ಇಂದಿರಾ ಮೋಟೆಬೆನ್ನೂರ ಕವಿತೆ-ಅರಳ ಬಿಡು ಪ್ರೀತಿ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಅರಳ ಬಿಡು ಪ್ರೀತಿ

ಮೌನವಾಗಿ ಮನದ
ಕದ ಮುಚ್ಚಿ ಅವಿತು
ಎನ್ನೊಲವೆ ನೀ ಹೀಗೆ
ಮೊಗ ಮುಚ್ಚಿ ತುಟಿ ಕಚ್ಚಿ ಕುಳಿತರೆ
ಎದೆ ಮಲ್ಲಿಗೆ ಅರಳಿ ಪರಿಮಳ
ಬಿರಿದೀತು ಹೇಗೆ..?
ನೀನೇ ಹೇಳು…

ಪದ ಮೆಲ್ಲನುಲಿದು
ಕದ ತೆರೆದು ಬಂದು
ಹದ ಬೆರೆತ ಹಾಲಾಗಿ
ಕವಿತೆ ಸಾಲಾಗಿ ಎದೆ
ತಟ್ಟಿ ಹಸಿರಾಗಿ
ಮುದದಿಂದ ಉಸಿರೀತು ಹೇಗೆ?…
ನೀನೇ ಹೇಳು…

ಕವಿತೆಯಾಗಿ ಎದೆಗಿಳಿದು
ಭಾವ ಜೀವವಾಗಿ ಬೆರೆತು
ಜೊತೆ ಜೊತೆಯಾಗಿ ಸಾಗಿ
ಕುಸುರು ಕೂಸಾಗಿ
ಚಿಗುರು ಮುಗುಳಾಗಿ
ನಲಿದೀತು ಹೇಗೆ..?
ನೀನೇ ಹೇಳು..

ಮೌನ ಮಾತಾಗಿ ಗೆಜ್ಜೆ ಕಟ್ಟಿ
ಹೆಜ್ಜೆ ಹಾಕಿ ಕುಲುಕಿ
ನಡೆದೀತು ಹೇಗೆ…
ಪ್ರೀತಿಯ ಕಿರು ಮೊಗ್ಗು
ಹಿಗ್ಗಿನಲಿ ಅರಳಿ
ಸ್ನೇಹ ಸಗ್ಗ ತೋರಿತು ಹೇಗೆ?
ನೀನೇ ಹೇಳು.?

ಬೆಳಕ ಮೊಗ್ಗೆ
ಎದೆ ಬೆಳಕಾಗಿ ಹೊನಲಾಗಿ
ಕಣ ಕಣದಿ ಇಳಿದು
ಹೊಸ ಹಾದಿ ತೆರೆದೀತು ಹೇಗೆ…?
ನೀನೇ ಹೇಳು…

ಕನವುಗಳು ಕಣ್ಣ ರೆಪ್ಪೆಯ
ಕೆಳಗಿಳಿದು ಕಣ್ಣ ಬೊಂಬೆಯ
ಒಡಲೊಳಗಿಳಿದು
ಚೆಲುವ ಬಿಂಬಗಳಾಗಿ
ಕುಣಿದಾವು ಹೇಗೆ..?
ನೀನೇ ಹೇಳು?

ಅರಳಬೇಕು ಪ್ರೀತಿ…
ಮುದ್ದಿಸುವ ಕಿರಣಗಳಿಗೆ
ಮೈ ಮರೆತು ಮನಸೋತು
ಹೂವರಳಿದಂತೆ….

ಚುಂಬಿಸುವ ಇಬ್ಬನಿಯ
ಮುತ್ತುಗಳ ಮತ್ತಿನಲಿ
ಮತ್ತೇರಿ ಮಲಗಿದ
ಹೂ ಮೊಗ್ಗ ಸಗ್ಗದಂತೆ….

ನಸುಕಿನ ಮಂಜಿನ ಮುಸುಕಿದ
ಪರದೆಯ ಕೊಂಚ ಸರಿಸುತ
ಹೊಸಕಿದ ಕನಸುಗಳಿಗೆ
ತುಸು ಬಣ್ಣ ಬಳಿಯುತ
ನೋಡಬಾರದೇ ಇತ್ತ ಮತ್ತೆ…


ಇಂದಿರಾ ಮೋಟೆಬೆನ್ನೂರ.

Leave a Reply

Back To Top