ತೆಲುಗಿನ ‘ಬಿಡಲಾಗದ ಬಂಧನ’ ಕಥೆ ಕನ್ನಡಕ್ಕೆ ಚಂದಕಚರ್ಲ ರಮೇಶಬಾಬುರವರಿಂದ

ಅನುವಾದ ಸಂಗಾತಿ

ಬಿಡಲಾಗದ ಬಂಧನ

ತೆಲುಗು ಮೂಲ: ಶ್ರೀಮತಿ ನಾಮನಿ ಸುಜನ
ಕನ್ನಡಕ್ಕೆ: ಚಂದಕಚರ್ಲ ರಮೇಶಬಾಬು

“ಹಲೋ! ಹಲೋ ! ದಿಸ್ ಈಜ್ ತೇಜಾ ! ಹೂ ಇಸ್ ದಿಸ್?”
“ಹಲೋ ಬುಚ್ಚಣ್ಣಾ? “ಆತಂಕ ತುಂಬಿದ ಅಕ್ಕನ ಕೊರಳು ಆಕಡೆಯಿಂದ.
ಬರೀ ಕುಟುಂಬದವರಿಗೆ ವಿನಃ ಯಾರಿಗೂ ತಿಳಿಯದಿರುವ ನನ್ನ ನಿಜ ಹೆಸರು ! ಇಂಡಿಯಾದಿಂದ. ನಿದ್ದೆಯ ಮಂಪರು ತಕ್ಷಣ ಕಳೆಯಿತು. ಹಾಸಿಗೆ ಮೇಲಿಂದಲೇ ಕಾಲ್ ಎತ್ತಿಕೊಂಡು ದಿಗ್ಗನೆ ಎದ್ದೆ. ನನಗೀಗ ಅರ್ಧರಾತ್ರಿ ಎಂದು ಅಕ್ಕನಿಗೆ ಗೊತ್ತು. ಆದರೂ ಫೋನ್ ಮಾಡಿದಾಳೆ ಅಂದರೆ ?
“ಅಕ್ಕಾ ! ಏನಾಗಿದೆ?” ಮನಸು ನಿರಾಕರಿಸುತ್ತಿದ್ದರೂ ಯಾವುದೋ ಭಯ ಇಣುಕಿತು ನನ್ನ ಗಂಟಲಲ್ಲಿ.
“ಅಪ್ಪನಿಗೆ ಸ್ವಲ್ಪ ಹುಶಾರಿಲ್ಲದಿದ್ದರೆ ಆಸ್ಪತ್ರಿಗೆ ಸೇರಿಸಿದ್ದೇವೆ. ನಿನ್ನನ್ನೇ ಕನವರಿಸ್ತಾ ಇದ್ದಾನೆ. ಅಮ್ಮ ಅಪ್ಪನ ಹತ್ತಿರ ಆಸ್ಪತ್ರಿಯಲ್ಲಿದ್ದಾಳೆ. ಬೇಗನೇ ಬಾರೋ “ ಅಕ್ಕ ಆಚೆಯಿಂದ.
“ಅಪ್ಪನಿಗೆ… ಅಪ್ಪನಿಗೆ. ಈಗ ಹೇಗಿದೆ ಅಕ್ಕಾ ? ಪ್ರಾಬ್ಲಂ ಏನೂ ಇಲ್ಲ ತಾನೇ ? ಅಮ್ಮನಿಗೆ ಕೊಡು. ಮಾತಾಡ್ತೇನೆ. ನಾನು ತಕ್ಷಣ ಹೊರಡುವೆ. ಆಯ್ತಾ !”
“ಚೆನ್ನಾಗೇ ಇದೆ ಕಣೋ ! ಆಸ್ಪತ್ರಿಯಲ್ಲಿ ಸಿಗ್ನಲ್ ಸಿಗಲ್ಲ. ನೀನು ಬಂದುಬಿಡು” ಇಟ್ಟುಬಿಟ್ಟಳು.
ಇನ್ನು ನಿದ್ರೆ ಬರಲಿಲ್ಲ. ಎಷ್ಟೋ ಅಗತ್ಯವಾದರೆ ಮಾತ್ರ ಅಕ್ಕ ಬಾ ಎನ್ನಲ್ಲ. ಏನಾಗಿದೆ ಅಪ್ಪನಿಗೆ ? ಮನಸ್ಸು ಏನೋ ಸಂದೇಹಿಸುತ್ತಿತ್ತು.
ಪಕ್ಕದಲ್ಲಿ ಸುನೀಲ, ಮಕ್ಕಳಿಬ್ಬರೂ ಹಾಯಾಗಿ ನಿದ್ರೆಯಲ್ಲಿದ್ದಾರೆ. ತಾನೊಬ್ಬನೇ ಹೋಗಬೇಕಾ? ಎಲ್ಲರೂನಾ ? ಇಷ್ಟು ಅರ್ಜೆಂಟಾಗಿ ಅಂದರೆ ? ಆದರೂ ಅಡ್ಡಿಇಲ್ಲ. ಎಲ್ಲರೂ ಹೋಗೋದೇ ಒಳ್ಳೆಯದು. ಅಮ್ಮ ಸಹ ಎಷ್ಟೋ ಸಲ ಎಲ್ರೂ ಬರಲಿಕ್ಕೆ ಹೇಳಿದ್ದಾಳೆ. ಸುಮಾರು ಆರು ವರ್ಷವಾಗಿದೆ ಮಕ್ಕಳ ಜೊತೆ ಹೋಗಿ. ಮಕ್ಕಳ ಜೊತೆ ? ಸಣ್ಣವಳು ಹುಟ್ಟಿದ ಮೇಲೆ ಅಮ್ಮ ನೋಡೇ ಇಲ್ಲ, ಬರೀ ಸ್ಕೈಪ್ ನಲ್ಲಿ ಬಿಟ್ಟರೆ. ಎಲ್ರೂ ಹೋದ್ರೆ ಸರಿ.
ತಕ್ಷಣ ಫ್ಲೈಟ್ ಟಿಕೆಟ್ಸ್ ಬುಕ್ ಮಾಡಿದೆ. ಆಫೀಸಿನಲ್ಲಿ ರಜೆ ಪಡೆದುಕೊಂಡೆ.
ಸುನೀಲಳಿಗೆ ವಿಷಯ ಹೇಳಿ ಮಕ್ಕಳ ಜೊತೆ ಹೊರಡಿಸಿದೆ. ಎಲ್ಲ ಕಡೆಗೂ, ಹಣದ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳದೇ, ಇಳಿದ ನಂತರ ಟ್ಯಾಕ್ಸಿ ಬುಕ್ ಮಾಡಿಕೊಂಡು, ಅಕ್ಕಾ ಬಾವರ ಜೊತೆಗೆ ಸಂಪರ್ಕ್ ಮಾಡುತ್ತ ನಮ್ಮ ಊರಲ್ಲಿ ಅಡಿ ಇಟ್ಟೆ.
ಊರಲ್ಲಿ ಮಣ್ಣಿನ ರಸ್ತೆಯ ಜಾಗದಲ್ಲಿ ಸಿಮೆಂಟ್ ರಸ್ತೆ ಕಂಡಿತು. ಗುಡಿಸಲಿನಂಥ ಮನೆಗಳ ಮುಂದಿರುವ ಹಸು, ಹುಲ್ಲಿನ ಬಣವೆಗಳ ಜಾಗದಲ್ಲಿ ಚಿಕ್ಕ ಪುಟ್ಟ ಮಹಡಿ ಮನೆಗಳಾಗಿದ್ದವು. ಹಂಚಿನ ಮನೆಗಳು, ಮಹಡಿ ಮನೆಗಳ ಮುಂದೆ ಮುಂಚೆ ಕೂತು ಹರಟೆ ಹೊಡೆಯುವ ಜಗುಲಿಗಳು ಮಾಯವಾಗಿ, ಗೋಡೆಗಳು ಗೇಟುಗಳು ಕಂಡವು. ಹೊಸಿಲ ಮೇಲೆ ಅರಿಶಿಣ ಹಚ್ಚಿ, ಕುಂಕುಮ ಇಟ್ಟು, ಹೊಸ್ತಿಲ ಸುತ್ತೂ ಕೆಂಪುಮಣ್ಣಿಂದ ಸಾರಿಸಿ, ಬಾಗಿಲಲ್ಲಿ ಸೆಗಣಿ ನೀರು ಹಾಕಿ, ಬಿಳಿಯ ರಂಗೋಲೆ ಹಾಕುವ ಸಂಸ್ಕೃತಿ ಹೋಗಿ, ಸಿಮೆಂಟ್ ಬಾಗಿಲಗಳ ಮೇಲೆ ಬಣ್ಣಗಳಿಂದ ರಂಗೋಲೆ ಹಾಕುವ ಸಂಸ್ಕೃತಿ ಬಂದಿತ್ತು. ನಾಗರಿಕತೆ ಕಡೆಗೆ ಬಾಗುತ್ತಿರುವ ಊರು. ಮುಂಚಿನ ಕುರುಹು ಕಾಣದಂತೆ ವ್ಯರ್ಥ ಪ್ರಯತ್ನಗಳನ್ನು ಮುಂದುವರೆಸಿತ್ತು.
ಕಾರು ನಿದಾನವಾಗಿ ಸಾಗಿತ್ತು. ಸುನೀಲ, ಮಕ್ಕಳು ದೂರದ ಪ್ರಯಾಣದಿಂದ ಬಳಲಿ ನಿದ್ದೆ ಮಾಡುತ್ತಿದ್ದರು. ಪಕ್ಕದಲ್ಲಿದ್ದ ಹಸಿರು ಪೈರುಗಳ ಮೇಲಿಂದ ಒಳ್ಳೆಯ ಸ್ವಚ್ಛವಾದ ಗಾಳಿ ಬೀಸುತ್ತಿತ್ತು. ಅದೆಷ್ಟು ಆಹ್ಲಾದವೆನಿಸುತ್ತಿದ್ದರೂ, ಏನೋ ಅರ್ಥವಾಗದ ಆತಂಕ ಮನಸನ್ನು ಕಾಡುತ್ತಿತ್ತು. ರಾತ್ರಿಯಿಂದ ನಿದ್ರೆ ಇಲ್ಲ. ವಿಮಾನದಲ್ಲೂ ಎಷ್ಟು ಕಣ್ಣು ಮುಚ್ಚಿದರೂ ಬರೀ ಆಲೋಚನೆಗಳೇ ಹೊರತು ನಿದ್ರೆ ಬರಲಿಲ್ಲ. ಎಷ್ಟೆಷ್ಟೋ ನೆನಪುಗಳು, ಮಧುರ ಸ್ಮೃತಿಗಳು.
ಅಪ್ಪ ಆಜಂಜಾಹಿ ಮಿಲ್ಲಿನಲ್ಲಿ ಕಾರ್ಮಿಕ. ಮೂರು ಜನ ಅಣ್ಣಂದಿರು. ಒಬ್ಬ ಅಕ್ಕ. ನಂತರ ನಾನು ಹುಟ್ಟಿದ್ದೆ. ನಾನು ಹುಟ್ಟುವ ಮುಂಚೆ ಅನಾರೋಗ್ಯಕ್ಕೆ ತುತ್ತಾಗಿ ಅಣ್ಣಂದಿರಿಬ್ಬರು ಒಬ್ಬರು ಬೆಳೆಗ್ಗೆ, ಮತ್ತೊಬ್ಬರು ಸಂಜೆ ಸತ್ತಿದ್ದರಂತೆ. ಅಷ್ಟಕ್ಕೂ ಮುಂಚಿತವಾಗಿ ಮತ್ತೊಬ್ಬ ಅಣ್ಣ ಸತ್ತಿದ್ದನಂತೆ. ಅಮ್ಮ ಎದೆ ಬಿರಿಯುವಂತೆ ಅತ್ತಿದ್ದಳಂತೆ. ಅದಕ್ಕೆ ನಾನು ಬದುಕುಳಿಯಬೇಕೆಂದು, ಹುಟ್ಟುತ್ತಲೇ, ಮೂಗು ಹೊಲೆಸಿ ಭಿಕ್ಷಪತಿ ಅಂತ ಹೆಸರಿಟ್ಟರಂತೆ. ಸಣ್ನಂದಿನಿಂದ ಮನೆಯಲ್ಲಿ ಅಮ್ಮ, ಅಪ್ಪ, ಅಕ್ಕ. ಸೋದರ ಮಾವ ಎಲ್ಲರೂ ನನ್ನ ಬುಚ್ಚಣ್ಣಾ ಅಂತಲೇ ಕರೀತಾರೆ. ನನ್ನ ಮದುವೆಗೆ ಮುಂಚಿನ ನಿಶ್ಚಿತಾರ್ಥದಲ್ಲಿ ಅವರೆಲ್ಲ ನನ್ನ ’ಬುಚ್ಚಣ್ಣಾ’ ಅಂತ ಕರೀತಿದ್ದರೆ ಸುನೀಲಗೆ ಅರ್ಥವಾಗದೇ ಯಾರೋ ಬೇರೇಯವರನ್ನ ಕರೀತಿರ್ಬೇಕು ಅಂದುಕೊಂಡಿದ್ದಳಂತೆ. ಅಪ್ಪ ಸ್ಕೂಲಲ್ಲಿ ಸೇರಿಸುವಾಗ ತನ್ನ ಮನೆಗೆ ಬೆಳಕು ತರುವ ಹಾಗೆ, ಪ್ರತ್ಯಕ್ಷ ದೈವವಾದ ಸೂರ್ಯನ ಹೆಸರು ಬರುವ ಹಾಗೆ ಸೂರ್ಯತೇಜ ಎಂದು ಹೆಸರಿಟ್ಟಿದ್ದ.
ನಸುಕಿನ ನಾಲಕ್ಕು ಗಂಟೆಗೇ ಮಿಲ್ಲಿನ ಸೈರನ್ ಕೂಗು ಕೇಳಿಸುತ್ತಿತ್ತು. ಅದರ ಜೊತೆಯಲ್ಲೇ ಎದ್ದ ಅರ್ಧಗಂಟೆಯಲ್ಲಿ ಅಪ್ಪ ಹೋಗಿಬಿಡುತ್ತಿದ್ದ. ಅಮ್ಮ, ಅಪ್ಪನಿಗೆ ತಿಂಡಿ ಕೊಟ್ಟುಬರಲು ನನ್ನ, ಅಕ್ಕನ್ನ ಕಳಿಸುತ್ತಿದ್ದಳು. ಆಗ ಮೂರು, ನಾಲ್ಕು ಬಟ್ಟಲಿನ ಉದ್ದನೆಯ ಕ್ಯಾರಿಯರ್ ಇರ್ತಿತ್ತು. ಒಂದರಲ್ಲಿ ಜೋಳದ ಮುದ್ದೆ, ಮತ್ತೊಂದರಲ್ಲಿ ಮಾವಿನ ಕಾಯಿ ಉಪ್ಪಿನಕಾಯಿ ಅಥವಾ ಯಾವುದಾದರೂ ಪಲ್ಯ, ಇನ್ನೊಂದರಲ್ಲಿ ಮೊಸರು ಇರುತ್ತಿದ್ದವು. ಆ ಕ್ಯಾರಿಯರ್, ತಂಬಿಗೆಯಲ್ಲಿ ನೀರು ಹಿಡಿದು ನಾನು, ಅಕ್ಕ ಅಡ್ಡದಾರಿಯ ಗುಂಟ, ಮಿಲ್ಲಿನಲ್ಲಿದ್ದ ಅಪ್ಪನಿಗೆ ಬುತ್ತಿ ತೊಗೊಂಡು ಹೋಗುತ್ತಿದ್ದೆವು. ಆ ನೀರು ಅಪ್ಪ ಕುಡಿಯಲಿಕ್ಕೆ ಅಲ್ಲ. ಚೆಪ್ಪಲಿ ಇಲ್ಲದ ನಮ್ಮಿಬ್ಬರ ಕಾಲುಗಳಿಗೆ ಬೊಬ್ಬೆ ಬರದೆ ಇರಲು. ನಮಗೆ ಆಗ ಚೆಪ್ಪಲಿ ಎಂದರೆ ಗೊತ್ತೇ ಇರಲಿಲ್ಲ. ಅಕ್ಕ, ನಾನು ಓಡುತ್ತಾ ಕಾಲುಗಳಿಗೆ ನೀರು ಹಾಕಿಕೊಳ್ಳುತ್ತಾ ಹೋಗುತ್ತಿದ್ದೆವು. ಸ್ಕೂಲಿಗೂ ನಾನು, ಅಕ್ಕ ಚೆಪ್ಪಲಿ ಇಲ್ಲದೇನೇ ಬರೀ ಕಾಲಲ್ಲೇ ಹೋಗುತ್ತಿದ್ದೆವು. ಮಿಲ್ಲಿನಲ್ಲಿಯ ಕ್ಯಾಂಟೀನ್ ನಲ್ಲಿ ಬೂಂದಿ ಅಪ್ಪನಿಗೆ ಹತ್ತು ಪೈಸೆಗೇ ಸಿಗುತ್ತಿತ್ತು. ದಿನಾ ಅಪ್ಪ ಹೊರಗೆ ಬರುತ್ತಲೇ ನಾವಿಬ್ಬರೂ ಓಡಿ ಹೋಗುತ್ತಿದ್ದೆವು. ಅಪ್ಪ ಇಬ್ಬರಿಗೂ ಬೂಂದಿ ಕೊಡುತ್ತಾ, ಕೆನ್ನೆಗೆ ಮುತ್ತು ಕೊಡುತ್ತಿದ್ದ.
ಅಪ್ಪನಿಗೆ ಆಯುರ್ವೇದದ ಜೊತೆ ಭಜನೆ, ಹಾಡು ಅಂದರೆ ತುಂಬಾ ಇಷ್ಟ. ಶತಕಗಳಲ್ಲಿಯ ಪದ್ಯಗಳು, ದೇವರ ನಾಮಗಳು ತುಂಬಾ ರಾಗಯುಕ್ತವಾಗಿ ಹಾಡುತ್ತಿದ್ದ. ನನಗೂ ಅವು ಕಂಠೋಪಾಠವಾದವು.
ಬರೀ ಇವೇ ಅಲ್ಲ ! ಅಪ್ಪ ದೇಶಭಕ್ತಿ ಗೀತೆಗಳು, ಉರ್ದೂವಿನಲ್ಲಿ ಹಾಡುಗಳು ಹಾಡುತ್ತಿದ್ದ. ಮನೆ ಪಕ್ಕದಲ್ಲೇ ಇದ್ದ ದರ್ಜಿ ಖಾಜುದ್ದೀನ್, ಹತ್ತಿ ಕೆಲಸ ಮಾಡೋ ಅವರ ಹತ್ತಿರ ಹಿಂದಿ ಕೂಡ ಮಾತೃಭಾಷೆಯಷ್ಟೇ ಸ್ಪಷ್ಟವಾಗಿ ಮಾತಾಡುತ್ತಿದ್ದ. ನಾನು ವಹೀದಕ್ಕ, ಜುನೀದಣ್ಣ ಅಂತ ನಮ್ಮ ಗೋಡೆ ಪಕ್ಕಕ್ಕೇ ಇದ್ದ ಅವರ ಮನೆಯಲ್ಲೇ ಆಡಿಕೊಂಡಿರುತ್ತಿದ್ದೆ. ಇನ್ನು ಸಂಜೆಯಾದರೇ ಸಾಕು. ಏಳು ಗಂಟೆಗೆಲ್ಲ ಊಟ ಮುಗಿಸಿ, ನಮ್ಮ ಮನೆಯ ಮುಂದಿದ್ದ ಜಗುಲಿಯ ಮೇಲಕ್ಕೇ ಎಲ್ಲರೂ ಸೇರುತ್ತಿದ್ದರು. ಬೀದಿ ದೀಪದ ಬೆಳಕು ನಮ್ಮ ಜಗುಲಿಯ ಮೇಲೆಯೇ ಬೀಳುತ್ತಿದ್ದರಿಂದ ಎಲ್ಲ ಅಲ್ಲೇ ಸೇರಿ ನಾಟಕಗಳು, ಪದ್ಯಗಳು, ಭಜನೆ, ಚುಟುಕ, ಕಷ್ಟಸುಖ ಎಲ್ಲ ಹಂಚಿಕೊಳ್ಳುತ್ತಿದ್ದರು. ಗಂಡಸರು ನಾಟಕ ಹಾಕೋದು, ಪದ್ಯ ಹಾಡೋದು ಮಾಡುತ್ತಿದ್ದರೆ, ಹೆಂಗಸರು ಒಂದು ಕಡೆಗೆ ಕೂತು ನೋಡುತ್ತಿದ್ದರು. ಮಕ್ಕಳು ತಂದೆ ತಾಯಿಯರ ಜೊತೆ ತಾಳ, ತಬಲ ಬಾರಿಸುತ್ತ ತಮ್ಮ ಗೆಳೆಯರ ಜೊತೆ ಆಡುತ್ತಿದ್ದರು. ಆಗ ಅಲ್ಲಿಯ ಸಮಾವೇಶ ಬೆಳೆಗ್ಗೆ ಪಟ್ಟ ಕಷ್ಟವನ್ನೆಲ್ಲ ಮರೆಸುತ್ತಿತ್ತು. ಎಲ್ಲರೂ ಅದಕ್ಕಾಗಿ ಕಾಯುತ್ತಿದ್ದರು.
ಹಾಗೆ ಶಾಲೆಯ ವರೆಗೆ ಆಡಿ, ಪಾಡುತ್ತ ಬೆಳೆದ ನಾನು, ಇಂಟರ್ ನಲ್ಲಿ ಅನಿವಾರ್ಯವಾಗಿ ಹತ್ತಿರದ ಪಟ್ಟಣದಲ್ಲಿಯ ಹಾಸ್ಟೆಲ್ ನಲ್ಲಿ ಸೇರಿದೆ. ಅಪ್ಪ, ಅಮ್ಮರನ್ನು ಆ ರೀತಿ ಬಿಟ್ಟಿರುವುದು ಅದೇ ಮೊದಲಸಲ ಆದ್ದರಿಂದ ತುಂಬಾ ಕಷ್ಟವಾಗುತ್ತಿತ್ತು. ಅವರಿಗೂ ಸಹ ಅಷ್ಟೇ ! ವಾರಕ್ಕೊಂದು ದಿನ, ಮನೆಗೆ ಬರುವ ನನಗಾಗಿ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕಾಯುತ್ತಿದ್ದರು.
ಅಪ್ಪನಿಗೆ ನಾನೆಂದರೆ ಪಂಚಪ್ರಾಣ. ಒಮ್ಮೆ ಅಮ್ಮ ಮನೆಯಲ್ಲಿ ಮಾಡ ಹಾಗಲಕಾಯಿ ಪಲ್ಯ ಮಾಡಿದ್ದಳು. ಮನೆಯಲ್ಲಿ ಎಲ್ಲರೂ ಶಾಕಾಹಾರಿಗಳೇ. ಅದೇ ಒಳ್ಳೆಯದು ಎನ್ನುತ್ತಿದ್ದ ಅಪ್ಪ. ನನಗೆ ಆ ಪಲ್ಯ ಅಂದರೆ ತುಂಬಾ ಇಷ್ಟ. ಅದಕ್ಕೇ ಅಪ್ಪ “ ಆ ಪಲ್ಯ ಮಗನಿಗೆ ಕೊಟ್ಟು ಬರುತ್ತೇನೆ. ಬಾಕ್ಸ್ ನಲ್ಲಿಟ್ಟು ಕೊಡು” ಅಂದನಂತೆ. ಅದಕ್ಕೆ ಅಮ್ಮ “ ಬಸ್ ನಲ್ಲಿ ಹೋಗಿ ಬರುವುದಕ್ಕೆ ಚಾರ್ಜ್ಆಗುತ್ತಲ್ಲ ! ಹೇಗೂ ಎರಡು ದಿನಗಳಲ್ಲಿ ಭಾನುವಾರ ಬರುತ್ತಾನಲ್ಲ ! ಬೇಡ ಬಿಡಿ” ಎಂದಳಂತೆ. ಅದಕ್ಕೆ ಅಪ್ಪ “ ಆ ಪಲ್ಯ ಅಂದರೆ ಅವನಿಗೆ ಬಾಳಾ ಇಷ್ಟ. ಇವತ್ತು ಹೇಗಾದರೂ ಅವನನ್ನ ನೋಡಬೇಕು . ಅವನಿಗೆ ನನ್ನ ಕೈಯಿಂದ ಪಲ್ಯ ಕೊಡಬೇಕು. ಬಸ್ ಚಾರ್ಜ್ ಅಂತಿದ್ದೀಯಲ್ಲ. ಸೈಕಿಲ್ ಮೇಲೆ ಹೋಗ್ತೀನಿ ಬಿಡು” ಅಂದಾಗ ಅಮ್ಮ ’ ಬರ್ತಾ ಹೋಗ್ತಾ ನಲವತ್ತು ಮೈಲು. ಹೇಗ್ ತುಳಿತೀಯಾ ? ಬೇಡ ಬಿಡು” ಅಂದರೂ ಕೇಳದೇ ಬಾಕ್ಸ್ ನಲ್ಲಿಟ್ಟು ಕೊಡಲು ಹೇಳಿದನಂತೆ. ಸ್ವಲ್ಪ ಪಲ್ಯ ಮನೆಯಲ್ಲಿಟ್ಟು, ಉಳಿದದ್ದು ಬಾಕ್ಸ್ ನಲ್ಲಿಟ್ಟು ಕೊಟ್ಟರೆ “ ಹಾಗೆ ಬೇಡ. ನಮಗಿಲ್ಲದಿದ್ದರೂ ಅಡ್ಡಿ ಇಲ್ಲ. ಅಲ್ಲಿ ಅವನ ಗೆಳೆಯರು ಇರುತ್ತಾರಲ್ಲ. ಅವರಿಗೂ ನಿನ್ನ ಕೈಯ ಅಡಿಗೆ ಇಷ್ಟಾನೇ. ಎಲ್ಲಾ ಹಾಕು” ಅಂತ ಹಾಕಿಸಿಕೊಂಡು ಸೈಕಿಲ್ ಮೇಲೆ ಹೊರಟನಂತೆ. ಆದರೇ ಅದೇ ದಿನ, ನನಗೂ ಅಪ್ಪನನ್ನು ನೋಡಬೇಕೆನಿಸಿ, ಕಾಲೇಜ್ ಹಾಸ್ಟೆಲ್ ನಲ್ಲಿ ಅನುಮತಿ ಪಡೆದು ಹೊರಟಿದ್ದೆ. ಆಗ ಈಗಿನ ತರ ಫೋನ್ ಗಳಿರಲಿಲ್ಲ. ಆದಕಾರಣ ಅಪ್ಪ ಸೈಕಿಲ್ ಮೇಲೆ ಆಚೆ, ನಾನು ಬಸ್ ನಲ್ಲಿ ಈಚೆ ಬಂದೆವು. ಅಪ್ಪ ಆ ಪಲ್ಯ ನನ್ನ ಗೆಳೆಯರಿಗೆ ಕೊಟ್ಟು ಉಸ್ಸೆಂದು ಸೈಕಿಲ್ ತುಳಿದು ಬರುವಷ್ಟರಲ್ಲ ಸರಿಹೊತ್ತು ಆಗಿತ್ತು. ಮನೆಗ ಬಂದ ತಕ್ಷಣ ನನ್ನ ಹತ್ತಿರ ಕರೆದುಕೊಂಡು ಈ ಸಂಗತಿ ಹೇಳ್ತಿದ್ದರೆ, ಅಮ್ಮ’ ಮನೆಯಲ್ಲಿ ಸ್ವಲ್ಪಾದರೂ ಅವನು ತಿನ್ನದ ಹಾಗೆ ಮಾಡಿದೆಯಲ್ಲಯ್ಯಾ” ಅಂತ ಮುದ್ದಾಗಿ ಬೈದರೂ, ಎಲ್ಲರೂ ನಕ್ಕಿದ್ದೆವು. ಅವತ್ತು ನನಗಿಷ್ಟವಾದ ಪಲ್ಯ ತಿನ್ನದಿದ್ದರೂ, ಅಪ್ಪ ಎಂದಿನಂತೆ ನಮ್ಮ ಸಲುವಾಗಿ ಕಾದು ನಂತರ ಬರೀ ಚಟ್ನಿಯಲ್ಲೇ ಉಂಡರೂ ಆ ಆನಂದವೇ ಬೇರೇ.
ಅಪ್ಪನಿಗೆ ಚಳಿ ಅಂದರೆ ಆಗುತ್ತಲೇ ಇರಲಿಲ್ಲ. ಸ್ವಲ್ಪ ಚಳಿಯಾದರೂ ಚಿಗುರೆಲೆ ನಡುಗಿದ ಹಾಗೆ ನಡುಗುತ್ತಾ, ಹೊದಿಕೆ ಹೊದೆಯುತ್ತಿದ್ದ. ತಲೆ ಸುತ್ತಾ ಕಪ್ಪು ಮಫ್ಲರ್ ಸುತ್ತಿಕೊಳ್ಳುತ್ತಿದ್ದ. ಅಮ್ಮ, ಅಕ್ಕ ಅಣಕಿಸುತ್ತಿದ್ದರೇ, ನಾನು ಅಪ್ಪನ ಜತೆ ಸೇರಿ, ಇನ್ನೂ ಬೆಚ್ಚಗಿರಲು ಕೆಳಗೆ ಹಾಸಿಕೊಂಡು ಮಲಗುವ ಹಳೇ ಬಟ್ಟೆಗಳಿಂದ ಹೊಲೆದ ಕವುದಿ ಹೊದೆಸುತ್ತಿದ್ದೆ. ಚಳಿಗಾಲದಲ್ಲಿ ಮಿಲ್ಲಿಗೆ ಹೋಗಲು ಅಪ್ಪ ತುಂಬಾ ಕಷ್ಟಪಡುತ್ತಿದ್ದ. ಒಮ್ಮೊಮ್ಮೆ ಶಿಫ್ಟ್ ಬದಲಿ ಮಾಡಿಸಿಕೊಳ್ಳುತ್ತಿದ್ದ. ಆದರೂ ಮಧ್ಯಾಹ್ನ ಹೋದಾಗ, ರಾತ್ರಿ ಹತ್ತು ಗಂಟೆಗೆ ವಾಪಸ್ ಬರುವಾಗ ಚಳಿ ಇರುತ್ತಿತ್ತು. ಆದಕಾರಣ ನಾನು ಅಪ್ಪನಿಗೆ ತಿಳಿಯದಂತೆ ಮಾಮಂದಿರು, ನೆಂಟರು ಕೊಟ್ಟ ಪುಡಿಗಾಸು, ನನ್ನ ಹುಟ್ಟುಹಬ್ಬಕ್ಕೆ ’ ನನಗೆ ಬಟ್ಟೆ ಬೇಡ. ಹಣ ಕೊಡಿ, ಪಿಗ್ಗಿ ಬ್ಯಾಂಕಿನಲ್ಲಿ ಹಾಕಿಡುವೆ’ ಅಂತ ಹೇಳಿ ಅಪ್ಪ, ಅಮ್ಮನಿಂದ ಪಡೆದ ಹಣ ಎಲ್ಲ ಸೇರಿಸಿ ಅಪ್ಪನಿಗೆ ಒಂದು ಮಂಕೀ ಕ್ಯಾಪ್, ಒಂದು ಸ್ವೆಟ್ಟರ್ ಕೊಂಡು ತಂದೆ. ಅದಕ್ಕೆ ಅಪ್ಪ ಎಷ್ಟು ಸಂತೋಷ ಪಟ್ಟಿದ್ದನೋ ! ನನ್ನ ಮಗ ಕೊಟ್ಟ ಅಂತ ಗರ್ವದಿಂದ ಅದೆಷ್ಟು ಜನಕ್ಕೆ ಹೇಳಿದ್ದನೋ ! ಇಂದಿಗೂ ನಾನು ಅಮೆರಿಕಾದಿಂದ ಕಳಿಸಿದ ಒಳ್ಳೊಳ್ಳೆ ಸ್ವೆಟ್ಟರ್ ಗಳಿದ್ದರೂ ಅಪ್ಪ ಆ ಮೊದಲನೆಯ ಸಲದ ಸ್ವೆಟ್ಟರನ್ನೇ ಇಷ್ಟಪಡ್ತಾನೆ. ಹೀಗೆ ಮೆಲಕು ಹಾಕಿದಷ್ಟೂ ನೆನಪುಗಳೇ ನೆನಪುಗಳು !
ಕಳೆದ ಸಲ ಬಂದಾಗ ಅಪ್ಪ “ ಮನೆಮುಂದ್ದಿದ್ದ ಖಾಲೀ ಜಾಗದಲ್ಲಿ ಒಂದು ವೇದಿಕೆ, ಹಾಲ್ ಕಟ್ಟಿಸಿದರೆ, ಅದು ನೃತ್ಯ, ಸಂಗೀತ, ನಾಟಕ, ಮದುವೆ ಸಂಭ್ರಮ ಹೀಗೆ.. ಈ ಊರಿನ ಯಾವ ಕಾರ್ಯಕ್ಕೂ ಕೆಲಸಕ್ಕೆ ಬರುತ್ತೆ. ಕಲೆಗಳನ್ನು ಪೋಷಿಸಿದ ಹಾಗಾಗುತ್ತೆ. ಬಡವರಿಗೊಂದು ಆಸರೆಯಾಗುತ್ತೆ. ಹಾಗೇ, ನಿಮ್ಮಮ್ಮನಿಗೆ ಗುಡಿ ಅಂದ್ರೆ ತುಂಬಾ ಇಷ್ಟ. ಯಾವಾಗಲೂ ನಾನು ಇರುವುದಿಲ್ಲಲ್ಲಾ ! ಅದಕ್ಕೆ ಒಂದು ಸಣ್ಣ ಗುಡಿ ಕಟ್ಟಿಸಿದರೇ, ಖಾಲೀ ಇರುವಾಗ ಅಲ್ಲಿ ಅಮ್ಮ, ನಾನು ಮಕ್ಕಳಿಗೆ ಭಗವದ್ಗೀತೆ, ನೀತಿ ಪದ್ಯಗಳು ಹೇಳಿ ಕೊಡಬದುದು” ಎಂದಿದ್ದ.
“ಸರಿಯಪ್ಪ ! ನೋಡೋಣ “ ಎಂದಿದ್ದೆ. ಆ ವಿಷಯ ಸಹ ಮಾತಾಡಬೇಕು.


ಗಕ್ಕನೆ ಕಾರು ನಿಂತಾಗ ಯೋಚನೆಗಳಿಂದ ಹೊರಬಂದೆ. ಅಷ್ಟರಲ್ಲಿ ಸುನೀಲ ಕೂಡಾ ಎದ್ದು, ಸುತ್ತೂ ನೋಡುತ್ತಿದ್ದಳು. ಹೊರಗೆ ನೋಡಿದೆ. ಷಾಮಿಯಾನಾ ಹಾಕಿದ ಯಾವುದೋ ಮನೆಯ ಮುಂದೆ ಕಾರು ನಿಂತಿದೆ. ಇದು ನಮ್ಮ ಮನೆ ಅಲ್ಲ ಅಂತ ಡ್ರೈವರನಿಗೆ ಹೇಳ ಹೋದವನು ಸುಮ್ಮನಾದೆ ! ಯಾಕೆ ಎಂದರೆ, ಆ ಜಗುಲಿಗಳ ಮೇಲೆ ನನ್ನ ಬಾವ, ಮಾಮ, ಇತರೆ ನೆಂಟರು ಕಾರನ್ನು ನೋಡಿ ಕಾರಿನ ಬಳಿ ಬರುತ್ತಿದ್ದಾರೆ. ಬೆಚ್ಚಿಬಿದ್ದು ತೀಕ್ಷ್ಣವಾಗಿ ನೋಡಿದೆ ! ಅದು ನಮ್ಮ ಮನೆಯೇ ! ಮನೆಯ ಮುಂದೆ ಉರಿಯುತ್ತಿರುವ ಕಾಷ್ಟ !
ಅಂದರೇ ? ನನ್ನ ತಲೆ ಮೂರಾಣೆಯಾಯಿತು. ಎರಡು ದಿನಗಳ ಮುಂಚೆ “ ಮಗೂ ! ನಮ್ಮ ಊರಿನಲ್ಲಿ ಗುಡಿಯೋ, ಶಾಲೆಯೋ ಕಟ್ಟಿಸಬೇಕಾಗಿದೆ ! ನೀನು ಬಂದಮೇಲೆ ಮಾತಾಡೋಣ. ನಾಡಲ್ಲದ ನಾಡಲ್ಲಿದ್ದೀಯಾ ! ಭದ್ರಪ್ಪಾ !” ಅಂತ ನಮಗೆ ಜಾಗ್ರತೆಗಳು ಹೇಳಿದ ಅಪ್ಪ, ಈಗ ತನ್ನ ಜಾಗ್ರತೆಯನ್ನೇ ನೋಡಿಕೊಳ್ಳದಾಗಿದ್ದಾನೆ.
ನಾನು ಇನ್ನೂ, ನನಗಿಷ್ಟವಾದ ಪಲ್ಯ ಮಾಡಿಸಿ ನನಗಾಗಿ ಕಾಯುತ್ತಿರಬಹುದು ಅಂತ ಎಣಿಸುತ್ತಿದ್ದೆ. ಅಯೋಮಯವಾಗಿ ಕಾರಿಳಿದ ನನ್ನ ಭಾವ, ಮಾಮ ಅಪ್ಪಿಹಿಡಿದರು. ಕಣ್ಣೀರು ಸುರಿಸುತ್ತಾ ಮಾನಸಿಕವಾಗಿ ನಿರ್ವೀರ್ಯವಾದ ನನ್ನ ದೇಹವನ್ನ ಇಬ್ಬರೂ ಅತಿ ಕಷ್ಟದಲ್ಲಿ, ನಡೆಸುತ್ತ ಒಳಕೆ ಸೇರಿಸಿದರು. ಅಲ್ಲಿ ಹಾಲಿನಲ್ಲಿ ಅಪ್ಪ. ಆರಾಮ ಕುರ್ಚಿಯ ಪಕ್ಕದಲ್ಲಿ, ಮಂಜಿನ ತುಂಡುಗಳ ಮೇಲೆ ಅಪ್ಪ ನಿರ್ಜೀವವಾಗಿ, ಹೂದಂಡೆಗಳಿಂದ……
ಚಳಿ ಎಂದರೆ ಗಡಗಡ ನಡುಗುವ ಅಪ್ಪನ ಶರೀರ, ಈಗ ಮಂಜಿನ ಮೇಲೆ ಅಷ್ಟು ಸಮಯ, ನನ್ನ ಆಗಮನಕ್ಕಾಗಿ…..
ಅದರ ಮೇಲೆ ನಾನು ಕೊಂಡುಕೊಟ್ಟ ಸ್ವೆಟ್ಟರ್ ! ನನಗಾಗಿ… ನಾನು ಕೊಡಿಸಿದ ಸ್ವೆಟ್ಟರ್ ಹಾಕಿಕೊಂಡು… ಇನ್ನು ತಡೆಯಲು ಸಾಧ್ಯವಾಗಲಿಲ್ಲ. ಅಪ್ಪನ ಪಾದದಡಿಯಲ್ಲಿ, ಕೆದರಿದ ಕೂದಲು, ಉಬ್ಬಿದ ಕಣ್ಣುಗಳು ಹೊತ್ತು ಶೋಕದೇವತೆಯಂತೆ ಅಮ್ಮ, ಅವಳ ಪಕ್ಕದಲ್ಲೇ ಅದೇ ಸ್ಥಿತಿಯಲ್ಲಿ ಅಕ್ಕ….
ನನ್ನ, ಸುನೀಲನ್ನ, ಮಕ್ಕಳನ್ನ ನೋಡುತ್ತಲೇ ಒಮ್ಮೆಗೇ ರೋದನ ಆಕಾಶಕ್ಕೇರಿದವು. ಅಮ್ಮನ ಮಡಿಲಲ್ಲಿ ತಲೆ ಇಟ್ಟು ಬಿಕ್ಕಿ ಬಿಕ್ಕಿ ಅತ್ತೆ. ಅಪ್ಪನ ಪಾದಗಳನ್ನು ಕಣ್ಣೀರಲ್ಲಿ ತೊಳೆದೆ.
ನಂತರದ ಕೆಲಸಗಳೆಲ್ಲ ಕನಸಿನಂತೆ ನಡೆದು ಹೋದವು. ಬಾಲ್ಯದ ದೋಸ್ತುಗಳೆಲ್ಲ ಎದೆಗಾನಿಸಿಕೊಂಡು ಸಮಾಧಾನ ಮಾಡಿದರು. ಅಂದಿನ ಎಷ್ಟೋ ವಿಷಯಗಳ ಬಗ್ಗೆ ಮಾತಾಡಿಕೊಂಡೆವು. ಅಪ್ಪನ ಅಸ್ತಿ, ಬೂದಿ ಕಾಶಿ, ಕಾಳೇಶ್ವರಂ ಕ್ಷೇತ್ರಗಳಲ್ಲಿ ಕಲಿಸಿದೆವು.
ಐದನೆಯ ದಿನ ಅಕ್ಕ, ಬಾವ “ ಅಮ್ಮ ಇನ್ನು ಮೇಲೆ ಎಲ್ಲಿ ಇರೋದು”ಎಂದು ಕೇಳಿದರು.
ಅಪ್ಪ ಇಲ್ಲದ ಮನೆಯಲ್ಲಿ ಅಮ್ಮ ಇರಲಾರಳು. ಇದ್ದರೆ, ಅಪ್ಪನ ನೆನಪುಗಳಲ್ಲಿ ಅಮ್ಮನ ಆರೋಗ್ಯ ಹದಗೆಡುತ್ತದೆ. ಅದಕ್ಕೆ “ನನ್ನ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ಇಲ್ಲಾಂದ್ರೆ ಅಲ್ಲಿ ರಾಜೀನಾಮೆ ಕೊಟ್ಟು ಇಲ್ಲಿಗೇ ಬಂದು ಬಿಡುತ್ತೇನೆ. ಅಮ್ಮನಿಗೆ ಯಾವುದು ಇಷ್ಟವಾದರೆ, ಅದು “ ಅಂದೆ.
“ಅಮ್ಮನ ಸಲುವಾಗಿ ನಿನ್ನ ಒಂದು ಹಂತಕ್ಕೆ ಬಂದ ಜೀವನವನ್ನು ಈ ವಯಸ್ಸಿನಲ್ಲಿ ಬಿಟ್ಟು ಯಾಕೆ ಕಷ್ಟಪಡೋದು? ಅಮ್ಮನನ್ನೇ ಕರೆದುಕೊಂಡು ಹೋಗು. ಅಮ್ಮನಿಗೂ ಸ್ಥಳ ಬದಲಾಗಿ ಸ್ವಲ್ಪ ಆರೋಗ್ಯ ಸುಧಾರಿಸತ್ತೆ “ಎಂದರು ಭಾವ.
“ ಹಾಗಾದರೆ ಈ ಮನೆಯನ್ನೇನು ಮಾಡೋದು? ಹಾಗೇ ಬಿಟ್ಟರೆ ಧೂಳು ಹಿಡಿದು ಹಾಳಾಗತ್ತೆ. ಮತ್ತೆ ನೀನೇನಾದರೂ ಇಲ್ಲಿ ಬಂದು ಇರೋದಿದೆಯಾ ? ಈ ಊರಿನ ಸರ್ಪಂಚ್ ಮನೆ ಮಾರಿದ್ರೆ ಕೊಂಡುಕೊಳ್ಳುತ್ತಾನಂತೆ. ಈ ಸಮಯದಲ್ಲಿ ಇದು ಕೇಳೋದು ತಪ್ಪೇ ಆದರೂ ಮತ್ತೆ ನೀನು ಅಮೆರಿಕಾಗೆ ಹೋದರೆ ಸಿಗೋದು ಕಷ್ಟ ಅಂತ ಕೇಳಲು ಹೇಳದ್ದಾನೆ” ಎಂದ ಮಾಮ.
“ನಿಮ್ಮಿಷ್ಟ. ನೀವೆಲ್ಲ ಹೇಗಂದರೆ ಹಾಗೆ” ಅಂದೆ.
ಅಂದು ಸಂಜೆ ಮಲ್ಲಿಗೆ ಹಂದರದ ಕೆಳಗೆ ಮಂಚದ ಮೇಲೆ ಅಮ್ಮನ ಪಕ್ಕಕ್ಕೆ ಕೂತೆ. ಜಾಜಿ, ಮಲ್ಲಿಗೆ, ದವನ, ಸುಗಂಧರಾಜ ಹೂಗಳ ಪರಿಮಳ ಹಾಯೆನಿಸಿದರೂ, ಮನಸ್ಸೆಲ್ಲಾ ಒಂದು ರೀತಿಯ ಆತಂಕ ! ಹೀಗೆ ಅಂತ ಹೇಳಲಾಗದ ನೋವು. ಅಮ್ಮ, ಅಪ್ಪ ಈ ಮನೆಗೋಸ್ಕರ ಎಷ್ಟು ಕಷ್ಟ ಪಟ್ಟರು. ಅಪ್ಪನಿಗೆ ಚಳಿ ಹಿಡಿಸದು ಅಂತ ಮನೆ ಕಟ್ಟುವಾಗ ನಾನೇ ಗೋಡೆಗಳಿಗೆ ನೀರು ಹಿಡಿಯುತ್ತಿದೆ. ಪುಸ್ತಕಗಳಿಗೆ ಕಪಾಟುಗಳು, ಬಟ್ಟೆ ಇಟ್ಟುಕೊಳ್ಳಲು ಕಪಾಟುಗಳು, ಹೀಗೆ ಅಕ್ಕ ನಾನು ಜಗಳ ಮಾಡಿ ನಮಗೆ ಹೀಗೇ ಬೇಕು ಅಂತ, ಅದೇನೋ ಇಂದ್ರಭವನ ಕಟ್ಟುತ್ತಿರುವಂತೆ ರಾಜರ ತರ ಏರ್ಪಾಡು ಮಾಡಿಸಿಕೊಂಡಿದ್ದೆವು. ಅವುಗಳಲ್ಲಿ ಪುಸ್ತಕಗಳೇ ಅಲ್ಲ, ಅವುಗಳ ನಡುವೆ ಬೆಳಕು ಕಾಣದ ನವಿಲುಗರಿಗಳು, ಅಮ್ಮ ರಾತ್ರಿ ಕೊಡುವ ನನ್ನ ಪಾಲಿನ ಥಾಲಿಪಿಟ್ ತುಂಡುಗಳನ್ನು, ಹುಣಿಸೇ ಬೀಜಗಳನ್ನು, ಹಣ ಹಾಕಿಡೋ ಗಲ್ಲಾ ಪೆಟ್ಟಿಗೆಯನ್ನು ಹೀಗೆ ಸಕಲವನ್ನೂ ಇಟ್ಟುಕೊಳ್ಳುತ್ತಿದ್ದೆ. ಆ ಕಪಾಟಿನ ಪಕ್ಕದ ಗೋಡೆಯ ಮೇಲೆ ದೇವರ ಗೊಂಬೆಗಳು, ದೈನಂದಿನ ಟೈಂ ಟೇಬಲ್ ಅಂಟಿಸಿಕೊಳ್ಳುತ್ತಿದ್ದೆ. ಅಮ್ಮ ಸಹ ಸ್ಟೌ ಇಡಲು ಕಟ್ಟೆ, ಬಟ್ಟಲುಗಳನ್ನಿಡಲು, ಉಪ್ಪರಿಗೆಯ ಮೇಲೆ ನಮಗೆ ಸಿಗದ ಹಾಗೆ ಕುರುಕಲು ತಿಂಡಿ ಇಡಲು ಕಪಾಟು ಮಾಡಿಸಿಕೊಂಡಿದ್ದಳು. ಇನ್ನು ಪೂಜಾ ರೂಮಂತೂ ದೀಪಾವಳಿಗೆ ಅಮ್ಮ ಇಡುವ ದೀಪಗಳಿಂದ, ಕುಂಕುಮಗಳಿಂದ ಬೆಳಗಿ ಹೋಗೋದು. ಹೀಗೆ ಆ ಮನೆಯ ಪ್ರತಿ ವಸ್ತುವಿನ ಜೊತೆ, ಪ್ರತಿ ಜಾಗದ ಜೊತೆ ನನಗೆಷ್ಟೋ ಮಧುರವಾದ ಅನುಬಂಧ ಇದೆ. ನನಗೇ ಹಾಗಿದ್ದರೆ, ನನಗಿಂತ ಜಾಸ್ತಿ ಸಮಯ ಅಪ್ಪನ ಜೊತೆ ಕಳೆದ ಅಮ್ಮನಿಗದೆಷ್ಟಿರಬೇಕು ? ಅಮ್ಮನನ್ನು ಒಂದು ಮಾತು ಕೇಳದೇ” ಮಾರಿ ಬಿಡೋಣ” ಎಂದಿದ್ದೆ.
“ಅಮ್ಮಾ! ಮನೆ ಮಾರೋದು ನಿನಗಿಷ್ಟಾನೇನಾ? “ ಅಂದೆ. ಮಾತು ಕೊಡೋದು, ಒಪ್ಪಂದ ಮಾಡೋದು ಎಲ್ಲ ಆದ ಮೇಲೆ ಹೀಗೆ ಕೇಳುತ್ತಿದ್ದಕ್ಕೆ, ತಪ್ಪಿತಸ್ಥನಂತೆ ಅಂದುಕೊಳ್ಳುತ್ತಾ. ಅಮ್ಮ ಮಾತಾಡಲಿಲ್ಲ. ಆದರೆ ಅಮ್ಮನ ಕಣ್ಣಿನಿಂದ ಸುರಿಯುತ್ತಿದ್ದ ಧಾರಾಕಾರ ಕಣ್ಣೀರು ಅದೆಷ್ಟೋ ಅರ್ಥ ಹೇಳಿತ್ತು.
ಮರುದಿನ ಹತ್ತನೆಯ ದಿನ. “ ಇಲ್ಲಿಯವರೆಗೂ, ಯಾವ ಕಾಗೆನೂ ಬೇಗನೆ ಮುಟ್ತಾ ಇಲ್ಲ. ಅಪ್ಪನಿಗೆ ಏನಾದರೂ ಬಯಕೆ ಉಳಿದು ಹೋಗಿದೆಯೇನೋ ? ಸರಿಯಾಗಿ ಬೇಡಿಕೋ ಬುಚ್ಚಣ್ಣಾ” ಅಂದಳು ಅಕ್ಕ ಗದ್ಗದ ಕೊರಳಿನಿಂದ. ಇದೆಲ್ಲದರಲ್ಲೂ ನನಗೆ ನಂಬಿಕೆ ಇಲ್ಲದಿದ್ದರೂ, ಅಪ್ಪನನ್ನ ನೆನೆದು, ಕಣ್ಣುಮುಚ್ಚಿ ಒಂದು ಮಾತ್ರ ಕೋರಿದೆ ! ಅಷ್ಟೇ !
“ಅರೆ ! ಏನು ಭರವಸೆ ಕೊಟ್ಟೆಯೋ ಅಪ್ಪನಿಗೆ ? ಇಲ್ಲಿವರೆಗೆ ಬಾರದ ಹಕ್ಕಿಗಳೆಲ್ಲ ಹೇಗೆ ಗುಂಪು ಗುಂಪಾಗಿ ಬಂದು ಎಡೆ ಮುಟ್ತಿವೆ ನೋಡು “ ಸಂಭ್ರಮಾಶ್ಚರ್ಯಗಳಿಂದ ಅಕ್ಕ, ಭಾವ ಅಂತಿದ್ದಾರೆ. ಕಣ್ಣು ತೆಗೆದು ನೋಡಿದೆ. ನಿಜ !
“ ಹೇಳೋ ! ನಿನ್ನನ್ನೇ ! ಹೇಳು” ಅಕ್ಕ ಮತ್ತೆ ಮತ್ತೆ ಕೇಳಿದಳು. ಎಲ್ಲರೂ ನನ್ನ ಕಡೆಗೇ ಕುತೂಹಲದಿಂದ ನೋಡುತ್ತಿದ್ದಾರೆ.
“ ಅಕ್ಕಾ! ಅಮ್ಮಾ ! ಎಲ್ಲರಿಗೂ ಹೇಳ್ತಿದ್ದೀನಿ. ನಾನು ಅಪ್ಪನಿಗೆ ಕೊಟ್ಟ ಭರವಸೆ, ಅಪ್ಪನಿಗೆ ಇಷ್ಟವಾದದ್ದು ಏನು ಅಂತ ಹೇಳ್ತಿದ್ದೀನಿ. ಈ ಮನೆ ಮಾರ್ತಾ ಇಲ್ಲ. ಇಲ್ಲಿಯ ಮನುಷ್ಯರ ಜೊತೆ, ಈ ನೆಲದ ಜೊತೆ ನನಗಿರುವ ಅನುಬಂಧ ಮರೆಯಲಾಗದ್ದು, ಮರೆಯಲಾರದ್ದು. ಎಂದಿಗಾದರೂ ಇಲ್ಲಿಗೆ ಬಂದಾಗ ನನಗೆ ಈ ಊರ ಜೊತೆಯಾಗಲಿ, ಈ ಮನೆಯ ಜೊತೆಯಾಗಲಿ, ಇಲ್ಲಿಯ ಆತ್ಮೀಯರ ಜೊತೆಯಾಗಲಿ ಯಾವ ಸಂಬಂಧಾನೂ ಇಲ್ಲ ಅಂತ ಊಹಿಸಲೂ ಆಗುತ್ತಿಲ್ಲ. ಅದಕ್ಕೇ, ಮನೆಯ ಮುಂದಿರುವ ವಿಶಾಲ ಪ್ರದೇಶದಲ್ಲಿ ಒಂದು ಚಿಕ್ಕ ಗುಡಿ, ಅದರ ಪಕ್ಕಕ್ಕೇ ಒಂದು ಲೈಬ್ರರಿ, ಕಲಾಪ್ರದರ್ಶನಕ್ಕೆ ಒಂದು ವೇದಿಕೆ, ಹಾಲ್ ಏರ್ಪಾಡು ಮಾಡಬೇಕು ಅಂತ ಇದ್ದೀನಿ. ಹಾಗೇ ಅಮ್ಮನ ತಿಲಕದಲ್ಲಿ ಅಪ್ಪ ಕಾಣಿಸ್ತಾನೆ. ಬಳೆಗಳ ಗಲಗಲ ಶಬ್ದದಲ್ಲಿ ಅಪ್ಪ ಕೇಳಿಸ್ತಾನೆ. ಚಿಕ್ಕಂದಿನಿಂದ ಬಂದ ಕುಂಕುಮ, ಅರಿಸಿಣ, ಹೂವು ತೆಗೆಯುವ ಹಕ್ಕು ಯಾರಿಗೂ ಇಲ್ಲ. ಅಮ್ಮನ ವಿಷಯದಲ್ಲೇ ಎಲ್ಲ. ಮಹಿಳೆಯರನ್ನು ಎಷ್ಟೋ ಮಾನಸಿಕ ವೇದನೆಗೆ ಗುರಿ ಮಾಡುವ ಈ ವಿಧಾನ, ಗಂಡ ಸತ್ತ ಯಾವ ಮಹಿಳೆಗೂ ಆಗದಂತೆ ನೋಡಿಕೊಳ್ಳುವೆ ಅನ್ನೋದೇ ನಾನು ಅಪ್ಪನಿಗೆ ಕೊಟ್ಟ ಮಾತು !” ನನ್ನ ಮಾತುಗಳು ಮುಗಿಯುತ್ತಿದ್ದಂತ, ಎಲ್ಲರ ಚಪ್ಪಾಳೆಗಳ ನಡುವೆ ಅಮ್ಮ ಬಂದು ನನ್ನ ಹಣೆಗೆ ಮುತ್ತಿಟ್ಟು ನನ್ನ ಅಪ್ಪಿದ್ದಳು. ಅದು ಅಪ್ಪನ ಭರವಸೆಯ ತರ, ಅಮ್ಮನ ಪ್ರೀತಿ ತರ ಹಾಯಾಗಿತ್ತು.


ತೆಲುಗು ಮೂಲ: ಶ್ರೀಮತಿ ನಾಮನಿ ಸುಜನ
ಕನ್ನಡಕ್ಕೆ: ಚಂದಕಚರ್ಲ ರಮೇಶಬಾಬು

One thought on “ತೆಲುಗಿನ ‘ಬಿಡಲಾಗದ ಬಂಧನ’ ಕಥೆ ಕನ್ನಡಕ್ಕೆ ಚಂದಕಚರ್ಲ ರಮೇಶಬಾಬುರವರಿಂದ

Leave a Reply

Back To Top