ಡಾ. ಅರಕಲಗೂಡು ನೀಲಕಂಠ ಮೂರ್ತಿ-ಕವನ

ಕಾವ್ಯ ಸಂಗಾತಿ

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಕವನ

ಕವನ
ಹೆತ್ತ ಬ್ರಹ್ಮನ ತಲೆಯಿಂದ ಎಗರಿ
ತಲೆಯಿಂದ ತಲೆಗೆ
ಹಾರುತ್ತ ವಿಹರಿಸುವುದು
ಹಾರಿ ಹರಿದೋಡುವುದು
ವಿಮಾನದ ಹಾಗೆ
ನಿಲ್ದಾಣದಿಂದ ಮತ್ತೆ ಮತ್ತೆ
ವಿವಿಧ ನಿಲ್ದಾಣಗಳತ್ತ!

ಕವನಕ್ಕೆ ವಿಮಾನದ ಥರ
ಎರಡು ಮಾತ್ರ ಅಲ್ಲ
ಮೈಯ್ಯೆಲ್ಲ ವಿಪುಲ ರೆಕ್ಕೆ
ಉದ್ದ ಅಗಲ ಆಕಾರ ಅನೇಕ
ಯಾರು ಯಾವ ರೆಕ್ಕೆ
ಹಿಡಿದೂ ಏರಬಹುದು
ತಂಪಾಗಿ ಒಳಗೆ ಆಸೀನರಾಗಿ
ಸವಿಯಬಹುದು
ಮಹದಾನಂದಿಸಬಹುದು
ಅವರವರ ಗ್ರಹಿಕೆ ಹೀರಿ
ತಣಿವಷ್ಟು!

ವಿಮಾನದ ಹಾಗೆ
ಕವನಕ್ಕೆ ನಿರ್ದಿಷ್ಟ ಮಾರ್ಗ ಇರದು
ಜಗದಗಲ ಕ್ಷೇತ್ರ!
ಎಲ್ಲೆಲ್ಲಿಯೂ ಇಳಿದು ಏರಿ
ಹಾರಿ ಹರಿದಾಡಬಹುದು
ಆಕಾಶದನಂತ ತಣಿದು!

ಕವನ
ಗರ್ಭಾಂಕುರವಾದಷ್ಟು
ಮತ್ತದರ ಹೆರಿಗೆ
ಸುಲಭ ಅಲ್ಲ…!


Leave a Reply

Back To Top