ಮಕ್ಕಳ ಕವಿತೆ

ಅರುಣಾ ರಾವ್

ಕಾಗಕ್ಕ -ಗುಬ್ಬಕ್ಕ

ಕಾಗೆ ಗುಬ್ಬಿ ಅಕ್ಕಪಕ್ಕ
ಮನೆಗಳಲ್ಲಿ ಇದ್ದವು
ಕಾಗೆಯದು ಸಗಣಿ ಮನೆ
ಗುಬ್ಬಿದೇನೊ ಶಿಲೆಯದು

ಇರುಳು ಜೋರು ಮಳೆ ಸುರಿಯೆ
ಸಗಣಿ ಕೊಚ್ಚಿ ಹೋಯಿತು
ಕಾಗೆ ಅಳುತ ಓಡಿ ಬಂದು
ಗುಬ್ಬಿ ನೆರವು ಬೇಡಿತು

ಗುಬ್ಬಿ ಮನೆಯು ಕೂಡ ಬಹಳ
ಚಿಕ್ಕದಾಗಿ ಇದ್ದಿತು
ಅಟ್ಟದಲ್ಲಿ ಮಲಗು ಎನಲು
ಕಾಗೆ ಅಟ್ಟ ಹತ್ತಿತು

ಅಟ್ಟದಲ್ಲಿ ರಾಶಿ ರಾಶಿ
ತಿಂಡಿ ತಿನಿಸು ಇದ್ದಿತು
ಅದನು ಕಂಡು ಹರುಷಗೊಂಡ
ಕಾಗೆ ತಿನ್ನತೊಡಗಿತು

ಅಟ್ಟದಿಂದ ಒಂದೇ ಸಮನೆ
ಶಬ್ದ ಕೇಳತೊಡಗಿತು
ಸಪ್ಪಳವ ಕೇಳಿ ಗುಬ್ಬಿ
ಸಂದೇಹವ ತಾಳಿತು

ಶಬುದವೇನದೆಂದು ಗುಬ್ಬಿ
ಕಾಗೆಯನ್ನು ಕೇಳಿತು
ತಿಂಡಿಪೋತ ಕಾಗೆ ಆಗ
ಮಿಥ್ಯವನ್ನು ನುಡಿಯಿತು

ಪಕ್ಕದೂರಿನ ಮದುವೆಯಲ್ಲಿ
ಕೊಟ್ಟ ಅಡಿಕೆ ಎಂದಿತು
ಬಹಳ ಗಟ್ಟಿ ಕಷ್ಟ ಪಟ್ಟು
ಅಗೆಯುತಿರುವೆನೆಂದಿತು

ರಾತ್ರಿ ಪೂರ ಚಕ್ಕುಲಿ ಉಂಡೆ
ಕಾಗೆ ತಿಂದು ತೇಗಿತು
ಬೆಳಕು ಹರಿಯೆ ಪುರ್ರನೆಂದು
ನಗುತ ಹಾರಿ ಹೋಯಿತು
ಇತ್ತ ಗುಬ್ಬಿ ಮರಿಯು ತನಗೆ
ಹಸಿವು ಎಂದು ಕೇಳಿತು
ಅಟ್ಟದಲ್ಲಿ ಖಾಲಿ ಡಬ್ಬಿ ನೋಡಿ
ಗುಬ್ಬಿ ಕುಪಿತಗೊಂಡಿತು

ವಾಯಸಕ್ಕೆ ಜಾಗ ಕೊಟ್ಟು
ಕೆಟ್ಟೆನೆಂದು ಅರಚಿತು
ಪರಕೀಯರ ನಂಬಬಾರದೆಂಬ
ಪಾಠ ಕಲಿಯಿತು


Leave a Reply