ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ತರಹೀ ಗಜ಼ಲ್..
( ಶಮಾ ಅವರ ಅನುವಾದಿತ ಗಜ಼ಲ್ ನ ಮತ್ಲಾ ಬಳಸಿ )
ಇರುಳು ಸರಿವ ಮುನ್ನ ನನ್ನ ಪ್ರೀತಿಯ ನೋವುಗಳನು ಕೇಳು
ಕಂಪಿಸುವ ತುಟಿಗಳು ಹೇಳುವ ತಂಟೆ ತಕರಾರುಗಳನು ಕೇಳು
ಮೊದಲ ಮಳೆಯ ಮಣ್ಣ ಘಮಲು ಅಮಲೇರಿಸಿದ ಕಾರಣ ಗೊತ್ತೇ
ಕಂಗಳ ಕಾಡಿಗೆ ಕರಗುವ ಮುಂಚೆ ಕಳೆದ ಗಳಿಗೆಗಳನು ಕೇಳು
ಮೋಡ ಮುಸುಕಿದ ಚಂದಿರ ಮೊಗದಿ ನಗೆಯು ಉಡುಗಿ ಅಡಗಿದೆ
ಎದೆಯಲಿ ಬಚ್ಚಿಟ್ಟ ತಣ್ಣಗೆ ಕುದಿವ ಬಯಕೆಗಳನು ಕೇಳು
ಅರಳುವ ಮೊಗ್ಗು ಚಿವುಟಿ ತುಳಿವ ನೀಚರೇ ಎಲ್ಲರು
ಮರುಗಿ ಹೊರಳಾಡಿ ಬಳಲಿ ಬಾರದ ನಿದಿರೆಗಳನು ಕೇಳು
ಹೆಪ್ಪಿಟ್ಟ ಮೋಡ ಕರಗದೆ ಚಡಪಡಿಸಿದೆ ಕಳವಳಿಸಿ
ಕಟ್ಟಳೆಗಳ ಪಂಜರದಿ ಬೇಗಂ ನರಳುವ ಮೂಕ ವೇದನೆಗಳನು ಕೇಳು
ಭಾವಪೂರ್ಣ ಗಝಲ್.
ಧನ್ಯವಾದಗಳು ಮೆಚ್ಚುಗೆಗೆ.
ಹಮೀದಾ ಬೇಗಂ.