ಸಂತೆಬೆನ್ನೂರು ಫೈಜ್ನಟ್ರಾಜ್-ಒಂದು ರೊಟ್ಟಿಯ ಶಕ್ತಿ

ಕಾವ್ಯ ಸಂಗಾತಿ

ಸಂತೆಬೆನ್ನೂರು ಫೈಜ್ನಟ್ರಾಜ್

ಒಂದು ರೊಟ್ಟಿಯ ಶಕ್ತಿ

ಹಸಿದ ಹೊಟ್ಟೆಗಳು ಗಿಡದ ಕೊಂಬೆಗೆ ಬಾವಲಿ
ಒಂದು ರೊಟ್ಟಿ, ಹಿಡಿ ಅನ್ನ ದಿನದ ಕೂಲಿ
ನಾಲ್ಕು ಹೊಟ್ಟೆಗಳ ತುಂಬೋ ವಜನು ಕರಾಮತ್ತು ;
ಅಕ್ಷರ ಲೋಕದ ಕವಿತೆ ಅಯ್ಯೋ ನೋಡಿ
ದುಡಿವ ಮಂದಿಗೆ ಮುದಿ ಸೂಳೆಗೂ ಕಡೆ!

ಪಿಂಗಾಣಿ ಲೋಟ ಅದರೊಳಗಿನ
ಕಡು ಬಣ್ಣದ ಚಹಾ ತುಟಿ
ಗಳಿಗೆ ಮೀಸಲು ಲೋಟ ಮೌನಿ ಸದಾ ;
ಕವಿತೆಯೂ ಕೆರೆದ ಗಾಯ, ಹುಣ್ಣು!
ಸಂಗ್ರಹಾಲಯದ ಕತ್ತಿಯ ರಕ್ತ ತೊಳೆದ
ಕಾಲಕೆ ಕವಿತೆ ಒಂಟಿ ಕಾಲಿನ ಶಿಕ್ಷೆ ಅನುಭವಿಸುತಿದೆ
ಸತ್ಯವೆಂಬುದು ಇಲ್ಲಿ ಮಕ್ಕಳ ಬಾಯ ಮಗ್ಗಿ ದಿನ ಕಳೆದಂತೆ ಮರೆವು!

ಒಂದು ರೊಟ್ಟಿಯ ಶಕ್ತಿ ನಿಮ್ಮ ಕವಿತೆಗಿಲ್ಲ
ಬಿದ್ದ ಬೀಜಗಳ ಮುಷ್ಠಿಯೊಳಗಿಟ್ಟ ಮಣ್ಣ ತಾಯ್ತನಕೆ
ಕಾವ್ಯ ಮೌನ!
ನೂರು ಮಾತುಗಳ ಒಂದು ಹಾಡು
ಕೊಂದಂತೆ , ಹಸಿದವನೆದರುರು ಬರಿದೇ ಅಕ್ಷರಗಳ ಹಡೆದು
ದೊಡ್ಡವನಾಗುವ ಕವಿಯ ಹಿಡಿದು ನೇಣ್ಗಂಬಕ್ಕೆ ಒಯ್ಯಿರಿ!

ಎತ್ತರೆಕ್ಕೇರುವುದು ಪುಸ್ತಕ, ಪದವಿ, ಪ್ರಶಸ್ತಿ
ಮತ್ತು ಭಾಷಣಗಳ ಸರಕಿಂದ ಅಲ್ಲ
ಕಣ್ಣ ಹಸಿವಿಗೆ ಕರುಣೆಯ ನೀರು
ಎದೆಯ ಹಸಿವಿಗೆ ಒಲವ ಕಸುವು ಈಗಿನ ತುರ್ತು
ನಿಮ್ಮ ಕವಿತೆಗಿಷ್ಟು ಬೆಂಕಿ ಹಾಕ…..
ಮನುಜನ ಮನಜನನೆನ್ನುವ ಕವಿತೆ
ಬರೆಯುವ ಶಕ್ತಿ ನೀಡು ಪ್ರಭುವೆ, ದಾರಿಯ ಎಡಬಲ ಹೂ ಅರಳಿಸುವ
ಕಡಲ ದಡಗಳಲಿ ಕಳೆದು ಹೋದ ಹಳೆಯ ಹೆಜ್ಜೆಗಳ
ಗುರುತಿಸುವ ಎಂದೋ ಬೀಸಿದ ಕಲ್ಲಿಗೆ
ಗಾಯಗೊಂಡ ಕಾಡ ಗಿಡದ ಮೈಗೆ ಮುಲಾಮು
ಹಚ್ಚುವ ಕೆಲಸ ಬಾಕಿಯಿದೆ
ಕವಿತೆ ನೋವ ನೀಗಿಸುವ ಶಕ್ತಿ ಕಳೆದುಕೊಂಡಿದೆ ಕೊರಳಲೇ
ಉಡುಗಿದ ದನಿಯಂತೆ!
ಪಾಪ ನೀವು ಮನಜರು
ಕವಿತೆಯಿಂದ ಸ್ವಲ್ಪ ದೂರ ಇರಿ ಅಷ್ಟೆ!


ಸಂತೆಬೆನ್ನೂರು ಫೈಜ್ನಟ್ರಾಜ್


9 thoughts on “ಸಂತೆಬೆನ್ನೂರು ಫೈಜ್ನಟ್ರಾಜ್-ಒಂದು ರೊಟ್ಟಿಯ ಶಕ್ತಿ

    1. ತುಂಬಾ ಚೆನ್ನಾಗಿ ಬಂದಿದೆ. ಅನ್ನ ದೇವರ ಮುಂದೆ ಅನ್ಯ ದೇವರಿಲ್ಲಾ

  1. ಸರ್ ಕವಿತೆ ಅದ್ಭುತವಾಗಿದೆ..
    ರೊಟ್ಟಿ ಗೆದ್ದಿದೆ…
    ಒಂದೊಳ್ಳೆ ಕವಿತೆಯನ್ನು ಓದಿಸಿದಿರಿ..
    ಕಣ್ಣ ಹಸಿವಿಗೆ ಕರುಣೆಯ ನೀರಿನ
    ಜರೂರನ್ನು ತಿಳಿಸಿದ್ದೀರಿ.. ಸರ್
    ಶುಭ ಕಾಮನೆಗಳು

    1. ಮಾರ್ಮಿಕ ಸಾಲುಗಳು ಭಯ್ಯಾಜೀ…
      . ಹಮೀದಾ ಬೇಗಂ.

  2. ಹೌದು ಒಂದು ರೊಟ್ಟಿಯ ಶಕ್ತಿ ಕಾವ್ಯಕ್ಕಿಲ್ಲ ಎಂಬುದೇ ಎಲ್ಲರ ವಾದ.

  3. ಹಸಿದವಗೆ ಗೊತ್ತು ಹಸಿವಿನ ಪರಿ. ಅವನ ಮುಂದೆ ಕವನ ಕವಿ ಯಾರು ಏನು ಮಾಡಿದರೂ ಅರ್ಥ ವಾಗಲ್ಲ ಕವನ ಚೆನ್ನಾಗಿ ಇದೆ ಸರ್.

Leave a Reply

Back To Top