ಗುಣಾಜೆ ರಾಮಚಂದ್ರ ಭಟ್ ಕವಿತೆ-ಭೂಮಿಯೊಂದೆ

ಕಾವ್ಯ ಸಂಗಾತಿ

ಗುಣಾಜೆ ರಾಮಚಂದ್ರ ಭಟ್

ಭೂಮಿಯೊಂದೆ

ಭರದಲಿ ಕೆಡುತಲಿ ಪರಿಸರ ವಿಷಮಯ
ಹರಿದಿದೆ ಕೊಳೆಯು ತೊರೆಗಳಲಿ..

ನೀರಿನ ಮೂಲವು ವಾರಿಧಿಯಾಗಿದೆ
ಜಾರುತ ಬುವಿಗೆ ಮಳೆ ಸುರಿಯೆ ..

ಜಲ ನಿಧಿ ಬತ್ತಲು ಕಳವಳಗೊಳುತಲಿ
ಮಳೆಯನು ಬಯಸಿ ಬಳಲುವರು..

ಬರಿಸವು ಬರದಿರೆ ಕೊರತೆಯು ನೀರಿಗೆ
ಕೊರಗುವ ಮನುಜ ಕರಗುವನು..

ವಿಷವನು ಬೆರೆಸಲು ವಿಷಮಯ ಬದುಕದು
ಕಸಗಳು ತುಂಬಿ ಮಲಿನ ಮಯ..

ತಾಯಿಯ ಹಾಗೆಯೆ ಕಾಯುವ ಪೊಡವಿಯು
ಸಾಯಿಸೆ ನಮ್ಮ ಬದುಕಿಹುದೆ ?

ಜಲ ನಿಧಿ,ಗಾಳಿಯ,ನೆಲವನು ಕೆಡಿಸುತ
ಕಳೆಯುವೆ ನಿನ್ನ ಬದುಕ ಸಿರಿ ..


One thought on “ಗುಣಾಜೆ ರಾಮಚಂದ್ರ ಭಟ್ ಕವಿತೆ-ಭೂಮಿಯೊಂದೆ

  1. ಗುಣಾಜೆ ರಾಮಚಂದ್ರ ಭಟ್ಟರ ೮೪ ನೆಯ ಏಳೆ ಛಂದಸ್ಸಿನ *ಭೂಮಿಯೊಂದೆ* ಕವನದ ಅವಲೋಕನ.
    ***
    ಕಾನ ಸುಂದರ ಭಟ್ಟ
    08.04.2023 ಶನಿವಾರ
    ***
    “ಭರತ ಭೂಮಿ ನನ್ನ ತಾಯಿ
    ನನ್ನ ಪೊರೆವ ತೊಟ್ಟಿಲು
    ಜೀವನವನೆ ದೇವಿಗೆರೆವೆ
    ಬಿಡುತೆ ಗುಡಿಯ ಕಟ್ಟಲು”
    ಎಂದಿದ್ದಾರೆ ರಾಷ್ಟ್ರಕವಿ ಕುವೆಂಪು ಅವರು. ಈ ಭೂಮಿಯನ್ನು ಪ್ರೀತಿಸುತ್ತಾ ಪೊರೆಯುವುದು ನಮ್ಮ ಆದ್ಯ ಕರ್ತವ್ಯ.

    ದುರದೃಷ್ಟವಶಾತ್ ಕೊಳೆಯನ್ನು ತೊರೆಗಳಿಗೆ ಹರಿಯಿಸಿ, ಪರಿಸರವನ್ನು ವಿಷಮಯ ಮಾಡುವವರು ಯಾರು? ನಾವೇ! ಪರಿಸರವನ್ನು ನಮ್ಮ ಜನತೆ ಭರದಿಂದ ಕೆಡಿಸುತ್ತಿದೆ.

    ನಮಗೆ ಬೇಕಾದ ನೀರಿನ ಮೂಲವು ವಾರಿಧಿ ಎಂಬುದರಲ್ಲಿ ಎರಡು ಮಾತಿಲ್ಲ. ಆವಿಯಾಗಿ ಆಗಸ ಸೇರಿದ ನೀರು ಬುವಿಗೆ ಮಳೆಯಾಗಿ ಸುರಿಯುತ್ತದೆ.

    ಆದರೀಗ ಜಲನಿಧಿ ಬತ್ತುತ್ತಿದೆ. ಜನರು ಕಳವಳಗೊಂಡಿದ್ದಾರೆ. ಮಳೆಯನ್ನು ಬಯಸಿ ಬಯಸಿ ಬಳಲುತ್ತಿದ್ದಾರೆ.

    ಬರಿಸ ಬರದೆ ನೀರಿನ ಕೊರತೆ ಏರ್ಪಟ್ಟು ಎಲ್ಲೆಡೆ ಹಾಹಾಕಾರ ಎದ್ದಿದೆ. ಕೊರಗುತ್ತಾ ಮನುಜನಿಂದು ಕರಗಿಯೇ ಹೋಗುತ್ತಿದ್ದಾನೆ.

    ಇದೇ ಮನುಜ ಪರಿಸರಕ್ಕೆ ವಿಷವನ್ನು ಬೆರೆಸಿ ಬದುಕನ್ನು ಹಾಳು ಮಾಡಿಕೊಂಡಿದ್ದಾನೆ. ನಮ್ಮ ಸುತ್ತಮುತ್ತಲಿನ ಪ್ರದೇಶಗಳು ಕಸಗಳಿಂದ ತುಂಬಿ ಎಲ್ಲಿ ನೋಡಿದರಲ್ಲಿ ಪರಿಸರವೆಲ್ಲ ಮಲಿನಮಯವಾಗಿದೆ.

    ನಮ್ಮ ಪೊಡವಿ ನಮ್ಮನ್ನೆಲ್ಲ ತಾಯಿಯ ಹಾಗೆ ಕಾಯುತ್ತಿದೆ. ಅಂತಹ ಪೊಡವಿಯನ್ನೇ ಸಾಯಿಸಿದರೆ ನಮಗೆ ಉಳಿಗಾಲ ಇದೆಯೇ? ನಮ್ಮ ಬದುಕು ಮೂರಾಬಟ್ಟೆಯಾಗಿದೆ.

    ಮಾನವನ ಬದುಕಿನ ಸಿರಿ ಕೆಡುತ್ತಿದೆ. ಜಲನಿಧಿ, ಗಾಳಿ, ನೆಲವೆಲ್ಲ ಕೆಡುತ್ತಿವೆ. ಬದುಕಿನ ಸಿರಿ ಕಳೆದುಹೋಗುತ್ತಿದೆ. ಜನರು ಇನ್ನಾದರೂ ಎಚ್ಚೆತ್ತುಕೊಳ್ಳುವರೇ?
    ***

Leave a Reply

Back To Top