ಇಂದಿರಾ ಮೋಟೆಬೆನ್ನೂರ ಕವಿತೆ-ಎನ್ನೆದೆಯ ಗೂಡಿನಲ್ಲಿ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಎನ್ನೆದೆಯ ಗೂಡಿನಲ್ಲಿ

ಎನ್ನೆದೆಯ ಗೂಡಿನಲ್ಲಿ ಅವಿತು ಕುಳಿತು
ಅಳುತಿಹುದೊಂದು ಕವಿತೆ…
.
ಬಿಚ್ಚಿಟ್ಟ ಭಾವಗಳ ಅಳಿಸಿಬಿಡುವೆ
ಕಣ್ಣಲಿ ಕನಸಾಗುವ ಮುನ್ನ…..
ಮುಚ್ಚಿಟ್ಟ ನೋವುಗಳ ಗೀರಿಬಿಡುವೆ
ಮಣ್ಣಲಿ ಮರೆಯಾಗುವ ಮುನ್ನ……
ಮಾಡದ ತಪ್ಪಿಗೆ ಶಿಕ್ಷೆಯ ಬರೆಯೆಳೆದೆ…
ಮಾಯದ ಗಾಯವ ನೀಡಿ ಮಾಯವಾದೆಯೆಲ್ಲ….
ನೋವಿನಾಳ ಬಲ್ಲೆಯೇನು..?

ಫರಮಾನ್ ಹೊರಡಿಸಿದೆಯಲ್ಲ…
ಹೊರಟು ಬಿಡು ನಿನ್ನಿಷ್ಟ ಎಂದು…
ನಿನ್ನ ನೆನಪಿನ ಕುಣಿಕೆಗಳು
ಅಳಿಸಿದ ಹೆಜ್ಜೆ ಗುರುತುಗಳು
ಗೀರಿದ ಗಾಯಗಳೂ
ಮಾಯವಾಗದ ನೋವುಗಳೂ
ಉಸಿರು ಗಟ್ಟಿದ ಮೌನ….ಎದೆಗೂಡ ತುಂಬ…

ನೇವರಿಕೆ ಇಲ್ಲದ ನೋವುಗಳ
ಭಾವಗಳ ಕುಲುಮೆಗೆಸೆದೆ….
ತಿದಿ ಒತ್ತಿದೊಡನೆ ಕಿಡಿ
ಹಾರಿ ಸುಡುತಿದೆ ಎದೆಗೂಡು…..
ಬರೆದು ಅಳಿಸಿದ ಒಲವಿನ ಓಲೆಯ
ಪಳಿಯುಳಿಕೆಗಳ ನಡುವೆ ಉಸಿರ
ಚಿಗುರು ಅರಸುತಿರುವೆ…..

ಪುಟ್ಟ ಎದೆಗೂಡ ತುಂಬ
ಬಿಕ್ಕುತಿಹ ಭಾವಗಳು..
ಬಟ್ಟಲ ಕಂಗಳ ತುಂಬ
ಹನಿಯಲಾರದ ಹನಿಗಳು….
ತುಟಿಯಂಚಲಿ ಉರುಳಲಾರದ
ನಗೆ ಬುಗ್ಗೆಗಳು….
ಬಿರಿಯಲಾರದ ಮೌನ ಮೊಗ್ಗೆಗಳು..

ಬಿತ್ತಿದ ಭಾವ ಬೀಜ
ಪಡಲೊಡೆದು ಜೀವ ಪಡೆದು
ಕುಡಿಯೊಡೆದು ನಗುತಿರುವಾಗ..
ಚಿವುಟಿ ತರಿದೊಗೆದೆ….
ಎದೆ ಗೂಡ ತಾವಿನಲಿ
ಬೇವು ನೋವಿನ ಹೂಗಳು…
ಮುಷ್ಕರ ಹೂಡಿವೆ ಕನವುಗಳು….

ಹೆಪ್ಪಿಟ್ಟ ಭಾವಗಳ
ಕಡೆದು ಎದೆ ನೋವ ಬೆಣ್ಣೆ
ತೇಲಲು ನೀನೇ ಬರಬೇಕು…..
ಕಾಪಿಟ್ಟ ಕನಸುಗಳ
ಮುಡಿದು ಮಳೆಬಿಲ್ಲ ಬಣ್ಣ
ತಳೆಯಲು ನೀನೇ ಬರಬೇಕು……
ನೋವು ಹುಣ್ಣಾಗಿ ಎದೆಗೂಡ ಸುಡುವ ಮುನ್ನ……


3 thoughts on “ಇಂದಿರಾ ಮೋಟೆಬೆನ್ನೂರ ಕವಿತೆ-ಎನ್ನೆದೆಯ ಗೂಡಿನಲ್ಲಿ

  1. ಕಾಯುವ ಕಂಗಳ ಭಾವನೆಗಳ ಬೆಣ್ಣೆ ದಾರಿಯುದ್ದಕ್ಕೂ ಬೆಂದು ….. ಸಿಗುವ ಆ ಘೃತವು ಅದೆಷ್ಟು ಪಾವನ ಭಾವ ನೀಡೀತು ಇಂದಕ್ಕ……ಅಪ್ರತಿಮವಾಗಿದೆ ಕವಿತೆ .

  2. ಮಂಜುಳಾ ಅಕ್ಕ…ಸ್ಪಂದನೆಗೆ ಧನ್ಯವಾದಗಳು…

Leave a Reply

Back To Top