ಲಲಿತಾ ಪ್ರಭು ಅಂಗಡಿ.ಜಾನಪದ ಕಲೆಗೆ ಜೀವ ತುಂಬಿದ ಮಹಾರಾಷ್ಟ್ರ ಘಟಕ.

ವಿಶೇಷ ಲೇಖನ

(ಹೊರನಾಡ ಕನ್ನಡಿಗರಿಂದ)

ಲಲಿತಾ ಪ್ರಭು ಅಂಗಡಿ.

ಜಾನಪದ ಕಲೆಗೆ ಜೀವ ತುಂಬಿದ

ಮಹಾರಾಷ್ಟ್ರ ಘಟಕ.

ಮುಂದುವರಿದ ಇಂದಿನ ಮಾಯಾಲೋಕದ ಜಗತ್ತಿನಲ್ಲಿ ಎಲ್ಲವೂ ತಾಂತ್ರಿಕಮಯ, ಸುಲಭವಾಗಿ ಸಿಗುವ ಮತ್ತು ಒಂದು ಬಟನ್ ಒತ್ತಿದರೆ ಸಾಕು ಏನೆಲ್ಲಾ ಪಡೆಯಬಹುದು, ಎಡಿಟ್ ಮಾಡಬಹುದು ಆದರೆ ಇದರ ಮಜಾ ತಲೆ ತಲಾಂತರದಿಂದ ಬಂದ ಜಾನಪದ ಸೊಗಡಿಗೆ ಸಮನಾಗಲಾರದು, ಜಾನಪದ ಶಿಷ್ಟ ಸಾಹಿತ್ಯವಲ್ಲ ಅದು ಜಾಣರ ಅನುಭವದ ಮೂಲಕ ಬಾಯಿಂದ ಬಾಯಿಗೆ ಬಂದ ಸಾಹಿತ್ಯ.
ಅದ್ಕೆ ಜಾನಪದ ತಜ್ಞರಾಗಿದ್ದ ಸಿಂಪಿ ಲಿಂಗಣ್ಣ ಅವರು ಹೇಳಿದ್ದು, ಜಾನಪದಕ್ಕೆ ಉಸಿರಿದೆ ಹೆಸರಿಲ್ಲ,ಅಂತ.

ಡಾ, ದೇ ಜವರೇಗೌಡ ಅವರು ಹೇಳಿದ್ದು ಹರಿಯ ಬಸುರಲ್ಲಿ ಬ್ರಹ್ಮಾಂಡ ಅಡಗಿರುವಂತೆ, ಜಾನಪದದ ಕುಕ್ಷಿಯಲಿ ಜಗತ್ತೆಲ್ಲಾ ಹುದುಗಿದೆ ಎಂದು.
ಯಾವುದೇ ದೇಶದ ಮೊದಲ ಸಾಹಿತ್ಯ ಅಂದ್ರೆ ಅದು ಜಾನಪದ ಸಾಹಿತ್ಯ.
ನಮ್ಮ ಸಂಸ್ಕೃತಿ ಆಚಾರ ವಿಚಾರ ನಡೆ ನುಡಿ ಉಡುಗೆ ತೊಡುಗೆ ಎಲ್ಲವೂ ಜಾನಪದ ಸಾಹಿತ್ಯದಲ್ಲಿದೆ, ಗ್ರಾಮೀಣ ಬದುಕಿನ ಸೊಗಡಿನ ಗಟ್ಟಿತನದ ಸಂಸ್ಕಾರಗಳ ಪ್ರತೀಕವೇ ಜಾನಪದ

ಗಂಡು ಹೆಣ್ಣಿನ ಬದುಕಿನಲ್ಲಿ ಸಾಮರಸ್ಯ ಹುಟ್ಟಿಸಿದ ಕಲೆ ಜಾನಪದ,ಜಾನಪದ ವಿಶಾಲವಾದ ವ್ಯಾಪಕವಾದ ಸರ್ವಾತ್ಮಕವೂ ಆದ ಅದ್ಬುತ ಕಲೆ.
ಮಹಿಳೆ ತನ್ನ ಆಸರಿಕೆ ಬ್ಯಾಸರಿಕೆ ನೋವು ನಲಿವು ಸುಖ ದುಃಖಗಳನ್ನು ಭಕ್ತಿಯ ಪರಾಕಾಷ್ಠೆತೆಯನ್ನು ಸಿಟ್ಟು,ಸೆಡವು ನಾಚಿಕೆ ಸ್ವಭಾವ ರಸಿಕತೆಯನ್ನು ಇನ್ನಿತರ ಭಾವನೆಗಳನ್ನು ಹಾಡಿನ ಮೂಲಕ ವ್ಯಕ್ತಪಡಿಸುತ್ತಾಳೆ ಜಾನಪದದಲ್ಲಿ .
ಓದು ಬರಹ ಬಾರದ ಶಿಕ್ಷಣ ಕಲಿಯದೆ ಶಿಕ್ಷಣ ತಜ್ಞರಿಗೆ ಸೆಡ್ಡು ಹೊಡೆದಂತಹ ಒಂದು ಅದ್ಭುತ ಕಲೆ ಜಾನಪದ.
ಯಾವ ಸಾಹಿತಿಯೂ ನಿರ್ಮಿಸದಂತಹ ಅಮೂಲ್ಯ ಕೊಡುಗೆ ಜಾನಪದ.
ಜೀವನದ ಎಲ್ಲಾ ಮಜಲುಗಳಲ್ಲಿ ಹಾಸು ಹೊಕ್ಕಾಗಿರುವ ಮಹಾವ್ರೃಕ್ಷ ದಂತಿರುವ ಜಾನಪದದಲ್ಲಿ ,ತತ್ವಪದ,ಗೀಗೀ ಪದ, ಯಕ್ಷಗಾನ, ಬಯಲಾಟ, ದೊಡ್ಡಾಟ ಸಣ್ಣಾಟ,ಗೊಂದ್ಲಿಗೇರ ಪದೇ, ಡೊಳ್ಳಿನ ಪದಗಳು, ಭಜನಿಪದಗಳು, ವೀರಭದ್ರನ ಒಡಪುಗಳು,
ಒಗಟುಗಳು, ಗಾದೆ ಮಾತುಗಳು, ಲಾವಣಿ ಪದಗಳು, ಕೊರವಂಜಿಯ ಕಣಿ,ಬುಡುಬಡುಕೆಯವರ ಭವಿಷ್ಯ,ವೇಷಗಾರರು,ಕಾಡಸಿದ್ದರು,,ದುರುಗಮುರಗಿಯವರು,ಪರ್ವತಮಲ್ಲಯ್ಯ, ಹೀಗೆ ಹಲವಾರು ಪ್ರಕಾರಗಳಲ್ಲಿ ಹಲವಾರು ಪ್ರಾಂತ್ಯಗಳಲ್ಲಿ ಜೀವನದ ಎಲ್ಲಾ ಮಜಲುಗಳಲ್ಲಿ ತನ್ನ ಪ್ರಾದೇಶಿಕ ಸಾಂಪ್ರದಾಯಿಕ ನುಡಿಗಟ್ಟಿನ ಮಜಲುಗಳಲ್ಲಿ ಹಾಸು ಹೊಕ್ಕಾಗಿರುವ ಮಹಾವ್ರೃಕ್ಷದಂತಿರುವ ಜಾನಪದದಲ್ಲಿ ಹಲವಾರು ಟೊಂಗೆಗಳಂತಿರುವ ಜಾನಪದ ಹಾಡಗಳು ದೈನಂದಿನ ಜೀವನದಲ್ಲಿ ನಡೆನುಡಿಗಳಿಂದ ಪದ ಪುಂಜಗಳ ಲಾಲಿತ್ಯ ದಿಂದ ದೇಶೀಯತೆಯ ಸೊಗಡಿನಿಂದ ಕಟ್ಟಿದ ಜನಪದರು ಜಾನಪದದ ಹಿರಿಮೆಯನ್ನು ಬೆಳಗಿ ಬೆಳೆಸಿದರು,ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸುವ ಮನೋಭಾವನೆಯನ್ನು ಹಾಡುಗಾರಿಕೆಯಿಂದ, ತಾಳಮದ್ದಳೆ ಕುಣಿತಗಳಿಂದ ಆತ್ಮಸ್ಥೈರ್ಯವನ್ನು ಹೆಚ್ಚಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು..

ಜನಪದ ಲೋಕದ ಬೀಡಾಗಿದ್ದ ಹಳ್ಳಿಗಳಲ್ಲಿ ಇಂದು ದೂರದರ್ಶನ, ಮೊಬೈಲು ಲಗ್ಗೆ ಇಟ್ಟು ಜನಪದ ಕಲೆಗಳು ನಶಿಸಿ ಹೋಗುವ ಆತಂಕದಲ್ಲಿವೆ,ಮುಂದಿನ ಪೀಳಿಗೆಗೆ ಜಾನಪದ ಕಲಾ ಸಂಸ್ಕೃತಿಯನ್ನು ಮರೆಯುವ ಮುನ್ನ ಅವುಗಳಿಗೆ ಜೀವ ಕೊಡುವ ಕೆಲಸ ಆಗಬೇಕಾಗಿದೆ. ಅಂತಹ ಜೀವ ಕೊಡುವ ಕೆಲಸ ಜಾನಪದವನ್ನು ಬೆಳೆಸುವ ಕೆಲಸ ಕರ್ನಾಟಕ ಜಾನಪದ ಪರಿಷತ್ ರಿ ಬೆಂಗಳೂರು, ಮಹಾರಾಷ್ಟ್ರ ಘಟಕ ಮುಂಬಯಿ ಕರ್ನಾಟಕದ ಮಣ್ಣಿನ ಜಾನಪದದ ಸೊಗಡನ್ನು ಮಾಯಾನಗರಿ ಮುಂಬಯಿ ನೆಲದಲ್ಲಿ ಪರಿಮಳದ ಸುಗಂಧವನ್ನು ಡಾ,ಆರ್,ಕೆ, ಶೆಟ್ಟಿ ಅವರ ಸಾರಥ್ಯದಲ್ಲಿ ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು, ಮುಂಬಯಿ ಸುಮಾರು ಹದಿನೇಳು ತಂಡಗಳಲ್ಲಿ ಮಕ್ಕಳು ಜಾನಪದ ಕಲೆಯ ನ್ರೃತ್ಯ ರೂಪಕಗಳು ಸಭಿಕರ ಮನದಲಿ ಮಿಂದೆದ್ದು ಹರ್ಷೋದ್ಗಾರದ ಮುಗಿಲು ಮುಟ್ಟಿತು, ಪ್ರತಿಯೊಂದು ತಂಡದ ವಸ್ತ್ರವಿನ್ಯಾಸ ಅಭಿನಯ ಗ್ರಾಮೀಣ ಸೊಬಗಿನ ಹಿನ್ನಲೆಯಲಿಂದ ಎಲ್ಲರ ಕಣ್ಮನದಲಿ ಸಂತಸ ಅಭಿಮಾನ ಗೌರವ ಹುಟ್ಟುವಂತೆ ಮಾಡಿದ್ದು ಅಮೋಘ ಯಶಸ್ಸು.ಮತ್ತು ಸೋಲಾಪುರ ದಿಂದ ಬಂದ ಜನಪದ ಕಲಾವಿದರಿಂದ ಮೈಲಾರ ಲಿಂಗ, ಏಳುಕೋಟಿ ಮಲ್ಲಯನ ಹಾಡು ಹಾಡುವ ಅವರು ಕೊರಳಲಿ ಗಂಟೆ,ಕೈಯಲಿ ದಮಡಿ ಹಿಡಿದು ತಾಳಕೆ ತಕ್ಕ ಹಾಗ ಹಾಡಿದ ಜನಪದ ಕಲಾವಿದರ ನೈಜ ನಿಪುಣತೆ, ಮತ್ತು ಬೆಂಗಳೂರು ಮಂಡ್ಯ ತಂಡದವರು ಮಲೆಮಹದೇಶ್ವರನ ಹೊತ್ತು ಕೊಂಡು ಪ್ರಸ್ತುತ ಪಡಿಸಿದ ಪೂಜಾ ಕುಣಿತದ ಪ್ರಸಂಗವಂತು ಮೈನವಿರೇಳಿಸುವ ಸಾಹಸ ವಾಗಿತ್ತು ಇಂತಹ ಜಾನಪದದ ಕಲೆಯನ್ನು ಮುಂಬಯಿ ಕನ್ನಡಿಗರು ಆಸ್ವಾದಿಸುವ ಸದವಕಾಶದ ಸಂದರ್ಭವನ್ನು ಒದಗಿಸಿದ ಮಹಾರಾಷ್ಟ್ರ ಘಟಕ ಅಧ್ಯಕ್ಷ ರಾದ ಡಾ, ಆರ್, ಕೆ, ಶೆಟ್ಟಿಯವರ, ಅಚ್ಚುಕಟ್ಟುತನ, ಶಿಸ್ತು,ಸಮಯಪಾಲನೆ, ಎಲ್ಲರನ್ನು ಸೇರಿಸಿ ಜವಾಬ್ದಾರಿಯನು ವಹಿಸಿ ಮಾಡಿದ ಈ ಜಾನಪದ ಕಲಾ ಮಹೋತ್ಸವದ ವಾರ್ಷಿಕ ಸಂಭ್ರಮದಲಿ ಜಾನಪದ ಕಲಾವಿದರಿಗೆ ಸನ್ಮಾನ,ನೀಡುವುದರ ಮುಖಾಂತರ ಕಲಾವಿದರ ಆತ್ಮಶಕ್ತಿಯನ್ನು ಹೆಚ್ಚಿಸಿ ಕಲೆಯ ಬೆಲೆಯನು , ಬದುಕಿನಲ್ಲಿ ಕಲೆಯ ನೆಲೆಗೆ,ಜೀವನದ ಭಾವನೆಗಳ ಬೆಲೆಯನು ಜಾನಪದ ಕಲೆಯ ಸೆಲೆಯ ಬೆಲೆಯನು ಗುರುತಿಸಿ, ಅತಿಥಿ,ಅಭ್ಯಾಗತರನು ಆಮಂತ್ರಿಸಿ,ಜಾನಪದದ ಈ ವಾರ್ಷಿಕ ಕಾರ್ಯಕ್ರಮ ಕಮಿಟಿಯ ಎಲ್ಲಾ ಸದಸ್ಯರ ಸಹಾಯದಿಂದ ಮುಂಬಯಿ ಕನ್ನಡಿಗರ ಅಭಿಮಾನದಿಂದ ಕೊಡುಗೈ ದಾನಿಗಳಿಂದ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು,.


ಲಲಿತಾ ಪ್ರಭು ಅಂಗಡಿ.
ಮುಂಬಯಿ.

4 thoughts on “ಲಲಿತಾ ಪ್ರಭು ಅಂಗಡಿ.ಜಾನಪದ ಕಲೆಗೆ ಜೀವ ತುಂಬಿದ ಮಹಾರಾಷ್ಟ್ರ ಘಟಕ.

  1. ನಿಮ್ಮ ಬರವಣಿಗೆ ತುಂಬ ಇಷ್ಟವಾಯಿತು. ಬಹಳ ಚೆಂದವಾಗಿ ಬರೆದಿದ್ದೀರಿ. ಕರ್ನಾಟಕ ಜಾನಪದ ಪರಿಷತ್ ರಿ ಬೆಂಗಳೂರು, ಮಹಾರಾಷ್ಟ್ರ ಘಟಕ ಮುಂಬಯಿಯ ಅಧ್ಯಕ್ಷರಾದ ಡಾ. ಆರ್. ಕೆ. ಶೆಟ್ಟಿಯವರಿಗೆ ಹಾರ್ದಿಕ ಶುಭಾಶಯಗಳು.

Leave a Reply

Back To Top