ಕಾವ್ಯ ಸಂಗಾತಿ
ಡಾ ಸುರೇಶ ನೆಗಳಗುಳಿ
ಗಜ಼ಲ್
ಕೊಳೆತ ಪ್ರೀತಿಯ ಹಣ್ಣು ಕೊಟ್ಟರೆ ಹೇಗೆ ತಿನ್ಲಲಿ ಹೇಳು
ಹೊರಗೊಳಗ ಮರೆತು ಬಿಟ್ಟರೆ ಹೇಗೆ ಒಪ್ಪಲಿ ಹೇಳು
ಹುಳು ಹಿಡಿದ ಮನದೊಳಗೆ ಭಾವನೆಗೆ ಜಾಗವೆಲ್ಲಿ
ಮರೆತ ಸಂಭ್ರಮವ ಸುಟ್ಟರೆ ಹೇಗೆ ಅಪ್ಪಲಿ ಹೇಳು
ಬರಿಗಾಲನಿಟ್ಟು ಮುಳ್ಳ ಹಾದಿಯ ಕ್ರಮಿಸೆನ್ನುವೆಯಾ
ನೋವಿನ ಬುತ್ತಿಯ ಇಟ್ಟರೆ ಹೇಗೆ ಉಣ್ಣಲಿ ಹೇಳು
ಹರಿದು ಹೋಗಿಹ ಎದೆಕವಚ ಹೊಲಿಯುವವರಾರು
ಮನಸನ್ನು ಮುರಿದು ನೆಟ್ಟರೆ ಹೇಗೆ ಕಟ್ಟಲಿ ಹೇಳು
ಕಡಿದ ನೀರು ಕಟ್ಟಕ್ಕೆ ಬರಲು ಸಾಧ್ಯವೇ ಎಂದಾದರೂ
ರಾಡಿ ಮಾಡಿ ಪ್ರಣಯ ಕೆಟ್ಟರೆ ಹೇಗೆ ತಟ್ಟಲಿ ಹೇಳು
ಕೊಳು ಕೊಡೆಯ ದಾರಿಯಲೆಲ್ಲ ಬೇಲಿ ಹಾಕಿದ್ದೇಕೆ
ಕಳವಳದ ಸಂತೆಯಲಿ ಕಟ್ಟಿರೆ ಹೇಗೆ ಒಟ್ಟಲಿ ಹೇಳು
ಸರ್ವಸ್ವವೆಂದು ಕಾಲಿಗೆರಗಿಹ ಸುರೇಶನ ಧಿಕ್ಕರಿಸಲೇಕೆ
ಕಾಡುವ ಒಲವು ಕೆಟ್ಟರೆ ಹೇಗೆ ಮುಟ್ಟಲಿ ಹೇಳು
————————
ತುಂಬಾ ಚೆನ್ನಾಗಿದೆ