ಪ್ರಶ್ನೆಗೆ ಸಿಗದ ಉತ್ತರ -ಕವನ ಸಂಕಲನ ಅವಲೋಕನ

ಪುಸ್ತಕ ಸಂಗಾತಿ

ಪ್ರಭಾ ಬೋರಗಾಂವಕರ ಸಂಕಲನ

ಪ್ರಶ್ನೆಗೆ ಸಿಗದ ಉತ್ತರ

ಪುಸ್ತಕಾವಲೋಕನ
ಪ್ರಶ್ನೆಗೆ ಸಿಗದ ಉತ್ತರ. ಕವನ ಸಂಕಲನ
ಕವಯತ್ರಿ : ಶ್ರೀಮತಿ ಪ್ರಭಾ ಬೋರಗಾಂವಕರ.
ಪ್ರಕಾಶನ: ಹೆಚ್ ಎಸ್ ಆರ್ ಎ ಪ್ರಕಾಶನ ಬೆಂಗಳೂರು.

ಕರೋನ ಹಲವರಿಗೆ ಕೆಡಕುಂಟು ಮಾಡಿದರೆ ಕೆಲವರಿಗೆ ಒಳಿತನ್ನು ಮಾಡಿದೆ ಎಂದರೆ ಆಶ್ಚರ್ಯ ಎನಿಸುತ್ತದೆ ಲಾಕ್ಡೌನ್ ನಂತಹ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆ ಮಾಡಿ ತಮ್ಮ ಮನದ ಭಾವನೆಗಳಿಗೆ ಅಕ್ಷರದ ರೂಪವನ್ನು ನೀಡಿದವರು ಇದ್ದಾರೆ. ಹೀಗೆ ಕರೋನ ಕಾಲಘಟ್ಟದಲ್ಲಿ ಸಮಯವನ್ನು ಸದುಪಯೋಗಪಡಿಸಿಕೊಂಡರು ಸ್ನೇಹಿತೆ ಶ್ರೀಮತಿ ಪ್ರಭಾ ಬೋರಗಾಂವಕರವರು. ಕನ್ನಡ ಮಹಿಳಾ ಸಾಹಿತ್ಯ ಲೋಕದಲ್ಲಿ ಅದರಲ್ಲೂ ಅನುವಾದ ಸಾಹಿತ್ಯದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಶ್ರೀಮತಿ ಪ್ರಭಾ ಬೋರಗಾಂವಕರವರ ಪ್ರಶ್ನೆಗೆ ಸಿಗದ ಉತ್ತರ ಎಂಬ ಕವನ ಸಂಕಲನ ಅವರ ದ್ವಿತೀಯ ಕವನ ಸಂಕಲನ. ಅವರು ಈಗಾಗಲೆ ರಮಾಬಾಯಿ ಅಂಬೇಡ್ಕರ, ಕರ್ಮವೀರ ಬಾವುರಾವ್ ಪಾಟೀಲ, ಅಹಿಲ್ಯಾಬಾಯಿ ಹೊಳ್ಕರ ಅವರ ಕುರಿತ ಅನುವಾದ ಕೃತಿಗಳನ್ನು ಹೊರತಂದಿದ್ದಾರೆ. ‘ನಿನ್ನೊಲವೊಂದೆ ಸಾಕೆಂದು’ ಎಂಬುದು ಅವರ ಮೊದಲ ಕವನಸಂಕಲನ ಆಗಿದೆ.
‘ಪ್ರಸ್ತುತ ಪ್ರಶ್ನೆಗೆ ಸಿಗದ ಉತ್ತರ’ ಕವನ ಸಂಕಲನದಲ್ಲಿ 74 ಕವನಗಳಿವೆ. ಇಲ್ಲಿನ ಕವನಗಳನ್ನು ಓದಿದಾಗ ಅದರಲ್ಲೂ ‘ಪ್ರಶ್ನೆಗೆ ಸಿಗದ ಉತ್ತರ ‘ಎಂಬ ಕವನ ಸಂಕಲನದ ಶೀರ್ಷಿಕೆ ಕವನ ಸಂಕಲನದ ಮೊದಲ ಕವನವಾಗಿದೆ .ಒಂದು ಸೀತೆ ದ್ರೌಪದಿ ಅಹಲ್ಯ ರೇಣುಕೆ ಊರ್ಮಿಳೇ ಗಾಂಧಾರಿ ಯಶೋಧೆ ಮಹಾದೇವಿ ಶೂರ್ಪಣಕಿ ಹಾಗೂ ತಲಸಮುದಾಯದ ಅನೇಕ ಶೋಷಿತ ಮಹಿಳೆಯರ ಸಂಘರ್ಷದ ಜೀವನವನ್ನು ನೆನಪಿಸಿಕೊಳ್ಳುವ ಕವಿಯತ್ರಿ ಇಂದಿಗೂ ನೋವನ್ನ ಅನುಭವಿಸುವ ಮಹಿಳೆಯರ ಬದುಕು ಪ್ರಶ್ನೆಯಾಗಿ ಕಾಡಿದೆ. ಆ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಎಂಬ ನೋವು ಈ ಕವಿತೆಯಲ್ಲಿದೆ. ಇದು ಕವಯತ್ರಿ ನಿರಂತರ ಉತ್ತರ ಹುಡುಕಾಟದಲ್ಲಿ ಇದ್ದಾರೆ ಎಂದು ಸೂಚಿಸುತ್ತದೆ. ಕರೋನಾ ಸೃಷ್ಟಿಸಿದ ಸಾವಿನ ಜಗತ್ತನ್ನು ಮರಣ ಮೃದಂಗ ಎಂಬ ಕವನದಲ್ಲಿ ಸೆರೆಹಿಡಿದಿದ್ದಾರೆ ಕರೋನಾ ಲಾಕ್ ಡೌನ್ ಯಾವ ರೀತಿ ಸಂಬಂಧಗಳಿಗೆ ಬರೆ ಎಳೆಯಿತು ಎಂಬುದನ್ನು ತಮ್ಮ ಕವನದ ಸಾಲುಗಳಲ್ಲಿ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜಗತ್ತಿಗೆ ಶಾಂತಿ ಸಮಾಧಾನ ಮಂತ್ರವ ಬೋಧಿಸಿದ ಕಪಿಲ ವಸ್ತುವಿನ ರಾಜಕುಮಾರ ಮಹಾಯೋಗಿ ಬುದ್ಧನಾದದ್ದು ಅದೊಂದು ಹೋರಾಟದ ಪಯಣ. ಆ ಗೌತಮ ಬುದ್ಧರ ಬದುಕಿನ ಪಯಣದ ಚಿತ್ರಣ ‘ಮಹಾಯೋಗಿ ಬುದ್ಧ ‘ಎಂಬ ಕವನದಲ್ಲಿದೆ. ಕನ್ನಡ ನಾಡಿನ ಮಕ್ಕಳಿಗೆ ಕನ್ನಡ ತಾಯಿಯ ಆಸರೆ, ಕನ್ನಡ ಭಾಷೆಯ ಉಳಿವು, ಕನ್ನಡ ತಾಯಿಯ ಹಿರಿಮೆ ಗರಿಮೆಗಳನ್ನು ನೆನಪಿಸಿಕೊಳ್ಳುವುದೇ ಜೀವನದಲ್ಲಿ ಬಹು ಮುಖ್ಯ ಸಂಗತಿ ಎಂಬುದು ‘ಮೊಳಗಲಿ ಕನ್ನಡ ಕಹಳೆ’ ಎಂಬ ಕವನದಲ್ಲಿ  ಹಾಗೂ ‘ಕನ್ನಡಾಂಬೆ ನಿನ್ನ ಚರಣದಾಸರು ನಾವು’ ಎಂಬ ಕವನದಲ್ಲಿ ಮೂಡಿ ಬಂದಿದೆ. ದೇಶ ಕಾಯುವ ಯೋಧರ ಕುರಿತ ಹೆಮ್ಮೆಯ ಮಾತುಗಳನ್ನು ಸಾರುವ ಕವನ ‘ಅರಿಯದೇ ಮನ ಆರಾಧಿಸಿದೆ’ ಎಂಬುದಾಗಿದೆ. ‘ಪುಲ್ವಾಮಾ’ ಎಂಬ ಕವನವು ಅಂದು ಗಡಿರಕ್ಷಣೆಯಲ್ಲಿ ಹಗಲಿರುಳು ದುಡಿದು ಪ್ರಾಣ ಕೊಟ್ಟು ನಮ್ಮನ್ನ ಕಾಪಾಡಿದ,ಪುಲ್ವಾಮಾ ದಾಳಿಗೆ ನಡುರಸ್ತೆಯಲ್ಲಿ ನೆತ್ತರು ಸುರಿಸಿದ ಧೀರ ರಕ್ಷಕರ ಸಾರ್ಥಕ ಬದುಕಿನ ಚಿತ್ರಣವಿದೆ.
ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆಯವರ ಹೋರಾಟದ ಜೀವನದ ಕುರಿತಾದ ಕವನ ‘ಸಾವಿತ್ರಿ’ ಬಿ ಆರ್ ಅಂಬೇಡ್ಕರ್ ಅವರ ಜೀವನದಲ್ಲಿ ಬೆನ್ನೆಲುಬಾಗಿ ನಿಂತ ಶ್ರೀಮತಿ ರಮಾಬಾಯಿ ಅಂಬೇಡ್ಕರರ ಕುರಿತಾದ ‘ರಮಾಬಾಯಿ’ ಕವನ ಮನಮುಟ್ಟುವಂತಿವೆ.
ನಾಡಿನ ಖ್ಯಾತ ಸಂಶೋಧಕರಾದ ಡಾ. ಎಂ ಎಂ ಕಲಬುರ್ಗಿಯವರ ಹತ್ಯೆಇಡೀ ನಾಡೆ ತಲ್ಲಣ ಗೊಳಿಸಿತ್ತು. ಇನ್ನು ಅವರ ಶಿಷ್ಯಂದಿರ ಪಾಡು ಹೇಗಾಗಿರಬೇಡ ? ಹೀಗೆ ‘ಮಹಾಮಾರ್ಗ’ ರಚಿಸಿದ ಕಲ್ಬುರ್ಗಿಯವರ ಸ್ಮರಣೆಯಲ್ಲಿ ಅದೇ ಶಿರ್ಷಿಕೆಯ ಕವಿತೆ ನಮ್ಮನ್ನು ಮೂಕರನ್ನಾಗಿಸುತ್ತದೆ. “ಬಸವ ತತ್ವ ಪಥದಿ ನಡೆದು ಆದರ್ಶರಾಜಮಾರ್ಗವಾಗಿದೆ ನಮ್ಮನ್ನು ಆ ದಿಶೆಯಲ್ಲಿ ಸಾಗಲು ಸನ್ಮಾರ್ಗ ತೋರಿದಿರಿ ಕಂದಾಚಾರ ಮೌಢ್ಯತೆ ಅಳಿಸಿ ವೈಚಾರಿಕತೆ ಬೋಧಿಸಿದಿರಿ ಮಾತು ಕೃತಿಗಳೆರಡರಲ್ಲೂ ಭೇದವೆನಿಸದೆ ಬಾಳಿದಿರಿ.” ಬಸವ ತತ್ವವನ್ನೇ ಉಸಿರಾಗಿಸಿಕೊಂಡ, ಶರಣ ಸಂಶೋಧನೆಯನ್ನೇ ಧ್ಯೆಯವಾಗಿಸಿಕೊಂಡ ಕಲ್ಬುರ್ಗಿಯವರಿಗೆ ಏಕೆ ಇಂಥ ಸಾವು ?ಎಂಬ ಪ್ರಶ್ನೆಗೂ ಉತ್ತರ ಇನ್ನೂ ಸಿಕ್ಕಿಲ್ಲ. ಮಗಳಿಗೆ ಮೊದಲ ಹೀರೋ ಅಪ್ಪ ನೆಂದರೆ ಮಗಳಿಗೆ ಎಲ್ಲಿಲ್ಲದ ಪ್ರೀತಿ. ‘ಅಪ್ಪ ಅಂದ್ರೆ ಆಕಾಶ ‘ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಕವನ ಪ್ರತಿಯೊಬ್ಬ ಮಗಳು ತನ್ನ ಜೀವನದಲ್ಲಿ ತಂದೆಯ ಪಾತ್ರವನ್ನು ಸ್ಮರಿಸಿಕೊಳ್ಳುವಂತೆ ಮಾಡುತ್ತದೆ. ಜೀವನ ಒಂದು ನಾಟಕ ರಂಗ ನಾವೆಲ್ಲರೂ ಪಾತ್ರಧಾರಿಗಳು ಆತನೇ ಸೂತ್ರಧಾರ ಎನ್ನುವ ಮಾತಿನಂತೆ ಕೌಟುಂಬಿಕ ಸಂಸಾರಿಕ ದಾಂಪತ್ಯ ಪಯಣದ ಕವನಗಳು ಇಲ್ಲಿವೆ. ಪ್ರೀತಿ ಪ್ರೇಮ ಪ್ರಣಯ ಮಾನವ ಬದುಕಿನ ಅವಿಭಾಜ್ಯ ಅಂಗಗಳು ಎನ್ನುವುದಕ್ಕೆ “ನಿನ್ನ ಬಟ್ಟಲಕಂಗಳ ಕಾಂತಿಯ ಚೆಲುವಲಿ ನನ್ನ ಪ್ರತಿಬಿಂಬ ಕಂಡು ನಸುನಕ್ಕು ನಾಚಿ ಎನ್ನ ಬರ ಸೆಳೆದು ನಿನ್ನದೆಗೆ ಒತ್ತಿಕೊಳ್ಳಲು ನೆಟ್ಟ ದೃಷ್ಟಿಯಲ್ಲಿ ಅರಳಿದೆ ನಿನ್ನೊಲೊವು” ‘ ಒಲವಿನ ಪಯಣ’ ಎಂಬ ಕವನದ ಸಾಲುಗಳು ಸಾಲುಗಳೇ ಸಾಕ್ಷಿ. ಒಟ್ಟಾರೆ ಇಲ್ಲಿನ ಕವನಗಳು ವಿಭಿನ್ನ ವಿಷಯಗಳ ಮೇಲೆ ರಚನೆಯಾಗಿವೆ. ಎಲ್ಲ ಕವನಗಳ ಕುರಿತು ಹೇಳ ಹೊರಟರೆ ಓದುಗರಿಗೆ ಏನು ಉಳಿಸಿದಂತಾಗುವುದಿಲ್ಲ ಹೀಗಾಗಿ ತಾವು ಓದಿ ಆನಂದಿಸಿ ಎಂದು ಹೇಳುತ್ತಾ, ಹೀಗೆ ಇಲ್ಲಿನ ಕವನಗಳು ನಮ್ಮಲ್ಲಿ ಓದುವ ಕುತೂಹಲವನ್ನ ಮೂಡಿಸುತ್ತದೆ ಕವನ ಸಂಕಲನ ಹತ್ತರಲ್ಲಿ ಹನ್ನೊಂದಾಗದೆ ವಿಶಿಷ್ಟವಾದ ಕವನ ಸಂಕಲನವಾಗಿದೆ. ಇದೇ ಫೆಬ್ರವರಿಯಲ್ಲಿ ಸಂಗನಬಸವ ಮಠ ಸವದಿ ಯಲ್ಲಿ ಪೂಜ್ಯ ಶ್ತೀಗುರು ಮಹಾಂತ ಸ್ವಾಮೀಜಿ ಇಳಕಲ್ ಸವದಿ ಪೂಜ್ಯರ ಅಮೃತ ಹಸ್ತದಿಂದ ಬಿಡುಗಡೆಗೊಂಡ ಕೃತಿ ಡಾ ಸುಭಾಷ್ ರಾಜಮನೆಯವರ ಮುನ್ನುಡಿಯೊಂದಿಗೆ ಸಾಹಿತ್ಯ ಲೋಕಕ್ಕೆ ಅರ್ಪಿತವಾಗಿದೆ.

———————————–


     ಡಾ. ಪ್ರಿಯಂವದಾ ಮ ಹುಲಗಬಾಳಿ

One thought on “ಪ್ರಶ್ನೆಗೆ ಸಿಗದ ಉತ್ತರ -ಕವನ ಸಂಕಲನ ಅವಲೋಕನ

  1. ನಲ್ಮೆಯ ಸ್ನೇಹಿತೆ ಡಾ ಪ್ರಿಯಾ ಹುಲಗಬಾಳಿ ಅವರು ನನ್ನ ಕವನ ಸಂಕಲನ ಕುರಿತು ಬಹಳ ಅರ್ಥಪೂರ್ಣವಾಗಿ ವಿಮರ್ಶೆ ಮಾಡಿ ಆ ಕೃತಿಗೆ ಒಂದು ಮೌಲ್ಯವನ್ನು ನೀಡಿದ್ದಾರೆ.ಹೃತ್ಪೂರ್ವಕ ಧನ್ಯವಾದಗಳು ಪ್ರಿಯಾ

Leave a Reply

Back To Top