ಕಾವ್ಯ ಸಂಗಾತಿ
ಈರಪ್ಪ ಬಿಜಲಿ
ಅಪ್ಪ ಯಾಕೋ ಸೋತ್ಹೋಗಿ ಬಿಟ್ಟ..?
ಅಮ್ಮನು ಸೆರಗಿನ ಮರೆಯಲ್ಲಿ ಎದೆ ಹಾಲುಣಿಸಿದರೆ , ಸೆರಗಿನ ಆಚೆಯ ಪರಪಂಚದಲಿ ಬದುಕಿನ ಹಾಲಾಹಲ
ಉಂಡು ಮಗನ ಪೋಷಣೆಗಾಗಿ
ಅಮ್ಮನಷ್ಟೇ ಸಮಾನವಾಗಿ ಶ್ರಮಿಸಿದರೂ
ತಾ ಹೆತ್ತಿರುವ ಮಗನ ಪ್ರೀತಿ ಗಳಿಸುವಲ್ಲಿ
ಅಪ್ಪ ಯಾಕೋ ಸೋತ್ಹೋಗಿ ಬಿಟ್ಟ..? ||೧||
ಹೊತ್ತು ಹೊತ್ತಿಗೂ ಬಿಸಿಬಿಸಿ ಅಡುಗೆ
ಮಾಡಿ ಚಂದಮಾಮನ ತೋರಿಸುತ್ತಾ
ಊಟ ಮಾಡಿಸುವ ಅಮ್ಮನ ಮುಂದೆ
ಮೂರು ಹೊತ್ತೂ ದುಡಿದು ಕಿರಾಣಿ ದಿನಸಿ ತಂದು ಹಾಕಿದರೂ, ತಾ ಹೆತ್ತಿರುವ ಮಗನ
ಪ್ರೀತಿ ಗಳಿಸುವಲ್ಲಿ ಮನೆ ಯಜಮಾನನಾದ
ಅಪ್ಪ ಯಾಕೋ ಸೋತ್ಹೋಗಿ ಬಿಟ್ಟ..? ||೨||
ಯಾವ ಸ್ಕೂಲ್ ಕಾಲೇಜಗೆ ಸೇರ್ಸಲಿ,
ಓದಲು ನಿನಗೇನು ಇಷ್ಟ? ಇಷ್ಟ ಬಂದಿದ್ದು ಓದು
ನಿನಗಿಷ್ಟವಾದದ್ದೆಲ್ಲಾ ತೆಗೆದಿಕೋ,ಎನ್ನೋ ಅಪ್ಪ
ನಿನಗ್ಯಾವ ತಿಂಡಿ ಇಷ್ಟ? ಬುತ್ತಿ ಏನನ್ನು ಕಟ್ಟಲಿ
ಉಪವಾಸವಿರದೆ ಟೈಮ್ ಸರಿಯಾಗಿ ತಿನ್ನು
ಎನ್ನೋ ಅಮ್ಮನ ಮುಂದೆ ನಿಷ್ಪಾಪಿಯಾದ ..
ಅಪ್ಪ ಯಾಕೋ ಸೋತ್ಹೋಗಿ ಬಿಟ್ಟ..? ||೩||
ವಂಶ ಉದ್ದಾರವಾಗಲೆಂದು ಸುತ್ತೆಲ್ಲ ಊರುಗಳ ಸುತ್ತಿ..ಸಾಲಸೋಲ ಮಾಡಿ
ಇರುವ ಏಕೈಕ ಮನೆ ಒತ್ತೆ ಹಾಕಿ…
ಇದ್ದೊಬ್ಬ ಮಗನ ಮದುವೆ ಮಾಡಿದರೂ,
ಮೇಣದಬತ್ತಿಯಂತೆ ತನ್ನ ತಾ ದಹಿಸಿದರೂ,
ಅವನಮ್ಮನಂತೆ ಮಗನ ಹೃದಯ ಗೆಲ್ಲುವಲ್ಲಿ
ಅಪ್ಪ ಯಾಕೋ ಸೋತ್ಹೋಗಿ ಬಿಟ್ಟ..? ||೪||
ಕಾಲಾಯೇ ತಸ್ಮೈ ನಮಃ , ಕಾಲದ ಸುಳಿಗೆ
ಸಿಕ್ಕು ಆ ಮಗನು ಮುಂದೊಂದಿನ ಅಪ್ಪನಾದ
ಜೀವನವೆಂಬ ಈ ರಂಗವೇದಿಕೆಯಲ್ಲಿ ,
ತೆರೆಮರೆಯಲ್ಲಿ ಸಾಗೋ ಅಪ್ಪನ ಪಾತ್ರವನ್ನು,
ಅರಿಯುವಷ್ಟರಲ್ಲಿ ಈ ಅಪ್ಪ..ತನ್ನಯ
ಅಪ್ಪನನ್ನ ಯಾಕೋ ಮರೆತ್ಹೋಗಿ ಬಿಟ್ಟ..? ||೫||
ಅಪ್ಪ ಅಂದ್ರೇ ಆಕಾಶ..ಅವ್ವ ಅಂದ್ರೇ ಭೂತಾಯಿ..
ಮಕ್ಕಳು ಓಡಾಡುವಾಗ ಎಡವಿ ಬಿದ್ದರೆ ಅಮ್ಮಾ ಎನ್ನುವರು..
ಏಕೆಂದರೆ ಅವರು ಬಿದ್ದಾಗ ಭೂಮಿ ಕಡೆ ಮುಖ ಮಾಡಿರುವರು
ಭೂಮಂಡಲವನ್ನೇ ಸದಾ ರಕ್ಷಾ ಕವಚದಂತೆ ಕಾಯುವ
ಆಕಾಶ ಅವರಿಗೆ ಕಾಣಿಸದು ಅದಕ್ಕೆ ಅಮ್ಮಾ ಎನುವರು
ಅಪ್ಪನ ಪ್ರೀತಿ ಗಗನದಷ್ಟು..ಅಮ್ಮನ ಪ್ರೀತಿ ಕಡಲಿನಷ್ಟು
ಭೂಮಿ ನಭೋ ಮಂಡಲದಲ್ಲಿ ವಿಲೀನವೆಂಬ ಸತ್ಯ..
ಲೋಕದಿ ನಾವೆಂದು ಮರೆತ್ಹೋಗ ಬಾರದು ..!! ||೬||
Superb sir