ಮೇ-ದಿನದ ವಿಶೇಷ

ಒಂದು ವಿಶೇಷ ಕಥೆ

ನಿಜಾಮುದ್ದೀನ್ ಒಳಗೆ ಒಂದು ಸಾಯಂಕಾಲ…

ತೆಲುಗು ಮೂಲ: ಸಕಲಭಕ್ತುಲ ಕೃಷ್ಣಮೂರ್ತಿ


ಕನ್ನಡಕ್ಕೆ: ಡಾ.ಶಿವಕುಮಾರ್ ಕಂಪ್ಲಿ.

 ಭಾಷಾ ಭಾರತಿ ಸಮಿತಿಯ ಆಹ್ವಾನದ ಮೇರೆಗೆ ದೆಹಲಿಯಿಂದ ಹೊರಟಿದ್ದೆ. ಸೂರತ್ ಗೆ ಹೊರಡೋ ಎಕ್ಸಪ್ರೆಸ್ ರೈಲು ನಿಜಾಮುದ್ದೀನ್ ಸ್ಟೇಷನಲ್ಲಿ ನಾಲ್ಕನೇ ನಂಬರ್ ಪ್ಲಾಟ್ ಫಾರಂ   ನ ಬಳಿ ಬಂದು ನಿಂತಿತು.ಅಲ್ಲಿಯ ತನಕವೂ..ಹಾಗೇ.. ಹುಚ್ಚು ಕೋಡಿ ಮಾತುಗಳನ್ನಾಡುತಿದ್ದ ಗೆಳೆಯರಿಗೆಲ್ಲಾ ಬೈ ಬೈ ಹೇಳಿ ಲಗೇಜುಗಳೊಂದಿಗೆ ನಾ ಹೊರಟೆ. ಗಂಟೆ ನಾಲ್ಕು ಹತ್ತು. ಸಣ್ಣಗೆ..ತಂಪಾದ ಸಂಜೆ ಶುರುವಾಗುತಿತ್ತು.
     ಸ್ಟೇಷನ್’ನೊಳಗೆ ನನ್ನ ಲಗೇಜುಗಳನ್ನ  ತೆಗೆದುಕೊಂಡ ಮೇಸ್ತ್ರಿಗೆ “ಇಲ್ಲಿ ಅಪ್ಪರ್ ಕ್ಲಾಸ್ ವೇಯಿಟಿಂಗ್ ರೂಮ್ಸನೊಳಗೆ ಎ.ಸಿ.ಗಳು ಕೆಲಸ ಮಾಡಲ್ಲಪ್ಪ, ಒಳ್ಳೆ ಗಾಳಿ ಬೀಸುವ ಕಡೆ ಜಾಗ ತೋರಿಸು. ರಾತ್ರಿ ಎಂಟು ಇಪ್ಪತ್ತಕ್ಕೆ ‘ರಾಜಧಾನಿ’ ಎಕ್ಸಪ್ರೆಸ್ ನೊಳಗೆ ಬೆಂಗಳೂರಿಗೆ ಹೋಗಬೇಕು.ಹಾ..ಹಣವನ್ನ ಸ್ವಲ್ಪ ನೋಡಿ ಕೇಳು ಮಾರಾಯಾ..” ಅಂದೆ ಹಿಂದಿಯೊಳಗೆ.
    “ಆಗಲಿ ಸಾಬ್! ನಿಮ್ಮ ಗಾಡಿ ಎಂಟನೇ ನಂಬರ್ ನಲ್ಲಿ ಬರುತ್ತೆ. ನನ್ನ ಜೊತೆ ಸಾವಕಾಶವಾಗಿ ಬನ್ನಿ. ಹಾ..ಸಾಬ್, ನಿಮ್ಮ ಕೋಚ್ ನಂಬರ್ ಎಷ್ಟು?” ಅಂತ ಅವ ಕೇಳಿದ. ನನ್ನ ಉತ್ತರ ಕೇಳಿದ ಮೇಲೆ ಏಳು,ಎಂಟು ಪ್ಲಾಟ್ ನಂಬರ್ ನ ಪ್ಲಾಟ್ ಗಳ ಮದ್ಯವೇ ಇರುವ ಮಹಡಿಯ ಮೆಟ್ಟಿಲ ಮೇಲಿಂದ ಇಳಿಯುತ್ತಾ…ನನ್ನನ್ನ ಕೆಳಗೆ ಕರೆದುಕೊಂಡು ಬಂದ.
   “ಇಲ್ಲಿ ಒಳ್ಳೆಯ ತಣ್ಣನೆಯ ಗಾಳಿ ಬೀಸುತ್ತೆ ಸಾಬ್! ಈ ಮರಳ ರಾಸಿ ಮೇಲೆ ಕೂತುಕೊಳ್ಳಿ. ಪಕ್ಕದಲ್ಲೇ ಟೀ ಸ್ಟಾಲ್ ಕೂಡಾ ಇದೆ. ಸಾಬ್.. ನ್ಯಾಯವಾಗಿಯೇ ಕೇಳುತ್ತಿರುವೆ ಎಂಭತ್ತು ರೂಪಾಯಿ ಕೊಡಿ”.ಕೇಳಿದನು.
   ನಾನು ಏನೆಲ್ಲಾ… ಕೇಳಿದರೂ, ಆತ ನನಗೆ ಇಲ್ಲಿ ತನಕವೂ.. ಒಂದು ಎದುರು ಮಾತಾಡಿಲ್ಲವಾದ್ದರಿಂದ ಆತನಿಗೆ ಸಂತೋಷದಿಂದಲೇ ಹಣನೀಡಿದೆ.
  ನಾನಿರುವ ಕೆಲವೇ ಅಡಿ ಹತ್ತಿರದಲ್ಲಿ ಕೆಲವು ಹುಡುಗರು ಗುಜುಗುಜು ಮಾತುಕತೆಯಲ್ಲಿ ಮುಳುಗಿದ್ದರು. ತಮ್ಮವೇ ನಗೆ ಕೇಕೆಗಳಲ್ಲಿ ಅವರು ಲೋಕವನ್ನೇ ಮರೆತು ಹೋದವರಂತಿದ್ದರು. ಅವರಲ್ಲಿ ಒಂದಿಬ್ಬರು ಅದೇ ತಾನೇ..ಟೀನೇಜ್ ಮುಟ್ಟಿದ ವಯಸ್ಸಿನವರು. ಅವರು ನನ್ನ ಕಡೆ ನೋಡಿದಂತೆ ಕಾಣಲಿಲ್ಲ.
   ನನಗೆ ಇಷ್ಟು ವಯಸ್ಸಾದರೂ, ನೂರಾರು ಬಾರಿ ಪ್ರಯಾಣಿಸಿದರೂ, ಯಾರಾದರೂ…ಹೊಸಬರೊಂದಿಗೆ ಮಾತಾಡುವುದು, ಪ್ರೀತಿಯಿಂದ ಬೆರೆಯುವುದೆಂದರೆ ಅದು ನನ್ನ ಸ್ವಭಾವಕ್ಕೇ ವಿರುದ್ಧ! ಎಂಬಂತಿದ್ದರೂ… ವಿಚಿತ್ರವೆಂಬಂತೆ ಈ ದಿನ ನನಗೂ.. ಅವರ ಮಾತುಗಳಲ್ಲಿ ಸೇರಬೇಕೆನಿಸಿದೆ. ಇಷ್ಟಕ್ಕೂ ಇನ್ನೂ…ನಾಲ್ಕು ಗಂಟೆಯ ಸಮಯ ಕಾಲ ಕಳೆಯಲೇ ಬೇಕಲ್ಲವೇ!? ಅದಕ್ಕಿಂತಲೂ ಹೆಚ್ಚು ಅವರೊಳಗೆ ಅದೇನೋ… ಆಕರ್ಷಣೆ ಇತ್ತು! ಆದಕ್ಕಾಗಿಯೋ.. ಏನೋ? ನಾನು ಕುತೂಹಲಗೊಂಡೆ. ಕಾಲು ಗಂಟೆ ಕಳೆಯಿತು.ಉಹೂ.. ಅವರೊಳಗೆ ಒಬ್ಬರೂ… ನನ್ನನ್ನು ಗಮನಿಸಲಿಲ್ಲ!!.


   ನಾನೇ..ಎದ್ದು ಪಕ್ಕದಲ್ಲಿರುವ ಟೀ ಸ್ಟಾಲ್ ಕಡೆ ಹೆಜ್ಜೆ ಹಾಕಿದೆ. ಅಂಗಡಿಯ ಯಜಮಾನ ಮತ್ತು ಆಳು ಕೆಲಸವಿಲ್ಲದೆಯೇ…ಖಾಲಿ… ಕುಳಿತು ದಿಕ್ಕು ಅಳೆವವರಂತಿದ್ದಾರೆ! ಅವರು ಪೇಪರ್ ಗ್ಲಾಸ್ ಮತ್ತು ಟೀ ಬ್ಯಾಗ್ ಗಳನ್ನ ಕೊಟ್ಟನಂತರವೇ… ನಾನು “ ಈ ಮೆಟ್ಟಿಲ ಕೆಳಗಿನ ಹುಡುಗರಿಗೂ.. ಡಿಪ್ ಚಾಯ್ ಕಳಿಸು ಬಾಯ್” ಅಂತ ಹಣ ನೀಡಿದೆ. ಆಳು ಚಹಾದ ಟ್ರೇ ತೆಗೆದುಕೊಂಡು ಹೋಗಿ ಎಲ್ಲರಿಗೂ.. ಒಂದೊಂದು ಟೀ.. ನೀಡಿದ.
   ಆ ಹುಡುಗ ‘ ಬಾಯ್’ ಅಂತ ಅಂದೊಡನೇ ನಾನು ಜೇಬಿನಿಂದ ಮೊದಲೇ…ರೆಡಿಯಾಗಿಟ್ಟುಕೊಂಡ ಐದು ರೂಪಾಯಿ ಟಿಪ್ಸ ತೆಗೆದುಕೊಟ್ಟೆ. ಆ ಹುಡುಗರು ಮಾತಾಡುತ್ತಲೇ ಆ..ಗ್ಲಾಸುಗಳನ್ನ ತೆಗೆದುಕೊಂಡರು. ಟೀ ಬ್ಯಾಗ್ ಗಳನ್ನ ಡಿಪ್ ಮಾಡಿದರು.
   ಸುತ್ತಲೂ ನೋಡುತ್ತಾ.. “ಐ…ಎಲ್ಲರೂ ಇಲ್ಲೇ ಇದ್ದೇವಲ್ಲೋ? ಮತ್ತೆ ಯಾರು ಟೀ ಹೇಳಿದರು.” ಎಂದನೊಬ್ಬ ಹುಡುಗ. ಆತನೇ ಅವರೆಲ್ಲರಿಗೆ ನಾಯಕನಂತಿದ್ದಾನೆ. ಎಲ್ಲರೂ ಮುಖ ಮುಖ ನೋಡಿಕೊಂಡರು. ನಾ..ಹೇಳಿದೆ ಅಂತ ಹೋಗಿ ಕುಳಿತೆ. ಹುಡುಗರೂ ಅಚ್ಚರಿ ಪಟ್ಟರು!
  “ ನೀವೇಕೆ ಟೀ ತರಿಸಿಕೊಟ್ಟಿರಿ ಸಾಬ್ ? ನೀವ್ಯಾರೋ… ತಿಳಿಯದೇ!?”
   “ ಎಲ್ಲರೂ ಕೂಡಿ ಟೀ.. ಕುಡಿಯುತ್ತಿದ್ದರೆ ಚನ್ನಾಗಿರುತ್ತದೆ ಅನ್ನಿಸಿತು. ಕೊಡಿಸಿದೆ. ಇಷ್ಟು ಮಾತ್ರಕ್ಕೇ.. ಪರಿಚಯದ ಅಗತ್ಯವಿಲ್ಲ ಅಲ್ಲವೇ!?” ನಕ್ಕೆ.
   “ಸಾಬ್ … ನೀವು.. ಎಲ್ಲಿಂದ ಬಂದಿದ್ದೀರಿ..!? ಎಲ್ಲಿಗೆ ಹೋಗಬೇಕು?”
  “ಈಗ ನಾ…ಹರಿದ್ವಾರದಿಂದ ಬಂದಿದ್ದೇನೆ, ಬೆಂಗಳೂರಿಗೆ ಹೋಗಬೇಕು”
 “ ಹರಿದ್ವಾರ.. !? ಅಂದ್ರೆ  ಯಾತ್ರಾ..ಸ್ಥಳ!.
ಅಲ್ಲಾ…” ಒಬ್ಬಂಟಿಯಾಗಿ ಹೋಗಿದ್ದೀರಲ್ಲಾ..,ಸಾಬ್? ಆಂಟಿಯನ್ನ.. ಮನೆಯೊಳಗೇ… ಬಿಟ್ಟು. ನೀವೊಬ್ಬರೇ..!?” ಮೂದಲಿಸುವಂತೆ ಹೇಳಿದನೊಬ್ಬ.
 “ಆಂಟಿನಾ!? ಅಗೋ.. ಅಲ್ಲಿ..! ಮೇಲೆ!! ” ಅಂತ ಆಕಾಶದ ಕಡೆ ಕೈ ತೋರಿಸಿದೆ.
ಅವರಿಗೂ ನೋವೆನಿಸಿರಬೇಕು. “ಕೂತ್ಗೊಳ್ಳಿ ಅಂಕಲ್, ನಿಂತ್ಕೊಂಡೇ ಇದ್ದೀರಲ್ಲ..” ಮತ್ತೊಬ್ಬ ಹುಡುಗ ಜಾಗ ತೋರಿದ.
“ಅಂಕಲ್, ನಿಮ್ಮನ್ನ ನೋಡಿದ್ರೆ ಡಿಜೇಬಲ್ಡ ಆಗಿ ಕಾಣುತ್ತೀರಿ, ದೂರ ಪ್ರಯಾಣಗಳು ಕಷ್ಟ ಅಲ್ವೇ?”ಎಂದನು ಎಲ್ಲರಿಗಿಂತಲೂ ಕಿರಿಯ ಹುಡುಗ.
“ಮಕ್ಕಳು ಜೊತೆಗೆ ಬರಲಾರೆವು ಅಂದ್ರೇ…?” ಮತ್ತೊಬ್ಬ ಹುಡುಗನ ಪ್ರಶ್ನೆ.
“ ಬಿಡುಗಡೆನೇ ಇಲ್ವಲ್ಲಪ್ಪಾ.. ಮತ್ತೆ!” ನನ್ನ ನಿಟ್ಟುಸಿರ ಉತ್ತರ.
ನಾ.. ಪ್ರತಿಸಲ ಹೋಗಬೇಕಂದ್ರೆ ಅವರಿಗೂ.. ಪುರುಸೊತ್ತಿರಬೇಕಲ್ಲ!? ಮೂರೂ ಮಕ್ಕಳು ವಿದೇಶಗಳೊಗೇ…ಇದ್ದಾರೆ.
“ ಸರಿ ಬಿಡಿ, ನನ್ನ ಬಗ್ಗೆ ಇರಲಿ, ನೀವು.. ನಿಮ್ಮ ಬಗ್ಗೆ ಹೇಳಿ. ಇಲ್ಲೇನು ಮಾಡುತ್ತಿದ್ದೀರಿ..!?”
“ ಸಾರ್ ನಾವ್ಯಾರೂ.. ಡಿಲ್ಲಿಯವರಲ್ಲ. ಈ ಚಿಕ್ಕ ಹುಡುಗನೊಬ್ಬನೇ ಇಲ್ಲಿಯವನು. ಇವ ಇವನ ತಂದೆ ತಾಯಿಯವರೊಂದಿಗೆ ಇಲ್ಲೇ ಹತ್ತಿರದಲ್ಲಿದ್ದಾನೆ.”
“ ಅಂದ್ರೆ..?”
“ನಾವೆಲ್ಲಾ.. ಮನೆಬಿಟ್ಟು ಓಡಿ ಬಂದವರು ಸಾ…” ಕೋರಸ್ ನಂತೆ, ಹೇಳಿದರೆಲ್ಲರೂ..
“ಹಾಗಾ…ಓ.. ಅಸಲಿಗೆ ನಿಮ್ಮ ಕಥೆ ಏನು..? ಮೊದಲು ನೀನು ಹೇಳಪ್ಪ , ಇವರೆಲ್ಲರಿಗೆ ಲೀಡರ್ ನಂತಿದ್ದೀಯಲ್ಲ. ಯಾವ ಊರು ನಿಮ್ಮದು?”
“ ನಮ್ಮದು ಕರ್ನಾಟಕದ ಬಳ್ಳಾರಿ ಹತ್ತಿರ ಚಿಕ್ಕ ಹಳ್ಳಿ ಸರ್. ಚಿಕ್ಕವನಿದ್ದಾಗ ತುಂಬಾ.. ಕಷ್ಟದಲ್ಲಿದ್ದೆ. ಓದು ಬರಹ ನನ್ನ ಮೈಗತ್ತಲಿಲ್ಲ. ಹಳ್ಳಿಯಲ್ಲಿದ್ದ ಅಪ್ಪ ಅಮ್ಮ, ಅಷ್ಟೇ ಅಲ್ಲ; ಊರಿನವರೂ ಬೈಯುವವರೇ…! ಮುದುಕರೂ… ಹತ್ತಿರಕ್ಕೆ ಕರೆದು, ಕಿವಿ ಹಿಂಡಿ.. ನಿಮ್ಮ ತಮ್ಮನಂತೆ ಜಾಣನಾಗದಿದ್ದರೂ ಕನಿಷ್ಟ ಪಾಸಾಗಲೇ.. ಕ್ವಾಣಾ.. ಅಂತ ತಿವಿಯುತ್ತಿದ್ದರು!.ಒಂದು ದಿನ ನನ್ನ ತಮ್ಮ ಎಸ್.ಎಸ್.ಎಲ್.ಸಿ. ಪಾಸ್ ಆಗಿಬಿಟ್ಟ!. ಆ ದಿನ ನನ್ನ ಮೈ ಮೇಲೆ ತೂಫಾನಿನಂತಹ ಬೈಗುಳಗಳು! ಅಲಿಕಲ್ಲುಗಳ ಹಾಗೆ ಹೊಡೆತಗಳು. ಅವನ್ನ ತಡೆಯಲಾಗದೆ,ಎಲ್ಲಿ ಮತ್ತೆ ರಾತ್ರೆಯೂ… ಬಿದ್ದಾವೆಂದು ತಿಳಿದು ಲಾರಿ ಹತ್ತಿ ಮನೆಬಿಟ್ಟು, ಊರೂರೆಲ್ಲಾ … ನಡೆದೂ.. ನಡೆದು ಬೆಂಗಳೂರ್ ಸೇರಿದೆ. ನಂತರ ಒಂದು ದಿನ ಯಾರಿಗೂ ಸಿಗುವುದೇ ಬೇಡವೆಂದು ಟಿಕೇಟ್ ಇಲ್ಲದೆ ರೈಲು ಹತ್ತಿ ಇಲ್ಲಿಗೆ ಬಂದುಬಿಟ್ಟೆ. ಇದೇ ಏಳನೇ ನಂಬರ್ ಪ್ಲಾಟ್ ಪಾರಂ ಮೇಲೆ ನಿಂತು ಬಿಟ್ಟೆ. ಮುಂದೆನೋ… ಗೊತ್ತಿಲ್ಲ ಸಾರ್. ಇಲ್ಲಿ ತನಕ ಬಂದಿದ್ದೇನೆ.
“ಆ ನಂತರ ಏನು ಮಾಡಿದೆ? ” ಕುತೂಹಲದಿಂದ ಕೇಳಿದೆ.
“ ಮೂರು ದಿನಗಳು ಸ್ಟೇಷನ್ನೆಲ್ಲಾ ತಿರುಗಿದೆ. ಅದೋ ಆ ಸ್ಟಾಲ್ ನವನು ಬೇಡವೆಂದರೂ… ನೂಕಿದರೂ, ಬೈದರೂ,ಹೊಟೇಲ್ ನ, ಎಂಜಲು ಪ್ಲೇಟಗಳನ್ನ ತೊಳೆಯುತ್ತ, ಬೇಡಿಕೊಳ್ಳುತ್ತ ,ಅವನು ನೀಡೋ ಆ ಸ್ವಲ್ಪ ಅನ್ನ ತಿಂದು ಪ್ರಾಣವನ್ನ ಉಳಿಸಿಕೊಂಡೆ. ಒಂದು ದಿನ ಅವನೇ.. ಕುಳಿತು ‘ಇಲ್ಲೇ ಬಿದ್ದಾಡಿದರೆ ನಿನಗೇನು ಸಿಗುತ್ತೋ ಮುಟ್ಟಾಳ. ಈ ಸ್ಟೇಷನ್ ಗೆಲ್ಲಾ ಒಬ್ಬ ದೊಡ್ಡ ಕಂಟ್ರಾಕ್ಟರ್ ಸಾಬ್ ಇದ್ದಾನೆ. ಅವನ ಮನೆಗೆ ಹೋಗಿ ಕಾಲಿಗೆ ಬಿದ್ದು ಬೇಡಿಕೊಂಡರೆ ಯಾವುದಾದರೂ ದಾರಿ ತೋರಿಸುತ್ತಾನೇನೋ’ ಅಂದನು.
 ಆ ಮಾತುಗಳು ನನಗೆ ಮಂತ್ರಗಳಂತೆ ಕಂಡವು.
 ಪಹಾಡ್ ಗಂಜ್ ನೊಳಗೆ ಆ ಕಂಟ್ರಾಕ್ಟರ್ ಮನೆ!.
    ಸರ್, ಮನೆ ಅಲ್ಲ ಸರ್ ಅದು ದೇವಲೋಕ! ಇಂದ್ರ ಭವನದಂತಿದೆ. ಅಂಗಡಿಯವ ಹೇಳಿದ ಪ್ಲಾನ್ ಪ್ರಕಾರವೇ..ಹೋಗಿ ಆ… ಮನೆಯೊಳಗೆ ತೂರಿ ಕಾಂಟ್ರಾಕ್ಟರ್ ಕಾಲಮೇಲೆ ಬಿದ್ದುಬಿಟ್ಟೆ!!. ನನಗೇನಾದರೂ ದಾರಿತೋರಿಸುವವರೆಗೆ ನಿಮ್ಮ ಕಾಲು ಬಿಡಲಾರೆನೆಂದು ರಚ್ಚೆ ಹಿಡಿದೆ. ನನ್ನ ಬಡತನ ಕುರಿತು, ನನ್ನ ಮನೆ ಕುರಿತು, ಇದ್ದ ನಿಜವನ್ನೇ ಹೇಳಿದೆ. ಕೊನೆಗೆ ಅವರ ಮನೆ ದೇವರು ಪುರಿ ಜಗನ್ನಾಥನ ಮೇಲೆ ಆಣೆಮಾಡಿದೆ. ಎಂದಿಗೂ ಸುಳ್ಳು ಹೇಳಲಾರೆನೆಂದೂ, ಮೋಸ ಮಾಡಲಾರೆನೆಂದರೂ… ಆತ ನನ್ನ ಪರೀಕ್ಷಿಸಲಿಕ್ಕೆ ಎಷ್ಟೋ.. ಪ್ರಶ್ನೆ ಕೇಳಿದ. ಯಾವ ಕೆಲಸವೂ ಖಾಲಿ ಇಲ್ಲ. ನೀನೇನು ಮಾಡಬಲ್ಲೆಯೋ? ಅಂತ ಕೇಳಿದ.
   “ಯಾವುದಾದರೂ ಸರಕು ಕೊಡಿಸಿ ಸಾರ್, ಮಾರುತ್ತೇನೆ. ಸಾಯಂಕಾಲಕ್ಕೆ ಗಳಿಸಿದ ಹಣ,ಉಳಿದ ಸಾಮಾನು ತಂದು ನಿಮಗೇ.. ಕೊಡುತ್ತೇನೆ. ನಿಮಗೆ ತಿಳಿದಷ್ಟು ಕೊಡಿ ಸಾಬ್. ಅದರಿಂದಲೇ ನನ್ನ ಹೊಟ್ಟೆ ತುಂಬಿಸಿಕೊಳ್ಳುತ್ತೇನೆ.” ಅಂದೆನು.
   “ ನಾಳೆ ಬೆಳಿಗ್ಗೆ ಬರತೇನೆ. ಎಂಟ್ರೆನ್ಸ ಹತ್ತಿರ ನಿಂತುಕೋ” ಸಾಬ್, ಹೇಳಿದನು.
   ಮುಂಜಾನೆ ಹನ್ನೊಂದು ಗಂಟೆಗೆ ಬಂದು.. ಚಿಪ್ಸ, ಕುರ್ ಕುರೇ, ಬಿಸ್ಕೆಟ್ ಪಾಕೀಟ್ ಗಳನ್ನೆಲ್ಲಾ.. ಒಂದು ಅಂಗಡಿಯೊಳಗೆ ಕೊಡಿಸಿದರು. ಮಧ್ಯಾನ್ಹ ಎರಡು ಗಂಟೆಗೆಲ್ಲಾ.. ್ಲ ಖಾಲಿ ಆದವು. ಸಾಬ್ ಹೋಲ್ ಸೇಲ್ ರೇಟ್ ಮಾತ್ರ ತೆಗೆದುಕೊಂಡು ಉಳಿದದ್ದೆಲ್ಲಾ ನನಗೇ ಬಿಟ್ಟುಕೊಟ್ಟ. ಆಗ ನನ್ನೊಳಗೆ ಸಮುದ್ರದ ಅಲೆಯಂತೆ ಆನಂದ ಉಕ್ಕಿ ಹರಿಯಿತು! ಅಂದಿನಿಂದ ಆ ಉಳಿದ ಹಣದಿಂದಲೇ ವ್ಯಾಪಾರ ಮುಂದುವರೆಸಿರುವೆ.
   “ ಸಾರ್! ಈ ನಡುವೆ ಜನರೆಲ್ಲಾ ಕುರ್ ಕುರೇ ಗಳು, ಚಿಪ್ಸ,ಕೂಲ್ ಡ್ರಿಂಕ್ಸ ಗಳಿಂದಲೇ ಬದುಕುತಿದ್ದಾರೆ. ಇವುಗಳಲ್ಲಿ ಲಾಭವೂ ಜಾಸ್ತಿಯೇ… ಈಗ ನೋಡಿ, ಆ ಅಂಗಡಿಯೇ.. ನನ್ನದು. ನನ್ನ ಹಳ್ಳಿಗೂ..  ದುಡ್ಡು ಕಳಿಸುತಿದ್ದೇನೆ. ನನ್ನ ತಮ್ಮನನ್ನ ಚನ್ನಾಗಿ ಓದಿಸುತಿದ್ದೇನೆ. ಬಳ್ಳಾರಿಯಲ್ಲಿ ಆತನೀಗ ಇಂಜಿನಿಯರ್ ಓದುತಿದ್ದಾನೆ ಸಾರ್! ಈಗ ನಾ.. ಊರಿಗೆ ಹೋದರೆ, ಅವತ್ತು ಬೈಯುತ್ತಿದ್ದವರೆಲ್ಲಾ… ಅಣ್ಣಾ ಅಣ್ಣಾ ಅಂತ ನನ್ನ ಸುತ್ತಲೇ.. ಸುತ್ತುತ್ತಾರೆ.” ಎಂದ  ಗತ್ತಿನಿಂದ.
   “ ಸರಿಪಾ.. ನಿನ್ನ ಪ್ರೋಗ್ರೆಸ್  ಚನ್ನಾಗಿದೆ. ಆದರೆ ನೀನೀಗ ಇಲ್ಲಿದ್ದೀಯ! ಅಂಗಡಿಯಲ್ಲಿ ಯಾರಿದ್ದಾರೆ? ಕಾಣುತ್ತಿಲ್ಲವಲ್ಲ!?”
   “ಇದೋ… ಇವರಿಬ್ಬರೂ ನನಗೆ ಹೆಲ್ಪರ್ಸ. ಇವರಿಗೆ ತಿಂಗಳಿಗೆ ಮೂರು ಸಾವಿರಕ್ಕಿಂತಲೂ ಹೆಚ್ಚು ಸಂಬಳ ಕೊಡುತಿದ್ದೇನೆ. ಮೂರೂ ಹೊತ್ತು ಊಟ,ಟೀ,ಕೊಡಿಸುತ್ತೇನೆ. ಐದು ಗಂಟೆಯ ತನಕ ಈ ಎರಡೂ.. ಪ್ಲಾಟ್ ಪಾರಂಗಳು ಖಾಲಿ ರ‍್ತಾವೆ.” ಇಲ್ಲೇ ವಾಸ ಅಂತ ಬಡಕಲಾದ ಸೊರಗಿದ ಇಬ್ಬರು ಹುಡುಗರನ್ನ ತೋರಿಸಿದ. ಅವರು ನನಗೂ ನಮಸ್ಕಾರ ಮಾಡಿದರು.
  ಮಾತುಕಥೆಯ ನಡುವೆಯೇ.. “ಈಗಲೇ ಬರ‍್ತೀವಿ ನಿಲ್ಲಿ ಸಾರ್! ಅಂತ ಉಳಿದ ನಾಲ್ವರೊಳಗೆ ಇಬ್ಬರು ತಕ್ಷಣ ಓಡಿದರು. “ ಗಡಿಬಿಡಿಯಲ್ಲಿ ,ಅವಸರದಲ್ಲಿ ಅವರು ಎಲ್ಲಿಗೆ ಹೋಗುತ್ತಿದ್ದಾರೆ!?” ಎಂದುಕೊಂಡು ಆಕಡೆ ನೋಡೋದ್ರೊಳಗೆ ಆರನೇ ನಂಬರ್‌ ಪ್ಲಾಟ್‌ ಹತ್ತಿರ ಬರುತಿದ್ದ ರೈಲನ್ನ ಅವರು ಹತ್ತಿದರು.
  ನನ್ನ ದೃಷ್ಟಿ, ನಾಲ್ಕಡಿಯೂ ಇಲ್ಲದ ಎಲ್ಲರಿಗಿಂತಲೂ ಚಿಕ್ಕ ಹುಡುಗನ ಮೇಲೆ ಬಿತ್ತು. ಅವನ ಪಕ್ಕವೇ ಹತ್ತು ಹನ್ನೆರಡು ಲೀಟರಿನ ಬಕೇಟ್ಗಳು.ಅವುಗಳಲ್ಲಿ ತಾಲಿಪಟ್ಟು, ಹುರಿಗಡಲೆ ತುಂಬಿದಂತಿದ್ದವು. ಅವುಗಳ ಮೇಲೊಂದು ಸೌಟು. ಮತ್ತೊಂದು ಕಡೆ ಅಡಕೆ ದೊನ್ನೆಯ ಸುರುಳಿಗಳು!
ಅವನು ಆದಷ್ಟೂ… ಮಾರಿಕೊಂಡು ನಾವು ಕುಳಿತಲ್ಲಿಗೇ..ಬಂದ.
  ನಾನು ಪ್ರೀತಿಯಿಂದ “ಟೈಮ್ ಐದಾಗುತ್ತಿದೆ. ಉಳಿದ ಹುರಿಗಡಲೆಯನ್ನ ಯಾವಾಗ ಮಾರುತ್ತಿ?” ಅಂದೆ.
   “ಎಲ್ಲಾ ಮಾರತೀನಿ  ಸಾರ್, ಇವನ್ನ ಮಾರಿಯೇ.. ಮನೆಗೆ ಹೋಗುತ್ತೇನೆ ಸಾರ್” ಅಂದ.
  “ಬಕೆಟ್ ಒಳಗಿನ ಹುರಿಗಡಲೆ ಮಾರುತೇನಂತೀಯಾ? ಮತ್ತೇನಿವು!?”
  “ನಾ ಹೇಳೋದು ನಿಜವೇ ಸಾರ್, ಬೇಕಾದ್ರೆ ನೋಡ್ರಿ!, ಸ್ವಲ್ಪೇ.. ಸ್ವಲ್ಪ ಉಳಿದಿವೆ. ಬಕೆಟ್ ಮದ್ಯದೊಳಗೆ ಒಂದು ತಟ್ಟೆ , ಅದನ್ನ ಹಿಡಿದು ತಿರುಗಿಸಲು ಸ್ವಲ್ಪೇ ಸ್ವಲ್ಪ ಹುರಿಗಡಲೆ ಕಾಣಿಸಿದವು.”
 “ಅಬ್ಬಾ!.. ಇದೊಂತರ ಮ್ಯಾಜಿಕ್ ತರ ಇದೆ ಕಣೋ, ಸರಿ ನಿನ್ನ ಸಂಗತಿ ಹೇಳು. ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿನ್ನನ್ನ ಸ್ಕೂಲಿಗೆ ಹೋಗದಂತೆ ಮಾಡಿ, ಈ.. ಜವಾಬ್ದಾರಿಯನ್ನ ನಿನ್ನ ತಲೆಮೇಲೆ ಹಾಕಿದ್ದಾರಲ್ಲ!? ಆದರೂ ಇಷ್ಟು ಮಾರಿದರೆ ನಿನಗೆಷ್ಟು ಸಿಗುತ್ತೆ?” ಕುತೂಹಲಕ್ಕೆ ಬಿದ್ದು ಕೇಳಿದೆ.
  “ಎರಡು ನೂರು ಸಿಗುತ್ತೆ ಸಾರ್..”
  “ನಿಜವಾಗಲೂ”
  “ನಿಜವೇ ಸಾರ್, ಹಾಕಿದ ಮಾಲಿಗೆ ಎರಡು ಪಟ್ಟು ಬರುತ್ತೆ. ಈ ಸಂಪಾದನೆಯಿಂದ ಅಮ್ಮನಿಗೆ. ಅಪ್ಪನಿಗೆ ನನಗೆ ಎಲ್ಲಾ… ಸರಿಹೋಗುತ್ತೆ. ನಮಗೆ ಸ್ವಂತ ಮನೆಯಿರುವುದರಿಂದ ಬಾಡಿಗೆಯ ನೋವೂ..ಇಲ್ಲ.”
  “ನಿನ್ನ ಹೆಸರು”
  “ಉಪೇಂದ್ರ ದಾಸ್ ಅಂತ ಸಾರ್”
 “ಈ .. ಸ್ಟೇಷನ್ನೊಳಗೆ ಎಲ್ಲರಿಗೂ ಮಾಮೂಲಿ ನೀಡಬೇಕಾಗುತ್ತೆ ಅಲ್ವಾ?”
 “ನೀಡಿದಮೇಲೂ.. ಉಳಿಯುತ್ತೆ ಸಾರ್”
“ಅಲ್ವೋ..ಓದಬೇಕು! ಅಂತ ನಿನಗನ್ನಿಸಲ್ಲವಾ?”
“ ನಮ್ಮ ಬೀದಿಯೊಳಗೇ.. ನೈಟ್ ಟ್ಯೂಷ್ಯನ್ನಿಗೆ ಹೋಗುತ್ತಿದ್ದೇನೆ ಸಾರ್. ಹೈಸ್ಕೂಲ್ ಪ್ರೈವೇಟ್ ಆಗಿ ಕಟ್ಟುತ್ತೇನೆ”
“ ಹಗಲೆಲ್ಲಾ ಹೀಗೆ ತಿರುಗಿ ಆಯಾಸ ಬಿದ್ದಮೇಲೂ… ನಿನಗೆ ಓದುವ ಉತ್ಸಾಹ ಉಳಿದಿರುತ್ತಾ ಮರಿ ”
 “ಹೂ..ಸರ್. ಪರವಾಗಿಲ್ಲ ಸಾರ್, ಟ್ಯೂಷನ್ ಸಾರ್ ಚನ್ನಾಗಿ ಹೇಳಿಕೊಡ್ತಾರೆ ಉತ್ಸಾಹ ತುಂಬುತ್ತಾರೆ. ಇದುವರೆಗಿನ ಪರೀಕ್ಷೆಯೊಳಗೆ ಒಳ್ಳೆಯ ಮಾರ್ಕುಗಳೇ ಬಂದಿವೆ. ಹತ್ತನೇ ತರಗತಿ ಪಾಸಾದ ಮೇಲೆ ಮುಂದೆ ಏನ್ ಮಾಡಬೇಕಂತ ಆಲೋಚಿಸುತ್ತೇನೆ ಸರ್.” ಅಂತ ಮುಗಿಸಿ… ಓವರ್ ಬ್ರಿಡ್ಜ ಬಳಿ ಹೋದ.


  ಆ ಕಡೆಯೇ ನೋಡುತ್ತಾ… ತಲೆ ತಿರುಗಿಸೋದರೊಳಗೆಲ್ಲಾ ಈ…ಮೊದಲೇ.. ಹೋಗಿದ್ದ ಇಬ್ಬರು ಹುಡುಗರು ಅದೇ ಸ್ಪೀಡಲ್ಲಿ ನಗುತ್ತಾ ಬರುತ್ತಿದ್ದಾರೆ!!!. ಒಬ್ಬನ ಕೈಯಲ್ಲಿ ಖಾಲಿ ವಾಟರ್ ಬಾಟಲ್ಸ.ಇನ್ನೊಬ್ಬನ ಕೈಯೊಳಗೆ ಸ್ವಲ್ಪ ನಲುಗಿದಂತೆ ಕಾಣುವ ನ್ಯೂಸ್ ಪೇಪರ್‌ ಗಳನ್ನು ಹಿಡಿದು, ಅವರು ಆಯಾಸ ಪಡುತ್ತ ಬಂದು ನಿಂತರು.
   “ ನಿನ್ನ ಹೆಸರೇನಪ್ಪ” ಪ್ಲಾಸ್ಟಿಕ್ ಬಾಟಲ್ಸ ಹಿಡಿದುಕೊಂಡ ಹುಡುಗನನ್ನ ಕೇಳಿದೆ.
   “ ಅಮರ್” ಅಂತ ಸರ್, ಅಲ್ಲಿರುವ ಒಂದು ದೊಡ್ಡ ಪೆಟ್ಟಿಗೆಯ ಮೂತಿ ಎತ್ತಿ ಅದರೊಳಗೆ ಅವುಗಳನ್ನು ಹಾಕಿ ಮತ್ತೊಂದು ಪೆಟ್ಟಿಗೆ ಮೇಲೆ ಹಾರಿ ಕುಳಿತುಕೊಂಡ.
 “ನಿಂದು ಯಾವ ಊರು!” ಅಂತ ಕೇಳಿದೆ.
 ಕೂಡಲೇ ಹೇಳತೊಡಗಿದ.
  “ ಹೈದ್ರಾಬಾದ್ ಸಿಟಿ ಸರ್. ಅಪ್ಪ ಅಮ್ಮನಿಗೆ ನಾ.. ಒಬ್ಬನೇ ಮಗ. ಅವರು ದಿನವೆಲ್ಲಾ ಓದು..ಓದು..ಚನ್ನಾಗಿ ಓದಬೇಕು. ಅಂತಾ ಹೇಳೇ..ಹೇಳೋರು.ಆ.. ಮಾರುತಿ ನಾಯಕ್ ತರಹ ನನಗೂ ಓದೆಂದರೆ ಅಷ್ಟಕಷ್ಟೇ..ಎಷ್ಟೋ ಕಷ್ಟ ಬಿದ್ದು ಏಳರವರೆಗೂ ಓದಿದರೂ, ಎಂಟರೊಳಗೇ.. ಫೇಲಾಗಿ ಬಿಟ್ಟೆ! ಅಪ್ಪ ಅಮ್ಮ ಸೇರಿ ಎಮ್ಮೆಗೆ ಬಡಿದಂತೆ ಬಡಿದರು.ಓದಿದರೆ ಮಾತ್ರ ಇಲ್ಲಿ ಜಾಗ. ಇಲ್ಲವೆಂದರೆ ಮನೆ ಬಿಟ್ಟು ಹೊರಟೋಗ್ ಎಂದರು. ತಾಳಲಾರದೆ ಮನೆಬಿಟ್ಟು ಸಿಕ್ಕ ರೈಲ್ ಹತ್ತಿ ಇಲ್ಲಿಗೆ ಓಡಿ ಬಂದು ಬಿಟ್ಟೆ ಸಾರ್. ಅಂತ ಕಣ್ಣೀರಾದ.”
  “ಎಷ್ಟು ವರ್ಷವಾಯಿತು?”
  “ಎರಡು ವರ‍್ಷದ ಮೇಲಾಯಿತು ಸಾರ್.”
  “ ಈ ಎರಡು ವರ್ಷದೊಳಗೆ ಮನೆಗೆ ಹೋಗಿದ್ದೆಯಾ ಅಮರ್?”
  “ ಇಲ್ಲ ಸಾರ್, ಇನ್ನು ಮೇಲೂ ಹೋಗಲಾರೆ…! ಓದಿದವರೆಲ್ಲಾ ಉದ್ದಾರವಾಗಿದ್ದಾರಾ? ವಿದ್ಯೆಯಿಲ್ಲದವರು ಬದುಕುತ್ತಿಲ್ಲವಾ? ಅವರು ನನಗೆ ನೀಡಿದ ನೋವನ್ನ ನಾನೆಂದಿಗೂ ಮರೆಯಲಾರೆ ಸಾರ್.” ರೋಷ, ಆವೇಶಗಳಲ್ಲೇ… ಆತನ ಮಾತುಗಳು ಚಿಮ್ಮುತಿದ್ದವು.
  “ಮರೀ, ನಿನ್ನನ್ನ ಹೊಡೆದಿದ್ದಕ್ಕೆ, ನೀನು ಮನೆಬಿಟ್ಟು ಓಡಿ ಬಂದದದ್ದಕ್ಕೆ… ಆ ನಂತರ ಅವರೂ ಕೂಡಾ ಸಂಕಟ ಪಟ್ಟಿರುತ್ತಾರಲ್ಲವೇ!? ; ಹೋಗಲಿ ಕ್ಷೇಮವಾಗಿ ಇದ್ದೇನೆಂದು ಅವರಿಗೆ ಸುಳಿವನ್ನಾದರೂ ನೀಡಿದ್ದೀಯಾ…!?”
  “ಒಮ್ಮೆ ಮಾತ್ರ ಕ್ಷೇಮವಾಗಿ ಇದ್ದೇನೆ” ಅಂತ ಎರಡೇ ಪದಗಳನ್ನ ಒಂದು ಪೋಸ್ಟ ಕಾರ್ಡ ಮೇಲೆ ಬರೆದು ಪೋಸ್ಟ ಮಾಡಿದ್ದೆ! ಮಾತು ಮುಗಿಸಿದ.
   “ಇಲ್ಲಿ ನಿನ್ನ ಕೆಲಸವೇನು ಕಂದಾ?” ಇನ್ನೊಬ್ಬನನ್ನು ಕೇಳಿದೆ.
  “ಈಗ ನೋಡಿದಿರಲ್ಲಾ ಅಂಕಲ್, ನಿಜಾಮುದ್ದೀನ್ಗೆ ಬರುವ ರೈಲು ಕಂಡೊಡನೆ ನಾನು ಖಾಲಿ ವಾಟರ್ ಬಾಟಲ್ಸಗಳನ್ನ ತೆಗೆದುಕೊಂಡು ಬಂದರೆ, ಇವನು ನಿಮ್ಮಂತವರು ಓದಿ ಬಿಟ್ಟ ನ್ಯೂಸ್ ಪೇಪರಗಳನ್ನ ಮಾರ‍್ತಾನೆ.ಸಂಜೆ ಐದರಿಂದ ಒಂಭತ್ತರವರೆಗೆ ನಮ್ಮಿಬ್ಬರ ಕೆಲಸ.
 “ಖಾಲಿ ಬಾಟಲ್ಗಳನ್ನೇನು ಮಾಡ್ತೀರೋ..?”ವಿಚಿತ್ರವೆನಿಸಿ ಕೇಳಿದೆ.
‘ನೋಡಿ’… ಅನ್ನುವಂತೆ ಅಲ್ಲಿದ್ದ ಪೆಟ್ಟಿಗೆ ತೆರೆದು ಅದರೊಳಗಿನ ಖಾಲಿ ಬಾಟಲ್ಸಗಳಲ್ಲೊಂದಕ್ಕೆ ಟೀ ಸ್ಟಾಲ್ ಗೋಡೆಗೆ ಅಂಟಿಕೊಂಡಿರುವ ಕೊಳಾಯಿ ನೀರು ತುಂಬಲು ಪ್ರಾರಂಭಿಸಿದ.
  “ಇದನ್ನೇನು ಮಾಡ್ತಿ !?”
  “ ಒಂದು ರೂಪಾಯಿ.. ಎರಡು ರೂಪಾಯಿಗಳಿಗೆ ಮಾರುತ್ತೇನೆ ಸಾರ್!”ಅಂದ.
 “ಯರದೋ.. ಎಂಜಲು ಬಾಟಲೊಳಗೆ ನೀರು ತುಂಬುತ್ತಿಯಲ್ಲಾ.. ಇದು ತಪ್ಪಲ್ಲವೇ!?”
“ತಪ್ಪು, ಪಾಪ.. ಪುಣ್ಯದಂತಹ ಪದಗಳನ್ನ ನಾವು ಇಲ್ಲಿ ಬಳಸಲ್ಲ ಸಾರ್ ಅಂದ.”  ಆಶ್ಚರ್ಯದಿಂದ ನನ್ನ ಬಾಯಿ ತೆರೆದುಕೊಂಡೇಬಿಟ್ಟಿತು!!
  ಇಷ್ಟರೊಳಗೆ.. ಐದನೇ ನಂಬರ್ ಪ್ಲಾಟ್ ಪಾರಂʼಗೆ ಬೆಂಗಳೂರು ಕಡೆಗೆ ಹೊರಡಬೇಕಾದ ರೈಲು ದಢ ದಢಾ ಅಂತ ಶಬ್ದ ಮಾಡುತ್ತಾ ಬಂದು ನಿಂತಿತು. ಇವನು ‘ಪುಟುಕ್’ ಅಂತ ಒಂದು ಭೋಗಿಯೊಳಗೆ ತೂರಿ ಹೋದ. ಹೋದ ಹತ್ತು ನಿಮಿಷದೊಳಗೇ ಖಾಲಿ ಬಾಟಲ್ ಗಳ ಚೀಲದೊಂದಿಗೆ ಓಡಿ ಬಂದ. ಇನ್ನೊಬ್ಬ ನೀರು ತುಂಬಿದ ಬಾಟಲ್ ಗಳನ್ನ ಹಿಡಿದು ಓಡಿದ. ಆ ಟ್ರೇನ್ ಹೋದೋಡನೆ ಮೆಲ್ಲಗೆ ನಡೆಯುತ್ತಾ ಬಂದು ಇಬ್ಬರೂ..ಖಾಲಿ ಪೆಟ್ಟಿಗಯ ಮೇಲೆ ಕುಳಿತರು. ಹೀಗೇ.. ನೋಡಿ ಸರ್ ಈ ೫,೬,೯ ನಂರ‍್ಗಳಿಗೆ ಬರುವ ರೈಲುಗಳೊಂದಿಗೇ ನಮ್ಮ  ಬಂಡವಾಳವಿಲ್ಲದ ವ್ಯಾಪಾರ ಸಾಗುತ್ತದೆ ಸಾರ್,ಎಂದರು.
  “ ಮತ್ತೆ ಆ..೭,೮ ನೇ ಪ್ಲಾಟ್ ಪಾರಂಗಳು? ”
  “ಸಾಯಂಕಾಲವಾದ ಮೇಲೆ ಈ ಎರಡರ ಮೇಲೆ ರಾಜಧಾನಿ ಎಕ್ಸಪ್ರೆಸ್ಗಳು ಹೆಚ್ಚು ಬರುತ್ತವೆ. ಅವಕ್ಕೆ ಆರ್ಡಿನರಿ ಭೋಗಿಗಳಿರವು.”ಸರ್ ಇಲ್ಲಿ ನಮ್ಮ ವ್ಯಾಪಾರವೂ ಕಮ್ಮಿ. ಅಂತ ಹೇಳುತ್ತಿದ್ದಂತೆಯೇ ಕತ್ತಲು ಆವರಿಸಿತು. ಹೊಸದೊಂದು ಬೆಳಕನ್ನು ಚೆಲ್ಲುತ್ತಾ… ಮತ್ತೊಂದು ರೈಲು ೭ ನೇ ನಂಬರ್ ಗೆ ಬಂದು ನಿಂತಿತು.
 “ ಇಷ್ಟು ಚಂದನೆಯ ರೈಲನ್ನ ನಾನಿಲ್ಲಿಯ ತನಕವೂ.. ನೋಡಿರಲಿಲ್ಲ!”
 “ಇದನ್ನ ಆಗಸ್ಟ್ ಕ್ರಾಂತಿ ಅಂತಾರೆ ಸರ್..! ಮುಂಬೈ ನಿಂದ ಡೆಲ್ಲಿ ನಡುವೆ ಇದು ತಿರುಗುತ್ತದೆ. ನಮ್ಮ ದೇಶದೊಳಗೆ ಇಂತಹ ರೈಲು ಇರುವುದು ಇದೊಂದೇ”.
 ಅಮರ್ ಪಕ್ಕದಲ್ಲಿದ ಇನ್ನೊಬ್ಬ ಹುಡುಗನ ಬಗ್ಗೆಯೂ ಕೇಳಿದೆ.
  “ ನನ್ನ ಹೆಸರು ರತ್ನಾಕರ್ ಸಾರ್, ಲಕ್ನೋ ಹತ್ತಿರ ಬಾರಾಬಂಕಿ ನಮ್ಮ ಊರು. ಪುರಾಣ ಪ್ರಸಿದ್ದವಾದ ಪಾರಿಜಾತದ ವೃಕ್ಷ ನಮ್ಮ ಊರೊಳಗೇ ಇದೆ ಸರ್. ಎಂದಾದರೂ ಕೇಳಿದ್ದೀರಾ!?”
 “ ಹಾ.. ಲಕ್ನೋ ಬಳಿ ಯಾವುದೋ ಊರೊಳಗೆ ಇದೆ ಅಂತ ನಾನು ಸಣ್ಣವನಿದ್ದಾಗ ನ್ಯೂಸ್ ಪೇಪರ್ ನೊಳಗೆ ಓದಿದ್ದೆ ಕಣೋ.”
 “ಇತ್ತೀಚೆಗೆ ಎಷ್ಟೋ ಜನರನ್ನ ಎನ್ಕ್ವಯರಿ ಮಾಡಿ, ಕೊನೆಗೆ ಹೋದ ಎಲ್ಲರೂ ತಿಂಗಳಲ್ಲೇ ಅಲ್ಲಿಗೆ ಹೋಗಿ ಬಂದೆ ಕಣಪ್ಪಾ. ಹೌದು ಬಿಡು, ಅಲ್ಲಿ ನೀನೂ..ಅಂಗಡಿ ಇಟ್ಟಿಲ್ಲವಾ!?”
 “ಅಯ್ಯೋ .. ಅಲ್ಲಿ ವಿಜಿಟರ‍್ಸ ಕಡಿಮೆ ಬಿಡಿ ಸರ್. ಷಾಪುಗಳೇ.. ಹೆಚ್ಚು. ಇದರ ಮೇಲೆ ನಮ್ಮ ಮನೆಯವರ ಗೋಳು.. ಅದಕ್ಕೇ.. ಮನೆ ಬಿಟ್ಟು ನಾನೂ.. ಹೀಗೇ..” ನಕ್ಕನು” ರತ್ನಾಕರ್.
  “ ಒಂದು ರೀತಿಯಲ್ಲಿ ಪ್ರಾಣವಿಲ್ಲದ ಈ ರೈಲು ಡಬ್ಬಿಗಳೇ ನಿಮ್ಮನ್ನೆಲ್ಲಾ ಹೀಗೆ ಒಂದುಗೂಡಿಸಿವೆನೋಡು! ಹಾ.. ಇಷ್ಟಕ್ಕೂ ನಿನ್ನ ನ್ಯೂಸ್ ಪೇಪರ್ ಆದಾಯವೆಷ್ಟು ?”
  “ಸರ್ ದಿನಕ್ಕೆ ಇನ್ನೂರೈವತ್ತು ರುಪಾಯಿಗಿಂತಲೂ… ಹೆಚ್ಚು ಸಾರ್. ”
  “ ಒಂದು ದಿನಕ್ಕೆ ೫೦ ಕೆ.ಜಿ.ಪೇಪರ್ ಗಳು ಸಿಗುತ್ತವಾ?” ಆಶ್ರ‍್ಯದಿಂದ ಬಾಯಿತೆರೆದೆ.
 “ ಇಪ್ಪತ್ತು ಕೆ.ಜಿ. ಸಿಕ್ಕರೆ ಸಾಕು ಸಾರ್” ಅಂದ.
 “ ಹೌದಾ ಹಾಗಾದರೆ ಇಲ್ಲಿ. . .ಕಿ.ಲೋಗೆ ಎಷ್ಟು? ”
 “ಹದಿನಾಲ್ಕು ರೂಪಾಯಿಗಳು, ಸಾರ್.”
 “ನಿಜವಾ?, ನಮ್ಮೂರೊಳಗೆ ಐದು ರೂಪಾಯಿ ಸಿಗುವುದೇ ಕಷ್ಟ ಕಣೋ… ಜೊತೆಗೆ ತೂಕದೊಳಗೂ ಮೋಸ ಮಾಡುತ್ತಾರೆ! ”
 ಪಕಪಕನೆ ನಕ್ಕ ರತ್ನಾಕರ್. “ಇದು ಡಿಲ್ಲಿ ಸಾರ್, ಸ್ಟೇಷನ್ ಹೊರಗೇ ಒಂದು ಕಬಾಡಿ ದುಕಾನ್ ಇದೆ. ಅಲ್ಲಿ ಮೋಸವಿಲ್ಲ. ಸಮಯವಾದಾಗ ಎಲ್ಲಾ ಪೇಪರ್ಸ  ತೆಗೆದುಕೊಂಡು ಹೋಗಿ ಮಾರಿ, ಹಣವನ್ನ ಜೇಬಿನೊಳಗೆ ಹಾಕಿಕೊಳ್ಳುವುದೇ…!” ಅಂದ ತುಂಟತನದಿಂದ.
 “ಅಲ್ವೋ, ಮತ್ತೆ ಡೆಲ್ಲಿಯೊಳಗೆ ೨೫೦ ರೂಪಾಯಿ ಸಾಕಾಗುತ್ತಾ?”
 “ ಓ! ಉಳಿಯುತ್ತದೆ ಸಾರ್.”


 ನಮ್ಮ ಮಾತುಗಳು ನಡೆಯುತ್ತಿರುವಾಗಲೇ, ಅಮರ್ ಜೋರಾಗಿ ಇನ್ನೊಂದು ರೈಲ್ ಕಡೆ ಓಡಿದ. ಈ ನಡುವೆ ಆ ಆಗಸ್ಟ ಕ್ರಾಂತಿ ಯಾವಾಗಲೋ ಹೋಗಿಬಿಟ್ಟಿತು. ನಾನೂ..  ನನ್ನ ಟ್ರೈನ್ ಎಲ್ಲಿ ಬಂದುಬಿಡುತ್ತದೋ… ಏನೋ? ಅಂತ ಪ್ರತಿಸಲವೂ ಕತ್ತೆತ್ತಿ ನೋಡುತ್ತಿದ್ದೆ.
  ಆರನೇ ನಂರ‍್ನೊಳಗೆ ಬಂದಿದ್ದ ರೈಲಿನಿಂದ ಇಳಿಯುವಾಗ ಅಮರ್ ಕಾಲುಜಾರಿ ಬೀಳುವುದಕ್ಕೂ… ಏಳನೇ ನಂಬರ್ ಮೇಲೆ ಮತ್ತೊಂದು ಇಂಜಿನ್ ತೂರಿ ಹೋಗುವುದಕ್ಕೂ ಸರಿಹೋಯ್ತು! ಒಂದೇ ಸಲಕ್ಕೆ ಅಪಘಾತ ಜರುಗಿತ್ತು ! ನಾನು  ನನ್ನ ಲಗೇಜುಗಳನ್ನ ಬಿಟ್ಟು ಪ್ಲಾಟ್ ಪಾರಂ ಮೇಲೆ ಇದ್ದ ಉಳಿದವರೊಂದಿಗೆ ಓಡಿದೆ.
  “ ಉಸ್ಕೋ ಪಾನಿ ಪಿಲಾವ್” ಅಂತ ದೊಡ್ಡ ಕೇಕೆ ಹಾಕಿ ಹೇಳಿದೆ. ಆತನ ಮುಂಗೈ ಬೆರಳ ಮೇಲೆಯೇ ಇಂಜಿನ್ ಚಕ್ರಗಳು ಹೋಗಿದ್ದರಿಂದ ಅವು ಮುರಿದು ಚಕ್ರಗಳಿಗೇ ಅಂಟಿಕೊಂಡುಬಿಟ್ಟಿದ್ದವು!  ಪ್ಲಡ್ ಲೈಟ್ ನಲ್ಲಿ ಬೆರಳು ಕಳಕೊಂಡ ಅಮರ್’ನ ಮೊಂಡಗೈ ತುಂಬಾ..ರಕ್ತಸಿಕ್ತವಾಗಿ ಎದ್ದು ಕಾಣುತಿತ್ತು!
  ರತ್ನಾಕರ್ ಓಡಿಹೋಗಿ ರೈಲ್ವೆ ಡಾಕ್ಟರನ್ನ ಕರೆದುಕೊಂಡು ಬಂದ, ಹಾಸ್ಪೆಟಲ್ಗೆ ಕರೆದುಕೊಂಡು ಬನ್ನಿ. ಅಂತ ಡಾಕ್ಟರ್ ವೇಗವಾಗಿ ಹೊರಟು ಬಿಟ್ಟ. ನಾನು ಆತುರ ಆತುರವಾಗಿಯೇ.. ಅಮರ್ ಮುಖದ ಕಡೆ ನೋಡಿದೆ.
   “ಪರವಾಗಿಲ್ಲ ಬಿಡಿ ಸಾರ್, ನೀವು ಮತ್ತೆ ಡಿಲ್ಲಿಗೆ ಬಂದ್ರೆ ನಾನಿಲ್ಲೇ ಕಾಣಿಸುತ್ತೇನೆ. ನಿಮ್ಮ ರೈಲಿಗೆ ಟೈಮಾಗಿದೆ, ಸಲಾಮ್” ಅಂತ ನಿಬ್ಬೆರಗಾಗುವಂತೆ ಎಡಗೈಯಿಂದ ಸಂಜ್ಞೆಯೊಳಗೇ.. ಸಲಾಮ್ ಮಾಡಿದ!. ಆ ಯುವಕರು ಡಾಕ್ಟರ್ ಹಿಂದೆಯೇ ಓಡಿದರು.
  ಟೈಮ್ ೮.೧೫ ಆಯಿತು…
   ನನ್ನ ಟ್ರೈನ್…ಬರ್ತನತ್ತ  ಹುಡುಕಿ ಕುಳಿತೆ.
   ಆ ಮಕ್ಕಳವೇ.. ಆಲೋಚನೆಗಳು ಬಿಡದೆ ನನ್ನಸುತ್ತುವರೆದು ಬಿಟ್ಟವು.!
  ಯಾಕೆ?..
    ಎಲ್ಲರ ಬದುಕಿನೊಳಗೂ, ಅವರವರ ತಂದೆ ತಾಯಿಗಳು ತುಂಬಾ ಕಠಿಣವಾಗಿಯೇ ವರ್ತಿಸಿದ್ದಾರೆ?, ಓದು ಇರದಿದ್ದರೂ ಎಷ್ಟು ಜನ ಬದುಕುತ್ತಿಲ್ಲವೇ..?
 ಓದಿಲ್ಲದವರು ದೊಡ್ಡವರಾಗಿಲ್ಲವೇ..!?,ಸಾಧಕರಾಗಿಲ್ಲವೇ..!?
 ಓದು..ಓದು ಎಂದು ಹಠ ಬೀಳುವುದಕ್ಕಿಂತಾ.ಅವರನ್ನೊಮ್ಮೆ ಪ್ರೀತಿಯಿಂದ ಪ್ರೋತ್ಸಾಹಿಸಿದರೆ?,
 ಸೋತಾಗಲೂ ಪ್ರೀತಿ ತೋರಿ ಮುನ್ನೆಡೆಸಿದರೆ…!,
 ಅವರೇಕೆ ಹೀಗೆ ಓದು ಬಿಡುತ್ತಾರೆ.?
 ಬದುಕಿನೊಳಗೆ ನಿಜಕ್ಕೂ ಮನುಷ್ಯನಿಗೆ ಬೇಕಾದ್ದು ಆತ್ಮ ಸ್ಥೈರ್ಯ. ಅವರ ತಂದೆ ತಾಯಿಯರು  ಈ.. ದಿಶೆಯಲ್ಲಿ ಪ್ರಯತ್ನಿಸಿಯೇ ಇಲ್ಲ.
   ಓದುವ ಆಸೆ ಆ.. ಮಕ್ಕಳಿಗೆ ನಿಜವಾಗಲೂ ಇದೆ.
  ಪರೀಕ್ಷೆಯಲ್ಲಿ ಕಡಿಮೆ ಮಾರ್ಕುಗಳನ್ನ ತೆಗೆದರೆ,
 ಫೇಲಾದರೆ,
 ಅಪ್ಪ ಅಮ್ಮಂದಿರು ಕೋಪಗೊಂಡರೂ… ಆತ್ಮ ಹತ್ಯೆಗೆ ಇಳಿವ ಹೇಡಿಗಳಾಗಲಿಲ್ಲ.ಅ
 ಇಂತವರು ಎಂದಿಗಾದರೂ ಉನ್ನತ ಸ್ಥಿತಿಗೆ ಬಂದೇ ಬರುತ್ತಾರೆ.
 “ಇವರು ಮನೆಯಿಂದ ಓಡಿ ಬಂದವರೇ ವಿನಃ, ಬದುಕಿನಿಂದ ಓಡಿ ಹೋದವರಲ್ಲ ” ಎನ್ನೋ ವಿಚಾರ ನನ್ನನ್ನ ತಟ್ಟಿದೊಡನೆ ನನ್ನೊಳಗೂ ಯಾವುದೋ ಬೆಟ್ಟದಂತಹ ಉತ್ಸಾಹ ಬಂದಿಳಿದುಬಿಟ್ಟಿತು.
ಸುಮ್ಮನೆ ಮಾತಿಗೆ ಕುಳಿತರೆ ಎಷ್ಟೊಂದು ಕಥೆಗಳು..
ಇನ್ನು ಶೋಧನೆಗೇ.. ಇಳಿದರೆ? ಇನ್ನೆಷ್ಟೋ…!?
   ಕತ್ತಲು ಸೀಳಿಕೊಂಡು, ಸಣ್ಣಗೆ ಸೀಟಿ ಹಾಕುತ್ತಾ… ಎರಡು ಕಂಬಿಗಳಮೇಲೆ ಬದುಕೆಂಬ ನನ್ನ ರೈಲೂ…  ಚಿಕು ಬುಕು ಅಂತ ಮುಂದೆ ಹೊರಟಿತು.


ತೆಲುಗು ಮೂಲ: ಸಕಲಭಕ್ತುಲ ಕೃಷ್ಣಮೂರ್ತಿ
ಕನ್ನಡಕ್ಕೆ: ಡಾ.ಶಿವಕುಮಾರ್ ಕಂಪ್ಲಿ.

2 thoughts on “

  1. ಬಾಲಕಾರ್ಮಿಕರ ಸೃಷ್ಟಿಗೆ ಕಾರಣವನ್ನು ಕತೆ ಸಮರ್ಥವಾಗಿ ಬಿಂಬಿಸಿದೆ. ಹಾಗೆಯೇ ಲೇಖಕ ಹೇಳುವಂತೆ ಇಲ್ಲಿ ಬರುವ ಯಾವ ಮಕ್ಕಳೂ ಬದುಕನ್ನು ತಿರಸ್ಕರಿಸಿ ಓಡಿ ಬಂದವರಲ್ಲ. ಹಾಗೆಯೇ ಅನುವಾದವೂ ಅತ್ಯಂತ ಸಮರ್ಥವಾಗಿ ಮೂಡಿಬಂದಿದೆ, ಅಭಿನಂದನೆಗಳು.

Leave a Reply

Back To Top