ಕಾರ್ಮುಗಿಲು ಗಣಪತಿ ಹೆಗಡೆ ದಾಂಡೇಲಿ ಇವರ ಕಾದಂಬರಿ ಅವಲೋಕನ

ಪುಸ್ತಕ ಸಂಗಾತಿ

ಗಣಪತಿ ಹೆಗಡೆ ದಾಂಡೇಲಿ

ಕಾರ್ಮುಗಿಲು

ಕಾರ್ಮುಗಿಲು.

ಗಣಪತಿ ಹೆಗಡೆ ದಾಂಡೇಲಿ ಇವರ ಎರಡನೆ ಕಾದಂಬರಿ.

ವೃತ್ತಿಯಲ್ಲಿ ಶಿಕ್ಷಕರು. ಪ್ರವೃತ್ತಿಯಲ್ಲಿ ಪ್ರಭುದ್ದ ಬರಹಗಾರರೂ, ವಿಮರ್ಶಕರೂ, ಆದಂತಹ ಅಣ್ಣನವರ ಕೃತಿ ಕುರಿತು ವಿಮರ್ಶೆ ಮಾಡಲು ನಾನು ಅಸಮರ್ಥಳು ಅನಿಸಬಹುದೆನೋ! ಆದರೂ ಒಬ್ಬ ಓದುಗಳಾಗಿ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳಬಯಸುವೆ.

ಕಾರ್ಮುಗಿಲು 150 ಪುಟಗಳುಳ್ಳ,18 ಅಧ್ಯಾಯಗಳನ್ನೊಳಗೊಂಡ ಒಂದು ಸಾಮಾಜಿಕ ಕಾದಂಬರಿ. ಈ ಕಾದಂಬರಿಯಲ್ಲಿ ಕರ್ತೃವಿನ ಆಶಯದಂತೆ ಹೆಣ್ಣನ್ನು ತಾಯಿ, ಮಾತೆ, ಇದು ಅದು ಅಂತ ಸಂಭೋಧಿಸಿ ಅವಳ ಜಂಘಾಬಲವನ್ನೆ ಉಡುಗಿಸಿ ಸ್ವಾಭಿಮಾನಕ್ಕೆ ಕುಂದು ತರುವಷ್ಟು ವಿಪರೀತ ಅನಿಸುವಷ್ಟು ಕ್ರೂರ ಮುಖವಾಡಗಳ ಅನಾವರಣ ಮಾಡುವ ನಿಟ್ಟಿನಲ್ಲಿ ಅವರ ಶಾಯ್ಮೊಳೆಯಿಂದ ಸ್ಫುಟವಾಗಿ ಬಿತ್ತರವಾದ ನೈಜತೆಗೆ ಹತ್ತಿರ ಅನ್ನಿಸುವಷ್ಟು ಕಾಲ್ಪನಿಕ ಕೃತಿ ಕಾರ್ಮುಗಿಲು

150 ಪೇಜಿನ ಈ ಕಾದಂಬರಿ ನನ್ನಲ್ಲಿ 150 ಆಲೋಚನೆ ಮಾಡುವಂತೆ ಮಾಡಿದೆ.
ಹಾಗಾಗಿ ಅದೆಷ್ಟೇ ಸಂಕ್ಷಿಪ್ತವಾಗಿಸಲು ನೋಡಿದಾಗ್ಯೂ ಇದು ಸುದೀರ್ಘವಾಗಿಯೇ ಆಗಿದೆ.

ಇಲ್ಲಿಯ ಕಥೆ ಸುಮಾರು ಒಂದಿಪ್ಪತ್ತು ವರುಷಗಳ ಹಿಂದಿನ ಕಥೆಯಂತೆ ಊಹಿಸಿದಾಗ ಕಥೆಯಲ್ಲಿನ ಘಟನೆಗಳು ನಡೆದಿರುವುದಕ್ಕೆ ಸಾಧ್ಯತೆ ಇದೆ ಅನಿಸುತ್ತದೆ. ಹಳ್ಳಿಯ ಜನರ ವಾಸ್ತವಿಕ ಜೀವನ, ಅಲ್ಲಿಯ ಬಡ ಜನರ ಬದುಕಿನ ಬವಣೆ, ಊರಿನ ಪ್ರಮುಖರೆನಿಸಿಕೊಂಡವರ ದೌರ್ಜನ್ಯ, ಮೂಢನಂಬಿಕೆ, ಜಾತಿ ಬೇಧ, ತಾರತಮ್ಯ, ಹೊಂದಾಣಿಕೆ, ತ್ಯಾಗ ಮನೋಭಾವನೆ, ಪ್ರೀತಿ, ಪ್ರೇಮ, ವಿದ್ಯಾರ್ಜನೆಗೆ ನೀಡುವ ಮಹತ್ವ ಎಲ್ಲವೂ ಬಂದು ಹೋಗುತ್ತವೆ.

ಕಾದಂಬರಿಯ ಒಳಹೊಕ್ಕು ನೋಡಿದಾಗ
ಅಲ್ಲಿ ಪ್ರಮುಖವಾಗಿ ಮೂರು ಕುಟುಂಬಗಳು ಕಣ್ಣ ಮುಂದೆ ಬರುತ್ತವೆ.
ಒಂದು ಯಂಕವ್ವ, ರಾಚಪ್ಪ, ಮನೋಹರ, ಕಲ್ಪನಾರನ್ನೊಳಗೊಂಡ ಕುಟುಂಬವಾದರೆ, ಇನ್ನೊಂದು ಪಟೇಲ್ ನ ಕುಟುಂಬ.
ಹೆಂಡತಿ ತೀರಿ ಒಬ್ಬಳೇ ಮಗಳಾದ ರಾಜಿಯೊಂದಿಗೆ ಬದುಕುವ ಕುಟುಂಬ.

ಮತ್ತೊಂದು ರಾಬರ್ಟ್, ಆತನ ತಂದೆ, ತಾಯಿಯರದ್ದು.

ಈ ಮೂರು ಕುಟುಂಬಗಳೊಂದಿಗೆ ಅಲ್ಲಲ್ಲಿ ಪೂರಕ ಪಾತ್ರಗಳಂತೆ ನಾಗಪ್ಪ ಮೇಷ್ಟ್ರು ನಾಗವೇಣಿ ಕವಿತಾ, ಜೇಮ್ಸ್, ರಮೇಶ್, ವಿದ್ಯಾ ರೆಡ್ಡಿ, ಅಜಿತ್ ಪಾತ್ರಗಳು ಹಾದು ಹೋಗುತ್ತವೆ.

ಕಾದಂಬರಿ ಶುರುವಾಗೋದು ಮುಖ್ಯ ಭೂಮಿಕೆಯಲ್ಲಿರುವ ಕಲ್ಪನಾ ಮನೆಯ ಒಲೆಯ ಮೇಲಿನ ಅನ್ನ ಗಂಜಿಯಾಗುವುದರ ಮೂಲಕ ಅಂತ್ಯದಲ್ಲೂ ಅನ್ನ ಗಂಜಿಯಾಗೇ ಮುಕ್ತಾಯಗೊಂಡಿದೆ. ಕಾದಂಬರಿಯ ಮುಖ್ಯ ಕುಟುಂಬ ರಾಚಪ್ಪ ಹಾಗೂ ಯಂಕವ್ವರ ಕುಟುಂಬ ಇವರ ಮಕ್ಕಳೇ ಮನೋಹರ, ಕಲ್ಪನಾ ಇವರೊಂದಿಗೆ ಇಡೀ ಕಾದಂಬರಿಯ ಪಾತ್ರಧಾರಿಗಳು ಮಿಳಿತಗೊಂಡಿದ್ದಾರೆ ಇವರದೊಂದು ಬಡತನದ ಕುಟುಂಬವಾದರೂ ಪ್ರೀತಿಯ ಶ್ರೀಮಂತಿಕೆಗೆ ಯಾವ ಕೊರತೆಯೂ ಇಲ್ಲ. ಕಲ್ಪನಾ ಬಹಳ ಆಶಾವಾದಿ ಪ್ರಭುದ್ದ ವಿಚಾರವುಳ್ಳ ವಿದ್ಯಾವಂತೆ.
ಐ. ಎ. ಎಸ್. ಅಧಿಕಾರಿಯಾಗಬೇಕೆಂಬ ಉನ್ನತ ಗುರಿ ಇಟ್ಟುಕೊಂಡು ಅದಕ್ಕಾಗಿಯೇ ಶ್ರಮವಿಸುವ ಶ್ರದ್ದಾಜೀವಿ. ಇದಕ್ಕೆ ಒತ್ತಾಸೆಯಾಗಿಯೆ ಕುಟುಂಬದ ಎಲ್ಲರ ಬೆಂಬಲವೂ ಇದೆ. ತಂದೆ ರಾಚಪ್ಪ ಕೂಲಿ ನಾಲಿ ಮಾಡಿದರೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿಯೇ ಚಿಂತನೆ ಮಾಡುವವನಿಗೆ ಆಸರೆಯಂತೆ ತಾಯಿ ಯಂಕವ್ವ ಕೂಡ. ಇನ್ನು ಕಲ್ಪನಾಳ ಅಣ್ಣ ಮನೋಹರ ಸ್ವಾಭಿಮಾನಿ. ಓದು ಮುಗಿಸಿ ಒಂದು ಆಫೀಸ್ನಲ್ಲಿ ಕೆಲಸಕ್ಕೆ ಸೇರಿ ತಂದೆ ಜೊತೆಗೂಡಿ ಸಂಸಾರದ ಬಂಡಿ ಮುಂದೋಗಲು ಸಾರಥಿ ಆಗಿದ್ದಾನೆ. ನಿಜಕ್ಕೂ ಇಂತಹ ಕುಟುಂಬ ಸಮಾಜಕ್ಕೆ ಪ್ರೇರಣಾದಾಯಕ. ಒಂದೊಳ್ಳೆ ಕುಟುಂಬ ಹೇಗಿರಬೇಕು ಅನ್ನುವುದಕ್ಕೆ ಇಂತಹ ಕುಟುಂಬದ ಉದಾಹರಣೆ ಯನ್ನು ಕೊಡಬಹುದು..

ವಿಧಿ ವಿಪರ್ಯಾಸ, ಈ ಕುಟುಂಬದಲ್ಲಿ ಕಾರ್ಮೋಡ ಕರಗಿ ಕಣ್ಣ ಹನಿಗೆ ತಂಪು ಅಂತ್ಯದವರೆಗೂ ಕಾಣಲೇ ಇಲ್ಲ.
ಕಾದಂಬರಿ ಮದ್ಯದಲ್ಲಿಯೇ ಯಂಕವ್ವ ಹೃದಯ ಸಂಬಂಧಿ ಖಾಯಿಲೆಯಿಂದ ಮೃತಳಾದರೆ ನೋವಿನ ಮಡುವಿನಲ್ಲೂ ಸಂಸಾರದ ನಾವೆ ಸಾಗಲೇ ಬೇಕಾಗುತ್ತದೆ. ಬಂದ ಪರಿಸ್ಥಿತಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಬದುಕು ಮುನ್ನಡೆಯುತ್ತಿರುತ್ತದೆ. ಇತ್ತ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರದ್ದೆಯಿಂದ ಓದುವ ಕಲ್ಪನಾ ಓದಿನ ಜೊತೆ, ಜೊತೆಗೆ ಪೂರಕ ಹವ್ಯಾಸಗಳನ್ನು ರೂಢಿಸಿಕೊಂಡು ಅದರಲ್ಲಿಯೂ ಯಶಸ್ಸು ಕಾಣುತ್ತಲೇ ಸಾಗುತ್ತಾಳೆ.

ಈಕೆಗೆ ಎಲ್ಲದರಲ್ಲೂ ಪ್ರತಿಸ್ಪರ್ಧಿಯಾಗಿ ಬಂದವನೇ ರಾಬರ್ಟ್ ತಂದೆ. ತಾಯಿಯ ಸಂಸ್ಕೃತಿ, ಒಳ್ಳೆಯ ನಡೆ, ನುಡಿ ತಂದೆಯ ಸರಕಾರಿ ನೌಕರಿ ತೀರಾ ಬಡತನವಲ್ಲದ ಅನುಕೂಲಸ್ಥ ಕುಟುಂಬದ ಒಬ್ಬನೇ ಮಗ. ವಿದ್ಯಾವಂತ. ಬುದ್ದಿವಂತ. ಕಾಲೇಜಿನಲ್ಲಿ ಕಲ್ಪನಾಗೆ ಪ್ರತಿಸ್ಪರ್ಧಿ ಆಗುವುದರ ಜೊತೆಗೆ ಅವಳೊಂದಿಗೆ ಎಲ್ಲೆ ಮೀರದ ಸ್ವಚ್ಛoದ ಅಗಾಧವಾದ ಪ್ರೇಮಸಂಗಾತಿ.

ಇವೆರಡಕ್ಕೂ ತದ್ವಿರುದ್ಧ ಕುಟುಂಬವೇ ಪಟೇಲನ ಕುಟುಂಬ. ತಂದೆ ಕರಿಸಿದ್ದೆಗೌಡನ ಒಂದಂಶವನ್ನೂ ಆಧರಿಸದ ದಬ್ಬಾಳಿಕೆ, ದೌರ್ಜನ್ಯ ಪ್ರವೃತ್ತಿಯ ಪಟೇಲ ಇವನ ಗುಣಕ್ಕೆ ತದ್ವಿರುದ್ಧ ಗುಣ ಹೊಂದಿದ ಮಗಳು ರಾಜಿ. ಹುಟ್ಟಿದ ಕೆಲ ವರ್ಷಗಳ ನಂತರ ತಾಯಿಯನ್ನು ಕಳೆದುಕೊಂಡ ದುರ್ದೈವಿ.

ಇನ್ನೂ ಪ್ರೇಮಕ್ಕೆ ಸಂಬಂಧಿಸಿದಂತೆ ಕಾದಂಬರಿ 4 ನೇ ಆಧ್ಯಾಯದಿಂದಲೇ ಪ್ರೇಮ ಪ್ರಕರಣಗಳು ಶುರುವಾಗುತ್ತವೆ.

ಲೆಕ್ಚರರ್ ನಾಗಪ್ಪ, ಹಾಗೂ ನಾಗವೇಣಿ ನಡುವೆ ಅಂಕುರಿಸಿದ ಸ್ವಚ್ಛಂದ

ಪ್ರೇಮ
ಜಾತಿ ಬೇರೆ
ಬೇರೆಯಾದರೂ ಮದುವೆಗೆ ಅಡ್ಡಿ ಆತಂಕಗಳಿಲ್ಲದೇ ಒಪ್ಪಿತ ಮದುವೆಯಾಗಿ, ಕುಟುಂಬದವರೊಂದಿಗೆ ಸಾಮರಸ್ಯದೊಂದಿಗೆ ಇರುವಾಗಲೇ ಬೈಕ್, ರಸ್ತೆ ಅಪಘಾತದಲ್ಲಿ ನಾಗವೇಣಿ ತೀರಿಹೋಗಿ ನಾಗಪ್ಪನವರ ಬದುಕಿಗೆ ಕಾರ್ಮೋಡ ಆವರಿಸಿಕೊಳ್ಳುತ್ತದೆ.

ಕಲ್ಪನಾ ಕಾಲೇಜಿನಲ್ಲಿ ಅಂತರ್ ಕಾಲೇಜ್ ಚಿತ್ರಕಲಾ ಸ್ಪರ್ಧೆಗೆಂದು ಹೋದಾಗ ಪರಿಚಿತಳಾದವಳೇ ವಿದ್ಯಾ ರೆಡ್ಡಿ
5 ನೇ ಆದ್ಯಾಯದಲ್ಲಿ ತೆರೆದುಕೊಳ್ಳುವ ವಿದ್ಯಾ ರೆಡ್ಡಿಯ ಧಾರುಣ ಕಥೆ ಗೊತ್ತಾಗುವುದು ಕಾದಂಬರಿಯ 16 ನೇ ಅಧ್ಯಾಯದಲ್ಲಿ. ವಿದ್ಯಾ ಹೆಸರಿಗೆ ತಕ್ಕಂತೆ ವಿದ್ಯಾವಂತೆ ಎಂ. ಎ ಪದವಿಧರೆ. ಬುದ್ದಿವಂತೆ. ಸೌಂದರ್ಯವಂತೆ. ಬದುಕಿನ ಬಗೆಗೆ ಆಶಾಭಾವನೆ ಹೊಂದಿರುವ ಪ್ರಬುದ್ಧ ಮನಸಿನ ಸುಸಂಪನ್ನೆ. ಆದರೇನು ಮಾಡುವುದು ವಿಧಿ ಎಲ್ಲಕ್ಕೂ ಅದರದ್ದೇ ಕಾರಣ ಕೊಟ್ಟು ಎಲ್ಲರನ್ನು ಒಂದು ಹಂತಕ್ಕೆ ದುರ್ಬಲರನ್ನಾಗಿಸುತ್ತದೆ. ವಿದ್ಯಾಳ ಘಟನೆಯಲ್ಲೂ ಆಗಿದ್ದು ಅದೇ. ಮಿನಿಸ್ಟರ್ ನ‌ ಒಬ್ಬನೇ ಮಗ ಅಜಿತ್
ನ ಕುತಂತ್ರಕ್ಕೆ ಬಲಿಯಾಗಿ ಆತನಿಂದ ಅತ್ಯಾಚಾರವೆಸಗಲ್ಪಟ್ಟವಳು. ಆದರೂ ಧೃತಿಗೆಡದೆ ಸ್ವತಃ ತಂದೆ ತಾಯಿಯನ್ನು ಕಳೆದುಕೊಂಡರೂ ಅನೇಕ ಅನಾಥ ಮಕ್ಕಳಿಗೆ ತಾಯಿ ಮಡಿಲು ಕೊಟ್ಟವಳು. ನೊಂದ ಹೆಣ್ಣುಮಕ್ಕಳಿಗೆ ಸಾಂತ್ವನ ಕೇಂದ್ರದ ಮೂಲಕ ಸಾಂತ್ವನ ತುಂಬುವುದಲ್ಲದೇತಾನು ಗಳಿಸಿದ ಹಣದಿಂದ ವೃದ್ಧರಿಗೆ, ಬಡ ಮಕ್ಕಳಿಗೆ ಸಹಾಯ ಹಸ್ತ ಚಾಚಿ, ಕಲಾ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ದುಡಿಯುತ್ತಿದ್ದಾಳೆ.

ಕಾದಂಬರಿಯ 8 ನೇ ಅದ್ಯಾಯದಲ್ಲಿ ಮನೋಹರ ರಾಜಿಯ ಪ್ರಕರಣ ತೆರೆದುಕೊಳ್ಳುತ್ತದೆ. ಇಡೀ ಊರಿಗೆ ದೌರ್ಜನ್ಯದಿಂದ ಮೆರೆದು ಅನ್ಯಾಯ, ಅಕ್ರಮಗಳಿಂದಲೇ ಹಣ ಸಂಪಾದನೆ ಮಾಡಿದ ಪಟೇಲ್ ನ ಗುಣಕ್ಕೆ ತದ್ವಿರುದ್ಧ ಗುಣ ಹೊಂದಿರುವ ರಾಜಿಗೆ ಮನೋಹರನಲ್ಲಿ ಪ್ರೇಮಾಂಕುರವಾಗುತ್ತದೆ. ಆದರದು ಸಫಲ ಪ್ರೇಮವಾಗದೇ ವಿಫಲ ಪ್ರೇಮವಾಗುತ್ತದೆ.

12 ನೇ ಅದ್ಯಾಯದಲ್ಲಿ ಕವಿತಾ, ಜೇಮ್ಸ್ ಪ್ರಕರಣ ಇವಳು ಕೂಡ ಜೇಮ್ಸ್ ನ ಮೋಸದಾಟಕ್ಕೆ ಅತ್ಯಾಚಾರಕ್ಕೊಳಗಾದವಳೇ. ಇದೆಲ್ಲಾ ತಿಳಿದು ಆಸರೆಗೆ ಇದ್ದೊಬ್ಬ ತಂದೆಯ ಕಳೆದುಕೊಂಡು ಅನಾಥಳಂತೆ ಬದುಕುವಾಗಲೇ ರಮೇಶ್ ಸರಕಾರಿ ನೌಕರಸ್ಥ, ಇವಳಿಗಿಂತ 2 ವರ್ಷ ಚಿಕ್ಕವನು. ಇವಳ ಎಲ್ಲ ಕಥೆ ಕೇಳಿಯೂ ಸ್ವ ಇಚ್ಛೆಯಿಂದಲೇ ಮದುವೆ ಮಕ್ಕಳು ಸುಖಿ ಸಂಸಾರ ಅನ್ನುವಾಗ ರಸ್ತೆ ಅಪಘಾತದಲ್ಲಿ ರಮೇಶ್ ತೀರಿಕೊಂಡು ಅವಳ ಬದುಕು ಕೂಡ ಕಾರ್ಮುಗಿಲು.

ಕಾದಂಬರಿಯಲ್ಲಿನ ಒಂದಂಶ ನಾ ಗಮನಿಸಿದಂತೆ ಮೋಸಕ್ಕೆ ಒಳಗಾದ ಹೆಣ್ಣಿನ ಶಾಪದಂತೆ ಪ್ರತಿಯೊಬ್ಬರ ದಾರುಣ ಸಾವು. ಅಜಿತ್, ಜೇಮ್ಸ್, ಪಟೇಲ್ ಸಾವು ಇದರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ನಾಗಪ್ಪ ಮೇಷ್ಟ್ರ ಹೆಂಡತಿ ನಾಗವೇಣಿ ಸಾವು. ಕವಿತಾಳ ಗಂಡ ರಮೇಶನ ಸಾವು ಇವೆಲ್ಲವುಗಳನ್ನು ಒಂದೇ ತರನಾಗಿ ಸಾವಿನ ರೂಪ ಕೊಟ್ಟಿದ್ದಾರೆ.

ಮುಖ್ಯವಾದ ಎರಡು ಪ್ರಕರಣಗಳು ರಾಜಿ, ಮನೋಹರ್ ಹಾಗೂ ಕಲ್ಪನಾ, ರಾಬರ್ಟ್ ಪ್ರಕರಣಗಳು. ರಾಜಿ ತಾಯಿಯ ಆಸರೆ ಇಲ್ಲದೇ ತಂದೆಯೊಂದಿಗೆ ಬೆಳೆದ ಮಗಳಾದರೆ, ಮನೋಹರ್ ಮದ್ಯದಲ್ಲಿ ತಾಯಿ ಕಳೆದುಕೊಂಡು ತಂದೆ, ತಂಗಿಯರೊಟ್ಟಿಗೆ ಬೆಳೆದವನು. ರಾಜಿ ತಂದೆ ಊರ ಪಟೇಲ್ ಇದ್ದರೂ, ಬಡತನ ಸ್ವಾಭಿಮಾನಿ
ಆದ ಜಾತಿ ಭೇದವಿದ್ದರೂ ತನ್ನ ಮಗನ ಪ್ರೀತಿ ಗೆಲ್ಲಲಿ ಎಂದೇ ಮಗನ ಪರವಾಗಿ ನಿಂತ ರಾಚಪ್ಪ ವಿಶೇಷ ಅನಿಸುತ್ತಾನೆ. ಆದರೆ ಅದೇ ಬುದ್ಧಿ ರಾಬರ್ಟ್ ನ ತಂದೆ, ತಾಯಿಗೆ ಇದ್ದಿದ್ದರೆ ಅಲ್ಲೊಂದು ಪ್ರೇಮ ಸಾಫಲ್ಯ ಪಡೆದು ಸುಖಾಂತ್ಯವಾಗುತ್ತಿತ್ತು. ವಿಪರ್ಯಾಸ ಅಂದ್ರೆ ಅದೇ ಇರಬೇಕು. ಅಲ್ಲಿಗೆ ಕಲ್ಪನಾ, ರಾಬರ್ಟ್ ಪ್ರೇಮವೂ ವೈಫಲ್ಯ. ಮಗಳನ್ನು ಸುಖವಾಗಿ ಬೆಳೆಸಿ ಶ್ರೀಮಂತ ಹುಡುಗನಿಗೆ ಧಾರೆ ಎರೆಯಬೇಕು ಅನ್ನುವ ಪಟೇಲ್ ಮಾಡಿದ್ದಾದರೂ ಏನು? ಅದೇ ಕುಡಿತದ ಚಟವಿರುವ ಹುಡುಗನೊಂದಿಗೆ ಒತ್ತಾಯದ ಮದುವೆ. ಅದು ಬಿಟ್ಟು ಮಗಳ ಕ್ಷೇಮವನ್ನಷ್ಟೇ ಗಮನದಲ್ಲಿಟ್ಟುಕೊಂಡು ಮನೋಹರನೊಂದಿಗೆ ಮದುವೆ ಮಾಡಿದ್ದಾದರೆ ಅವರ ಪ್ರೇಮವೂ ಸಫಲತೆ ಆಗ್ತಿತ್ತು.

ಇದು ಓದುಗರ ಅಭಿಪ್ರಾಯವಾದರೂ ಕಥೆಗಾರ ಮೊದಲೇ ಕಥಾವಸ್ತು, ಆರಂಭ, ಅಂತಿಮ ಮೊದಲೇ ನಿರ್ಧರಿಸಿ ಅದೇ ಚೌಕಟ್ಟಿನಲ್ಲಿಯೇ ಕಥೆ ಹೆಣೆದಿರುತ್ತಾರೆ ಅನ್ನುವುದು ವಾಸ್ತವ.

ಕಾದಂಬರಿ ಕಾರ್ಮುಗಿಲು ಪ್ರಕೃತಿಯೊಂದಿಗೆ ಮಿಳಿತಗೊಂಡಿರುವುದಕ್ಕಾಗಿಯೋ ಏನೋ ಇಲ್ಲಿಯ ಪ್ರತಿಯೊಂದು ಅದ್ಯಾಯ, ಹಾಗೂ ಪ್ರತಿ ಮನದ ಭಾವನೆಗಳಲ್ಲೂ ಪ್ರಕೃತಿಯೊಂದಿಗೆ ರೂಪಕ, ಉಪಮೇಯಗಳನ್ನು ಜೋಡಿಸುತ್ತಾ ಹೋಗಿದ್ದಾರೆ.
ಕಥೆಯ ಜೊತೆ, ಜೊತೆಯಲ್ಲೇ ಬದುಕಿನ ಸಾರ ತಿಳಿಸುವ ಕೆಲವು ಮೌಲ್ಯಯುತ ಸಂದೇಶಗಳ ಬಳಕೆಯನ್ನು ಕೂಡ ಮಾಡಿದ್ದಾರೆ. ಪ್ರಕೃತಿಯಲ್ಲಿನ ಕೆಲವು ಭಾವನಾತ್ಮಕ ಸನ್ನಿವೇಶಗಳನ್ನು ಸಂದರ್ಭದಲ್ಲಿ ಉಪಯೋಗ ಮಾಡಿದ್ದಾರೆ. ಒಂದೆರಡು ಗೊಂದಲ ಹೊರತು ಪಡಿಸಿ ಕಾದಂಬರಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಹಿಂದಿನ ಕಾದಂಬರಿ ವಿಮರ್ಶೆ ಗಮನದಲ್ಲಿರಿಸಿಕೊಂಡು ಕೆಲವೊಂದು ಅಳವಡಿಸಿಕೊಂಡಿದ್ದಾರೆ. ಅದರಲ್ಲಿ ಪ್ರಾದೇಶಿಕ ಭಾಷೆ ಬಳಕೆ, ಸ್ಥಳದ ವಿವರಣೆ ಆಗಿದ್ದು ನಾ ಗಮನಿಸಿದೆ. ಒಂದು ಕಡೆಯಲ್ಲಿ ನಮ್ಮೂರು ಹಾವೇರಿಯನ್ನು ಹೆಸರಿಸಿದ್ದು ಖುಷಿ ಆಯ್ತು.

ಕೊನೆಯಲ್ಲಿ, ಈ ಕಾದಂಬರಿ ಓದಿದ ನಂತರ ನನಗೆ ಟಿ. ಎನ್. ಸೀತಾರಾಮ್ ನಿರ್ದೇಶನದ ಮುಕ್ತ ದಾರಾವಾಹಿಯ ಟೈಟಲ್ ಸಾಂಗ್ ನೆನಪಾಯ್ತು.
ಕಾರುಮೋಡ ಮಳೆಯಾಗಿ
ಸುರಿದಾಗ ಕಣ್ಣ ಹನಿಗೆ ತಂಪು
ಮನದ ಹಕ್ಕಿ ಮರಿ ರಕ್ಕೆ ಬೀಸಿದರೇ ಅದರ ಗರಿಗೆ ಮುಕ್ತಿ ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧ ಮುಕ್ತಿ ಎಂದು ಆದೇವ ನಾವು ಮುಕ್ತ ಮುಕ್ತ
ಏರು ನದಿಗೆ ಇದಿರಾಗಿ ಈಜಿ ದಡ ಸೇರಬಹುದೇ ಜೀವ ದಾಟಿ ಈ ಪ್ರವಾಹ ತಾನು ಬೆಂದು ತಿಳಿ ಬೆಳಕು ಬೀರುತಿದೆ ಒಂದು ಇರುಳ ದೀಪ ನಿಶ್ಚಯದ ಮೂರ್ತರೂಪ.
ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ ಎಲ್ಲುಂಟು ಆಚೆ ತೀರಾ….!

ಈ ಸಾಲುಗಳನ್ನೆ ವಿಮರ್ಶೆ ಮಾಡಿದಾಗ ಕಾರ್ಮುಗಿಲು ಕಾದಂಬರಿ ಪಾತ್ರಧಾರಿಗಳ ಪೂರ್ತಿ ಚಿತ್ರಣ ಸಿಕ್ಕಂತೆ ಆಗುತ್ತೇನೋ ಅನ್ನುವುದು ನನ್ನ ಅನಿಸಿಕೆ. ಹೆಣ್ಣಾದವಳು ತನ್ನೊಳಗಿನ ಭಾವನೆಗಳನ್ನು ತಲ್ಲಣಗಳನ್ನು ಸಮಾಜದಲ್ಲಿ ಬಿತ್ತರಿಸಲು ಸರಿಯಾದ ರೀತಿಯ ಸ್ವತಂತ್ರ ಕೂಡ ಇಲ್ಲ… ಅಂತಹ ಕಟ್ಟು ಪಾಡುಗಳಿಗೆ ಈ ಕಾದಂಬರಿಯ ಕೆಲವು ಪಾತ್ರಗಳು ಪರಿಹಾರವೆನಿಸುತ್ತವೆ. ಹುಚ್ಚು ಕೋಡಿ ವಯಸ್ಸಿನ ತಲ್ಲಣ, ನಿಯಂತ್ರಣವನ್ನು ಕಾದಂಬರಿಯಲ್ಲಿ ಕಲ್ಪನಾ ಮೂಲಕ ವಿವರಿಸಿದ್ದಾರೆ.

ಕೊನೆಗೊಮ್ಮೆ ವಿಷಾದ ಭಾವ,
ಮೋಡಗಳ ಹಾರ ಮುಗಿಲಿಗೆ ಭಾರ, ಮುಂಗಾರು ಮಳೆ ಸಮೀಪಿಸುತ್ತಿದ್ದಂತೆ ಹೃದಯಗಳ ದಾರ ಮನಸಿಗೆ ಭಾರ ಪ್ರೇಮ ಪಕ್ಷಿಗಳು ದೂರವಾಗುತ್ತಿದ್ದಂತೆ….

ಬಹಳವಾಯ್ತು ಅನಿಸುತ್ತೆ. ಆದರೂ ನಾ ಹೇಳಬೇಕಾದ ಅಂಶಗಳನ್ನು ಹೇಳಿದ ತೃಪ್ತಿ ನನಗಿದೆ. ಇನ್ನೂ ಹೆಚ್ಚಿನ ಕೃತಿಗಳು ಅವರಿಂದಲೇ ಸಾಹಿತ್ಯ ಲೋಕದಲ್ಲಿ ಪರಿಚಿತವಾಗಲಿ ಎಂದು ಶುಭ ಹಾರೈಸಿ ಓದಿನ ಅನುಭವ ಹಂಚಿಕೊಳ್ಳುವ ಒಂದು ಅವಕಾಶಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.



ಪಾರ್ವತಿ. ಜಗದೀಶ್.

One thought on “ಕಾರ್ಮುಗಿಲು ಗಣಪತಿ ಹೆಗಡೆ ದಾಂಡೇಲಿ ಇವರ ಕಾದಂಬರಿ ಅವಲೋಕನ

  1. Parvathi ನಿಮ್ಮ ವಿಶ್ಲೇಷಣಾತ್ಮಕ ಈ ಪ್ರತಿಕ್ರಿಯೆಗಳಿಗೆ ನಾ ಶರಣು ಕಣಮ್ಮಾ.

Leave a Reply

Back To Top