ಕಥಾಸಂಗಾತಿ
ಅನಸೂಯ ಜಹಗೀರದಾರ
ಗೋಚರ
ಆಕೆ ಹೊರಬಂದಳು.ಕುಂಕುಮ ಬೊಟ್ಟು ಕರಗಿ ಹಣೆಯ ತುಂಬ ಹರಿದಾಡಿದ ಕೆಂಪು ಕಲೆ ಇತ್ತು.ಮುಡಿದ ಹೂಗಳು ಬಾಡಿ ಉದುರುತ್ತಿದ್ದವು.ಉಟ್ಟ ಕಾಟನ್ ಸಿಲ್ಕ ಸೀರೆಯ ಅಂಚು ಮಡಿಚಿಕೊಂಡಿತ್ತು.ನಿರಿಗೆ ಅತ್ತಿತ್ತಲಾಗಿ ಸೆರಗು ಓರೆಯಾಗಿ ಅಸ್ತವ್ಯಸ್ತತೆಯನ್ನು ಹೇಳುತಿತ್ತು.ದಣಿದ ಮುಖ ಬಸವಳಿದ ದೇಹ ತೇಕುತ್ತಿರುವ ಉಸಿರು ಅವಳ ಉದ್ವೇಗವನ್ನೂ,
ಅಸ್ವಸ್ಥತೆಯನ್ನು, ಸಾರುತ್ತಿತ್ತು.ಹಿಂದೆಯೇ ಬಂದ ಅವನ ಕಂಡ ಎದುರಿನ
ಮನೆಯೊಡತಿಗೆ ಏನೋ ಗುಮಾನಿ.ಆತ ಯಾರಿರಬಹುದು..? ಈ ವೇಳೆ ಬಂದದ್ದು ಏಕೆ..? ಗಂಟೆ ಮಧ್ಯಾಹ್ನದ ಹನ್ನೆರಡೂವರೆ ಈಗ.! ಮತ್ತೆ ಇವಳ ಈ ಬಾಹ್ಯ ಅಸ್ತವ್ಯಸ್ತತೆಗೆ ಏನು
ಕಾರಣವಿರಬಹುದು…?? ಎದುರು
ಮನೆಯಾಕೆಯ ತಲೆಯೊಳಗೆ ನೂರೆಂಟು ಪ್ರಶ್ನೆಗಳ ಗುಂಗಿ ಹುಳುಗಳು ಜೀವಗೊಂಡು ಹರಿದಾಡಹತ್ತಿದವು.
ಆಕೆ ಮೆಟ್ಟಿಲಿಳಿಯತೊಡಗಿದಳು.
ಈ ಮನೆಯ ಈ ಒಡತಿಯನ್ನು
ಪ್ರಶ್ನಿಸಲೆಂಬಂಂತೆ ಎಲ್ಲ ಹಕೀಕತ್ತನ್ನು ತಿಳಿಯಲೆಂಬಂತೆ ಲಗುಬಗೆಯಿಂದ ಬಂದಳು.
ಆತ ಹೇಳುತ್ತಿದ್ದ.”ರೆಸ್ಟ ಮಾಡಿ.ಈಗಲೇ ಹೊರ ಹೋಗಬೇಡಿ.ಬಿಸಿಲು ಜಾಸ್ತಿ ಇದೆ.ಬಿಪಿ ಮತ್ತೂ ಹೆಚ್ಚಾಗಬಹುದು.ತಿನ್ನಲು ಏನಾದರೂ ತಂದು ಕೊಡಲೆ..? ಹೊರಗಿನಿಂದ..ಬಿಸ್ಕಿಟ್ ಹಣ್ಣು ಏನಾದರೂ ಬೇಕಿತ್ತಾ
ಬಾಜಾರದಿಂದ ತಂದುಕೊಂಡುವೆ..!”
ಆಕೆ ಕೇಳುತ್ತ ಏನೂ ಬೇಕಿಲ್ಲವೆಂದು ಸನ್ನೆ ಮಾಡಿದಳು
ಅಷ್ಟರಲ್ಲಿ ಎದುರು ಮನೆಯಾಕೆ ಈ ಮನೆಯೊಳಗೆ ಕಾಲಿಟ್ಟಿದ್ದಳು.
ಆತ ಮತ್ತೂ ಹೇಳುತ್ತಿದ್ದ.”ಸರಿ ನಾ ಹೋಗಿ ಬರುವೆ.ಒಂದಿಷ್ಟು ಹಣ್ಣುಗಳನ್ನಾದರೂ ತಂದುಕೊಟ್ಡು ಹೋಗುವೆ.ಮತ್ತೆ ತೊಂದರೆ ಅನಿಸಿದರೆ ಭಿಡೆಯಿಲ್ಲದೆ ಹೇಳಿ.ಫೊನಾಯಿಸಿ.ಮೊದಲು ರೆಸ್ಟ ಮಾಡಿ.ಸಾಕಷ್ಟು ನೀರು ಕುಡಿಯಿರಿ.ಹಣೆಯ ಮಗ್ಗಲು ಮಲುಕಿನ ಗಾಯ ವಾಸಿಯಾಗುತ್ತದೆ.ಒಂದೆರಡು ದಿನದಲ್ಲಿ ಪಟ್ಟಿ ತೆಗೆಯಿರಿ.” ಅವಳನ್ನೇ ನೋಡುತ್ತ ಹೇಳಿ ಆತ
ಹೊರನಡೆಯಲನುವಾದ.
Thank you ಹರ್ಷ..!! ಆಕೆ ಕಣ್ಣಾಲಿ ತುಂಬಿಕೊಂಡು ಹೇಳಿದಳು.
“ಇವರ ಹತ್ತಿರ ಇರಿಮ್ಮ ನೀವೂ..” ಆತ ಎದುರು ಮನೆಯಾಕೆ ಕಡೆಗೆ ಹೊರಳಿ ಹೇಳುತ್ತ ಹೊರನಡೆದ.
“ಪಾನಕವಾದರೂ ಕುಡಿಯಬೇಕಿತ್ತು”.ಈಕೆ ಹೇಳಿದಳು
” ಮೊದಲು ಆರಾಮಾಗಿ.. ಮತ್ತೊಮ್ಮೆ ಊಟವನ್ನೇ ಮಾಡೋಣ..” ಅನ್ನುತ್ತ ಆತ ಹೊರನಡೆದ.
ಈಕೆ ಎದುರುನೆಯಾಕೆಯ ಮನದಲ್ಲಿ ಹೊಯ್ದಾಡುತ್ತಿದ್ದ ಕುದಿ ಎಸರಿನ ಪ್ರಶ್ನೆಗಳಿಗೆ ತನ್ನ ಜೀರ್ಣ ಕಂಠದಲ್ಲಿ ಒಟ್ಟಾಗಿಯೇ ಉತ್ತರಿಸಿದಳು.”ಇವನು ಡಾ.ಹರ್ಷ ಅಂತ. ಇದೇ ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಹಾಗು ಮೆಡಿಕಲ್ ಆಫೀಸರ್ ಆಗಿದ್ದಾನೆ.ಪಿಯು ದಲ್ಲಿ ನನ್ನ ಕ್ಲಾಸ್ ಮೇಟ್ ಆಗಿದ್ದ.ಮೊನ್ನೆ ಮದುವೆ ಸಮಾರಂಭವೊಂದರಲ್ಲಿ ಸಿಕ್ಕಿದ್ದೆವು.ನಾನು ಎಂ ಎಸ್ ಸಿ.ಬಿಎಡ್ ಮಾಡಿದ ಬಗ್ಗೆ ಹಾಗು ಈತ ಮೆಡಿಕಲ್ ಓದಿದ ಬಗ್ಗೆ ಚರ್ಚೆ ಮಾಡಿದೆವು.ನಾನು ಕಾಲೇಜಿನಲ್ಲಿದ್ದಾಗ ಒಟ್ಟಾಗಿಯೇ ಸ್ಟಡೀ ಬಗ್ಗೆ ಚರ್ಚೆ ಮಾಡುತ್ತಿದ್ದೆವು.ನಮ್ಮದೊಂದು ಗುಂಪೇ ಇತ್ತು.ನೋಟ್ಸಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದೆವು.ಎಷ್ಟು ಚೆಂದ ಇದ್ದವು ಆ ದಿನಗಳು..!! ಏನು ಕೊಟ್ಟರೆ ಬಂದೀತು..!! ಕಳೆದ ಅಮೂಲ್ಯ ಸಮಯ..!! ಆಕೆ ಉದ್ಘರಿಸುತ್ತ ಅರೆಕ್ಷಣ ಕಣ್ಮುಚ್ಚಿದಳು.ಎದುರಿನಾಕೆಯೂ ಭಾವಲೋಕದಲ್ಲಿ ಇಮೇಜುಗಳ. ಕನವರಿಕೆಯಲ್ಲಿ ತೇಲುತ್ತಿದ್ದಳು.
“ಹೌದು ರಮಾ!”
ಆಕೆಯ ಬಾಯಿಂದ ಉದ್ಘಾರ ಬಂತು ಸಹಮತದ ಮಾತುಗಳೂ ಬಂತು..! ಅನುಮಾನದ ಕಣ್ಗತ್ತಲು ನಿಧಾನವಾಗಿ ಸರಿಯತೊಡಗಿತ್ತು.
” ಯಜಮಾನರು ಊರಲ್ಲಿಲ್ಲ ಸುಮಾ”
ಆಕೆ ಎದುರು ಮನೆಯಾಕೆಗೆ ಹೇಳುತ್ತ ಒಂದು ದೀರ್ಘ ಉಸಿರೆಳೆದು
ಮುಂದುವರೆಸಿದಳು.
“ಮಕ್ಕಳು ಹತ್ತಿರವಿಲ್ಲ.ಇದು ನಿನಗೂ ಗೊತ್ತಿದ್ದ ವಿಷಯವೆ..!”
“ಹೌದು..ಏನಾಗಿತ್ತು..ಏನೀ ಅವಸ್ಥೆ..ಯಾಕೆ ತಲೆಗೆ ಗಾಯ..?!”ಕೇಳಿದಳಾಕೆ.ನೇರ ವಿಷಯ ತಿಳಿಯುವ ಕೌತುಕ ಅವಳಿಗೆ ..ಸಹಜವೇ ತಾನೇ .
” ಇವತ್ತು ಬೆಳಿಗ್ಗೆಯಿಂದ ತಲೆ ಗರಗರ ತಿರುಗುತ್ತಿತ್ತು.
ಬಿಪಿ ಗುಳಿಗೆ ನುಂಗಿದೆ.ಸ್ವಲ್ಪ ಹೊತ್ತು ಮಲಗಿದೆ.ಆರಾಮ ಅನಿಸಿತು.ಇನ್ನೇನು ಏಳಬೇಕು .ಎದ್ದು ಮತ್ತಷ್ಟು ಸಿದ್ಧಳಾಗಿ ಹೊರನಡೆಯಬಣೇಕು ಅಂತ ಎದ್ದು ಎರಡು ಹೆಜ್ಜೆ ಇಟ್ಟೆ.ಕಣ್ಣು
ಕತ್ತಲಿಟ್ಟಂತಾಯಿತು.ಆಸರೆಗಾಗಿ ಮಂಚ ಹಿಡಿದೆ.ಆದರೂ ಝೋಲಿಗೆ ಈ ದೇಹ ಬ್ಯಾಲನ್ಸಆಗಲಿಲ್ಲ..ಕೆಳಗುರುಳಿದೆ.ಎದುರಿನ ಈ ಟೇಬಲ್ ಮೋಕು ಬಡಿಯಿತು.ಈ ಮಲುಕಿಗೆ.!! ಜೀವ ಹೋದಂತಾಯಿತು.
ಮತ್ತೆ ಕಣ್ಣಿಗೆ ಕತ್ತಲು.ಕಷ್ಟಪಟ್ಟೆ
ಕಣ್ತೆಗೆಯಲು…!ಫೋನಾಯಿಸಬೇಕೆಂದೆ …ನಿಮಗೆ..
ಮೊಬೈಲ್ ನಲ್ಲಿ ಮೊನ್ನೆ ಸೇವ್ ಮಾಡಿಕೊಂಡ ಈ ನಂಬರ್ ಗೆ ಫೋನ್ ಕಾಲ್ ಹೋಯಿತು. ಅದು ಅವತ್ತಿನ ಸೇವ್ ಮಾಡಿಕೊಂಡ ಪರಸ್ಪರ ಮಿಸ್ಡ ಕಾಲ್ ಆಗಿದ್ದವು.ಅದಕ್ಕೆ ಡಾ.ಹರ್ಷ ಗೆ ಹೋಗಿರಬೇಕು.ನನ್ನ ತೊದಲು ಮಾತು ನರಳಾಟ ಕೇಳಿ ಗಾಬರಿಯಾಗಿ ಬಂದಿದ್ದಾರೆ.ಇಂಜೆಕ್ಷನ್ ಕೊಟ್ಟು ಈ ಗಾಯಕ್ಕೆ ಪಟ್ಟಿ ಹಾಕಿ ನೀರು ಕುಡಿಸಿ ಬಾಯಿ ಒರೆಸಿದ್ದಾರೆ.ಯಾವ ಜನ್ಮದ ಋಣವೋ..ಏನು ನಂಟೋ..ಯಾವ ದೈವದ ಕೃಪೆಯೋ..!! ಸರಿಯಾದ ಸಮಯಕ್ಕೆ ಬಂದು ಚಿಕಿತ್ಸೆ ಕೊಟ್ಟಿದ್ದಾರೆ.ಗೆಳೆತನದ ಋಣವೇ ಇರಬೇಕು ಇದು! ವೈದ್ಯೋ ನಾರಾಯಣೋ ಹರಿಃ””ಎಲ್ಲ ಮೀರಿದ್ದು ಒಂದು ಇದೆ.ಅದಢ ಮಾನವೀಯತೆ.ಅಲ್ವೆ..!! “ಅವಳು ಸಾವರಿಸಿಕೊಂಡು ಮತ್ತೊಂದು ಲೋಟ ನೀರು ಕುಡಿದಳು.ಗಂಟಲು ಒಣಗುತ್ತಿತ್ತು.
” ಹೀಗಿದೆ ನೋಡು ಸುಮಾ ಇದು ಇವತ್ತಿನ .ದಿನಚರಿ..ಆರೋಗ್ಯ ಭಾಗ್ಯ ಬೇಕು ಅಲ್ವೆ..?! ಯಾಕೆ ನನಗೆ ಅಂತಾಪರಿ ಹಾಗಾಯ್ತೋ..ಹಾಗೇಕಾಯ್ತೋ..ಹಲುಬಿದಳಾಕೆ..ಕಣ್ಣಾಲಿ ತುಂಬಿ ಬರುತ್ತಿದ್ದವು.ಕೆನ್ನೆ ಮೇಲೆ ಹನಿಗಳು ಜಾರುತ್ತಿದ್ದವು.ಯಾವುದೋ ಅಸಹಾಯಕತೆ,ನಿರ್ವಿಣ್ಯತೆ ಆವರಿಸಿ ದನಿಯೂ ನಡುಗುತ್ತಿತ್ತು.”ಶಕ್ತಿ ಇರುವಾಗ ಈ ಶರೀರದ ವರ್ತನೆ ಹೇಗಿರುತ್ತೆ..ಅದೇ ಸ್ವಲ್ಪ ಬಳಲಿಕೆ ಆವರಿಸಿದರೂ..ನಿಸ್ಸತ್ವ ಭಾವ ಉದಯಿಸಿ ಅದೆಷ್ಟು ಯೋಚನೆಗಳನ್ನು ಹುಟ್ಟು ಹಾಕುತ್ತದೆ..!! ಏನೂ ಇಲ್ಲ ಇಲ್ಲಿ..ಯಾಕಪ್ಪ ಇದೆಲ್ಲ..ನಮಗೇ ಯಾಕೆ ಈ ಕಷ್ಟ..ಯಾರಿಗೂ ಅನ್ಯಾಯ ಎಸಗಿದ ನೆನಪಿಲ್ಲ..ಹೀಗೆಲ್ಲ ಆಲೋಚನೆಗಳ ಮಹಾಪೂರ ನುಗ್ಗಿ ಮನಸು,ದೇಹ ಎರಡನ್ನು ಕೊಚ್ಚಿಹೋಗುವಂತೆ ಮಾಡುತ್ತದಲ್ಲ..! ನಿರ್ನಾಮ ಭಾವ ಉದಯಿಸುತ್ತದಲ್ಲ..!! ಆಕೆಯೊಳಗೆ ಯೋಚನೆ ತಳಮಳಗೊಂಡದ್ದು ಹೀಗೆ..! ಕಾಲ ಎಲ್ಲವನ್ನು ಎಲ್ಲರನ್ನೂ ಹೇಗೆ ಬಗ್ಗು ಬಡಿಸುತ್ತದೆ.ದೀನತೆಯ ಭಾವ ತುಂಬಿಕೊಂಡುಬಿಡುತ್ತದೆ.ಈ ಸುಂದರ ಮನದಲ್ಲಿ..!! ಆಕೆ ಮುಂದುವರೆಸಿದಳು.
ಬಿಪಿ ವೇರಿಯೇಶನ್ ಅಂತೆ ಹಾಗೆ ಬಿಟ್ಟಿದ್ದಲ್ಲಿ ಕಣ್ಣಿಗೆ ಸ್ಟ್ರಕ್ ಆಗುತ್ತಿತ್ತಂತೆ..!! ಅಥವಾ ಬೇರೆ ಯಾವ ಅಂಗಕ್ಕೋ..!ಸಕಾಲಕ್ಕೆ ವೈದ್ಯ ಸೇವೆ ಒದಗಿದೆ ..!! ದೇವರು ದೊಡ್ಡವನು ಹೌದಲ್ಲ..!” ಸುಮಳನ್ನು ನೋಡುತ್ತಾ ಹೇಳಿದಳು.ಗಟ್ಟಿಯಾಗಿ ಅವಳ ಕೈ ಹಿಡಿದಳು.ಪ್ರತಿಯಾಗಿ ಅವಳೂ ಇವಳ ಬೆನ್ನ ಮೇಲೆ ಕೈಯಾಡಿಸುತ್ತ ಮಂಚದ ಮೇಲೆ ಮಲಗಿಸಿದಳು.ಕರೆಂಟು ಇಲ್ಲದೇ ಫ್ಯಾನ್ ನಿಂತಿತ್ತು.ಅಲ್ಲೇ ಇದ್ದ ಬಿದಿರಿನ ಬೀಸಣಿಕೆಯಿಂದ ಗಾಳಿ ಹಾಕತೊಡಗಿದಳು.”ಎಲ್ಲಿಯಾದರೂ ಹೊರಟಿದ್ಯಾ..?” ಪ್ರಶ್ನಿಸಿದಳು.
ರಮಾ ಮುಂದುವರೆಸಿದಳು..
“ಹಾಂ..!..ಮದುವೆ ಸಮಾರಂಭಕ್ಕೆ ಹೋಗಬೇಕಂತ ರೆಡಿಯಾಗಿದ್ದೆ.ಆದರೆ…!
ಉದ್ಘಾರ ತೆಗೆದಳು.
“ಇರಲಿ ಬಿಡು ರಮಾ ..ಸದ್ಯ ಆರಾಮಾಗು. ಸಂಪೂರ್ಣ..ರೆಸ್ಟ ಮಾಡು.ನಾನು ಸ್ವಲ್ಪ ಹೊತ್ತು ಇಲ್ಲೇ ಇರ್ತೀನಿ.ಒಂದಿಷ್ಟು ಹಾಲು ಬಿಸಿ ಮಾಡಿ ತರ್ತೀನಿ.ಕುಡಿದು ಮಲಗುವೆಯಂತೆ..!”
ಅನ್ನುತ್ತ ಎದುರು ಮನೆಯ ಸುಮಾ ಈ ಮನೆಯ ಕಿಚನ್ ಹೊಕ್ಕಳು.ಮನದಲ್ಲಿ ವಿಚಾರಗಳ ವಿಪ್ಲವ…ಅವಳೊಳಗೆ..!
ಅಲ್ಲಲ್ಲ..! ತಾನು ಎಷ್ಟು ತಪ್ಪು ತಿಳಿದುಬಿಟ್ಟೆ ಅದಕ್ಕೆಂದೇ ಹಿರಿಯರು ಹೇಳಿಲ್ಲವೆ “ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು..ಅಂತ..! ಛೆ..ಛೆ ..!ತನ್ನ ಮೇಲೆ ತನಗೇನೇ ಬೇಸರವಾಗುತ್ತಿದೆ..!! ಗೆಳತಿ…ಈಕೆ..!..ನೆರೆಯ ಬಂಧು…! ಆದರೂ….ತಾನು ಹಾಗೆಲ್ಲ ಯೋಚನೆ ಮಾಡಿದೆನಲ್ಲ..ಏನೇನೋ ತಿಳಿದೆನಲ್ಲ.ತಿಳಿಯಬಾರದಿತ್ತು..ತಾನು..
ದೇವರೇ.. ನನ್ನ ಕ್ಷಮಿಸು..!! ರಮಾ ನನ್ನ ಮನ್ನಿಸು.!! ಮನದಲ್ಲೇ ಹೇಳುತ್ತ ಹಾಲಿನ ಲೋಟದೊಂದಿಗೆ ಅವಳ ಕೋಣೆ ಪ್ರವೇಶಿಸಿದಳು..ಸುಮಾ..!! ಅನುಮಾನದ ಅಂಜನದ ಹೊಗೆ ಪ್ರಖರ ದಿನಕರನ ಬೆಳಕಿಗೆ ಕರಗದೇ ಇದ್ದೀತೆ..?! ಅದೂ ಅರಿವೆಂಬ ಬೆಳಕಲ್ಲಿ.ಅವಳೊಳಗಿನ ಅರಿವು.ಪಶ್ಚಾತ್ತಾಪದ ಬೇಗೆಯಲ್ಲಿ ಬೆಂದ ಭಾವ ಹದವಾಗಿ ಪಕ್ವವಾಗಿತ್ತು.ನಿಜ ಗೋಚರಿಸಿದ್ದೆಲ್ಲ ಸತ್ಯವಲ್ಲ.ಒಂದು ಮುಗುಳ್ನಗು ಅವಳ ಮೊಗವನ್ನು ಅರಳಿಸಿತು.
ಅನಸೂಯ ಜಹಗೀರದಾರ