ಪುಸ್ತಕ ಸಂಗಾತಿ
ಮಾನವೀಯತೆಯ ಮಾತು
ಪಾಲಾಕ್ಷಪ್ಪ ಎಸ್ ಎನ್ ರವರ ಕಥಾ ಸಂಕಲನ
ಶ್ರೀಯುತ ಪಾಲಾಕ್ಷಪ್ಪನವರು ಪ್ರೌಢಶಾಲೆಯ ಕನ್ನಡ ಅಧ್ಯಾಪಕರಾಗಿ ಸಾಕಷ್ಟು ಕಾಲದಿಂದ ಸೇವೆ ಮಾಡುತ್ತಾ ಬಂದಿದ್ದಾರೆ. ಹಾಗಾಗಿ ಅವರಿಗೆ ಸಮಾಜದ ಹಾಗೂ ಮಕ್ಕಳೊಂದಿಗಿನ ಅನುಭವ ಸಾಕಷ್ಟು ಇದೆ. ಅವುಗಳನ್ನು ತಮ್ಮ ಸಾಹಿತ್ಯ ಬೋಧನೆಯಲ್ಲಿ ಹಾಗೂ ಮಕ್ಕಳಲ್ಲಿ ಕಾಣುತ್ತಾ ಬಂದಿದ್ದಾರೆ. ಪ್ರಾರಂಭದಿಂದಲೂ ಬರೆಯಬೇಕೆಂಬ ತುಡಿತವಿದ್ದ ಶ್ರೀಯುತರು ಆಗಾಗ್ಗೆ ಅಲ್ಲೊಂದು ಇಲ್ಲೊಂದು ಕವನಗಳನ್ನು ಬರೆಯುತ್ತಾ ಬಂದಿದ್ದಾರೆ. ಈಗ ಆ ಎಲ್ಲಾ ಕವನಗಳನ್ನು ಜೋಡಿಸಿ “ಮಾನವೀಯ ಮಾತು” ಎಂಬ ಕವನ ಸಂಕಲನವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ
ಈ ಕವನಗಳಲ್ಲಿ ಮನುಷ್ಯ-ಮನುಷ್ಯನ ನಡುವಿನ ಸಂಬಂಧಗಳು, ಮಾನವೀಯ ಮೌಲ್ಯಗಳು, ಸಾಮಾಜಿಕ ಸಮಸ್ಯೆಗಳು ಮುಂತಾದ ಅನೇಕ ನ್ಯೂನತೆಗಳನ್ನು ಎತ್ತಿ ತೋರಿಸುತ್ತಾರೆ. ಅಷ್ಟೇ ಅಲ್ಲದೆ ’ಕಾಡಿದ್ದರೆ ನಾಡು ನಾಡಿದ್ದರೆ ಬಾಳು’ಎಂಬ ಸಂದೇಶವನ್ನು ನೀಡುತ್ತಾ, ಪ್ರಕೃತಿಯಿಂದ ನಾವು ಕಲಿಯಬೇಕಾದ ಪಾಠವನ್ನು ಚಿಂತಿಸುವಂತೆ ಮಾಡಿದ್ದಾರೆ. ಪುರಾಣ ಇತಿಹಾಸಗಳ ದಾಟಿಯನ್ನು ಅನುಸರಿಸದೆ, ನವ್ಯತೆಗೆ ಮಾರುಹೋಗದೆ ತನ್ನದೇ ಆದ ಶೈಲಿಯಲ್ಲಿ ಕವನಗಳನ್ನು ರಚಿಸುತ್ತಾ ಹೋಗಿದ್ದಾರೆ. ಈ ಕವನಗಳು ಅತ್ಯಂತ ಸರಳವಾಗಿ ಇರುವುದರಿಂದ ಅವು ನಮ್ಮನ್ನು ಓದಿಸಿಕೊಂಡು ಹೋಗುತ್ತವೆ. ಕವಿಯ ಶ್ರುತಿ ಪಠದಲ್ಲಿ ಅಪ್ಪ, ಅಮ್ಮ, ಮಗ, ಮಗಳು, ಸ್ನೇಹಿತ ಮತ್ತು ಬಂದು ಮಿತ್ರರು ಎಲ್ಲರೂ ಬಂದು ಹೋಗುತ್ತಾರೆ. ಅದರಲ್ಲಂತೂ ಅಮ್ಮನ ನೆನಪು ಅವರನ್ನು ಪದೇ ಪದೇ ಕಾಡುತ್ತದೆ. ಅಮ್ಮನನ್ನು ಎಷ್ಟು ಹೊಗಳಿದರು ಅವರಿಗೆ ತೃಪ್ತಿ ಇಲ್ಲ. ಅದಕ್ಕೆ ಒಂದು ಉದಾಹರಣೆಯನ್ನು ಕೊಡಬೇಕೆಂದರೆ ಅಮ್ಮ ಎಷ್ಟು ಅಚ್ಚುಕಟ್ಟಾಗಿ ಸಂಸಾರವನ್ನು ನಡೆಸುತ್ತಿದ್ದಳು ಎಂದು ಬಣ್ಣಿಸುವ ಪರಿಯನ್ನು ನೋಡಿ
ಹರಿದ ಸೀರೆಯಲ್ಲಿ ಲಂಗ ಹೊಲಿಸಿ
ಹಳೆ ಪಂಚೆಯಲಿ ಕೈವಸ್ತ್ರ ಮಾಡಿಸಿ
ಉಳಿದವುಗಳ ಮಸಿ ಬಟ್ಟೆ ಮಾಡಿಟ್ಟು
ತುಂಡು ಬಟ್ಟೆಗಳ ಎತ್ತಿಟ್ಟು ಕೂಡಿಟ್ಟು
ಬೆಚ್ಚನೆಯ ಹೊಸ ಕೌದಿ ಹೊಲಿದವಳು
ಮಗುವಿನ ಬಗ್ಗೆ ಹೇಳುವಾಗ ಅದರ ಮುಗ್ಧತೆಯನ್ನು ಪ್ರೀತಿಯ ಆಗರವನ್ನು ನೋಡಿ ಕವಿಗೆ ತಾನು ಮತ್ತೊಮ್ಮೆ ಮಗುವಾದ ಬೇಕು ಎಂಬ ಹಂಬಲ ಕಾಡುತ್ತಿದೆ
ದೊಡ್ಡವರಾದರೇನಂತೆ, ಗಳಿಸಿ
ಉಳಿಸಿದರೇನಂತೆ ಮತ್ತೆ ಮಗುವಾಗಬಾರದೇಕೆ?
ಅಂತಸ್ತು ಅಹಮಿಕೆ ತೊರೆದು
ಮತ್ತೆ ಮತ್ತೆ ಮಗುವಾಗಬಾರದೆ
ತನ್ನ ಅಂತಸ್ತನ್ನು ಹೆಚ್ಚಿ ಸಿಕೊಳ್ಳಲು ಮನುಜ ಇದುವರೆಗೆ ಸಾಗುವಾನಿ, ಬೀಟೆ, ಹೊನ್ನೇ ಮುಂತಾದ ಬೆಲಬಾಳುವ ಮರಗಳನ್ನು ಮಾತ್ರ ಕಡಿಯುತ್ತಾ, ಜೊತೆಯಲ್ಲಿ ಪ್ರಕೃತಿಯನ್ನು ನಾಶ ಮಾಡಿ ಶ್ರೀಮಂತನಾಗುತ್ತಿದ್ದ. ತಾನು ಮಾತ್ರ ಇವನ ದುಶ್ಚಟಗಳಿಗೆ ಬಲಿಯಾಗಿಲ್ಲ ಎಂದು ಆಲದ ಮರ ನೆಮ್ಮದಿಯಿಂದಿತ್ತು. ಈಗ ಹೆದ್ದಾರಿಯ ನಿರ್ಮಾಣಕ್ಕಾಗಿ ಅವನು ತನ್ನನ್ನು ಸಹ ಕಡಿದು ಹೆಣವಾಗಿ ಮಲಗಿಸುತ್ತಿರುವುದನ್ನು ನೋಡಿ,
ಮನುಕುಲದ ಆಸೆಗಳ ತಣಿಸಲು
ನಾನು ಸಾಯಲು ಸಿದ್ಧವಾಗಿದ್ದೇನೆ
ಆದರೆ ನನ್ನ ಆಶ್ರಯದ ಕ್ರಿಮಿ ಕೀಟಗಳಿಗೆ.
ಹಕ್ಕಿಗಳಿಗೆ ಏನೆಂದು ಹೇಳಿ ಹೋಗಲಿ?
ಎಂದು ಅಳಲನ್ನು ತೋಡಿಕೊಳ್ಳುತ್ತಾ, ಆಲದ ಮರ ವಿಲವಿಲ ಒದ್ದಾಡುವ ಪರಿಯನ್ನು ಕವಿ ಮನ ಕರಗುವಂತೆ ಚಿತ್ರಿಸಿದ್ದಾರೆ. ಹಾಗೆ ಮುಂದುವರೆಯುತ್ತಾ ಮನುಕುಲದ ಉದ್ಧಾರಕ್ಕಾಗಿಯೇ ತನ್ನ ಒಂದು ಕೊನೆಯ ಆಸೆಯನ್ನು ಈಡೇರಿಸು ಎಂದು ಆಲದ ಮರ ತನ್ನ ಬೇಡಿಕೆಯನ್ನು. ಮುಂದಿಡುತ್ತದೆ
ತಪ್ಪೇ ಮಾಡದೆ ಮರಣ ದಂಡನೆಗೆ
ಗುರಿಯಾಗಿರುವ ನನ್ನ ಕೊನೆಯ ಆಸೆ
ನನ್ನ ಮಕ್ಕಳು ಮರಿಯನ್ನಾದರೂ
ಉಳಿಸಿ ಬೆಳೆಸಿ ನಿಮ್ಮ ಮಕ್ಕಳಿಗಾಗಿ
ಎಂತಹ ನಿಸ್ವಾರ್ಥ ಮನಸ್ಸು! ನಿಮ್ಮ ಕುಲದ ಉದ್ದಾರಕ್ಕಾಗಿಯಾದರೂ ನನ್ನ ಕುಲವನ್ನು ಉಳಿಸಿ ಎಂಬ ಮರದ ನೋವಿನಲ್ಲಿ ಮನುಕುಲದ ಉಳಿವಿನ ಜೊತೆಗೆ ಪ್ರಕೃತಿಯನ್ನು ರಕ್ಷಿಸುವ ಹೊಣೆಗಾರಿಕೆಯು ಎದ್ದು ಕಾಣಿಸುತ್ತದೆ.
ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ತಂದುಕೊಟ್ಟ ಅವರ ಕವನ ’ಚಪ್ಪಲಿಗಳು’ ಅದ್ಭುತವಾಗಿ ಮೂಡಿ ಬಂದಿದೆ. ಚಪ್ಪಲಿ ತನ್ನ ಕಷ್ಟವನ್ನು ಹೇಳಿಕೊಳ್ಳುವ ಪರಿಯನ್ನು ನೋಡಿ
ಹೊರಗೆ ನಡೆದರೆ ಜೊತೆ ಜೊತೆಗೆ
ಒಳಗೆ ಬಂದರೆ ನಾವು ಹೊರಗೆ
ದುಃಖಕ್ಕೆ ಬೇಕು ಸುಖಕ್ಕೆ ಬೇಡ
ಕೂಲಿಕಾರ್ಮಿಕರ ಬಾಳಿನಂತೆ
ಕೂಲಿ ಕಾರ್ಮಿಕರ ಬಾಳು ಕೂಡ ತನ್ನ ಬಾಳಿನಂತೆ ಅಪಾಯದಲ್ಲಿದೆ ಎಂಬ ಮರದ ನೋವನ್ನು ಕವಿ ಈ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಅನೇಕ ಸಂದೇಶಗಳನ್ನು ನಾವು ಸಂಕಲನದ ಉದ್ದಕ್ಕೂ ನೋಡುತ್ತಾ ಹೋಗಬಹುದು.
ಒಟ್ಟಿನಲ್ಲಿ ಕವಿ ತನ್ನ ಸುತ್ತಲೂ ಇರುವ ವಸ್ತುಗಳನ್ನು ಆರಿಸಿಕೊಂಡು ಅವುಗಳಿಗೆ ಜೀವ ತುಂಬಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುತ್ತಾ ಹೋಗಿದ್ದಾರೆ. ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ನೋಡು ಎಂಬ ಗಾದೆಯ ಮಾತಿನಂತೆ ಈ ಕವಿಯ ತನ್ನ ಈ ಪಯಣದ ಹಾದಿಯಲ್ಲಿ ಬೆಳೆಯುವ ಎಲ್ಲ ಲಕ್ಷಣಗಳು ಎದ್ದು ಕಾಣಿಸುತ್ತಿದೆ. ಮುಂದಿನ ದಿನಗಳಲ್ಲಿ ಇವರು ಸಾಕಷ್ಟು ಅಭ್ಯಾಸ ಮಾಡಿ ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಕೈಯಾಡಿಸಿ ಬೆಳೆಯುತ್ತಾ ಹೋಗಲಿ ಎಂದು ಹಾರೈಸುತ್ತೇನೆ.
ಈ ಕೃತಿಯು ಅಂತರಂಗ ಪ್ರಕಾಶನ ಕುಗ್ವೆ ಸಾಗರ-೫೭೭೪೦೧ ಇವರಿಂದ ಪ್ರಕಾಶಿಸಲ್ಪಟ್ಟು, ಇದರ ಮುಖಬೆಲೆ ೧೧೦ ರೂಗಳಾಗಿರುತ್ತವೆ. ಆಸಕ್ತರು ಕೃತಿಯನ್ನು ಪ್ರಕಾಶಕರಿಂದ ಅಥವಾ ಲೇಖಕರಿಂದ ೯೯೭೨೭೫೭೭೨೫ ಇವರಿಂದ ಪಡೆಯಬಹುದು.
———————————
ಗಣೇಶ್ ವಿ.