ನಾನು ಓದಿದ ಕಾದಂಬರಿ

ಮಲೆಗಳಲ್ಲಿ ಮದುಮಗಳು

ಕುವೆಂಪು

ಇದು ಬರಿ ಅನಿಸಿಕೆ ಅಷ್ಟೇ ವಿಮರ್ಶೆ ನನಗೆ ತಿಳಿಯದು. ನಾನು ಇತ್ತೀಚಿಗೆ ಓದಲ್ಪಟ್ಟ ಮತ್ತು ಮೊದಲ ಕಾದಂಬರಿ ಕನ್ನಡದ ಮನೆ ಮಾತಾಗಿರುವ, ಕನ್ನಡ ಸಾಹಿತ್ಯ ಲೋಕದಲ್ಲೇ ತನ್ನದೇ ಆದ ಛಾಪನ್ನು ಮೂಡಿಸಿರುವ ಅದ್ಬುತವಾದ, ಸುದೀರ್ಘವಾದ ಕಾದಂಬರಿ “ಮಲೆಗಳಲ್ಲಿ ಮದುಮಗಳು” ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ರವರ ಕನಸಿನ ಕೂಸುಮಗಳು ಈ ಮಲೆಗಳಲ್ಲಿ ಮದುಮಗಳ ಓದಿದ ನಂತರ ನನ್ನ ಮನಸಲ್ಲಿ ಅಳಿಯದೆ ಉಳಿದ ವಿಷಯಗಳ ಬಗ್ಗೆ ಬರೆಯುತ್ತೇನೆ

“ಮಲೆಗಳಲ್ಲಿ ಮದುಮಗಳು” ಸುದೀರ್ಘವಾದ, ಹೆಚ್ಚು ದೃಶ್ಯಗಳಿರುವ, ಹತ್ತಾರು ಮನೆತನಗಳು ನೂರಾರು ಕಥೆಗಳೇ ಒಳಗೊಳಗೇ ನೆಡೆದುಕೊಂಡಿರುವ ಕಾದಂಬರಿ ಇದು ಇನ್ನೂರು ವರ್ಷದ ಹಿಂದಿನ ಕಥೆಯಾದರು ಇಂದಿಗೂ ಕೂಡ ಪ್ರಸ್ತುತವೆನಿಸುವ ಘಟನೆಗಳು ಇಲ್ಲಿ ಬಂದು ಹೋಗುತ್ತದೆ.

ಇಲ್ಲಿ ಯಾರೂ ಮುಖ್ಯರಲ್ಲ, ಯಾರು ಅಮುಖ್ಯರಲ್ಲ ಎಂದು ಮೊದಲೇ ಬರೆದಿರುವ ಕುವೆಂಪುರವರು ಇಲ್ಲಿನ ವಿಷಯ, ಘಟನೆ, ಸ್ಥಳ, ವ್ಯಕ್ತಿ, ವಿಶೇಷ ಯಾವುದು ಕೂಡ ಮುಖ್ಯವಲ್ಲ ಹಾಗೇ ಯಾವುದು ಕೂಡ ಮುಖ್ಯವಲ್ಲ ಎನ್ನುವಂತೆ ಬರೆದಿದ್ದಾರೆ. ಇಲ್ಲಿ ಯಾರೂ ಮುಖ್ಯರಲ್ಲ ಅಂದ್ರೆ ಹಣವಿರುವ ಯಜಮಾನರು ಹಳೆಮನೆ ಸುಬ್ಬಣ್ಣ ಹೆಗ್ಗಡೆಯಾಗಲಿ, ಸಿಂಭಾವಿ ಭರಮೈಹೆಗ್ಗಡೆ, ಬೆಟ್ಟಳ್ಳಿ ಕಲ್ಲಯ್ಯ ಗೌಡರಾಗಲಿ, ಹೂವಳ್ಳಿ ವೆಂಕಣ್ಣನಾಗಲಿ, ಕೋಣೂರು ಗೌಡರಾಗಲಿ ಹೀಗೆ ಅನೇಕ ದಣಿಗಳು ಪಾದ್ರಿ ಜೀವರತ್ನಯ್ಯರಾಗಲಿ ಯಾರು ಮುಖ್ಯರಲ್ಲ. ಹಾಗೆಯೇ ಇಲ್ಲಿ ಯಾರೂ ಅಮುಖ್ಯರಲ್ಲ ಹೊಲೆಯ ಸಿಂಭಾವಿ ನಾಯಿ ಗುತ್ತಿಯಾಗಲಿ, ಕೋಣೂರು ಐತ-ಪೀಂಚಲು, ಆ ಪುಡಿಸಾಬೀಗಳು, ಸೆರೆಗಾರ ಚಿಂಕ್ರ, ಅಕ್ಕಣಿ-ಪಿಜಿಣ, ತಿಮ್ಮಪ್ಪ ಹೆಗ್ಗಡೆ ಹೀಗೆ ಇನ್ನು ಹತ್ತಿಪ್ಪತ್ತು ಪಾತ್ರಗಳು ಅಮುಖ್ಯರಲ್ಲ.

ಹಾಗೇ ಇಲ್ಲಿ ಯಾವುದು ಯಃಕಶ್ಚಿತವಲ್ಲ! ಗುತ್ತಿಯ ನಾಯಿ ಹುಲಿಯ ಆಗಲಿ, ಕಾವೇರಿ ದುರಂತಕ್ಕೆ ಕಾರಣವಾದ ಹಾಗೂ ಕಥೆಗೆ ಹಲವು ತಿರುವು ಕೊಡ ಉಂಗುರವಾಗಲಿ, ಚಿಂಕ್ರ ಬಿಟ್ಟು ಹೋದ ಲ್ಯಾಟಿನ್ ಆಗಲಿ, ಜೀವರತ್ನಯ್ಯ ಪರಿಚಯಿಸಿದ ಬೀಸೆಕಲ್ಲು(ಬೈಸಿಕಲ್) ಆಗಲಿ, ಹುಲಿಕಲ್ ನೆತ್ತಿ ಆಗಲಿ, ಹಾಗೇ ಕಾದಂಬರಿ ಅಲ್ಲಿ ಬರುವ ಸಣ್ಣ ಮಕ್ಕಳ ಪಾತ್ರವಾಗಲಿ ಯಾವುದು ಯಃಕಶ್ಚಿತವಲ್ಲ

ಇಲ್ಲಿ ಎಲ್ಲಕ್ಕೂ ಇದೇ ಅರ್ಥ, ಯಾವುದು ಅಲ್ಲ ವ್ಯರ್ಥ ಅನ್ನೋ ಹಾಗೇ ಪ್ರತೀ ಸನ್ನಿವೇಶಗಳು ತಿಳಿಸುತ್ತಾ ಹೋಗುತ್ತೇ

ಈ ಕಾದಂಬರಿ ಅಲ್ಲಿ ಹೇಳೋ ವಿಷಯಗಳು ಸಾಕಷ್ಟಿವೆ ಕುವೆಂಪುರವರೇ ಸಾಕಷ್ಟು ವಿಷಯಗಳನ್ನ ಬರೆದು ಒಂದು ದೊಡ್ಡ ಕಾದಂಬರಿ ಬರೆದು ಬಿಟ್ಟಿದ್ದಾರೆ, ಅದರಲ್ಲಿ ಇರುವ ಅಂಶಗಳನ್ನ ನನಗೆ ತೋಚಿದ ಹಾಗೆ ತಿಳಿಸುವೆ!

ಕಾದಂಬರಿ ಅಲ್ಲಿ ನಾವು ಕಾಣದಿದ್ದ ಅದೆಷ್ಟೋ ಸಾಮಾಜಿಕ ಪಿಡುಗುಗಳು, ಮೂಢನಂಬಿಕೆಗಳು, ಜಾತಿವ್ಯವಸ್ಥೆ, ಧರ್ಮ ಪ್ರಚಾರ ಹಾಗೂ ಆ ಧರ್ಮ ಪ್ರಚಾರಕ್ಕೋಡ್ಡುವ ಆಮಿಷ, ಉಳ್ಳವರ ದರ್ಪ, ಹೆಣ್ಣಿನ ದೇಹದ ಮೇಲಿನ ಮೋಹಕ್ಕೆ ಏನೆಲ್ಲಾ ಮಾಡುತ್ತಾರೆ ಕೊಲೆ,ಅತ್ಯಾಚಾರ ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ಚಿತ್ರಿತವಾಗುತ್ತ ಹೋಗುತ್ತೆ

ಮಲೆನಾಡಿನಂತ ಆ ಕಾಡಿನ ಸುತ್ತಮುತ್ತಣದಲ್ಲಿ ಇದ್ದ ಗೌಡಿಕೆ ಯಜಮಾನಿಕೆ ಮೇಲೆ ಬೆಳಕು ಚೆಲ್ಲುತ್ತೆ, ತಮ್ಮ ಸ್ವಾರ್ಥಕ್ಕಾಗಿ ಹಾಗೂ ತಮ್ಮ ಮನೆತನದ ಗೌರವಕ್ಕಾಗಿ ಏನೂ ಬೇಕಾದರೂ ಮಾಡುವ ಅಂದಿನ ಕಾಲದ ದುಡ್ಡು ಇರುವರ ದರ್ಪ, ಗತ್ತು ಹಾಗೇ ಮೋಸದ ರೀತಿಯಲ್ಲಿ ಕಪಟವಾಗಿ ಆಸ್ತಿ ಸಂಪಾದನೆ ಮಾಡೋ ಮಂಜಯ್ಯ ಭಟ್ಟರಂತ ವ್ಯಕ್ತಿಗಳ ಪರಿಚಯ ಮಾಡುತ್ತೆ

ಅಷ್ಟೇ ಅಲ್ಲದೆ ಅಂದಿನ ಕಾಲದಲ್ಲಿ ಇದ್ದ ಬ್ರಾಹ್ಮಣ, ಹೆಗ್ಗಡೆ , ಗೌಡ, ಹೊಲೆಯ-ಬಿಲ್ಲ-ನಾಯಕ-ಬೆಸ್ತ ಹೀಗೆ ಇನ್ನೂ ಅನೇಕ ಜಾತಿವ್ಯವಸ್ಥೆ ಬಗ್ಗೆ ತಿಳಿಸಿದರೆ, ಮೇಲಿನ ವರ್ಗದವರು ಕೆಳಗಿನ ವರ್ಗದವರನ್ನ ಓದು ಬರದ ಜನರನ್ನ ಹೇಗೆಲ್ಲಾ ಅನ್ಯಾಯ, ಶೋಷಣೆ ಹಾಗೂ ತಾರತಮ್ಯ ಮಾಡ್ತಾ ಇದ್ರು ಅನ್ನೋದರ ಬಗ್ಗೆ ಆಗಲೇ ತಿಳಿಸಿದ್ದಾರೆ. ಉಳ್ಳವರು, ದುಡ್ಡಿರುವರು ಮಾಡಿದ್ದು ಏನೇ ಮಾಡಿದರೂ ಸರಿ ತಮ್ಮ ಜೀತದಾಳುಗಳು ಮಾಡೋದು ತಪ್ಪು ಅನ್ನೋ ಸಿದ್ಧಾಂತ ಎದ್ದು ಕಾಣುತ್ತೆ…..

ಮಲೆಗಳಲ್ಲಿ ಮದುಮಗಳು ಹೆಚ್ಚು ಪ್ರೇಮಕಥೆಯನ್ನ ಹೊಂದಿರುವ ಒಂದು ಸುಂದರ ಕಾದಂಬರಿ ಓದುತ್ತಿದ್ದರೆ ಮಜಾ ಕೊಡೋ ಪ್ರೇಮ ಕಥನ ಅಂದ್ರೆ ಗುತ್ತಿ-ತಿಮ್ಮಿ, ಐತಾ-ಪೀಂಚಲು, ಹಾಗೆಯೇ ಮಲೆನಾಡಿನ ದೊಡ್ಡವರ ಪ್ರೇಮಕಥೆ ಮುಕುಂದಯ್ಯ-ಚೆನ್ನಮ್ಮ ಪ್ರೇಮಕಥೆ

ಇದರಲ್ಲಿ ಸಾಹಸಮಯ ಪ್ರೇಮಕಥನ ಅಂದ್ರೆ ಗುತ್ತಿ ಮತ್ತು ತಿಮ್ಮಿಯರದ್ದು ಹೊಲೆಯರಾದ ಗುತ್ತಿ ತನ್ನ ಅತ್ತೆಯ ಮಗಳನ್ನ ಪ್ರೇಮಿಸಿ ಅವಳನ್ನ ಸಂಧಿಸಿ, ಅಪಹರಿಸಿ ಹೇಗೋ ಮದುವೆಯಾಗಿ ಮತ್ತೇ ತನ್ನ ಹೆಂಡತಿಯಿಂದ ದೂರ ಆಗಿ ಈ ಗೌಡರ, ಪೊಲೀಸರ ಹೆದರಿಕೆಯ ಮದ್ಯೆ ಊರನ್ನೇ ಬಿಟ್ಟು ದೇಶಾಂತರ ಹೋಗುವ ಇವನ ಜೀವನದ ಬದುಕು ಅಷ್ಟೇ ಸಾಹಸವು ಸ್ವಾರಸ್ಯಕರವು ಹೌದು ಇಲ್ಲಿ ಗುತ್ತಿಯ ಮನೋಬಲ ಹಾಗೇ ಅವರ ನಿಜವಾದ ಪ್ರೇಮ ಬದುಕನ್ನ ಎಲ್ಲೆಲ್ಲೋ ಕರೆದುಕ್ಕೊಂಡು ಹೋಗಿ ಎಲ್ಲ ಸವಾಲುಗಳನ್ನು ಎದುರಿಸುವ ಇವರ ಜೋಡಿ ಕೊನೆಗೆ ಒಂದಾಗಿ ತಮ್ಮ ಬದುಕಿಗಾಗಿ ಊರನ್ನೇ ಬಿಡುವ ಹಾಗೇ ಆಗುತ್ತೆ

ಇನ್ನಾ ಐತಾ ಮತ್ತು ಪೀಂಚಲು ದಂಪತಿಯ ಪ್ರೇಮಕಥೆ ಗಂಡ-ಹೆಂಡತಿಯ ಇರಬೇಕಾದ ಮುಗ್ದತೆ, ಸರಸ-ವಿರಸ ಓದುಗುರನ್ನ ಸೆಳೆಯುತ್ತೆ, ಗಂಡನ ಅನುಮಾನ ಮುನಿದ ಗಂಡನನ್ನ ಸಮಾಜಯಿಸುವ ಹೆಂಡತಿಯ ಜಾಣತನ ಇವರಿಬ್ಬರ ಜೋಡಿಯಲ್ಲಿ ಚೆನ್ನಾಗಿ ಮೂಡಿ ಬಂದಿದೆ ಹಾಗೆಯೇ ಸ್ವಾಮಿ ಭಕ್ತಿ ಕೂಡ ಈ ದಂಪತಿ ಪಾತ್ರದಲ್ಲಿ ಕಂಡು ಬರುತ್ತೆ

ಇನ್ನಾ ಮುಕುಂದಯ್ಯ-ಚೆನ್ನಮ್ಮ ಪ್ರೇಮಕಥೆ ಇಲ್ಲಿ ಹೆಣ್ಣಿನ ದಿಟ್ಟತನ ಹಾಗೂ ಗಂಡು ತನ್ನ ಪ್ರೇಮವನ್ನ ಉಳಿಸಿಕೊಳ್ಳಲು ಮಾಡಬೇಕಾದ ಸಾಹಸ ಎಲ್ಲಾ ಸಮ್ಮಿಳಿತವಾಗಿದೆ, ಚಿಕ್ಕಂದಿನಿಂದ ಇರೋ ಪ್ರೇಮಕಥೆ ಅದೂ ಇಲ್ಲದೆ ಹಿಂದಿನ ಜನುಮದ ನಂಟು ಇರೋ ಜೋಡಿ (ಏಳೇಳು ಜನ್ಮದ ನಂಟು) ಪ್ರೀತಿ ಅಜ್ಜಿಯನ್ನ ಮನೆಯವರನ್ನ ಬಿಟ್ಟು ಬರೋ ಚಿನ್ನಕ್ಕ ಕಾಡಿನ ದಾರಿಯಲ್ಲಿ ನಡೆದು ಹುಲಿಕಲ್ ನೆತ್ತಿ ಹತ್ತಿ ತನ್ನ ಭಾವನ ಕೈ ಹಿಡಿಯುವ ಆಸೆ ತನ್ನವರ ಬಿಟ್ಟು ಬಂದೇ ಅನ್ನೋ ಹೆಣ್ಣಿನ ಸಹಜ ನೋವು ಚೆನ್ನಮ್ಮನ ಪಾತ್ರದಲ್ಲಿ ಅನಾವರಣ ಆಗುತ್ತೆ, ತಾನು ಪ್ರೀತಿಸಿದ ಹುಡುಗಿಯ ಕೈ ಹಿಡಿಯಲು ಎದುರಾಗುವ ಸವಾಲುಗಳನ್ನು ಎದುರಿಸಲು ಏನೇನೋ ತಂತ್ರ, ಸಾಹಸ ಮಾಡಿ ಮುಕುಂದಯ್ಯ ಕೊನೆಗೆ ತಾನು ಬಯಸಿದ್ದನ್ನೇ ದಕ್ಕಿಸಿಕೊಳ್ಳುವ ಅವನ ದೃಢ ಸಂಕಲ್ಪ ಇಷ್ಟ ಆಗುತ್ತೆ

ಮನುಷ್ಯ-ಮನುಷ್ಯರ ನಡುವಿನ ಪ್ರೀತಿ ಅಷ್ಟೇ ಅಲ್ಲದೆ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಬಂಧ, ಪ್ರೀತಿ ತ್ಯಾಗ ಗುತ್ತಿ ಮತ್ತು ಹುಲಿಯ(ನಾಯಿ) ಓದುಗರನ್ನ ಕಾಡುತ್ತೆ

ಕಾಮದಿಂದ ಆಚೆಗೆ ಪ್ರೀತಿಯನ್ನ ಗೆಲ್ಲುವ ಸನ್ನಿವೇಶಗಳು ಒಂದು ಕಡೆ ಆಗರೆ ಆ ಕಾಮದಾಸೆಗೆ ಬಲಿ ಆಗೋ ಕಾವೇರಿಯ ದುರಂತ ಕಥೆ ಇನ್ನೊಂದು ಕಡೆ, ಕಾವೇರಿಯ ಮೇಲೆ ನಡೆಯುವ ಅತ್ಯಾಚಾರ ಇತ್ತೀಚಿನ ದೇಶದ ಪರಿಸ್ಥಿತಿ ಹಿಡಿದ ಕೈಗನ್ನಡಿ ಅನ್ನೋ ಹಾಗೇ ಇದೆ ಅಂದಿನ ಆ ಕಾವೇರಿಯ ಕಣ್ಣೀರಿನ ಕಥೆ…. ಈಗಲೂ ಕೂಡ ಅಂತಹ ದುಷ್ಟ ಚಿಂಕ್ರ-ಸಾಬೀಗಳ ಜನರು ನಮ್ಮ ನಡುವೆ ಇಬ್ಬರೇ ಅನ್ನೋದೇ ಶೋಚನೀಯ….!

ಇನ್ನೂ ನಾಗಕ್ಕನ ಪಾತ್ರ ಸ್ವಲ್ಪ ಹತ್ತಿರ ಆಯ್ತು ಯಾಕಂದ್ರೆ ತನ್ನದು ಏನೇ ದುರಂತ ಕಥೆ ಇದ್ರೂ ತನ್ನ ಬದುಕೇ ಮುಳ್ಳಿನ ಮೇಲಿನ ನಡೆಯಾಗಿದ್ರು ಇನ್ನೊಬ್ಬರ ಅಂದ್ರೆ ಚಿನ್ನಮ್ಮನ ನಲಿವಿನಲ್ಲೇ ತನ್ನ ನೋವ ಮರೆತು ಅವಳಿಗಾಗಿ ಪಡಿಸೋ ಅವಳ ಮನಸುಇಷ್ಟ ಆಗುತ್ತೆ

ಈ ಕಾದಂಬರಿ ಒಳಗೆ ನೋವು-ನಲಿವು, ಮದುವೆ-ಸಾವು, ಪ್ರೀತಿ-ಫಜೀತಿ, ಹಣ-ದರ್ಪ-ಅಧಿಕಾರ-ಮೋಹ, ಆಶ್ಚರ್ಯ-ಭವಿಷ್ಯ-ಶಿಕ್ಷಣ ಹೀಗೆ ಅನೇಕ ಮಜಲುಗಳಿಂದ ಕೂಡಿದೆ…….

ಯಾವುದು ಮುಖ್ಯ ಅಲ್ಲ, ಅಮುಖ್ಯ ಅಲ್ಲ ಅನ್ನೋ ಹಾಗೆ ಎಷ್ಟೋ ವಿಷಯಗಳಿವೆ ಹೇಳಲು ಆದರೂ ನನಗೆ ಓದಿದ ಅನುಭವ ನನ್ನ ಗ್ರಹಿಕೆಯೇ ಬಂದ ಅಂಶಗಳು ಇದರಲ್ಲಿವೆ

ಧನ್ಯವಾದಗಳು ಸಂಗಾತಿ ಪತ್ರಿಕೆಗೆ ಮತ್ತು ಸಂಪಾದಕರಿಗೆ ನಾನು ಓದಿದ್ದನ್ನ ನೆನೆದು ಬರೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ…..

********************

ಮದನ್ ಕುಮಾರ್

Leave a Reply

Back To Top