ಯಾದ್ ವಶೇಮ್
ನೇಮಿಚಂದ್ರ
ನಾ ಮೆಚ್ಚಿದ ಪುಸ್ತಕ, ಶ್ರೀಮತಿ ನೇಮಿಚಂದ್ರ ಅವರು ಬರೆದ ಯಾದ ವಶೇಮ್’. ಈ ಪುಸ್ತಕ ಕನ್ನಡ ಸಾಪ್ತಾಹಿಕದಲ್ಲಿ ಧಾರಾವಾಹಿಯಾಗಿ ಬಂದಾಗ ಇದರ ಹೆಸರು ‘ನೂರು ಸಾವಿರ ಸಾವಿನ ನೆನಪು’ ಆಗಿತ್ತು. ಹಿಟ್ಲರನ ರಕ್ತದಾಹದ, ಅಶಾಂತಿಯ ನೆಲದಿಂದ ಗಾಂಧಿಯ ಅಹಿಂಸೆಯ ನೆಲಕ್ಕೆ ರಕ್ಷಣೆ ಮತ್ತು ಶಾಂತಿಯನ್ನು ಅರಸಿ ಬಂದ ಪುಟ್ಟ ಯಹೂದಿ ಬಾಲೆಯ ನೈಜ ಕತೆಯಿದು. ನಾನು ಈ ಪುಸ್ತಕವನ್ನು ಮೆಚ್ಚಿಕೊಳ್ಳಲು ಮೂಲ ಕಾರಣ ಕೆಳಗೆ ಬರೆದ ಐದು ಅಂಶಗಳು. ಇವು ಯಾವುದೇ ಶ್ರೇಷ್ಠ ಸಾಹಿತ್ಯ ರಚನೆಗೆ ಬೇಕಾದ ಅವಶ್ಯಕ ಅಂಶಗಳು ಕೂಡ.
೧. ದೃಷ್ಯೀಕರಣ : ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ಬರೆಯುವುದು. ಬೆಂಗಳೂರಿನ ಗೋರಿಪಾಳ್ಯದ ಸ್ಮಶಾನದಿಂದ ಹೊರಟು ಜರ್ಮನಿ, ಇಂಗ್ಲೆಂಡ್, ಅಮೇರಿಕಾ ಕೊನೆಗೆ ಇಸ್ರೇಲ್ ಮುಟ್ಟಿದ ನಿರಂತರ ಪ್ರವಾಸ, ಅಧ್ಯಯನ ಮತ್ತು ಆ ಕಾಲದ ಆಗುಹೋಗುಗಳ, ರಣಘಟನೆಗಳ ಸಂಶೋಧನೆಗಳನ್ನು ಎದುರಿಗೆ ತೋರಿಸುವಂತೆ ಬರೆದದ್ದು, ಚಿತ್ತದಲ್ಲಿ ಕೊರೆದು ಮನಸ್ಸಿನಲ್ಲಿ ಉಳಿಯುತ್ತದೆ. ನಾನೂ ಕೂಡ ಲೇಖಕಿಯ ಜೊತೆಗೆ ಪ್ರಯಾಣಿಸಿದ್ದೆನೇನೋ ಅನ್ನುವ ಭ್ರಾಂತಿ ಉಂಟಾಗುವಂತೆ ಬರೆದ ಅದ್ಭುತ ಶೈಲಿ.
೨. ಭಾವನೆಗಳನ್ನು ತಟ್ಟುವುದು : ಯಾದ್ ವಶೇಮ್ ಓದುವಾಗ, ಯಹೂದಿ ಬಾಲಿಕೆ ಮತ್ತವಳ ತಂದೆಯನ್ನು ಬೆನ್ನಟ್ಟಿದ ನಾಜಿಗಳ ದುಷ್ಕ್ರತ್ಯ, ಕ್ರೂರತೆ, ಹಿಂಸೆ ಹೃದಯವನ್ನು ಹಿಂಡಿಬಿಡುತ್ತದೆ. ಹೆದರಿಕೆ, ಸಂಕಟ ತಂತಾನೇ ಉಂಟಾಗಿ ಒಂದು ರೀತಿಯ ಆರ್ದ ಭಾವ ಮನದಲ್ಲಿ ಸ್ರವಿಸಿ ಕರುಣಾರಸ ಗೊತ್ತಾಗದೇ ಹರಿಯತೊಡಗುತ್ತದೆ. ಗುರಿ ತಲುಪಿ ತನ್ನವರನ್ನು ಹುಡುಕಿ ತೆಗೆದು ಶತಮಾನದಿಂದ ದೂರಾಗಿದ್ದ ಹೃದಯ ಒಂದಾದಾಗ ನಾಯಿಕೆಯ ಮತ್ತು ಲೇಖಕಿಯ ಕನಸು ನೆನಸಾಗುತ್ತದೆ. ಅವರಿಗಾದಷ್ಟೇ ಸಂತೋಷ, ಆತ್ಮತೃಪ್ತಿ ಓದುಗರೂ ಅನುಭವಿಸುತ್ತಾರೆ. ದುಃಖ ಕೊಡವಿ ಮೇಲೆದ್ದಂತೆ ಮನ ಹಗುರಾಗುತ್ತದೆ.
೩. ಭವಿಷ್ಯದ ಚಿಂತನೆ : ಯಾದ ವಶೇಮ್ ಗತಕಾಲವನ್ನು ಹೇಳುವದರೊಂದಿಗೆ ಭವಿಷ್ಯದ ಚಿಂತನೆ ಮಾಡುತ್ತದೆ. ಲೇಖಕಿಯೇ ಬರೆದಂತೆ “ಅಂದು ಹೊತ್ತಿ ಉರಿಯುತ್ತಿತ್ತು ಜರ್ಮನಿ. ನಿಂತು ನೋಡಿತ್ತು ಜಗತ್ತು. ಇಂದು ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಲ್ಲ, ಅಮೇರಿಕೆಯಲ್ಲಿ, ಇಸ್ರೇಲದಲ್ಲಿ, ಯುರೋಪದಲ್ಲಿ. ‘ಅಹಿಂಸೆಯೇ ಪರಮ ಧರ್ಮ’ ಎಂದು ಜಗತ್ತಿಗೆ ಸಾರಿದ ಭಾರತದಲ್ಲೂ ಕೂಡ. ನಮ್ಮ ನಡುವೆ ಎಲ್ಲಿ ಬೇಕಾದರೂ ಹುಟ್ಟಿ ಬಿಡಬಲ್ಲದು ಈ ಪೈಶಾಚಿಕ ಮನೋಭಾವದ ಉಗ್ರತಾಂಡವ. ನಮ್ಮೊಳಗೇ ಜನಿಸಿಬಿಡಬಲ್ಲ ಹಿಟ್ಲರ್ ನನ್ನು ತಡೆಹಿಡಿಯುವ ಹೊಣೆ ನಮ್ಮದು”. ಮನುಷ್ಯನ ಪಾಶವೀ ಕೃತ್ಯದ ಬಗೆಗೆ ಈ ಮಾತು ನೇಮಿಚಂದ್ರರ ಹೃದಯದಿಂದ ಬಂದದ್ದು. ಈಗ ನಡೆಯುತ್ತಿರುವ ವಿದ್ಯಮಾನಗಳಿಗೆ ಈ ಪುಸ್ತಕ ಕನ್ನಡಿಯಾಗಬಲ್ಲದು.
೪. ಸಮಾಜಕ್ಕೆ ಹಿಡಿದ ಕನ್ನಡಿ : ಸೋಲನ್ನು ಸವಾಲಾಗಿ ಸ್ವೀಕರಿಸಿ ಹೋರಾಡುವದರ ಬಗೆಗೆ, ಗುರಿಯನ್ನು ಮುಟ್ಟುವದರ ಬಗೆಗೆ ಈ ಕೃತಿ ಆದರ್ಶಪ್ರಾಯ. ಓದುಗರಿಗೆ ಅನುಸರಿಸುವ ಹಂಬಲ, ಆತ್ಮವಿಶ್ವಾಸ ಮತ್ತು ಧೈರ್ಯ ತುಂಬುತ್ತದೆ. ಸಮಾಜದಲ್ಲ ನಡೆಯುವ ವಿದ್ಯಮಾನಗಳನ್ನು ಮುಲಾಜಿಲ್ಲದೆ ಚರ್ಚಿಸುವ ಧೈರ್ಯವನ್ನು ತೋರುತ್ತದೆ ಈ ಪುಸ್ತಕ.
೫. ಬರೆಯುವ ಶೈಲಿ ಮತ್ತು ಭಾಷೆ : ಉಪಯೋಗಿಸಿದ ಶಬ್ದಗಳು ಅತೀ ಸೂಕ್ತವಾದುವು. ಸಮಾನಾರ್ಥದ ಇಷ್ಟು ಸರಿಯಾದ ಇನ್ನೊಂದು ಪರ್ಯಾಯ ನುಡಿ ಇರಲಿಕ್ಕಿಲ್ಲ ಎನ್ನುವ ಭಾವನೆ ಬರುತ್ತದೆ. ಉದಾಹರಣೆಗೆ ಕೆಟ್ಟ ಸಂಬಂಧದ ಬಗೆಗೆ ಹೀಗೆ ಬರೆದಿದ್ದಾರೆ, ” ನನ್ನ ಅವನ ನಡುವೆ ಸಪ್ತಸಾಗರದ ಉಪ್ಪಿತ್ತು” ಅಂತ. ಎಷ್ಟೊಂದು ಆಳವಾದ ಅರ್ಥ. ಗಹನ ಅಧ್ಯಯನ, ಸಂಶೋಧನೆಗಳಿಂದ ಮಾತ್ರ ಇಂಥ ಕೃತಿ ರಚಿಸಲು ಸಾಧ್ಯ ಅಲ್ಲದೆ ಹೃದಯದ ಉಕ್ಕು ಭಾವನೆಗಳಲ್ಲಿ ಎದ್ದಿ ತೆಗೆದ ಭಾಷೆ ಉಪಯೋಗಿಸಿದಾಗ ಹೊರಬಂದ ಪುಸ್ತಕ ಯಾದ ವಶೇಮ್.
ಬೆಂಗಳೂರಿನಲ್ಲಿ ಆಶ್ರಯ ಪಡೆದಿರುವ ಕಥಾನಾಯಕಿ ಕೊನೆಗೆ ಇಸ್ರೇಲದಲ್ಲಿ ತನ್ನ ಅಕ್ಕನನ್ನು ಹುಡುಕುವ ಪ್ರಯತ್ನದಲ್ಲಿ ಯಶ ಕಾಣುತ್ತಾಳೆ. ಆದರೆ ತಾಯಿ ಮತ್ತು ತಮ್ಮ ಹಿಟ್ಲರ್ ಸೃಷ್ಟಿಸಿದ ನರಕದಲ್ಲಿ ಅಂತ್ಯ ಕಂಡಿರುತ್ತಾರೆ. ಅವರು ಅನುಭವಿಸಿದ ನರಕಯಾತನೆಯಷ್ಟೇ ನಾಯಕಿಗೆ ಲಭ್ಯ. ಒಟ್ಟಿನಲ್ಲಿ ಕರುಳ ಕಲಕುವ ಇತಿಹಾಸ ಮಾನವ ನಿರ್ಮಿತ. ಅದು ಎಂದೂ ಭವಿಷ್ಯದಲ್ಲಿ ಪುನರಾವರ್ತನೆ ಆಗಬಾರದೆಂದು ಎಲ್ಲರ ಆಶಯ.
*******
ವಿನುತಾ ಹಂಚಿನಮನಿ