ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಪ್ರಜ್ಞಾವಂತ ಮತದಾರರಾಗೋಣ

ಒಮ್ಮೆ ಯೋಚಿಸಿ, ಇಂದು ಮಲಗಿದ ನಾವು ನಾಳೆ ಬೆಳಗ್ಗೆ ಹಾಸಿಗೆಯಿಂದ ಏಳುತ್ತೇವೆಯೋ ಇಲ್ಲವೋ ನಮಗೆ  ತಿಳಿಯದು, ಇದರ ನಡುವೆ ದೈಹಿಕ, ಆರ್ಥಿಕ, ಮಾನಸಿಕ, ಬೌದ್ಧಿಕ , ಪರಿಸ್ಥಿತಿ ಹೇಗೇ ಇದ್ದರೂ ಈಗ ಜನರ ನಡುವೆ ರಾಜಕೀಯ ಕಚ್ಚಾಟ ಪ್ರಾರಂಭವಾಗಿದೆ. ತಾವು ಇಷ್ಟಪಟ್ಟ ಪಕ್ಷಗಳೇ ಸರಿ ಎನ್ನುತ್ತಾ ತಮ್ಮ ತಮ್ಮಲ್ಲಿ ಗುಂಪುಗಾರಿಕೆಗಳನ್ನು ನಡೆಸಿಕೊಂಡು ಪಕ್ಷದ ಪ್ರಚಾರಕ್ಕಾಗಿ ಗಿಮಿಕ್ಕುಗಳು ನಡೆಯುತ್ತಿವೆ. ಆದರೆ ಪ್ರಜ್ಞಾವಂತ ಮತದಾರರು ಜಾಗೃತರಾಗಬೇಕು. ತಾವು ಯಾವ ಪಕ್ಷಕ್ಕೆ ಮತದಾನ ಮಾಡಬೇಕು ಮತ್ತು ನಾವು ಚುನಾಯಿಸುವ ಅಭ್ಯರ್ಥಿಯು ಯಾವ ರೀತಿಯಾಗಿ ಇರಬೇಕು, ನಮ್ಮ ದೇಶದ ಭವಿಷ್ಯ ಯಾರ ಕೈಯಲ್ಲಿ ಇರುತ್ತದೆ, ಪಕ್ಷ ಯಾವುದೇ ಇರಲಿ ಉತ್ತಮ ಅಭ್ಯರ್ಥಿಯನ್ನು ಆ ಸ್ಥಾನಕ್ಕೆ ಏರಿಸುವ ಎಲ್ಲಾ ಹಕ್ಕುಗಳನ್ನು ಮತದಾರರನ್ನು ಹೊಂದಿರುತ್ತಾನೆ. ಆದಕಾರಣ ಮತದಾನವನ್ನು ಮಾಡುವಾಗ ಯಾವುದೇ ಆಸೆ ಆಕಾಂಕ್ಷೆಗಳ ಅಂಶಕ್ಕೆ ಒಳಗಾಗದೆ ಮದ್ಯ, ಕುಕರ್ , ಸೀರೆ , ಚಿಲ್ಲರೆ ಹಣ ಇತ್ಯಾದಿಗಳನ್ನು ಪಡೆದುಕೊಂಡು ತಮ್ಮ ಅಮೂಲ್ಯ ಮತಗಳನ್ನು ಮಾರಾಟ ಮಾಡದೆ ಸರಿಯಾದ ನಾಯಕನನ್ನು ದೇಶಕ್ಕೆ ಆರಿಸುವ ಮಹತ್ತಮವಾದ ಜವಾಬ್ದಾರಿಯನ್ನು ಭಾರತೀಯ ಪ್ರಜ್ಞಾವಂತ ಮತದಾರ ಹೊಂದಿರಬೇಕಾಗುತ್ತದೆ.



       ಮತದಾನ ಒಂದು ಪವಿತ್ರ ಕಾರ್ಯ.  ಹಾಗೆಯೇ ಇದು ನಮ್ಮೆಲ್ಲರ ಹಕ್ಕು. 18 ವರ್ಷ ವಯಸ್ಸಾದ ಯಾವುದೇ ಭಾರತೀಯ ಪ್ರಜೆಯೂ ಭಾರತದಲ್ಲಿ ಮತದಾನ ಮಾಡಲು ಹಕ್ಕನ್ನು ಹೊಂದಿರುತ್ತಾನೆ ಮತ್ತು ಅವನು ಆಯ್ಕೆ ಮಾಡುವ ಅಭ್ಯರ್ಥಿಯು ಅವನಿಗೆ ಸರಿ ಕಾಣುವ ಯಾರು ಬೇಕಾದರೂ ಆಗಬಹುದು.  ಆದರೆ ಸರಿಯಾದ ಅಭ್ಯರ್ಥಿಯನ್ನು ಸೂಚಿಸುವಂತಹ ಉತ್ತಮ ಜವಾಬ್ದಾರಿಯನ್ನು ಮತದಾರರನ್ನು ತೆಗೆದುಕೊಳ್ಳಬೇಕು.  ಇಲ್ಲದೆ ಹೋದರೆ ದೇಶ ರಾಜ್ಯ ಹಾಗೂ ದೇಶದ ಪ್ರತಿ ಹಳ್ಳಿಗಳ ಮತ್ತು ನಗರಗಳ ಉದ್ಧಾರ ಸಾಧ್ಯವಿಲ್ಲ.  ಈ ನಿಟ್ಟಿನಲ್ಲಿ ಮತದಾರನ ಜವಾಬ್ದಾರಿಯು ಅತ್ಯಂತ ಮಹತ್ವದ್ದಾಗಿದೆ ಮತ್ತು ಮತದಾರರು ತನ್ನ ಈ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕಿದೆ. ಇಲ್ಲದೆ ಇದ್ದರೆ ನಮ್ಮ ದೇಶವು ಕೂಡ ಶ್ರೀಲಂಕಾ,  ಪಾಕಿಸ್ತಾನ ಇವೇ ಮೊದಲಾದ ದೇಶಗಳ ಹಾಗೆ ಕಷ್ಟವನ್ನು ಅನುಭವಿಸುವಂತಹ ಪರಿಸ್ಥಿತಿ ಬರಬಹುದು. ಹಲವಾರು ಜನರನ್ನು ಹೊತ್ತ ವಿಶ್ವದ ಅತಿ ದೊಡ್ಡ ಜನಸಂಖ್ಯೆಯಲ್ಲಿ ಎರಡನೆಯ ಸ್ಥಾನ ಹೊಂದಿರುವ ಭಾರತದಂತಹ ಬೃಹತ್ ದೇಶವನ್ನು ಅಧಿಕಾರದಲ್ಲಿ ಕುಳಿತು ನಿಭಾಯಿಸುವುದು ಸುಲಭದ ಮಾತಲ್ಲ. ಇಂತಹ ಕರ್ತವ್ಯಕ್ಕೆ ಉತ್ತಮವಾದ ಅಭ್ಯರ್ಥಿಯನ್ನು ಕೆಳಮಟ್ಟದಿಂದಲೂ ಮೇಲ್ಮಟ್ಟದವರೆಗೆ ಆರಿಸಿಕೊಂಡು ಬರುವಂತಹ ಮಹತ್ತರವಾದ ಜವಾಬ್ದಾರಿಯನ್ನು ಮತದಾರರನ್ನು ಮಾಡದೆ ಹೋದರೆ, ಅದನ್ನು ನಿರ್ವಹಿಸದಿದ್ದರೆ ಮುಂದೆ ಬಹಳ ಪಶ್ಚಾತಾಪ ಪಡಬೇಕಾಗುತ್ತದೆ.  ಆದ ಕಾರಣ ಮೊದಲನೆಯದಾಗಿ ತಮ್ಮ ಕರ್ತವ್ಯವಾಗಿರುವ ಮತದಾನವನ್ನು ಪ್ರತಿಯೊಬ್ಬರೂ ಮಾಡಲೇಬೇಕು.  ಪ್ರತಿಯೊಂದು ಮತವು ಕೂಡ ಅತ್ಯಮೂಲ್ಯವಾದದ್ದು ಎಂಬುದನ್ನು ಮನಗಾಣಬೇಕು.

         ಈಗ ಮತದಾರರೇ ರಾಜರ ಹಾಗೆ ಯಾರಿಗೆ ಯಾವ ಅಭ್ಯರ್ಥಿಯನ್ನು,  ಯಾವ ಪಕ್ಷವನ್ನು ಕೂಡ ಗೆಲ್ಲಿಸುವ ಅವಕಾಶ ಪ್ರತಿಯೊಬ್ಬ ಮತದಾರರಿಗೂ ಇದೆ.  ಈಗ ಮತದಾರರು ತಮ್ಮ ಅಮೂಲ್ಯ ಮತಗಳನ್ನು ದಾಖಲಿಸದೆ ಅಥವಾ ತಮ್ಮ ಮತಗಳನ್ನು ಸರಿಯಾದ ವ್ಯಕ್ತಿಗೆ ನೀಡದೆ ಹೋದರೆ ಮುಂದೆ ನಾವೆಲ್ಲರೂ ಕೂಡ ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡಬೇಕಾದ ಸಂದರ್ಭಗಳು ಬರಬಹುದು.  ಅಲ್ಲದೆ ಭಾರತದ ಘನತೆ, ಗೌರವ ಈಗ ಉಳಿಸಿಕೊಂಡು ಬಂದಂತಹ ಸ್ಥಾನಕ್ಕೆ ಹಾಗೆಯೇ ಪ್ರಪಂಚದಲ್ಲಿ ಭಾರತಕ್ಕೆ ಇರುವ ಒಂದು ಒಳ್ಳೆಯ ಅನುಬಂಧಕ್ಕೆ ಕುತ್ತು ಬರಬಾರದು.  ಪ್ರಪಂಚದ ಎಲ್ಲಾ ದೇಶಗಳು ಈಗಿನ ಹಾಗೆಯೇ ಭಾರತ ದೇಶವನ್ನು ಮೇಲ್ಮಟ್ಟದಲ್ಲಿ ಕಾಣುವುದರ ಜೊತೆಗೆ ಗೌರವಿಸುವಂತೆ ಆಗಬೇಕು.  ಹಾಗೆಯೇ ಕಷ್ಟ ಇರುವ ಮತ್ತು ಹಿಂದುಳಿದ ಕೆಲವು ರಾಷ್ಟ್ರಗಳಿಗೆ ಭಾರತವು ಈಗಿನಂತೆ ಸಹಾಯ ಸೌಲಭ್ಯಗಳನ್ನು ಒದಗಿಸಿಕೊಡಲು ಸಮರ್ಥವಾಗಿ ಇರಬೇಕು.

       ಉಚಿತ ಶಿಕ್ಷಣ, ಉಚಿತ ಆರೋಗ್ಯ ಮತ್ತು ಬಡವರಿಗೆ ಊಟಕ್ಕೆ ಬೇಕಾದಂತಹ ವಸ್ತುಗಳು ಕಡಿಮೆ ದರದಲ್ಲಿ ಸಿಗುವಂತೆ ಆಗಬೇಕು. ದೇಶದ ಪ್ರತಿ ನಾಗರಿಕರು ಯಾವುದೇ ಭಯ ಇಲ್ಲದ ವಾತಾವರಣದಲ್ಲಿ ನಮ್ಮ ದೇಶದಲ್ಲಿ ಬದುಕುವ ಹಾಗೆ ಆಗಬೇಕು. ಹೆಣ್ಣು ಮಕ್ಕಳ ಅತ್ಯಾಚಾರ,  ಹೆಣ್ಣು ಹಸುಳೆಗಳಿಗೆ ಆಗುವಂತಹ ತೊಂದರೆ,  ಹೆಣ್ಣು ಭೂಣ ಹತ್ಯೆ – ಇದಕ್ಕೆಲ್ಲ ಕಡಿವಾಣ ಹಾಕಿ ಹೆಣ್ಣು ಮಗುವಿಗೂ ಸ್ವಾತಂತ್ರ್ಯವನ್ನು ಕೊಟ್ಟು, ಗಾಂಧೀಜಿಯವರ ಕನಸಿನ ಹಾಗೆ ಅರ್ಥರಾತ್ರಿಯಲ್ಲೂ ಕೂಡ ಒಬ್ಬಂಟಿ ಹೆಣ್ಣು ಯಾವುದೇ ಭಯವಿಲ್ಲದೆ ತನಗೆ ಕೆಲಸ ಕಾರ್ಯಗಳಿದ್ದಲ್ಲಿ ಹೊರಗೆ ಹೋಗಿ ಬರುವಂತೆ ಆಗಬೇಕು.  ದೇಶದಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಬೇಕು ಹಾಗೆಯೇ ಮನುಷ್ಯರಲ್ಲಿ ಮನುಷ್ಯತ್ವ ಉಳಿಯಬೇಕು. ಯಾವುದೇ ಅಪಘಾತಗಳಾದಾಗ ಅಲ್ಲಿನ ಜನರಿಗೆ ಸಹಾಯ ಮಾಡುವ ಮನೋಭಾವನೆಯನ್ನು ಉತ್ತಮ ಪಡಿಸುವಂತಹ ಕಾನೂನುಗಳು ದೇಶದಲ್ಲಿ ಬರಬೇಕು.  ಮತ್ತೊಮ್ಮೆ ಗಾಂಧೀಜಿ, ಡಾ. ಬಿಆರ್ ಅಂಬೇಡ್ಕರ್,  ಡಾ.  ಎಪಿಜೆ ಅಬ್ದುಲ್ ಕಲಾಂ, ಲಾಲ್ ಬಹದ್ದೂರ್ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿ, ಸುಭಾಷ್ ಚಂದ್ರ ಬೋಸ್,  ಸರ್ದಾರ್ ವಲ್ಲಭಭಾಯಿ ಪಟೇಲ್  ಮುಂತಾದ ಉತ್ತಮ ನಾಯಕರ ಹಾಗಿನ ನಾಯಕರು ಇಂದು ನಮಗೆ ಬೇಕಾಗಿದೆ. ಭಾರತೀಯ ಯುವ ಜನಾಂಗವು ತಮ್ಮ ನಾಯಕತ್ವದ ಗುಣಗಳನ್ನು ಹೆಚ್ಚಿಸಿಕೊಂಡು ಉತ್ತಮ ನಾಯಕರಾಗಿ ಬೆಳೆಯಬೇಕಿದೆ ಮತ್ತು ಭಾರತ ದೇಶವನ್ನು ಇನ್ನೂ ಎತ್ತರಕ್ಕೆ ಸೇರಿಸುವೆ ಎಂಬ ಪಣತೊಡಬೇಕಾಗಿದೆ. ಭಾರತವನ್ನು ಯಾವುದೇ ದೆಸೆಯಲ್ಲಿ ಮುನ್ನಡೆಸುವ, ನಾಯಕರನ್ನು ಆರಿಸುವ ಸರ್ವ ಜವಾಬ್ದಾರಿಯು ಭಾರತೀಯ ಮತದಾರರಾದ ನಮ್ಮ ಮೇಲಿರುವ ಕಾರಣ ನಮ್ಮ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸೋಣ. ದೇಶದ ಮಹೋನ್ನತಿಗೆ ನಾವೇ ಕಾರಣರಾಗೋಣ ಉತ್ತಮ. ವ್ಯಕ್ತಿಗಳನ್ನು ಜಾತಿ ಭೇದ ಮತಗಳ ಮರೆತು ಆರಿಸೋಣ. ಎಲ್ಲರೂ ತಮ್ಮ ಕರ್ತವ್ಯಗಳಲ್ಲಿ ಒಂದಾದ ಮತದಾನವನ್ನು ತಪ್ಪದೆ ಮಾಡೋಣ ಮತ್ತು ದೇಶದ ಏಳಿಗೆಗೆ ನಮ್ಮ ಸಹಕಾರವನ್ನು ನೀಡೋಣ ನೀವೇನಂತೀರಿ?

——————————————————-=

ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

Leave a Reply

Back To Top