ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಕನ್ನಡವೆನೆ ಕುಣಿದಾಡುವುದೆನ್ನೆದೆ

ಕನ್ನಡವೆನೆ ಕುಣಿದಾಡುವುದೆನ್ನೆದೆ

“ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಅಂತ ಆ ಮರ್ಯಾದಾ ಪುರುಷೋತ್ತಮ ರಾಮ ಚಂದ್ರನೇ ಹೇಳಿಬಿಟ್ಟಿದ್ದಾನೆ ಕಣ್ರೀ… ಇನ್ನು ನಮ್ಮಂಥವರು ಹಾಗೆ ಅಂದುಕೊಳ್ಳುವುದರಲ್ಲಿ
ಖಂಡಿತ ಆಶ್ಚರ್ಯವೇನೂ ಇಲ್ಲ; ಹೆಚ್ಚುಗಾರಿಕೆ ಅಂತೂ ಖಂಡಿತಾ ಇಲ್ಲ.

ಬದುಕಿನ ಐವತ್ತು ವಸಂತಗಳನ್ನು ದಾಟಿದ ಮೇಲೆ ಮುಂದಿನ ಜನ್ಮದ ಬಗ್ಗೆ ಯೋಚನೆ ಬಂದಾಗಲೆಲ್ಲ ಅನಿಸೋದು ಬರೋ ಜನ್ಮದಲ್ಲೂ ಈ ಕನ್ನಡ ನಾಡಲ್ಲೇ ಹುಟ್ಟಿಸಪ್ಪಾ ದೇವರೇ. ಯಾಕೆ ಅಂತ ಕೇಳ್ತೀರಾ .ಜನ್ಮಪೂರ್ತಿ ಓದಿದರೂ ಮುಗಿಯದ ವಿಪುಲ ಸಾಹಿತ್ಯ ವಾಜ್ಞ್ಮಯ ರೀ….. ಖಂಡಿತ ಈ ಜನ್ಮದಲ್ಲಿ ಮುಗಿಸೋಕಾಗಲ್ಲ ಆವಾಗ ಬಂದು ಮುಂದುವರಿಸೋದು ಅಂತ. ಇದು ಅತಿಶಯೋಕ್ತಿ ಖಂಡಿತ ಅಲ್ಲ. ಆದಿಕವಿ ಪಂಪ ನಾದಿಯಾಗಿ ರನ್ನ, ಜನ್ನ, ನಾಗವರ್ಮ ರಾಘವಾಂಕರ ಕೃತಿಗಳು, ಅನುಭಾವದ ಗಣಿಗಳಾದ ವಚನಗಳು, ಆಧ್ಯಾತ್ಮದ ಅರಿವು ಮೂಡಿಸುವ ದಾಸಸಾಹಿತ್ಯ. ಇನ್ನು ಆಧುನಿಕ ಕನ್ನಡ ಸಾಹಿತ್ಯದ ಕಾವ್ಯ ಕವನ ಪ್ರಬಂಧ ಹರಟೆ ಸಣ್ಣ ಕಥೆ ಕಾದಂಬರಿಗಳು ಇಂತಹ ಸಮೃದ್ಧ ಸಾಹಿತ್ಯದ ಪರಿಚಯ ಮಾಡಿಕೊಳ್ಳಲು ಏಳೇಳು ಜನ್ಮಗಳೇ ಸಾಲವು. 8 ಜ್ಞಾನಪೀಠಗಳನ್ನು ಪಡೆದ ಅದ್ಭುತ ಸಾಧನೆ ನಮ್ಮ ಸಾಹಿತ್ಯ ಕ್ಷೇತ್ರದ್ದು. ಅದಕ್ಕೆ ಅಣ್ಣಾವ್ರ ಹಾಡಿಗೆ ದನಿ ಸೇರಿಸಿ ಹಾಡೋದು ನಾನು

ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು ಮೆಟ್ಟಿದರೇ ಕನ್ನಡ ಮಣ್ಣನ್ನು ಮೆಟ್ಟಬೇಕು

ಭೌಗೋಳಿಕವಾಗಿ ತೊಗೋಳಿ. ಎಂತಹ ಸಮೃದ್ಧ ಪ್ರಕೃತಿ ಸೌಂದರ್ಯದ ಮಡಿಲು ನಮ್ಮ ಕನ್ನಡ ನಾಡು . ಕೊರಳ ಹಾರವಾಗಿ ಶೋಭಿಸುವ ಕರಾವಳಿ, ಸಸ್ಯ ಸಮೃದ್ಧಿಯ ಹಚ್ಚಹಸಿರಿನ ಮಲೆನಾಡು, ಮಲೆನಾಡ ಸೆರಗಾದ ಚಿಕ್ಕಮಗಳೂರು ಹಾಸನ ಧಾರವಾಡಗಳು, ಗಂಡುಮೆಟ್ಟಿನ ನಾಡು ಚಿತ್ರದುರ್ಗ, ಬಿಸಿಲ ಬೇಗೆಯನ್ನು ಉಂಡರೂ ಸವಿಯ ಆತಿಥ್ಯದ ಸೊಗವುಣಿಸುವ ಉತ್ತರ ಕರ್ನಾಟಕ, ನಿಸರ್ಗ ಸೌಂದರ್ಯದ ಉತ್ತರ ಕನ್ನಡ, ಸಾಂಸ್ಕೃತಿಕ ಸಮೃದ್ಧ ಹಳೆ ಮೈಸೂರು ಪ್ರಾಂತ್ಯ ವಿಭಿನ್ನ ರೀತಿಯ ಅನುಭವ ಕೊಡುವ ಸುಂದರ ತಾಣಗಳು. ಇವೆಲ್ಲವನ್ನು ಮನಃಪೂರ್ತಿ ಮನದಣಿಯೆ ನೋಡಿ ಹಾಡಿ ಅನುಭವಿಸಲು ಈ ಜನ್ಮ ಸಾಲದೇ ಸಾಲದು. ಪಂಪ ನುಡಿದಂತೆ

ಆರಂಕುಸವಿಟ್ಟೊಡಂ ನೆನೆವುದೆನ್ನ
ಮನಂ ಬನವಾಸಿದೇಶಮಂ

ಎಂಬಂತೆ ಮತ್ತೆ ಮತ್ತೆ ನರಜನ್ಮ ಬಂದರೆ ಕರ್ನಾಟಕದಲ್ಲೇ ಆಗಲಿ ನನ್ನ ಜನನ ಎನ್ನುವುದು ನನ್ನ ಮನ .

ಗಂಧದ ನಾಡು, ಚಂದನದ ಬೀಡು, ವೀಣೆಯ ಖನಿ, ರೇಷ್ಮೆಯ ನವಿರು, ಸಜ್ಜನತೆಯ ತೇರು, ಸ್ನೇಹದ ಸುಗಂದ, ಸಹಿಷ್ಣುತೆಯೆನ್ನುವ ಧಾರಾಳತನ ಇಲ್ಲಿಲ್ಲದೇ ಇನ್ನೆಲ್ಲಿ ಕಾಣಲು ಸಾಧ್ಯ? ಅನ್ಯಭಾಷಿಗರಿಗೂ ನೆಲೆ ಕೊಟ್ಟು ಕೊನೆಗೆ ನಮ್ಮ
ತನವನ್ನೇ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ . ಈ ದೌರ್ಬಲ್ಯಗಳನ್ನು ಹತ್ತಿಕ್ಕಿ ಕವಿರಾಜಮಾರ್ಗದಲ್ಲಿ ಬಣ್ಣಿಸಿದ ಕನ್ನಡಿಗರಂತೆ

ಸುಭಟರ್ಕಳ್ ಕವಿಗಳ್ ಸು
ಪ್ರಭುಗಳ್ ಚೆಲ್ವರ್ಕಳಭಿಜನರ್ಕಳ್ ಗುಣಿಗಳ್ ಅಭಿಮಾನಿಗಳತ್ಯುಗ್ರರ್
ಗಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್

ಎಂಬಂತಹ ನಾಡಜನ ತುಂಬಿದ ಕನ್ನಡಾಭಿಮಾನದ ಕನ್ನಡನಾಡನ್ನು ಕಾಣಲು ಮತ್ತೆ ಮತ್ತೆ ಹುಟ್ಟಿ ಬರಲೇಬೇಕಲ್ಲವೇ ಈ ನಮ್ಮ ಚೆಲುವಿನ ಬೀಡಿನಲ್ಲಿ?

ಶಿಲ್ಪಕಲೆಯ ಸಾಕಾರವಾದ ಚೆಲುವೇ ಮೂರ್ತಿವೆತ್ತ ಬೇಲೂರು, ಹಳೇಬೀಡು, ಸೋಮನಾಥಪುರ, ಹಂಪೆ ಪಟ್ಟದಕಲ್ಲುಗಳ ಸೌಂದರ್ಯ ಸವಿಯಲು ಧರ್ಮಸ್ಥಳದ ಮಂಜುನಾಥ, ಸುಬ್ರಹ್ಮಣ್ಯದ ನಾಗಪ್ಪ ನಂಜನಗೂಡು ಮುರುಡೇಶ್ವರದ ಈಶ್ವರ, ಶ್ರೀರಂಗಪಟ್ಟಣ ಬಿಳಿಗಿರಿ ಬೆಟ್ಟದ ರಂಗನಾಥ, ವೇಣುಗೋಪಾಲರ ದರ್ಶನ ಎಷ್ಟು ನೋಡಿದರೂ ಸಾಕೆನಿಸುವುದಿಲ್ಲ. ಶೃಂಗೇರಿ ಶಾರದಾಂಬೆ, ಕೊಲ್ಲೂರ ಮೂಕಾಂಬೆ ಹೊರನಾಡು ಅನ್ನಪೂರ್ಣೆ, ನಮ್ಮೂರ ಚಾಮುಂಡಿ ಎಷ್ಟು ನೋಡಿದರೂ ಮನ ತಣಿಯುವುದಿಲ್ಲ. ಮತ್ತೆ ಮತ್ತೆ ಬೇಕೆನಿಸುತ್ತಲೇ ಇರುತ್ತದೆ. ಅದಕ್ಕೇ

ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್

ಎಂಬ ಪಂಪನ ಅಭಿಲಾಷೆಯೇ ನನ್ನ ಅಭಿಮತವೂ ಕೂಡ.

ಎಂಟನೇ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಗಳಿಸಿದ ಕನ್ನಡ ಉಚ್ಚರಿಸಿದಂತೆಯೇ ಬರೆಯುವ ಉಚ್ಛ ಭಾಷೆ. ಲಿಪಿಯೋ ಮುತ್ತುಗಳನ್ನು ಪೋಣಿಸಿದಂತೆ. ಅದಕ್ಕೆ ಆಚಾರ್ಯ ವಿನೋಬಾ ಭಾವೆಯವರು ಕನ್ನಡವನ್ನು “ಲಿಪಿಗಳ ರಾಣಿ” ಎಂದಿರುವುದು. ನಮ್ಮ ಈ ಸುಂದರ ಭಾಷೆಗೆ ಮೊದಲ ನಿಘಂಟು ಬರೆದವರು ವಿದೇಶಿಯರೇ ರೆವರೆಂಡ್ ಕಿಟಲ್ ಅಂದರೆ ಇದರ ಚುಂಬಕತೆಯ ಪರಿ ಅರಿಯಬಹುದು.

“ಸಿಲಿಕಾನ್ ಸಿಟಿ” ಎಂದೇ ಪ್ರಖ್ಯಾತವಾದ ಬೆಂಗಳೂರು ನವೀನ ತಂತ್ರಜ್ಞಾನದ ತೊಟ್ಟಿಲು. ಪ್ರಸಿದ್ಧ ಅಭಿಯಂತರಾದ ವಿಶೇಶ್ವರಯ್ಯ, ವಿಜ್ಞಾನಿ ಸಿ ವಿ ರಾಮನ್, ಇನ್ಫೋಸಿಸ್ನ ಸುಧಾಮೂರ್ತಿ ನಾರಾಯಣಮೂರ್ತಿ ಹೆಸರಿಸುತ್ತಾ ಹೋದರೆ ಮುಗಿಯದ ಪಟ್ಟಿ. ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಸಾಧಿಸಿದ ಕನ್ನಡಿಗರಿದ್ದಾರೆ ಎಂಬುದು ನಮ್ಮ ಹೆಮ್ಮೆ.

ಇವೆಲ್ಲ ಸಂಗತಿಗಳು ಒತ್ತಟ್ಟಿಗಾದರೆ ಕನ್ನಡವನ್ನು ಕನ್ನಡಮ್ಮನನ್ನು ಕನ್ನಡನಾಡನ್ನು ಪ್ರೀತಿಸಲು ಕಾರಣಗಳೇ ಬೇಕಿಲ್ಲ. ಅಮ್ಮನ ಒಡಲಲ್ಲಿ ಇದ್ದಾಗಿನಿಂದ ಕೇಳಿದ ಭಾಷೆ, ಅಮ್ಮನ ಮಡಿಲಲ್ಲಿ ಅಪ್ಪನ ಹೆಗಲಲ್ಲಿ ಜಗವನ್ನು ಅರ್ಥಮಾಡಿಕೊಂಡ ಭಾಷೆ, ಸೋದರ ಸೋದರಿ ಮಿತ್ರರೊಂದಿಗೆ ನಲಿದ ಭಾಷೆ, ನನ್ನ ಮೆಚ್ಚಿದವನನ್ನು ಅರಿಯಲು ಸಹಾಯಕವಾದ ಭಾಷೆ, ಸಮಾಜದಲ್ಲಿ ನೆಲೆಗೊಳ್ಳಲು ವ್ಯವಹರಿಸಲು ಅನುಕೂಲವಾದ ಭಾಷೆ; ಸರ್ವವೂ ಅವಳೇ! ಸರ್ವಸ್ವವೂ ಅವಳೇ! ಅನನ್ಯ ಅನುಪಮ ಅದ್ಭುತ ಅಮೂಲ್ಯ ನಮ್ಮ ಕನ್ನಡ. ಈಗ ಬದುಕಿನ ಅಸ್ಮಿತೆಯ ಹುಡುಕಾಟದಲ್ಲಿ ಬರವಣಿಗೆಯ ಮಾರ್ಗ ತೋರಿಸಿ ಕೈಹಿಡಿದು ಮುನ್ನಡೆಸುತ್ತಿರುವ ಮಾರ್ಗದರ್ಶಿ ದೈವೀ ಸ್ವರೂಪ. ಅಂತಹ ಕನ್ನಡವನ್ನು ಪ್ರೀತಿಸಲು ಬಣ್ಣಿಸಲು ಹೊಗಳಲು ಕಾರಣದ ಅಗತ್ಯತೆ ಅನಿವಾರ್ಯತೆಗಳಿಲ್ಲ. ಇರುವುದು ಶಬ್ದಗಳ ಅಭಾವ; ಭಾವವನ್ನು ಪದಗಳಿಗಿಳಿಸುವ ಅಸಮರ್ಥತೆ ಅಷ್ಟೇ; ಮುಂದೆಯೂ ಕನ್ನಡ ಭುವನೇಶ್ವರಿಯ ಆರಾಧನೆ ಗೈವ ಕಸುವನ್ನು ಆಕೆ ಕೊಡಲಿ ಅಸುವು ಹೋದರೆ ಮತ್ತೆ ಇಲ್ಲೇ ಹುಟ್ಟಿ ಬರುವ ಸೌಭಾಗ್ಯ ಒದಗಲಿ . ರತ್ನನ ನನ್ನಿಷ್ಟದ ಈ ಪದಗಳೊಂದಿಗೆ ವಿದಾಯ ಹೇಳುವೆ

ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ್ ಪದವಾಡ್ತೀನಿ


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top