ಹೆಣ್ಣಿಗೆ ಪ್ರೀತಿಯೇ ಭೀತಿ-ಮಹಾದೇವಿ ಪಾಟೀಲರವರಿಂದ

ವಿಶೇಷ ಲೇಖನ

ಮಹಾದೇವಿ ಪಾಟೀಲ

ಹೆಣ್ಣಿಗೆ ಪ್ರೀತಿಯೇ ಭೀತಿ

ಸ್ನೇಹಿತರೇ,!!! ಒಂದು ಹೆಣ್ಣು ಇತರರು ತನ್ನನ್ನು ಪ್ರೀತಿಸಬೇಕೆಂದು ಏನೆಲ್ಲಾ ಕಷ್ಟ ಪಡುತ್ತಾಳೆ!!ತನ್ನ ಜೀವನದ ಪ್ರತೀ ಹಂತದಲ್ಲೂ ಕೇವಲ ಪ್ರೀತಿಗಾಗಿ ಎಲ್ಲರಿಗೂ ಎಷ್ಟು ಋಣಿಯಾಗಿರ್ತಾಳೆ.. ಅವಳಿಗೆ ಎಲ್ಲ ರೀತಿಯಲ್ಲಿ ಬದುಕಲು ಶಕ್ತಿ ಇದ್ದರೂ ಕೂಡಾ ಅವಳು ಪ್ರೀತಿಯಿಲ್ಲದೇ ಒಂಟಿಯಾಗಿ ಇರಲಾರಳು.. ಈ ಕೇವಲ ಒಂದು ಹಿಡಿ ಪ್ರೀತಿಗಾಗಿ ಅವಳು ಕೊನೆವರೆಗೂ ಎಷ್ಟೆಲ್ಲ. ಪಾತ್ರಗಳೊಡನೆ ಪರದಾಡಬೇಕಲ್ಲವೇ??ಆಶ್ಚರ್ಯವೆನಿಸಿದರೂ ಇದು ನಿಜ ಹಾಗೂ ತಾರ್ಕಿಕವಾಗಿ ಚಿಂತನೆ ಮಾಡಬೇಕಾದ ವಿಷಯ..
ಸ್ನೇಹಿತರೇ…. ಹೆಣ್ಣು ಎಂದರೆ ಪ್ರೀತಿ ಆ ಪ್ರೀತಿಗೆ ಪ್ರತಿಯಾಗಿ ಇತರರ ಪ್ರೀತಿ ಸಿಗದೇ ಹೋದರೆ ಅವಳು ಸಹಜವಾಗಿ ಬದುಕಲಾರಳು…ಬದುಕಿದರೂ ಜೀವಂತ ಶವದಂತ ಬದುಕಷ್ಟೇ….
ಬಾಲ್ಯದಲ್ಲಿ ಒಬ್ಬ ಮಗಳಾಗಿ ತನ್ನ ತಂದೆ ತಾಯಿಯ ಪ್ರೀತಿ ಪಡೆಯಲು ಅವರು ಮೆಚ್ಚುವಂತೆ ಕೆಲಸ ಮಾಡಿ ಅವರಿಂದ ಶಹಭ್ಬಾಸ್ ಗಿರಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಾಳೆ.ಮನೆಯ ಜವಾಬ್ದಾರಿ ಜೊತೆಗೆ ಮನೆಯ ಎಲ್ಲ ಸದಸ್ಯರನ್ನೂ ಕಾಳಜಿ ಮಾಡುತ್ತಾಳೆ.. ಶಾಲೆಯಲ್ಲಿ ಶಿಕ್ಷಕರ ಪ್ರೀತಿಯನ್ನು ಸಂಪಾದಿಸಲು ಹಲವಾರು ರೀತಿಯಲ್ಲಿ ಕಸರತ್ತು ಮಾಡುತ್ತಾಳೆ.. ಹಾಗೆಯೇ ತನ್ನ ಸ್ನೇಹಿತರು ತನ್ನನ್ನೇ ಪ್ರೀತಿಸಬೇಕೆಂದು ಅವರಿಗೆ ಬೇಕಾದಂತೆ ತಾನು ಬದಲಾಗುತ್ತಾಳೆ. ಯೌವ್ವನದಲ್ಲಿ ತಾನು ಎಲ್ಲರಿಗೂ ಇಷ್ಟವಾಗಬೇಕು , ಯಾರೋ ಒಬ್ಬ ಇನ್ನೊಂದು ಮನೆಯಲ್ಲಿ ಬೆಳೆದ ಹುಡುಗ ತನ್ನನ್ನೇ ಪ್ರೀತಿಸಬೇಕು ಎಂಬ ಬಯಕೆಯಿಂದ ಅವನಿಗೆ ಇಷ್ಟವಾಗುವ ರೀತಿ ಬಗೆ ಬಗೆಯ ವೇಷ ಹಾಕುತ್ತಾ ಅವನಿಗಾಗಿ ತನ್ನ ಪ್ರೀತಿಯನ್ನು ಧಾರೆಯೆರೆಯುತ್ತಾಳೆ.ತಾನು ಎಲ್ಲಿ ತಪ್ಪು ಮಾಡುವೆನೋ ತನ್ನ ಪ್ರೀತಿಯನ್ನು ಕಳೆದುಕೊಳ್ಳುವೆನೋ ಎಂಬ ಭಯದಲ್ಲೇ ಅವನ ಪ್ರೀತಿಯನ್ನು ಕಾಪಾಡಲು ತನ್ನ ಸುತ್ತಲೂ ಒಂದು ಬೇಲಿಯನ್ನು ಹಾಕಿಕೊಂಡುಬಿಡುತ್ತಾಳೆ . ತಂದೆ ತಾಯಿ ಬಂಧು ಬಳಗ ಎಲ್ಲರನ್ನೂ ಎದುರು ಹಾಕಿಕೊಂಡು ಆ ಹುಡುಗನಿಗೂ ತಾನೇ ಧೈರ್ಯ ತುಂಬಿ ಮದುವೆಯಾಗುತ್ತಾಳೆ..ಇದುವರೆಗೂ ಪ್ರೇಮವಿವಾಹಗಳು ಏನಾದರೂ ಯಶಸ್ವಿಯಾಗಿದ್ದರೆ ಅಲ್ಲಿ ಹೆಣ್ಣಿನ ಧೈರ್ಯವೇ ಪ್ರಮುಖ ಪಾತ್ರ ವಹಿಸಿರುತ್ತದೆ ಎನ್ನಬಹುದು.ಕಾರಣ ಇಷ್ಟೇ ಅವಳು ಪ್ರೀತಿಗಾಗಿ ಎಂತಹ ಕಷ್ಟವನ್ನೂ ಸಹಿಸುತ್ತಾಳೆ. ಅಂಥ ಶಕ್ತಿ ಹೆಣ್ಣಿನ ಪ್ರೀತಿಯಲ್ಲಿ ಅಡಗಿದೆ.
ಮದುವೆಯಾದ ಮೇಲೆ ಗಂಡ, ಅತ್ತೆ, ಮಾವ,ಮೈದುನ,ನಾದಿನಿ,ಹೀಗೆ ತನ್ನ ಸುತ್ತಲಿರುವ ಗಂಡನ ಮನೆಯವರ ಪ್ರೀತಿಗಾಗಿ ಅವರಿಷ್ಟದಂತೆ ಕೆಲಸಗಳನ್ನು ಮಾಡುತ್ತಾಳೆ .ಕಾಲ ಕಳೆದಂತೆ ತಾನು ಜನ್ಮ ಕೊಟ್ಟ ತನ್ನ ಮಕ್ಕಳು ತನ್ನನ್ನೇ ಹೆಚ್ಚು ಪ್ರೀತಿಸಬೇಕೆಂದು ಅವರಿಗಾಗಿ ತನ್ನ ಎಲ್ಲ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿ ಬೆಳೆಸುತ್ತಾಳೆ.
ಅದೇ ರೀತಿ ಸಮಾಜ ತಮ್ಮ ನೆರೆಹೊರೆಯವರು ತನ್ನನ್ನು ಪ್ರೀತಿಸಬೇಕೆಂಬ ಕಾರಣಕ್ಕೆ ತನ್ನದಲ್ಲದ ಹಲವಾರು ಕೆಲಸಗಳನ್ನು ತಾನು ಮಾಡಿ ಅವರಿಂದ ಪ್ರೀತಿಸಲ್ಪಡುತ್ತಾಳೆ.. “ತನ್ನ ಸಂಪರ್ಕಕ್ಕೆ ಬರುವ ತಾನು ಪ್ರೀತಿಸುವ ಪ್ರತಿ ಜೀವ ತನ್ನನ್ನು ತನಗಿಂತ ಹೆಚ್ಚಾಗಿ ಪ್ರೀತಿಸಬೇಕು” ಎಂಬುವುದು ಪ್ರತಿಯೊಬ್ಬ ಮಹಿಳೆಯ ಬಯಕೆ. ಇದನ್ನು ಸ್ವಾರ್ಥ ಅಂತಲೂ ಕರೆಯಬಹುದು. ಆದರೆ ಪ್ರತಿ ಹಂತದಲ್ಲೂ ಅವಳ ಪ್ರೀತಿಯನ್ನು ಯಾರೋ ಒಬ್ಬರೂ ಕಿತ್ತುಕೊಳ್ಳುವರೇ…!ಅವಳುಮಾತ್ರ ತಾನು ಎಂತಹ ಸಂಕಷ್ಟಗಳ ನಡುವೆಯೂ ತಾನು ಪ್ರೀತಿಸುವವರ ಪ್ರೀತಿಯನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಲೇ ಇರುತ್ತಾಳೆ..
ಹೀಗಿರುವಾಗ ಯಾವುದೋ ಒಂದು ಕೆಟ್ಟ ಘಳಿಗೆ ಅಥವಾ ಯಾರೋ ಇನ್ನೊಬ್ಬರು ಅವಳ ಜೀವನದಲ್ಲಿ ಪ್ರವೇಶಿಸಿ ಅಷ್ಟು ವರ್ಷದ ಆ ಎಲ್ಲ ಪ್ರೀತಿಯನ್ನು ಅವಳಿಂದ ಕಸಿದುಕೊಂಡುಬಿಟ್ಟರೆ … ಅಥವಾ ಅವಳಿಂದ ದೂರ ಮಾಡಿದರೆ? ಅವಳಿಗೆ ಹೇಗಾಗಬೇಡ? ತನ್ನ ಇಡೀ ಬದುಕನ್ನು ಯಾವ ಪ್ರೀತಿಗಾಗಿ ಸಮರ್ಪಣೆ ಮಾಡಿದ್ದಳೋ…!ಯಾರ ಪ್ರೀತಿಗಾಗಿ ಅಷ್ಟು ದಿನ ಹಂಬಲಿಸಿ ಹೆಣಗುತ್ತಿದ್ದಳೋ..!! ಆ ಪ್ರೀತಿ ಇನ್ನು ಅವಳಿಗೆ ಸಿಗಲಾರದು ಅಥವಾ ಅವಳಿಂದ ದೂರವಾಗುವುದು.. ಎಂಬ ಭೀತಿಯೇ ಅವಳ ಎಲ್ಲ ಭಾವನೆಗಳ ಅಂತ್ಯಕ್ಕೆ ನಾಂದಿಯಾಗುವುದು.. ತಾನು ಪ್ರೀತಿಸಿದ್ದಕ್ಕೆ ಸಿಕ್ಕ ಪ್ರತಿಫಲ ಈ ರೀತಿಯಾದರೆ ಅವಳು ತನ್ನ ಜೀವನದುದ್ದಕ್ಕೂ ಮುಂದೆ ಯಾರನ್ನು ಪ್ರೀತಿಸಲಾರಳು.. ಪ್ರೀತಿ ಮಾಡಿದ್ದಕ್ಕೆ ಅವಳು ಅನುಭವಿಸಿದ ನೋವು ಕಲಿಸಿದ ಪಾಠ, ಅವಳು ಪ್ರತಿದಿನ ತನ್ನ ಸಂಪರ್ಕಕ್ಕೆ ಬರುವ ವ್ಯಕ್ತಿಗಳೊಂದಿಗೆ ಮೊದಲಿಗಿಂತ ಕಠಿಣವಾಗಿ ವ್ಯವಹರಿಸುವಂತೆ ಮಾಡಿಬಿಡುವುದು .ಅಥವಾ ಯಾವಾಗಲೂ ಮೌನವಾಗಿರುವಂತೆ ಮಾಡಿಬಿಡುವುದು.. ಎಲ್ಲರಿಗೂ ಇಷ್ಟವಾಗುತ್ತಿದ್ದ ಜೀವ ಈಗ ಕ್ರಮೇಣ ಎಲ್ಲರಿಗೂ ಕಷ್ಟ ಎನಿಸಲು ಪ್ರಾರಂಭವಾಗುತ್ತದೆ .ಇಷ್ಟೇ ಕಣ್ರಿ ಪ್ರೀತಿ ಅಂದ್ರೆ ಏನೂ ಇಲ್ಲ ..ಎಲ್ಲವನ್ನೂ ಒಂದು ದಿನ (ಯಾವುದೋ ಸಂಧರ್ಭಗಳಲ್ಲಿ)ಕಳೆದುಕೊಳ್ಳುವ ಭೀತಿಯೇ ಪ್ರೀತಿ ಹೊರತು ಮತ್ತೇನು ಇಲ್ಲ… ‘ಕಾಲಾಯ ತಸ್ಮೈ ನಮಃ”


             ಮಹಾದೇವಿ ಪಾಟೀಲ.ಚಿಕ್ಕೋಡಿ

One thought on “ಹೆಣ್ಣಿಗೆ ಪ್ರೀತಿಯೇ ಭೀತಿ-ಮಹಾದೇವಿ ಪಾಟೀಲರವರಿಂದ

Leave a Reply

Back To Top