ಈಶ್ವರ ಜಿ.ಸಂಪಗಾವಿ. ಗಜ಼ಲ್

ಕಾವ್ಯ ಸಂಗಾತಿ

ಈಶ್ವರ ಜಿ.ಸಂಪಗಾವಿ

ಗಜ಼ಲ್

ಕಣ್ಣಿನ ಸನ್ನೆಯಲೊಂದು ಕವನವ ರಚಿಸಲೇ ಸಖಿ
ಸಣ್ಣನೆ ಕುಂಚದಲೊಂದು ಚಿತ್ರವ ಬಿಡಿಸಲೇ ಸಖಿ

ಹಚ್ಚಿದ ಬಣ್ಣವು ಮುದವ ನೀಡಲಾರದೆ ಜೀವನಕೆ
ಮೆಚ್ಚಿ ಹೃದಯದಲೊಂದು ಭಾವ ಸುರಿಸಲೇ ಸಖಿ

ಪ್ರಕೃತಿಯ ರಮಣೀಯತೆ ಸಗ್ಗಕೆ ಸಮಾನಲ್ಲವೇನು
ಆಕೃತಿ ಬಿಡಿಸಲೊಂದು ಮನವ ತಲ್ಲಣಿಸಲೇ ಸಖಿ

ತನುವಿನ ಕಂಪನವನು ಗುರುತಿಸಲಾರೆಯ ಗೆಳತಿ
ಮನುಜ ಸಂಗ ಮರೆತರೊಂದು ಎಚ್ಚರಿಸಲೇ ಸಖಿ

ನಲ್ಲೆಯ ನಲುಮೆಯ ಆಸೆಗಳು ಪೂರ್ಣಗೊಳ್ಳದೆ
ನಲ್ಲನ ಸುಮನದಲೊಂದು ಕಿಡಿ ಹೊತ್ತಿಸಲೇ ಸಖಿ

ಸುಂದರ ಸ್ವಪ್ನಗಳು ಒಲವಿನೊಸಗೆ ನೀಡಬಂದಿವೆ
ಅಂದ ಸುವಾಸನೆಯೊಂದು ಕಂಪ ಸೂಸಲೇ ಸಖಿ

ಮಧು ಹೀರಿ ದುಂಬಿ ಹೂವಿಂದ ಹೂವಿಗೆ ಹಾರದೆ
ಈಶನ ಅಣತಿಯಲೊಂದು ಸಂತಸ ತರಿಸಲೇ ಸಖಿ


Leave a Reply