ನಾನು ಓದಿದ ಪುಸ್ತಕ

ನೂರ್ ಇನಾಯತ್ ಖಾನ್

ಚಂದ್ರಶೇಖರ್ ಮಂಡೆಕೋಲು

ಮೂರು ದಿನಗಳ ಕಾಲ ನನ್ನನು ಈ ಕೊರೋನಾ ರಜೆ ‘ನೂರ್ ಇನಾಯತ್ ಖಾನ್’ ನಾಝಿ ಹೋರಾಟದ ಆರ್ದ್ರ ಕಾವ್ಯವನ್ನು ಓದಲು ಹಚ್ಚಿತು.

ನನ್ನ ಓದಿನ ಮಿತಿಯಲ್ಲಿ ನಾನು ಗ್ರಹಿಸಿದ ಕಿರು ಬರಹವಿದು.

     ಧರ್ಮ ಹಾಗೂ ಜನಾಂಗ ಶ್ರೇಷ್ಠತೆಯ ಭ್ರಷ್ಠ ಸಿಂಡ್ರೋಮ್ ಇಂದು ನಿನ್ನೆಯದಲ್ಲ.ನಾಳೆ ಹೋಗುತ್ತದೆಂಬ ಖಾತ್ರಿಯೂ ಇಲ್ಲ;ಆ ಮಾತು ಬೇರೆ.ಎರಡನೇ ಜಾಗತಿಕ ಮಹಾಯುದ್ಧದಲ್ಲಿ ನಾಝಿಗಳ ನಡೆಸಿದ  ಮಾರಣ ಹೋಮಕ್ಕೆ ಯಾವತ್ತೂ ಕ್ಷಮೆ ಇಲ್ಲ.ಅತ್ಯಾಚಾರಕ್ಕೊಳಪಡಿಸಿ ಸಜೀವ ದಹಿಸುವ ಅವರ ಕ್ರೌರ್ಯವೊಂದು ಹಿಂಸೆಯೆಂಬ ಸಣ್ಣ ಪದದಲ್ಲಿ ನೋಡಲಾಗದಷ್ಟು ಭಯಂಕರ.ಇವುಗಳನ್ನೆಲ್ಲ ತಲಸ್ಪರ್ಶಿ ಅಧ್ಯಯನಗಳೊಡನೆ ಕೃತಿಕಾರ ನಮ್ಮ ಮುಂದಿಡುತ್ತಾರೆ

ನೂರ್ ಳ ಬಾಲ್ಯದಲ್ಲಿ ಆಕೆಯ ತಂದೆತಾಯಿಯರು ಪ್ರಭಾವಿಸಿದ್ದನ್ನು ನಾನು ವಿಶೇಷವಾಗಿ ಗ್ರಹಿಸಿರುವೆ.ಭಾರತೀಯನಾದ ತಂದೆಯಿಂದ ಬಳುವಳಿಯಾಗಿ ಬಂದ ಸಂಗೀತ,ಕಲೆ,ಸಾಹಿತ್ಯ,ಓದು,ಬರಹಗಳು,ಸೂಫಿ ತತ್ವ ಮತ್ತು ಪ್ರವಚನಗಳು ಆಕೆಯ ಅಂತರಂಗಿಕ ವ್ಯಕ್ತಿತ್ವವನ್ನು ವಿಕಸಿಸಿದ್ದರೆ ತಾಯಿಯ ಪ್ರಭಾವದಿಂದ ಬಂದ ಪ್ರತಿರೋಧದ ಮಧ್ಯೆಯೂ ಕೆಚ್ಚಿನಿಂದ ಬದುಕುವ ಛಲ,ಕಷ್ಟಗಳನ್ನು ಎದುರಿಸುವ ಧೈರ್ಯ ಇವೆಲ್ಲವನ್ನು ತಾಯಿಯಿಂದ ಬಂದದ್ದೆಂದು ಗುರುತಿಸಬಹುದು.ಆ ಕಾರಣಕ್ಕಾಗಿಯೇ ಮುನ್ನುಡಿಯಲ್ಲಿ ಡಾ.ರಹಮತ್ ತರೀಕೆರೆ ಯವರು ತಾಯಿ ನೋರಾ ಬೇಕರ್ ಅವರನ್ನು ‘ಅದೃಶ್ಯ ನಾಯಕಿ’ ಎಂದೇ ಕರೆದಿದ್ದಾರೆ.ಅತ್ಯಂತ ಪ್ರಜ್ಞಾವಂತ ನಾಗರಿಕರೆಂದು ಕರೆಯಲ್ಪಡುವ ಫ್ರೆಂಚ್ ಜನರ ಒಡನಾಟ,ಅಲ್ಲಿಯ ಶಿಕ್ಷಣ,ಬ್ರಿಟನ್ ಕಲಿಸಿಕೊಟ್ಟ ಅನೇಕ ಅನುಭವಗಳು,ಸೂಕ್ಷ್ಮ ಹಾಗೂ ಸಂವೇದನಪೂರ್ಣವೂ ಅತ್ಯಂತ ಪ್ರ್ಯಾಕ್ಟಿಕಲ್ ಆಗಿ ಬದುಕುವ ಚಾಕಚಕ್ಯತೆಯನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾದದ್ದು ಅವಳಿಗೆ ದೊರೆತ ಶಿಕ್ಷಣದಿಂದ ಎಂದು ಗ್ರಹಿಸಬಹುದು.ಭಾವನಾತ್ಮಕ ಹಿನ್ನೆಲೆಯಲ್ಲಿ ನೋಡಿದರೆ ಈಕೆ ಟಿಪ್ಪು ವಂಶಸ್ಥಳಾಗಿರುವುದರಿಂದ ನಮ್ಮ ನೆಲದವಳೆಂಬ ಹೆಮ್ಮೆ ಸಹಜ.ಆದರೆ ಆ ವಂಶಸ್ಥರ ಗುಣವೊಂದೇ ಈಕೆಯನ್ನು ಹೋರಾಟಗಾರ್ತಿಯನ್ನಾಗಿ ರೂಪಿಸಿತೆ?ಆ ಹಿನ್ನೆಲೆಯಲ್ಲಿ ಈ ಕೃತಿಯನ್ನೋದುವಾಗ ಆಕೆಯ ವಿದೇಶಿ ಶಿಕ್ಷಣ, ತಾಯಿಯ ಪ್ರಭಾವ,ವಿದೇಶಿ ಪರಿಸರ ಸಾಕಷ್ಟು ಪ್ರಭಾವಿಸಿ ಅವಳನ್ನು ಒಬ್ಬ ಧೀರೆಯನ್ನಾಗಿ ರೂಪಿಸಿದ್ದವೆನ್ನುವುದನ್ನು ಕೃತಿಕಾರರು ಇನ್ನಷ್ಟು ವಿವರಗಳನ್ನು ದಾಖಲಿಸಬಹುದಿತ್ತೇನೊ ಅನಿಸಿತು.

ನಾಝಿಗಳ ಕ್ರೌರ್ಯ,ಯುದ್ಧ ಷಡ್ಯಂತ್ರಗಳು,ಯುದ್ಧಕಾಲದ ಭೀಬತ್ಸ ಇವನ್ನೆಲ್ಲ ಯುದ್ಧಭೂಮಿಕೆಯಲಿರುವಂತೆಯೇ ಬರೆದ ಮಂಡೆಕೋಲು ಅವರು  ಮನುಷ್ಯರನ್ನು ಕೊಲ್ಲಲೆಂದೇ ಕಟ್ಟಿದ ಕಾರ್ಖಾನೆಗಳ ನಾಡು ಎಂದು ಕರೆದಿರುವುದು ಸರಿ ಎನಿಸುತ್ತದೆ.

  ಕೃತಿಯು ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಚಾರಿತ್ರಿಕ ಪಠ್ಯವು ಆಗಿರುವುದು ಕೃತಿಕಾರನ ಜಾಣ್ಮೆಯನ್ನು ತೋರಿಸುತ್ತದೆ.

ಮಂಡೆಕೋಲ ಅವರು ೨೩ ತಲೆಬರಹಗಳನ್ನು ಕೊಟ್ಟು ಪ್ರತಿಯೊಂದೂ ನಮ್ಮೊಳಗೊಂದು ಚಂದದ ಒಳನೋಟಗಳನ್ನು ಗ್ರಹಿಸುವ ಮನೋಭೂಮಿಯನ್ನು ಸಿದ್ಧಗೊಳಿಸುತ್ತವೆ.ಚರಿತ್ರೆಯ ಅಧ್ಯಯನವಾದರೂ ಭಾಷಾ ಪ್ರಯೋಗ ಸೃಜನಶೀಲ ಲೇಖಕನಂತಿದೆ.ಕೆಲವು ಸಾಲುಗಳನ್ನು ಹೈಲೈಟರ್ ನಿಂದ ಮಾರ್ಕಿಸುತ್ತ ಓದಬೇಕೆನಿಸುತ್ತದೆ.

ಈ ತವರು ನೆಲದ ನೂರ್ ಟಿಪ್ಪುವಿನ ವಂಶಜಳೆಂದು ಗುರುತಿಸುವಷ್ಟೇ ಪ್ರಬಲವಾಗಿ ನೂರ್ ಳ ಅಜ್ಜ ಟಿಪ್ಪು ಎಂದು ಹೇಳಲೇಬೇಕಾದಷ್ಟು ಧೀರ ನೀರೆ ನೂರ್.ಯುದ್ಧಗಳೆಂದರೆ ಸಾಮ್ರಾಜ್ಯ ವಿಸ್ತರಣೆ ಮಾತ್ರವಲ್ಲ,ಧರ್ಮದ ಅಹಮ್ಮಿನ ಕೋಟೆಯನೆತ್ತರಿಸುವುದು ಮಾತ್ರವಲ್ಲ,ಅಸಾಧಾರಣ ಪ್ರತಿಭೆಗಳನ್ನು,ಅಸಾಮಾನ್ಯ ವ್ಯಕ್ತಿತ್ವಗಳನ್ನು,ಸಾಮಾನ್ಯರ ಬದುಕನ್ನು,ಒಂದರ್ಥದಲ್ಲಿ ಜನಾಂಗಗಳನ್ನೇ ಧ್ವಂಸಿಸಿ ಸಂಭ್ರಮಿಸುವ ಉನ್ಮಾದವೆಂದು ಅನಿಸುತ್ತದೆ.

ನೂರ್ ಕುರಿತಾಗಿ ಓದಲು ಇದೊಂದು ಸುಸಂದರ್ಭ.ಜೀವಾಣುಯುದ್ಧಗಳು ನಡೆಯಬಹುದಾದ ಸಾಧ್ಯತೆಯ ಶಂಕೆಗಳನ್ನು ತಳ್ಳಿ ಹಾಕುವಂತಿಲ್ಲವೆಂಬುದನ್ನರಿಯುತ್ತ ಸ್ವಾತಂತ್ರ್ಯದ ಮಹತ್ವ ಮತ್ತು ಹೋರಾಟದ ಧೀಶಕ್ತಿಗೆ ನೂರ್ ನಮಗೆ ಬೆಳಕ ದೀಪ ಹಿಡಿದು ನಿಂತಿದ್ದಾಳೆ.

ಡಾ.ರಹಮತ್ ತರೀಕೆರೆ ಅವರ ಅದ್ಭುತ ಮುನ್ನುಡಿಯಲ್ಲಿ ಹಲವು ಚಾರಿತ್ರಿಕ ವಿದ್ಯಮಾನಗಳನ್ನು ಜೋಡಿಸಿ ಕೊಟ್ಟಿದ್ದಾರೆ.ಬೆನ್ನುಡಿಯ ಕಿರು ಬರಹವಾಗಿ ಡಾ.ಪುರುಷೋತ್ತಮ ಬಿಳಿಮಲೆಯವರು ಚಂದದ ಬೆಳಕನ್ನು ರಾಷ್ಟ್ರೀಯ ಪ್ರಜ್ಞೆಯಲ್ಲಿ ಗ್ರಹಿಸಿಕೊಂಡು ಓದುವ ವರ್ತಮಾನದ ತಲ್ಲಣಗಳಿಗೆ ಎದೆಯೊಡ್ಡುವ ಬೆನ್ಬರಹವನ್ನು ಬರೆದಿದ್ದಾರೆ.ಒಟ್ಟಂದದಲಿ ಪ್ರತಿಯೊಬ್ಬರೂ ಓದವಂತಹ ಅಪರೂಪದ ಕೃತಿ.ಮಹಿಳೆಯರಂತೂ ಓದಲೇಬೇಕಾದ ಕೃತಿಯೆಂದರೆ ತಪ್ಪೆನಿಸದು.ಆದರೆ ಧೂಳು ಒರೆಸಿದ ಕನ್ನಡಕ ಧರಿಸಬೇಕಷ್ಟೆ.

ಇನ್ನು ಕೃತಿಕಾರರ ಕುರಿತಾಗಿ ನಾಲ್ಕು ವಿಚಾರಗಳು..

ಒಬ್ಬ ಜೀವಪರ ಮಾತ್ರ ಮನುಷ್ಯಪ್ರೇಮದ ಒಳಹೊಕ್ಕು ಸಂವೇದನೆಗಳನ್ನು ಸಂಯೋಜಿಸಿ ಕೃತಿ ರಚಿಸಬಲ್ಲ.ಕೃತಿಕಾರ ಈ ವಿಚಾರದಲ್ಲಿ ಅಭಿನಂದನಾರ್ಹ.

ಕೆಲವು ಸಾಲುಗಳಂತೂ ಕರುಳನ್ನು ತಟ್ಟುತ್ತವೆ.ಕಣ್ತೇವಗೊಳಿಸುತ್ತವೆ.ಗಂಟಲುಬ್ಬಿ ವಿಷಮಯಗೊಳಿಸಿ ಸಂಕಟಕ್ಕೆ ತಳ್ಳುತ್ತವೆ.ಇದು ನಾನು ಅನುಭವಿಸಿದ್ದು ..

ಜಾಗತಿಕ ಇತಿಹಾಸದ ನಾಯಕಿ ನೂರಳಿಗೆ ಬದುಕುಳಿದಿದ್ದರೆ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವ ಅದಮ್ಯ ಬಯಕೆ ಇತ್ತು.  ನೂರ್ ಕುರಿತು ಮಹತ್ವದ ದಾಖಲೆಗಳೊಡನೆ,ಶೋಧದ ಹಾದಿಯಲ್ಲಿ ಹಲವನ್ನು ಹೆಕ್ಕಿ,ಮಾಹಿತಿ ಸಂಗ್ರಹಿಸಿ ನಮ್ಮ ಮನಸ್ಸಿನಾಳಕ್ಕಿಳಿಯುವಂತೆ  ನಿಲುಕಿಸಿರುವುದು ಮಂಡೆಕೋಲು ಸರ್ ಭಾಷೆಯೊಳಗೊಂದು ಜೀವಂತಿಕೆ ಇದೆ ಎಂಬುದನ್ನು ತೋರಿಸುತ್ತದೆ.ಓದು ಮುಗಿಯುತ್ತ ಬಂದಂತೆಲ್ಲ ಕಣ್ಹನಿಗಳೊಡನೆ ಹೆಚ್ಚು ವಿನೀತ ಹಾಗೂ ಹೆಚ್ಚು ಮನುಷ್ಯಳನ್ನಾಗಿ ಮಾಡುವ ಕೃತಿಯೆಂದು ನಾನು ಅಂದುಕೊಂಡಿರುವೆ.

ಗೆಳೆಯ,ಗೆಳತಿಯರೆ ತುಂಬ ಚಂದದ ನಿರೂಪಣೆಯಿಂದ ಬಹಳಷ್ಟು ಸೂಕ್ಷ್ಮ ಅಧ್ಯಯನದೊಂದಿಗೆ ಹೆಣೆದುಕೊಂಡಿರುವ ಈ ಕೃತಿಯನ್ನು ನೀವೂ ಓದಬೇಕೆಂದು ಬಯಸುವೆ.

ಕೃತಿಕಾರನಿಗೊಂದು ಸಲಾಮ್..

**********

ದಾಕ್ಷಾಯಿಣಿ ವಿ.ಹುಡೇದ

Leave a Reply

Back To Top