ಕಾವ್ಯ ಸಂಗಾತಿ
ಮೌನಿ ಅವಳು !!
ಪ್ರಮೀಳಾ ರಾಜ್
ಹೌದು, ಮೌನಿ ಅವಳು!
ಚಿಟಪಟನೆ ಅರಳು ಹುರಿದಂತೆ ಮಾತನಾಡುವ ಅವಳು
ಈಗೀಗ ತನ್ನೆಲ್ಲ ಮಾತುಗಳಿಗೂ ಬೀಗ ಜಡಿದು
ಕತ್ತಲಿನ ನೀರವ ರಾತ್ರಿಯಲ್ಲಿ
ಒಂಟಿಯಾಗಿ ಕಳೆದು ಹೋಗುತ್ತಿರುತ್ತಾಳೆ!!
ಗರಿ ಬಿಚ್ಚಿ ನಲಿಯುವ ನಾಟ್ಯ ಪಕ್ಷಿಯ ಕಂಡೊಡನೆ
ಆಕೆಯ ತನುವೊಳಗೆ
ನಟರಾಜ ಆಹ್ವಾನಿತನಾಗುತ್ತಾನೆ
ಗೆಜ್ಜೆ ಕಟ್ಟಿ ನರ್ತಿಸಲು ಮುಂದಡಿಯಿಟ್ಟ ಅವಳ ಕಾಲುಗಳು
ಸೋತು ಸೊರಗುತ್ತವೆ
ಬರಿಯ ಮಾಂಗಲ್ಯ ಸರದ ಒಡೆಯನಷ್ಟೇ ಆಗಿರುವ
ಅವನ ಅಪಹಾಸ್ಯದ ನೋಟಕ್ಕೆ
ಮನಸು ಮಮ್ಮಲ ಮರುಗುತ್ತದೆ!!
ಎಲ್ಲೋ ಕೇಳುವ ಹಾಡಿಗೆ
ಕಿವಿಯಾಗುತ್ತಾಳೆ
ಅಳುವಿಗೆ ಕಪ್ಪು ಪರದೆ ಹೊದಿಸಿ
ನಗುವಿನ ಹಾಡಾಗಲು ಹಂಬಲಿಸುತ್ತಾಳೆ
ಒಡಲೊಳಗಿನ ಬೆಂಕಿ ಕೆಂಡಕ್ಕೆ ತಣ್ಣೀರೆರಚಿ
ಶಾಂತ ಸಾಗರವಾಗಲು ಯತ್ನಿಸಿದಾಗಲೆಲ್ಲ
ಕೈಲಾಗದವಳು ನೀನು ಎಂಬ
ಅವಮಾನದ ದಳ್ಳುರಿಗೆ ಆಹುತಿಯಾಗುತ್ತಲೇ ಇರುತ್ತಾಳೆ!
ಭೂ ಮಾತೆಯ ಸಹನೆಯ ಸ್ತ್ರೀ ಆಕೆ!!
ರೆಂಬೆ ಕೊಂಬೆಗಳ ಚಾಚಿ
ಬಾನೆತ್ತರಕ್ಕೆ ಬೆಳೆಯುವ ಆಶಯಕ್ಕೆ
ತನ್ನವರಿಂದಲೇ ಕೊಡಲಿ ಏಟು ಬಿದ್ದಾಗ
ಅವಳ ಸ್ವಾಭಿಮಾನದ ಹೆಡೆಗೆ ಮೆಟ್ಟಿದಂತಾಗಿ ಭುಸುಗುಟ್ಟುತ್ತಾಳೆ
ಪ್ರತಿ ರಾತ್ರಿಯ ಪೊರೆ ಕಳಚಿ
ಹೊಸ ಬೆಳಕ ಕಿರಣಗಳಿಗೆ ಎದುರು ನೋಡುತ್ತಿರುತ್ತಾಳೆ!
-=
ಪ್ರಮೀಳಾ ರಾಜ್