ಕಾವ್ಯ ಸಂಗಾತಿ
ಇಂದಿರಾ ಮೋಟೆಬೇನ್ನೂರ
ನಗುವುದ ಕಲಿಸಿ ಬಿಟ್ಟೆ
ಇತ್ತೀಚೆಗೆ ನಾನು ಸದಾ
ನಗುತ್ತಲೇ ಇರುತ್ತೇನೆ….
ನನ್ನ ಭೇಟಿಯಾದವರೆಲ್ಲ
ಹೇಳುತ್ತಲೆ ಇರುತ್ತಾರೆ….
ನೀನು ಮೊದಲು ಜಾಸ್ತಿ
ನಗುತ್ತಲೇ ಇರಲಿಲ್ಲ….
ಈಗೀಗ ಬಹಳ ನಗುತ್ತಿರುವೆ….
ನಾನೀಗ ಸದಾ
ನಗುತ್ತಲೇ ಇರುತ್ತೇನೇ
ನಿನಗಿದು ಗೊತ್ತೇ….
ನಗುವುದ ಕಲಿಸಿ ಬಿಟ್ಟೆ….ನೀನು
ಉದಾಸೀನ, ಮೌನ
ಎದೆ ಕೊರೆಯುತ್ತಿದೆ…
ಭಾವಗಳು ಬಿಕ್ಕಿದಾಗ….
ನೆನಪುಗಳು ಉಕ್ಕಿದಾಗ….
ನೋವುಗಳು ಎದೆ ತಟ್ಟಿದಾಗ
ನೋಟಗಳು ಚುಚ್ಚಿದಾಗ…
ಮಾತಿನ ಮೊನೆ ಇರಿದಾಗ…
ಕಣ್ಣಕನಸು ಕರಗಿದಾಗ..
ಮಳೆಯಲಿ ನೆನೆದಾಗ…
ಬಿಸಿಲಲ್ಲಿ ಬೆಂದಾಗ….
ದೂರದಲಿ ನಿಂದಾಗ…
ಸನಿಹವದು ಕೊಂದಾಗ….
ನಗುತಲೇ ಇರುವೆ..
ನನಗೆ ನಗುವುದ ಕಲಿಸಿ ಬಿಟ್ಟೆ..
ಧನ್ಯವಾದ ನಿನಗೆ…..
ಎಲ್ಲ ಪ್ರಶ್ನೆಗೂ ಈಗ
ನಗುವೇ ನನ್ನ ಉತ್ತರ….
ನೂರು ಮಾತು
ನುಡಿಯದ ಅರ್ಥ
ನನ್ನ ನಗುವಲಿ…..
ಮೌನವದು ಕೊಲ್ಲುವಾಗ….
ಸಾವಿರ ಸೂಜಿಗಳೂ ಒಮ್ಮೆಲೆ
ಎದೆಯಿರಿದ ನೋವಲೂ….
ಭಾವಗಳು ಬೆಂದು ಬೂದಿಯಾದ
ಬರಡಾದ ಸಾವಲೂ…
ಸಿಹಿ ಮಾವು ಕಸಿದು ಬಂದ
ಬಳುವಳಿ ಕಹಿ ಬೇವಲೂ….
ನಗುತಲೇ ಇರುವೆ…
ನಗುವುದು ಕಲಿಸಿ ಬಿಟ್ಟೆ…ನೀನು-
ಇಂದಿರಾ ಮೋಟೆಬೇನ್ನೂರ