ಅಂಕಣ ಸಂಗಾತಿ.

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿಯವರು ಬರೆಯುತ್ತಿದ್ದಾರೆ

ರಜೆ ಸಜೆಯಾಗದಿರಲಿ

ರಜೆ ಬಂದರೆ ಸಾಕು ಮಕ್ಕಳಿಗೆ ಅತ್ಯಂತ ಖುಷಿ. ರಜೆಯಲ್ಲಿ ಮೋಜು ಮಸ್ತಿ ಜೊತೆಗೆ ಅಜ್ಜ ಅಜ್ಜಿಯರೊಂದಿಗೆ ಕಾಲ ಕಳೆಯುವ ಹಾಗೂ ವಿವಿಧ ಬೋಜನ ಸವಿಯುವ ಅವಕಾಶ. ನೆಂಟಸ್ತರ ಊರಿಗೆ ಸುತ್ತುವ ಮತ್ತು ಅಲ್ಲಿಯ ನಿಸರ್ಗ ಸವಿಯುವ ಸುಸಂದರ್ಭ.
ನಾವೆಲ್ಲ ನಮ್ಮ ರಜೆಯ ದಿನಗಳನ್ನು ನೆನೆಸಿ ಕೊಂಡರೆ, ಅತ್ಯಂತ ಖುಷಿ ಎನಿಸುತ್ತದೆ. ಕುಂಟಿಪಿಲ್ಲೆ, ಲಗೋರಿ, ಚಿನಿದಾಂಡ, ಕಣ್ಣು ಮುಚ್ಚಾಟ, ಪಗಡಿಯಾಟ ಹೀಗೆ ಅನೇಕ ಆಟಗಳನ್ನು ಆಡುತ್ತಾ ವೇಳೆ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ. ಬಾವಿಯಲ್ಲಿ, ಕೆರೆಯಲ್ಲಿ ಹಾಗೂ ನದಿಗಳಲ್ಲಿ ಈಜು ಕಲಿಯುತ್ತಾ, ಸೈಕಲ್‌ ಕಲಿಯಲು ಹೋಗಿ ಬಿದ್ದು ಪೆಟ್ಟು ಮಾಡಿಕೊಂಡು ಅಳುತ್ತಾ ಮನೆಗೆ ಹೋದ ನೆನಪುಗಳು ಮಾಸಿಲ್ಲ. ಅಷ್ಟೇ ಏಕೆ, ಗಾಯ ಮಾಯ್ದ ನಂತರ ಪುನಃ ಪಟ್ಟು ಹಿಡಿದು ಸೈಕಲ್‌ ಕಲಿತು ಗೆಳೆಯರೊಂದಿಗೆ, ಗೆಳತಿಯರೊಂದಿಗೆ ಸೈಕಲ್‌ ತುಳಿಯುತ್ತಾ ಸಂತೋಷ ಸಂಭ್ರಮಿಸಿದ ದಿನಗಳು. ಮಳೆ ಬಂದರೆ ಹಾಳೆಗಳಿಂದ ಚಿಕ್ಕ ಚಿಕ್ಕ ಹಡಗುಗಳನ್ನು ಮಾಡಿ ಮನೆ ಮುಂದೆ ನಿಂತಿರುವ ನೀರಲ್ಲಿ ಅವುಗಳನ್ನು ತೇಲಿಸಿಬಿಟ್ಟು ಕುಣಿದು ಕುಪ್ಪಳಿಸಿದ ನೆನಪುಗಳು. ಅಜ್ಜ ಅಜ್ಜಿಯರಿಂದ ರಾಮಾಯಣ, ಮಹಾಭಾರತ ಕಥೆಗಳನ್ನು ಸವಿದ ಸವಿನೆನಪುಗಳು. ವಿಕ್ರಂ ಬೇತಾಳ ಹಾಗೂ ಪಂಚತಂತ್ರ, ಚಂದಮಾಮ ಓದಿದ ನೆನಪುಗಳು, ಅಹಾ ಎಷ್ಟು ಚೆಂದ ಎಲ್ಲರೊಂದಿಗೆ ಹಾಡಿ, ಕುಣಿದು ಸಂತಸಪಟ್ಟ ನೆನಪುಗಳು. ಗಿಡಗಳನ್ನು ಸರಸರನೇ ಏರಿ ಮಾವಿನಹಣ್ಣು, ಹುಣಸೇಹಣ್ಣನ್ನು ತಿಂದು ತೇಗಿದ ನೆನಪಿನ ದಿನಗಳು. ಗುಬ್ಬಿ ಗೂಡನ್ನು ನಿಸರ್ಗವನ್ನು ಕಣ್ಣಲ್ಲಿ ತುಂಬಿಕೊಂಡು ಸಂಭ್ರಮಿಸಿದ ನೆನಪುಗಳು, ಮಳೆಯಲ್ಲಿ ಮಿಂದು, ಶೀತ ಬಂದಾಗ ಮನೆಯಲ್ಲಿ ಎಲ್ಲರೂ ಬೈಯ್ದು ನಮ್ಮನ್ನು ಆರೈಕೆ ಮಾಡಿದ ದಿನಗಳು…. ಹೀಗೆ ನಮ್ಮೆಲ್ಲರ ರಜೆ ಅತ್ಯಂತ ಮಜವಾಗಿದ್ದವು.
ಆದರೆ ಇಂದು ಮಕ್ಕಳಿಗೆ ರಜೆ ಬಂದರೆ ಸಾಕು, ರಜೆಯಲ್ಲಿಯ ಹೋಂ ವರ್ಕ, ಕಂಪ್ಯೂಟರ್‌ ತರಗತಿ, ಹಾಗೂ ಬೇಸಿಗೆ ಶಿಬಿರ ಇವೆಲ್ಲವೂ ಮಕ್ಕಳಿಗೆ ಅಜ್ಜ ಅಜ್ಜಿಯರೊಂದಿಗೆ ಬೆರೆಯಲು ಬಿಡುತ್ತಿಲ್ಲ. ಅಲ್ಲದೇ ಸ್ಪರ್ಥಾತ್ಮಕ ಜಗತ್ತಿನಲ್ಲಿ ತನ್ನ ಮಗು ಹಿಂದೆ ಉಳಿಯುತ್ತೆ ಎಂಬ ಆತಂಕದಲ್ಲಿ ತಂದೆ ತಾಯಿಯರು ಸದಾ ಮಗುವಿಗೆ ತರಬೇತಿ ಶಾಲೆಗಳಿಗೆ ಕಳಿಸುವ ಮೂಲಕ ಹೆಮ್ಮೆ ಪಡುತ್ತಿದ್ದಾರೆ ಆದರೆ ಇದು ಮಕ್ಕಳಿಗೆ ಎಲ್ಲೋ ಸಜೆ ಆಗುತ್ತಿದೆಯೇನೋ ಎಂಬ ಭಾವನೆ ಭಾಸವಾಗದೇ ಇರದು.


ಇಂದಿನ ಮಕ್ಕಳಿಗೆ ಹಿರಿಯರೊಂದಿಗೆ ಉತ್ತಮ ಸಂವಹನ ನಡೆಸಲು ಬರುತ್ತಿಲ್ಲ ಏಕೆಂದರೆ ಅವರು ರಜೆಯಲ್ಲೂ ಅವರೊಂದಿಗೆ ಬೆರೆಯುತ್ತಿಲ್ಲ. ಈಜು , ಗಿಡ ಏರುವುದು, ಸೈಕಲ್‌ ತುಳಿಯುವ ಕೌಶಲ ತಿಳಿದಿಲ್ಲ. ಏಕೆಂದರೆ ಅವರು ಕಂಪ್ಯೂಟರ್‌, ಮೋಬೈಲ್‌ ದಿಂದ ಪುರಸೊತ್ತು ಸಿಗುತ್ತಿಲ್ಲ. ನಿಸರ್ಗದ ಸವಿಯನ್ನು ಸವಿದಿಲ್ಲ ಏಕೆಂದರೆ ಸದಾ ತರಬೇತಿ ತರಗತಿ, ಶಿಬಿರಗಳಲ್ಲಿ ಹಾಗೂ ಟಿ ವಿ ಮುಂದುಗಡೆ ಇದ್ದಾರೆ. ಉಸುಕಿನಲ್ಲಿ ಗುಬ್ಬಿಗೂಡು ಕಟ್ಟುವ ಆಟ, ಲಗೋರಿ, ಚಿನಿದಾಂಡ ದಂತಹ ಆಟಗಳ ಹೆಸರೇ ಕೇಳಿಲ್ಲ. ನಿಸರ್ಗದಲ್ಲಿ ಅರಳುವ ವಿವಿಧ ಹೂಗಳನ್ನು ಆನಂದಿಸುವ ಭಾಗ್ಯ ಮಕ್ಕಳಿಗಿಲ್ಲ. ಎತ್ತ ಸಾಗುತ್ತಿದೆ ನಮ್ಮ ಮಕ್ಕಳ ರಜೆ ಎಂಬುದರ ಬಗ್ಗೆ ಅತ್ಯಂತ ಗಹನವಾಗಿ ಆಲೋಚಿಸಬೇಕಿದೆ.
ಮಕ್ಕಳಿಗೆ ನೈತಿಕ ಮೌಲ್ಯಗಳು ಗೊತ್ತಿಲ್ಲ, ಹಿರಿಯರೊಂದಿಗೆ ಬೆರೆಯುತ್ತಿಲ್ಲ, ನಮ್ಮ ಹಳೆಯ ಆಟಗಳ ಪರಿಚಯ ತಿಳಿದಿಲ್ಲ. ಎಂದು ಸದಾ ಗೊಣಗುವ ನಾವು ಇದಕ್ಕೆ ಕಾರಣ ಯಾರು ಎಂದು ಯೋಚಿಸಬೇಕಿದೆ. ಗಜ್ಜರಿ, ಸೆಂಗಾ ಎಲ್ಲಿ ಬೆಳೆಯುತ್ತಿವೆ? ಹಾಲು ಹೇಗೆ ಸಿಗುತ್ತಿದೆ ಎಂಬ ಸಾಮಾನ್ಯ ಜ್ಞಾನವನ್ನೂ ಸಹ ನಮ್ಮ ಮಕ್ಕಳಿಗೆ ಗೊತ್ತಿಲ್ಲ ಏಕೆಂದರೆ ಅಷ್ಟೊಂದು ಟಿ ವಿ ಮೋಬೈಲ್‌ ದಾಸರಾಗುತ್ತಿದ್ದಾರೆ ನಮ್ಮ ಮಕ್ಕಳು.
ಇಂದು ಯಾವ ಮಕ್ಕಳ ಕೈಯಲ್ಲಿಯೂ, ಕಿಸೆಯಲ್ಲಿಯೂ ಪೆನ್ನು ಇರುವುದಿಲ್ಲ. ಆದರೆ ಮೊಬೈಲ್‌ ಮಾತ್ರ ಇಟ್ಟುಕೊಂಡಿರುತ್ತಾರೆ. ಹೊರಗಡೆ ಮೈದಾನದಲ್ಲಿ ಆಟವಾಡುವ ಮಕ್ಕಳು ಅತಿ ವಿರಳ ಏಕೆಂದರೆ ಎಲ್ಲ ಮಕ್ಕಳು ನಾಲ್ಕು ಗೋಡೆಗಳ ಮಧ್ಯ ಬಂಧಿತರಾಗಿದ್ದಾರೆ. ವಿಶಾಲ ಮನೋಭಾವನೆ ಕಡಿಮೆ ಆಗುತ್ತಿದೆ ಏಕೆಂದರೆ ಆಲೋಚನೆಗಳು ಸಂಕುಚಿತಗೊಳ್ಳುತ್ತಿವೆ.


ಇನ್ನಾದರೂ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಾಗಿದೆ. ರಜೆಯಲ್ಲಿ ನಮ್ಮ ಊರುಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ನಾವು ಅನುಭವಿಸಿದ, ಆನಂದಪಟ್ಟ ರಜೆಯನ್ನು ನಮ್ಮ ಮಕ್ಕಳು ಅನುಭವಿಸಲು ಅನುಕೂಲ ಮಾಡಿಕೊಡಬೇಕಿದೆ. ಹಳ್ಳಿಗಳ ಊರಲ್ಲಿಯೂ ಸಹ ಇದೇ ಪರಿಸ್ಥಿತಿ ಆಗುತ್ತಿರುವುದನ್ನು ತಡೆಯಬೇಕಿದೆ ನಮ್ಮ ಎಲ್ಲ ಹಳೆಯ ಆಟಗಳ ಪರಿಚಯ ನಮ್ಮ ಮಕ್ಕಳಿಗೆ ಆಗುವಂತೆ ನೋಡಿಕೊಳ್ಳಬೇಕಿದೆ.
ಸ್ವತಂತ್ರ ಹೋರಾಟಗಾರರ ಹಾಗೂ ಸಾಧಕರ ಪರಿಚಯದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಬೇಕಿದೆ. ಹೀಗೆ ಓದಿನ ಮೂಲಕ ಅವರ ಉದಾತ್ತ ವಿಚಾರಗಳನ್ನು ಅರಿತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೆಪಿಸಬೇಕಿದೆ. ಅಜ್ಜ ಅಜ್ಜಿ ಚಿಕ್ಕಪ್ಪ ಚಿಕ್ಕಮ್ಮ ದೊಡ್ಡಪ್ಪ ದೊಡ್ಡಮ್ಮ ಸಂಬಂಧಗಳ ಸವಿಯನ್ನು ಸವಿಯಲು ಅವಕಾಶ ಸೃಜಿಸಬೇಕಿದೆ. ನೀತಿ ಕಥೆಗಳನ್ನು ಆಲಿಸಲು, ಆನಂದಿಸಲು ಸಹಾಯ ಮಾಡಬೇಕಿದೆ.
ನಮ್ಮ ಊರಿನಲ್ಲಿರುವ ದೇವಾಲಯ, ಪುರಾತತ್ವ ಕಟ್ಟಡ ಹಾಗೂ ನಿಸರ್ಗಧಾಮಗಳ ಪರಿಚಯವನ್ನು ಮಾಡಿಸಬೇಕಿದೆ. ಅವುಗಳ ರಕ್ಷಣೆಯ ಹೊಣೆಗಾರಿಕೆಯ ಜವಾಬ್ದಾರಿಗಳನ್ನು ತಿಳಿಸಬೇಕಿದೆ. ನಮ್ಮ ಹೊಲಗದ್ದೆಗಳಲ್ಲಿಯ ಕಾರ್ಯಗಳನ್ನು ಮಾಡಲು ಕಲಿಸಬೇಕಿದೆ. ದನಕರುಗಳ ಆರೈಕೆ ಹಾಗೂ ಹೈನುಗಾರಿಕೆಯ ಕೆಲಸಗಳ ಪರಿಚಯ ಮಾಡಬೇಕಿದೆ. ಹೀಗೆ ರಜೆಯಲ್ಲಿ ನಿಸರ್ಗದ ಅತ್ಯಂತ ಸಮೀಪಕ್ಕೆ ಹೋಗಿ ಆನಂದದ ಕ್ಷಣಗಳನ್ನು ಅನಂದಿಸಲು ಬಿಡಬೇಕಿದೆ.


ಎಮ್ಮೆ, ಆಕಳು, ಎತ್ತು, ಆಡು, ಕುರಿ ಕೋಣಗಳ ಪರಿಚಯ ನಮ್ಮ ಮಕ್ಕಳಿಗೆ ಆಗಬೇಕಿದೆ. ಜುಳು ಜುಳು ಹರಿವ ನದಿಗಳ ಬಯಲಲ್ಲಿ ಪಕ್ಷಿಗಳ ಇಂಚರ ಆನಂದಿಸುವ ಅವಕಾಶಗಳನ್ನುಮಕ್ಕಳಿಗೆ ಒದಗಿಸಬೇಕಿದೆ. ಆಕಾಶದಲ್ಲಿರುವ ನಕ್ಷತ್ರಗಳನ್ನು ಚಂದಿರನನ್ನು ನೋಡುವ ಭಾಗ್ಯ ಕೊಡಬೇಕಿದೆ. ಪಾತರಗಿತ್ತಿಯ ಸೌಂದರ್ಯವನ್ನು ನೋಡುವ, ನಿಸರ್ಗದ ಎಲ್ಲ ಆಗು ಹೋಗುಗಳನ್ನು ಕಣ್ಣಾರೆ ಕಂಡು ಅನುಭವಿಸಿ, ಆನಂದಿಸುವ ಕ್ಷಣಗಳನ್ನು ಒದಗಿಸಬೇಕಿದೆ.
ಒಟ್ಟಾರೆ ನಮ್ಮ ಮಕ್ಕಳಿಗೆ ರಜೆ ಸಜೆಯಾಗದೇ ಅತ್ಯಾನಂದ ಪಡುವ ಹಾಗೂ ಹೊಸ ಅನುಭವಗಳನ್ನು ಹೊಂದುವ ಮತ್ತು ನಮ್ಮ ಪೂರ್ವಜರ ಪರಿಚಯದ ಪಾಠಗಳಾಗಬೇಕಿದೆ.


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

3 thoughts on “

  1. ತುಂಬಾ ಅರ್ಥಪೂರ್ಣ ಅರಿವು ಮೂಡಿಸುವ ಆತ್ಮೀಯ ಲೇಖನ ಮಕ್ಕಳ ದೈಹಿಕ ಮಾನಸಿಕ ಸ್ರೃಜನಾತ್ಮಕ ಬೆಳವಣಿಗೆಯಲ್ಲಿ ರಜೆಯ ಸದುಪಯೋಗದ ಮಾರ್ಮಿಕ ಲೇಖನ.

  2. ಮೇಡಂ ಲೇಖನ ಅರ್ಥಪೂರ್ಣ ವಾಗಿದೆ.ಆದರೆ ಇಂದಿನ ದಿನಗಳಲ್ಲಿ ಮಕ್ಕಳಿಗಿಂತ ತಂದೆ ತಾಯಿಯರೇ ಸ್ಪರ್ಧೆಗಿಳಿದಂತಿದೆ.

Leave a Reply

Back To Top