ಬಸವ ಜಯಂತಿ ವಿಶೇಷ

ಮತ್ತೆ ಬರಲಿ ಬಸವನ ಬೆಳಕು

ಮಹಾದೇವಿ ಪಾಟೀಲ..

ಮತ್ತೆ ಬರಲಿ ಬಸವನ ಬೆಳಕು

ಓಂ ಶ್ರೀ ಗುರು ಬಸವ ಲಿಂಗಾಯ ನಮಃ

ದೇವರ ಸುಂದರವಾದ ಸೃಷ್ಟಿಯಲ್ಲಿ ಮಾನವ ಪ್ರಾಣಿ ಅತ್ಯದ್ಭುತವಾದಂತಹ ಕೊಡುಗೆ ಇಂತಹ ನರಜನ್ಮವನ್ನು ದಯಪಾಲಿಸಿದ ಆ ಪರಮಾತ್ಮನ ದಿವ್ಯ ಪಾದಗಳಿಗೆ ವಂದಿಸುತ್ತಾ ಹಾಗೂ ಸಕಲ ಜೀವರಾಶಿಗಳ ಬದುಕಿನಲ್ಲಿ ಜ್ಞಾನದ ಬೆಳಕನ್ನು ಮೂಡಿಸಿ ಅಂತರಂಗ ಅರಿಯುವಂತೆ ಆಶೀರ್ವದಿಸಿದ ಎಲ್ಲ ಶರಣರ ಅಡಿದಾವರಗಳಿಗೆ ಅತ್ಯಂತ ಭಕ್ತಿ ಪೂರ್ವಕ ಶರಣು ಶರಣಾರ್ಥಿಗಳು

ಬಸವಣ್ಣನ ನೆನೆದರೆ ಭವರೋಗ ಅಳಿಯುವುದು
ಮನವು ಮುಕ್ತಿಯನ್ನು ಹೊಂದುವುದು|| ಬಸವಣ್ಣ
ತನುವಿನಲ್ಲಿ ಭಕ್ತಿಯಂಕುರಿಸುವುದು.

       ಬಸವ ಎಂದರೆ ದಿವ್ಯ ಜ್ಯೋತಿ, ಬಸವ ಎಂದರೆ ಶಾಂತಿ, ಬಸವ ಎಂದರೆ ಸ್ಪೂರ್ತಿ, ಬಸವ ಎಂದರೆ ಭಕ್ತಿ ಬಸವ ಎಂದರೆ ಶಕ್ತಿ, ಬಸವ ಎಂದರೆ ಕಾಯಕ, ಬಸವಾ ಎಂದರೆ ಸತ್ಯ ಶುದ್ಧ ನಡೆನುಡಿ, ಬಸವ ಎಂದರೆ ದಾಸೋಹ ,ಬಸವ ಎಂದರೆ ಮತ್ತೇನು ಅಲ್ಲ ಸಂಪೂರ್ಣ ಶುದ್ಧ ವ್ಯಕ್ತಿತ್ವದ ಪ್ರತಿರೂಪ ಜಗದ ಜ್ಯೋತಿ,ಕ್ರಾಂತಿ ತೇಜ,  ಶರಣ ವಿಶ್ವದ ಅಣ್ಣ ಬಸವಣ್ಣನ ಜಯಂತಿಯ ಶುಭಾಶಯಗಳು.

      ೧೧೩೧ರಲ್ಲಿ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆಯರ ಮಗನಾಗಿ ಸಕಲ ಜೀವರಾಶಿಗಳನ್ನು ಉದ್ಧರಿಸಲೆಂದೆ ಸಾಕ್ಷಾತ್ ಪರಶಿವನ ಸ್ವರೂಪವಾಗಿ ಉದಿಸಿ ಬಂದ  ಮಹಾಪುರುಷ ಶ್ರೀ ಗುರು ಬಸವೇಶ್ವರರು.
          ಬಸವಣ್ಣನವರಿಗೆ  ಚಿಕ್ಕಂದಿನಿಂದಲೇ ಸೂಕ್ಷ್ಮ ಸಂವೇದನಾಶೀಲ ಬುದ್ಧಿಯ ಜೊತೆಗೆ ಅಗಾಧ ಪಾಂಡಿತ್ಯ ಹಾಗೂ ಜ್ಞಾಪಕ ಶಕ್ತಿಯು ಇತ್ತು. ಎಲ್ಲವನ್ನೂ ಕುತೂಹಲದಿಂದ ಪ್ರಶ್ನಿಸಿ ಉತ್ತರ ಕಂಡು ಹಿಡಿಯುವವರೆಗೂ ಸುಮ್ಮನಿರುತ್ತಿರಲಿಲ್ಲ. ಪ್ರತಿಯೊಂದು ವಿಷಯವನ್ನು ಕುರಿತು ತಾರ್ಕಿಕವಾಗಿ ಚಿಂತನೆ ನಡೆಸಿ ಹಲವಾರು ಆಯಾಮಗಳಲ್ಲಿ ಅದನ್ನು ಗಮನಿಸಿ ಪ್ರಶ್ನಿಸಿ ಅರ್ಥ ಮಾಡಿಕೊಳ್ಳುತ್ತಿದ್ದರು.. ಇದರಿಂದಾಗಿ ಅವರ ಎದುರು ನಡೆಯುತ್ತಿದ್ದ ಅಂಧ ಆಚರಣೆಗಳು ಮತ್ತು ಮೂಢನಂಬಿಕೆಗಳ ಬಗ್ಗೆ ಜನರಲ್ಲಿದ್ದ ಅಜ್ಞಾನವನ್ನ ತೊಲಗಿಸಿ ಮನೆಮನೆಗೂ ಹೋಗಿ ಅವರಿಗೆ ಅರ್ಥವಾಗುವ ರೀತಿಯಲ್ಲಿ ಮಧುರ ಮಾತುಗಳಿಂದ. ತಿಳಿಸಿ ಹೇಳಿ ಅವರಲ್ಲಿ ಬದಲಾವಣೆ ತಂದಂತಹ ಮಹಾಚೇತನ ಅಂದರೆ ಅದು ಅಣ್ಣ ಬಸವಣ್ಣನವರು.
           ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಜಾತಿ, ಮತ, ಗಂಡು ,ಹೆಣ್ಣು, ಬಡವ, ಶ್ರೀಮಂತ ,ಮೇಲು, ಕೀಳು, ಎಂಬ ಅಜ್ಞಾನವನ್ನು ತೊಲಗಿಸುವುದರ ಜೊತೆಗೆ ದೇವರ ಹೆಸರಿನಲ್ಲಿ ಮಾಡುತ್ತಿದ್ದ ಪ್ರಾಣಿ ಬಲಿ ಹಾಗೂ ದೇವದಾಸಿಪದ್ಧತಿಯಂತಹ ಅನಿಷ್ಟ ಆಚರಣೆಗಳನ್ನು ಬೇರು ಸಹಿತ ಕಿತ್ತೆಸೆಯಲು ಪ್ರಪ್ರಥಮವಾಗಿ ಕ್ರಾಂತಿ ಮಾಡಿದ ವೀರಪುರುಷ ಮಹಾತ್ಮ ಬಸವಣ್ಣನವರು.
          ಕಾಯಕವೇ ತಳಹದಿಯಾಗಿರುವ ಶಿಕ್ಷಣ ಕ್ರಮ ,ಶ್ರಮ ಜೀವನಕ್ಕೆ ಗೌರವ, ಆಧ್ಯಾತ್ಮಿಕತೆಯ ವಿಕಾಸ ,ನೈತಿಕ ಪ್ರಜ್ಞೆ ಇವುಗಳಿಂದ ಸಮಾಜದ ಮತ್ತು ದೇಶದ ಅಭಿವೃದ್ಧಿ ಸಾಧ್ಯ ಎಂದು ಮನಗಂಡಿದ್ದರು. ಅದಕ್ಕಾಗಿ ಕಾಯಕ ತತ್ವವನ್ನು ಅನುಸರಿಸಲು ಕರೆ ನೀಡಿದರು. ಶಿಕ್ಷಣದ ಮುಖ್ಯ ಗುರಿ ಸ್ವಾವಲಂಬಿ ಬದುಕಿನ ಜೊತೆಗೆ  ಅಂತರಂಗ ಶುದ್ದಿ ಎಂದು ಸಾರಿದರು. ಅವರ ಸಪ್ತ ಸೂತ್ರಗಳಾದ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.. ಈ ಏಳು ತತ್ವಗಳನ್ನು ಶಿಕ್ಷಣದಲ್ಲಿ ಮುಖ್ಯ ಗುರಿಗಳಾಗಿ ಬೋಧಿಸಿದರೆ ಅವರ ಅಂತರಂಗ ಬಹಿರಂಗ ಎರಡೂ ಶುದ್ಧಿಯಾಗುತ್ತವೆ..ಇದರಿಂದ ವ್ಯಕ್ತಿಯ  ವ್ಯಕ್ತಿತ್ವದ ವಿಕಸನವಾಗುವುದು ಎಂದರು

ಎಲ್ಲ ಬಲ್ಲಿದನಯ್ಯ ಕಲ್ಯಾಣ ಬಸವಣ್ಣ ಚೆಲ್ಲಿದನು ತಂದು ಶಿವ ಬೆಳಕ|| ಧರೆಯೊಳಗೆ
ಸೊಲ್ಲೆತ್ತಿ ಜನರು ಹಾಡುವರು..

      ‌  ಬಸವಣ್ಣ ಕೇವಲ ಒಂದು ಜಾತಿ  ಒಂದು ಧರ್ಮ ಅಥವಾ ಒಂದು ಜನಾಂಗಕ್ಕೆ ಸೀಮಿತನಾದ ವ್ಯಕ್ತಿಯಲ್ಲ..ಬಸವಣ್ಣ ಪ್ರತಿಯೊಬ್ಬ ಮಾನವ ಕುಲದ ಅಂತರಂಗದ ಶಕ್ತಿ ..

ಜಾತಿ ಬೇಧವಿಲ್ಲ,ಸೂತಕವಿಲ್ಲ,
ಅಜಾತಂಗೆ ಕುಲವಿಲ್ಲ ನುಡಿದಂತೆ ನಡೆಯದಿದ್ದಡೆ ಮೆಚ್ಚ ನಮ್ಮ ಕೂಡಲಸಂಗಯ್ಯ …ಎಂದು ಅಣ್ಣ ತನ್ನ ಹಲವಾರು ವಚನಗಳಲ್ಲಿ ಹೇಳಿದ್ದಾರೆ..

ಹೆಣ್ಣಿನ ಮುಟ್ಟು ಸೂತಕವಾದರೆ ಸೂತಕದಿಂದಲೇ ಹುಟ್ಟಿದ ಗಂಡಿಗೆ ಸೂತಕ ತಟ್ಟದೇ ?ಎಂದು ಪ್ರಶ್ನಿಸಿ ತನ್ನ ಅಕ್ಕ ನಾಗಮ್ಮನಿಗೂ ಜನಿವಾರ ಹಾಕಬೇಕೆಂದು ಹಠ ಹಿಡಿದು ಮನೆಯನ್ನೇ ಬಿಟ್ಟು ಬರುತ್ತಾರೆ..ಹೆಣ್ಣು ಗಂಡು ಎಂಬ ಬೇಧ ಭಾವ ಮಾಡಬಾರದೆಂದು ಎಲ್ಲರಿಗೂ ತಿಳಿಸಿ ಸ್ತ್ರೀ ಸ್ವಾತಂತ್ರ್ಯ ಹಾಗೂ ಸಮಾನತೆಗಾಗಿ ಕರೆ ಕೊಟ್ಟ ಧೀಮಂತ ಶರಣ ಅಣ್ಣ ಬಸವಣ್ಣ..

ಅಂದಿನಿಂದ ಇಂದಿನವರೆಗೂ ಬಸವ ಧರ್ಮದ ತತ್ವಗಳನ್ನು ಹಿಂದೂ, ಮುಸ್ಲಿಂ, ಬೌದ್ಧ, ಸಿಖ್ ,ಇಸಾಯಿ,ಜೈನ್, ದಲಿತ ಹೀಗೆ ಎಲ್ಲಾ ಜನಾಂಗದವರು ಒಪ್ಪಿಕೊಂಡು ತಮ್ಮ ಜೀವನದಲ್ಲಿ ಬಸವ ಧರ್ಮದ ಉದಾತ್ತ ವಿಚಾರಗಳನ್ನು ಅಳವಡಿಸಿಕೊಂಡು ತಮ್ಮ ಜೀವನವನ್ಮು ಪರಿವರ್ತನೆ ಮಾಡಿಕೊಳ್ಳುತ್ತಾ ಬಂದಿದ್ದಾರೆ..

ಬಸವನ ನೆನೆದರೆ ಬ್ಯಾಸರಿಕಿ ದೂರಾಯ್ತ
ಮನದಾಗಿನ ಚಿಂತಿ ಹಗುರಾಯ್ತ||ಬಸವಣ್ಣ
ಜಗದಾಗಿನ ದುಗುಡ ಕಳೆದೋಯ್ತ.

ಶರಣರು ಯಾವುದೇ ಜಾತಿಗೆ ಸೀಮಿತವಲ್ಲ.. ಎಲ್ಲಾ ಜಾತಿಗಳ, ಎಲ್ಲಾ ಧರ್ಮಗಳ ಮೂಲ ತತ್ವಗಳ ಸಾರ ಬಸವ ಧರ್ಮದ ತಿರುಳು.. ವಚನಗಳ ಮೂಲಕ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ವೈಚಾರಿಕತೆಯ ಆಳವನ್ನು ವಚನಗಳ ಮೂಲಕ ಶರಣ ಭಾಂದವರು ತಿಳಿಸಿದ್ದಾರೆ. ಕಲ್ಯಾಣವನ್ನು ಕೈಲಾಸ ಎಂದೇ ಕರೆದು ಅಲ್ಲಿ ಜಾತಿ ,ಧರ್ಮ, ಲಿಂಗಬೇಧಗಳಿಲ್ಲದೆ ಎಲ್ಲರೂ ಸೇರಿ ಶಿವಾನುಭವ ಘೋಷ್ಠಿ ನಡೆಸುತ್ತಿದ್ದರು. ಇದರ ಫಲವಾಗಿ 300ಕ್ಕೂ ಹೆಚ್ಚು ಜನ ಶರಣರು 33ಕ್ಕೂ ಹೆಚ್ಚು ಜನ ಶರಣಿಯರು ವಚನಗಳನ್ನು ರಚಿಸಿದರು.. ಅಲ್ಲದೇ ಬಸವಣ್ಣನವರು ಅಂತರ್ಜಾತಿಯ ವಿವಾಹಗಳನ್ನು ಮಾಡಿಸಿ “ಮದುವೆ ಮನಸ್ಸುಗಳಿಗೆ ಹೊರತು ದೇಹಗಳಿಗಲ್ಲ ಜಾತಿಗಳಿಗಲ್ಲ” ಎಂದು ಜಗತ್ತಿಗೆ ಸಾರಿ ಹೇಳಿದ್ದಾರೆ. ಅವರು 12ನೇ ಶತಮಾನದಲ್ಲಿ ಸಮಾನತೆಗಾಗಿ ಮಾಡಿದ ಇಂತಹ ಕ್ರಾಂತಿಕಾರಕ ವಿಚಾರಗಳು ಸನಾತನಿಗಳೆನಿಸಿಕೊಂಡವರ ನಿದ್ದೆಗೆಡಿಸಿ ಅವರನ್ನು ನೇರವಾಗಿ ಎದುರಿಸಲಾಗದೆ, ಧರ್ಮ ಬಾಹಿರ ಕೆಲಸ ಮಾಡುತ್ತಿದ್ದಾರೆ ಎಂಬ ಆಪಾದನೆ ಹೊರಿಸಿ ಶಿಕ್ಷಕೊಡುವಂತೆ ಅವರೆಲ್ಲ ರಾಜನಲ್ಲಿ ಒತ್ತಾಯಿಸುತ್ತಾರೆ.. ಇದರಿಂದ ಕಲ್ಯಾಣದಲ್ಲಿ ಕ್ಷೋಭೆ ಉಂಟಾಗಿ ಬಿಜ್ಜಳ ರಾಜನ ಹತ್ತೆಯಾಯಿತು. ಇದರ ಆರೋಪ ಶರಣರ ಮೇಲೆ ಬಂದು ಶರಣರೆಲ್ಲಾ ಚದುರಿ ಹೋದರು. ಬಸವಣ್ಣನವರು 1167 ರಲ್ಲಿ ಕೂಡಲಸಂಗಮನಲ್ಲಿ ಐಕ್ಯರಾದರು. ಅಕ್ಕ ನಾಗಮ್ಮ ಚನ್ನಬಸವಣ್ಣ ಮೊದಲಾದ ಶರಣರು ಉಳವಿಯ ಕಾಡಿನಲ್ಲಿ ಆಶ್ರಯ ಪಡೆದರು.‌..
ಹೀಗೆ ನಮ್ಮ ಸಮಾಜ ಯಾವುದೇ ಬದಲಾವಣೆಯನ್ನು ಬೇಗ ಒಪ್ಪಿಕೊಳ್ಳುವುದಿಲ್ಲ.. ಅದರಲ್ಲೂ ಒಳ್ಳೆಯ ಬದಲಾವಣೆಗಳನ್ನು ಸಹಜವಾಗಿ ಸ್ವೀಕರಿಸುವುದಿಲ್ಲ ..ಹಾಗೆಯೇ ಬದಲಾವಣೆಗೆ ಪ್ರಯತ್ನಿಸುವ ವ್ಯಕ್ತಿಗಳನ್ನು ಉಳಿಸುವುದಿಲ್ಲ.. ಎನ್ನುವುದಕ್ಕೆ ಬಸವಣ್ಣನವರು ಹಾಗೂ ಶಿವಶರಣರ ಬದುಕೇ ಸತ್ಯ ನಿದರ್ಶನ..ಆದರೆ ಅವರ ಅಂದಿನ ವಿಚಾರಗಳು ಅವರ ಬದುಕು ಇಂದಿಗೂ ಅನುಕರಣೀಯ ಹಾಗೂ ಎಂದಿಗೂ ಜೀವಂತ ಸೂತ್ರಗಳಾಗಿವೆ..
ಇಂದಿಗೂ ಬದಲಾಗದೇ ಇರುವ ಎಷ್ಟೋ ವಿಷಯಗಳು ಸಮಾಜವನ್ನು ಅಲ್ಲೋಲಕಲ್ಲೋಲ ಮಾಡಿದೆ. ಅದರಲ್ಲಿ ಮುಖ್ಯವಾಗಿ ಜಾತೀಯತೆ. ಇಂದು ಸರ್ಕಾರವೇ ಜಾತೀಯತೆಯನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತಿದೆ..ಧರಣಿಯಲ್ಲಿ ಮನುಷ್ಯ ಜಾತಿಯೊಂದೇ ಎಂದು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿರುವ ಮೂಢರು ಸಮಾನತೆಗಾಗಿ, ಶಾಂತಿಗಾಗಿ,ಎಲ್ಲ ಮನುಕುಲ ಒಂದೇ ಎಂಬ ಆದರ್ಶದಡಿ ಹೋರಾಡಿದ ಮಹಾಪುರುಷರನ್ನು ಜಾತಿ ಎಂಬ ಬಂಧನದಲ್ಲಿ ಬಂಧಿಸಿ…ಬುದ್ಧನನ್ನು ಬೌದ್ಧ ಧರ್ಮಕ್ಕೆ, ಮಹಾವೀರನನ್ನು ಜೈನ ಧರ್ಮಕ್ಕೆ, ಅಂಬೇಡ್ಕರರನ್ನು ದಲಿತರಿಗೆ, ಪೈಗಂಬರರನ್ನು ಮುಸ್ಲಿಂ ಧರ್ಮಕ್ಕೆ, ಏಸುಕ್ರಿಸ್ತನನ್ನು ಕ್ರೈಸ್ತ ಧರ್ಮಕ್ಕೆ,ಹಾಗೇ ಅಣ್ಣ ಬಸವಣ್ಣನನ್ನು ಲಿಂಗಾಯಿತರಿಗೆ ಎಂದು ಮೀಸಲು ಮಾಡಿ ತಪ್ಪು ದಾರಿ ತುಳೆಯುತ್ತಾ ಮಹಾನ್ ಪುರುಷರ ಹೆಸರಿನಲ್ಲಿ ಅವರ ಮೂಲ ಆಶಯಗಳನ್ನೇ ಬುಡಮೇಲು ಮಾಡುತ್ತಿದ್ದಾರೆ.ಅವರೆಲ್ಲರೂ ಯಾವುದೇ ಜಾತಿಗೋಸ್ಕರ ಹೋರಾಟ ಮಾಡಲಿಲ್ಲ ಶಾಂತಿ, ಅಹಿಂಸೆ ,ಸಮಾನತೆಗಾಗಿ ಬದುಕಿದವರು.. ದಿನ ಬೆಳಗಾದರೆ ಜಾತಿಗೊಂದು ಬೀದಿ, ಜಾತಿಗೊಂದು ಬಣ್ಣ, ಜಾತಿಗೊಬ್ಬ ವ್ಯಕ್ತಿ, ಜಾತಿಗೊಂದು ದೇವರು, ಎಂದು ಮಾಡಿಕೊಂಡು ಅಜ್ಞಾನಿಗಳಾಗಿ ಸಮಾಜದಲ್ಲಿ ಅಸಮಾನತೆಯ ಹಿಂಸಾತ್ಮಕ ವಾತಾವರಣ ಸೃಷ್ಟಿಸಿದ್ದಾರೆ..
ಇಂದು ಜಗತ್ತು 21ನೇ ಶತಮಾನದಿಂದ ಈಚೆಗೆ ನೋಡಿದಾಗ ಪ್ರತಿಯೊಬ್ಬರು ಸ್ವಹಿತಕ್ಕಾಗಿ ಪ್ರಗತಿ”ಎಂಬ ತತ್ವವನಾದರಿಸಿಯೇ ಬೆಳೆಯುತ್ತಿರುವುದು ಅತ್ಯಂತ ವಿಷಾದನೀಯ ಪರಿಸ್ಥಿತಿ. ಮನುಷ್ಯನ ಇಂತಹ ಒಂದು ಮನಸ್ಥಿತಿ ದೂರವಾಗಬೇಕಾದರೆ ಬಸವಣ್ಣ ಮತ್ತೆ ಎಲ್ಲರ ಮನೆಗಳಲ್ಲಿ ಉದಿಸಿ ಬರಬೇಕು. ಬಸವ ಧರ್ಮದ ತತ್ವಗಳು ವಿಶ್ವದಾದ್ಯಂತ ಮನೆ ಮಾತಾಗಬೇಕು . ಅಂದು ಇಂದು ಮುಂದು ಎಂದೆಂದಿಗೂ ಚಿರಸ್ಥಾಯಿಯಾಗಿರುವ ವಚನ ಸಾಹಿತ್ಯದ ಸಾರವನ್ನು ಎಲ್ಲರ ಮನಗಳಿಗೆ ನಾಟುವಂತೆ ತಿಳಿಸುವ ಕಾರ್ಯ ಮಾಡಬೇಕು.ಅಂದು ಬಸವಣ್ಣನವರು ಪ್ರತಿ ಮನೆ ಮನೆ ತೆರಳಿ ಬದಲಾವಣೆ ಮಾಡಿದಂತೆ ಇಂದು ಅವರ ಆಶಯಗಳನ್ನು ಬದುಕಿಸಲು ನಾವೆಲ್ಲ ಇನ್ನಷ್ಟು ಕ್ರಿಯಾಶೀಲರಾಗಿ ಮತ್ತೆ ಬಸವ ಕ್ರಾಂತಿ ಮಾಡಬೇಕಾಗಿದೆ.. ಪ್ರತಿಯೊಬ್ಬರು ಅವರವರ ಪಾಲಿನ ಕಾಯಕವನ್ನು ಸತ್ಯ ಶುದ್ಧವಾಗಿ ಮಾಡಿ ಎಲ್ಲಾ ಕ್ಷೇತ್ರದಲ್ಲಿಯೂ ಸಮಾನತೆಯನ್ನ ತರಬೇಕು ಎಂಬುದೇ ಬಸವ ಧರ್ಮದ ಮೂಲ ಆಶಯವಾಗಿದ್ದು ಇದು ಎಲ್ಲರೂ ಪ್ರಸ್ತುತ ಒಪ್ಪುವ ಹಾಗೂ ಎಂದೆಂದಿಗೂ ಒಪ್ಪಬೇಕಾದ ತತ್ವ..ಆದ್ದರಿಂದ ಈ ನಿಟ್ಟಿನಲ್ಲಿ ಎಲ್ಲರೂ ಕ್ರಿಯಾಶೀಲವಾಗಿ ದುಡಿಯೋಣ ..ಬಸವ ಧರ್ಮ ಮಾನವ ಧರ್ಮ ಎಂದು ಜಗಕ್ಕೆ ತೋರಿಸಿ ಅಣ್ಣ ಬಸವಣ್ಣನ ಕನಸುಗಳಿಗೆ ಮತ್ತೊಮ್ಮೆ ಜೀವ ತುಂಬಿ ನನಸು ಮಾಡೋಣ ಎಂದು ಹೇಳುತ್ತಾ..
ಸವ ಧರ್ಮಕ್ಕೆ ಜಯವಾಗಲಿ
ಬಸವ ಧರ್ಮ ಚಿರಾಯುವಾಗಲಿ.
ಬಸವನ ಬೆಳಕು ಮತ್ತಷ್ಟು ಪ್ರಖರವಾಗಲಿ

———————————–


‌‌‌‌‌‌‌‌

Leave a Reply

Back To Top