ಸ್ಮಿತಾ ಭಟ್ ಕವಿತೆ-ಮೆತ್ತಿಕೊಳ್ಳುವ ಭಾವ

ಕಾವ್ಯ ಸಂಗಾತಿ

ಸ್ಮಿತಾ ಭಟ್

ಮೆತ್ತಿಕೊಳ್ಳುವ ಭಾವ

ದಾರಿಯಲಿ ಸಿಗುವ
ಮಾನಸಿಕ ಅಸ್ವಸ್ಥ. ಅಳುವ ಹೆಂಗಸು,
ಆಡಲಾಗದ ಕೂಸು.
ಮೆರವಣಿಗೆ ಹೊರಟ ಶವ,
ಅನಾಥ ಜೀವ
ಎಸೆಯುತ್ತವೆ ನಮ್ಮೆಡೆಗೆ ನೂರಾರು ನೋಟ
ಉತ್ತರಿಸಿ ಹೋಗು ಎನ್ನುವಂತೆ.
ತಿರುಗಿ ನೋಡುವುದೋ, ಕರುಣೆ ತೋರುವುದೋ,

ಜೀವಮಾನವಿಡೀ ಸುತ್ತಿ ಸುಸ್ತಾಗಿ ತಟಸ್ತವಾದವರೂ ಇದ್ದಾರೆ.
ಯಾರೇ ಹಿಡಿದು ನಿಲ್ಲಿಸಿದರೂ
ಉತ್ತರವಿಲ್ಲದಷ್ಟು ಸ್ಥಿತ ಪ್ರಜ್ಞ.
ಕಾಲ ಕೋಶ ಎಷ್ಟೇ ತಡಕಾಡಿದರೂ
ತಡವರಿಸಿ ಎಡತಾಕುವ ಭಾವ
ಸದಾ ಅಸ್ತಿರವಾದ ಭವಿಷ್ಯವ ಹೊತ್ತು
ಕಟ್ಟುವುದು ಗತ ವೈಭವದ ಸೌದ.

ದುತ್ತನೇ ತಿರುವಿನಲಿ ಎದುರಾಗಿ
ಒಬ್ಬರಿಗೊಬ್ಬರು ದಾರಿ ಕೊಡುವ ಧಾವಂತದಲಿ
ಅಡ್ಡ ಬಂದವರನ್ನು ಶಪಿಸದೇ
ಸಾಗಿದ್ದುಂಟೆ

ಕೊಲ್ಲುತ್ತಾ, ಅಳಿಸುತ್ತ, ಮುರಿಯುತ್ತ ಬೆಳೆದು ನಿಲ್ಲುವ ಅಹಮಿಕೆಯಲಿ
ಯಾರು ಯಾರನ್ನೂ ಮುಟ್ಟಲಾಗದ ಕಾಲ
ರಕ್ತ, ಮಸಿ, ಕಣ್ಣೀರು, ಏನು ಬೇಕಾದರೂ ಮೆತ್ತಿಕೊಳ್ಳಬಹುದು


ಸ್ಮಿತಾ ಭಟ್

6 thoughts on “ಸ್ಮಿತಾ ಭಟ್ ಕವಿತೆ-ಮೆತ್ತಿಕೊಳ್ಳುವ ಭಾವ

  1. ವಾಹ್, ವಾಸ್ತವಿಕ ಭಾವತೀವ್ರತೆಯೇ !!!!! ಅಭಿನಂದನೆಗಳು.

Leave a Reply

Back To Top