ಕಾವ್ಯ ಸಂಗಾತಿ
ಡಾ. ಪುಷ್ಪಾ ಶಲವಡಿಮಠ
ಹನ್ನೆರಡು(೧೨) ಇಪ್ಪತ್ತೊಂದು (೨೧) ಆಯಿತು

ಏನಂತ ಬರೆಯುವುದು
ಬಸವಣ್ಣಾ ನಿನ್ನ ಮೇಲೆ
ಕವಿತೆಯ?!
ಬರೆಯುವುದೆಲ್ಲ ಬರೆದಾಗಿದೆ
ಬರೆದು ಬರೆದು ಬರಿದೂ ಆಗಿದೆ
ಬಸವಣ್ಣಾ!
ನಿನಗೆ ಗೊತ್ತಾ?
ನಾವು ಮಾತಿನ ಮಂಟಪ ಕಟ್ಟಿದ್ದೇವೆ
ನಿನ್ನ ತತ್ವಗಳು ಶೂನ್ಯ ಸಿಂಹಾಸನವನ್ನೇರಿವೆ
ಆಚರಣೆಯೇ ಇಲ್ಲದೇ ಆತ್ಮಹತ್ಯೆ ಮಾಡಿಕೊಂಡಿವೆ
ಏನಂತ ಬರೆಯುವುದು
ಬಸವಣ್ಣಾ ನಿನ್ನ ಮೇಲೆ ಕವಿತೆಯ?!
ಬಸವಣ್ಣಾ!
ನೀನಂತೂ ಹೇಳುವುದನ್ನೆಲ್ಲಾ
ಹೇಳಿ ಬಿಟ್ಟಿರುವೆ
ಬರೀ ಹೇಳಿದೆಯೇನು?!
ಇಲ್ಲಾ ಇಲ್ಲಾ!ಮಾಡಿಯೂ ತೋರಿದೆ
ಅನುಭವ ಮಂಟಪ ಮಾಡಿದೆ
ಸಮಾನತೆಯ ತಂದೆ
ಪ್ರಜಾಪ್ರಭುತ್ವದ ಬೀಜ ಬಿತ್ತಿದೆ
ಕೂಡಲಸಂಗಮನ ಮನೆ ಮಕ್ಕಳೆಂದು
ಎಲ್ಲರನ್ನೂ ಅಪ್ಪಿಕೊಂಡೆ
ಸಾಮಾಜಿಕ ನ್ಯಾಯಕ್ಕಾಗಿ ಬಡಿದಾಡಿದೆ
ಅಕ್ಕನಿಗಿರದ ಹಕ್ಕು ನನಗೇಕೆ?
ಎಂದು ಪ್ರಶ್ನಿಸಿದೆ, ಮನೆಯನ್ನೇ ತೊರೆದೆ
ಸಮಸಮಾಜದ ಕನಸು ಕಾಣುತ್ತ
ದಯೆಯ ತಳಹದಿಯಾಗಿಸಿ
ನಿಜ ಧರ್ಮ ಕಟ್ಟಿದೆ
ದುಡಿಯಬೇಕು ಕೂಡಿ ಉಣ್ಣಬೇಕು
ನಿಜ ಸಂಸ್ಕೃತಿಯ ಕಲಿಸಿದೆ
ಸ್ಥಾವರ ಒಡೆದು ನೀನು ಬಯಲಿಗೆ
ಬಂದೆ ಬಸವಾ
ದೇಹವೇ ದೇಗುಲವೆಂದೆ
ದೇವನನ್ನೇ ಅಂಗೈಯಲ್ಲಿ ಚುಳುಕಾಗಿಸಿದೆ
ಮೌಢ್ಯದ ಹೆಂಟೆ ಒಡೆದು
ವೈಚಾರಿಕತೆಯ ಬೆಳೆಯ ಬೆಳೆಸಿದೆ
ಅದಕೆ ನೀನು
ವಿಶ್ವಗುರು ವಿಶ್ವಬಂಧುವಾದೆ
ಮಾನವತಾವಾದಿ ಭವ್ಯ ಮಾನವನಾದೆ
ನಾನೇನಾದೆ?!
ನಿನ್ನನ್ನೇ ಸ್ಥಾವರನ್ನಾಗಿಸಿದೆ
ನಿನ್ನ ಹೆಸರು ಬಳಸಿಕೊಂಡು ದೊಡ್ಡವನಾದೆ
ಪ್ರಶಸ್ತಿ ಪುರಸ್ಕಾರ ಬಾಚಿಕೊಂಡೆ
ಬಸವನೆoಬುದೊಂದು ಪ್ರಜ್ಞೆ
ಎಂಬುದನ್ನೇ ಮರೆತುಬಿಟ್ಟೆ
ನಿನ್ನನ್ನು ಒಮ್ಮೆ ಲಿಂಗಾಯತನೆಂದೆ
ಮಗುದೊಮ್ಮೆ ವೀರಶೈವನೆಂದೆ
ನೀನು ಎಲ್ಲರೊಳಗಾದವನು
ಎಂಬುದನೆ ಮರೆತುಬಿಟ್ಟೆ
ಜಾತಿಗೊಂದು ಮಠ ಕಟ್ಟಿದೆ
ಜಂಗಮ ತತ್ವವನ್ನೇ ಗಾಳಿಗೆ ತೂರಿಬಿಟ್ಟೆ
ಜೊತೆಗೆ ನಿನ್ನ ಆದರ್ಶ ಕನಸುಗಳನ್ನೂ…..
ಕ್ಷಮೆ ಇಲ್ಲ ಬಸವ ನನಗೆ
ನನ್ನಂತರಂಗವೇ ಶುದ್ಧವಿಲ್ಲ
ಬಹಿರಂಗ ಶುದ್ಧಿ ಎಲ್ಲಿಯದು?!
ಮಜ್ಜನ ಮಾಡಿದ ಕತ್ತೆ
ಬೂದಿಯಲಿ ಹೊರಳಾಡಿದಂತೆ
ನನ್ನ ಸ್ಥಿತಿ
ಇವನಾರು? ಇವನಾರು?!
ಇವನಾರವ? ಎಂದೆನಿಸುವುದರಲ್ಲೇ
ಹಾಳು ಬದುಕು ಸವೆಯುತಿದೆ
ಹನ್ನೆರೆಡು (೧೨)
ಇಪ್ಪತ್ತೊಂದು (೨೧) ಆಗಿದೆ
ಎಲ್ಲವೂ ಅದಲು ಬದಲು
ಈಗ
ಎಲ್ಲವೂ ಅದಲು ಬದಲು
ಡಾ. ಪುಷ್ಪಾ ಶಲವಡಿಮಠ

ಬಹಳ ಅರ್ಥಪೂರ್ಣ ಹಾಗೂ ಮಾರ್ಮಿಕವಾದ ಕವನ.ವಾಸ್ತವ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ..
ಧನ್ಯವಾದಗಳು
ಬಸವ ಪ್ರಜ್ಞೆ ಮತ್ತು ಈ ಕಾಲ ಘಟ್ಟ ದಲಿ ತಾಂಡವವಾಡುತ್ತಿರು ಜಾತಿ, ವರ್ಗ, ವರ್ಣ ಮೌಢ್ಯ ಗಳ ಕುರಿತು ಕವಯತ್ರಿ ಡಾ ಪುಷ್ಪ ಮೇಡಂ ಕಾವ್ಯಾದ ಮೂಲಕ ಚಾಟಿ ಏಟು ಬೀಸಿದ್ದಾರೆ.
ಹೌದಲ್ಲವೇ
12ನೇ ಶತಮಾನದ ಕಲ್ಯಾಣ ಕ್ರಾಂತಿ ಶರಣರ ಆಶಯ ಗಳಿಗೂ ತೂರಿ ಬಸವನನ್ನು ವಿಶ್ವ ಮಾನವ ನನ್ನಾಗಿಸದೆ ಪೇಟೆಂಟ್ ಮಾಡಿ ಕೊಂಡಿದ್ದೇವೆ.
21ನೇ ಶತಮಾನದಲ್ಲೂ 12 ಶತಮಾನದ ಅಂದಿನ ಸಮಸ್ಸೆಗಳೇ ಮೊಳೆಕೆ ಒಡೆದಿವೆ.
ಬಸವ ನಂತಹ ಸಮತಾವಾದಿ ಇನ್ನೆಷ್ಟು ಬಾರಿ ಜನ್ಮ ವೆತ್ತಿ ಬರಬೇಕೋ
ಇವ ನಮ್ಮವನೆಂದು ಅಪ್ಪಿ ಕೊಳ್ಳಲು
ನಮ್ಮ ಮನೆಯ ಮಗನೆಂದು ಒಪ್ಪಿ ಕೊಳ್ಳಲು
ಕಾಲವೇ ಉತ್ತರಿಸಬೇಕಿದೆ.
ಕವಯತ್ರಿ ಡಾ ಪುಷ್ಪ ಮೇಡಂ ಹಾಗೂ ಸಂಗಾತಿ ಬಳಗಕ್ಕೆ ಶುಭಾಶಯಗಳು
ಎ ಎಸ್. ಮಕಾನದಾರ
ಅಮೋಘವಾದ ಬರಹ ತಮ್ಮದು ಶರಣು ಸಹೋದರಿಗೆ
ತುಂಬಾ ಸೂಕ್ಷ್ಮ ಕಾವ್ಯ ಅಧ್ಯಯನ ತಮ್ಮದು ಸರ್. ಧನ್ಯವಾದಗಳು ಸರ್
ಮಕನದಾರ್ ಸರ್ ಸದಾ ಒಳನೋಟಗಳಿಂದ ಕಾವ್ಯಗ್ರಹಿಸುವ ತಮ್ಮ ಓದಿಗೆ ಶರಣು