತ್ತಾ ಮೌನಕ್ಕೆ ಶರಣಾದ ಪತಿರಾಯ. ಮುಂಜಾನೆ ಕೋಳಿ ಕೂಗುವ ಸದ್ದು ಕೇಳಿ ಎಚ್ಚರವಾಯಿತು.ವಾಸ್ತವಕ್ಕೆ ಬಂದಾಗ ತಿಳಿಯಿತು ಇದೊಂದು ಕನಸೆಂದು.ಮತ್ತೆ ಮತ್ತೆ ಕಣ್ಣನ್ನು ಪಿಳಿ ಪಿಳಿ ನೋಡಿದೆ. ಪಕ್ಕದಲ್ಲಿ ಮಲಗಿರುವ ಪುಟ್ಟ ಕಂದ ಅಮ್ಮಾ ಎಂದು ತಬ್ಬಿ ಹಿಡಿಯಿತು.ಅಪ್ಪಿಕೊಂಡು ಗಲ್ಲಕ್ಕೊಂದು ಮುತ್ತಿಕ್ಕಿ ಮರುಜನ್ಮ ಪಡೆದಷ್ಟೇ ಖುಷಿಯಿಂದ ಆ ಭಗವಂತನಿಗೊಮ್ಮೆ ಕೈ ಮುಗಿದೆ.
ನೀತಿ: ಇದು ಕನಸಾಗಿರಬಹುದು ಆದರೆ ಋಣವಿದ್ದಷ್ಟೆ ಜೀವನ,ಭಗವಂತನ ತೀರ್ಪಿನ ಎದುರು ಮೋಹ,ಪ್ರೀತಿ,ಆಸ್ತಿ,ಅಂತಸ್ತು,ಅಧಿಕಾರ,ದ್ವೇಷ ,
ಎಲ್ಲವೂ ನಶ್ವರ.ಸಿಕ್ಕ ಬದುಕನ್ನು ಇರುವಷ್ಟು ದಿನ ಪ್ರೀತಿಯಿಂದ ಅನುಭವಿಸೋಣ.ಯಾರಿಗಾದರೂ ಕ್ಷಮೆ ಅಥವಾ ಕೃತಜ್ಞತೆ ತಿಳಿಸಲಿದ್ದರೆ ನಾಳೆಯ ವರೆಗೂ ಕಾಯಬೇಡಿ. ಇದ್ದಷ್ಟು ದಿನ ಸಂತೋಷದಿಂದ ಕಳೆಯೋಣ.ಅಲ್ಲವೇ? ನೀವೇನಂತೀರಿ?
———————–
ಪ್ರಜ್ವಲಾ ಶೆಣೈ
ನಿಜ ನೀರಿನ ಮೇಲಿನ ಗುಳ್ಳೆ ಮನುಜನ ಜೀವ.. ತುಂಬಸೊಗಸಾಯಿ ಬರೆದಿದ್ದೀಯಾ ಲೇಖನ..
Satyavada matu! iddastu dina santoshavagi kala kaleyona