ಮೋಹನ್ ಹೊಸ್ಮಾರ್ ಕವಿತೆ- ಕನ್ನಡ ನಾಡಿನಲ್ಲಿ

ಕಾವ್ಯ ಸಂಗಾತಿ

ಮೋಹನ್ ಹೊಸ್ಮಾರ್

ಕನ್ನಡ ನಾಡಿನಲ್ಲಿ

ಕಿವಿಯರಳಿಸಿ ಕೇಳಿದೊಡೆ
ಸಪ್ತ ಸ್ವರಗಳ ನಾದೋಪಾಸನ ಬಡಿಯುತ್ತಿದೆ ಎದೆಗೆನ್ನ ಕನ್ನಡದಲೆಗಳ ಕಂಪು
ಈ ಕನ್ನಡ ನಾಡಲ್ಲಿ

ನೀರ ಬೇಡಿದೊಡೆ ಇಕ್ಕುವರು ತುಂಬಿದ ಗಡಿಗೆಯಲ್ಲಿ ಅಮೃತವ ತುಂಗೆ ,ಕಾವೇರಿ, ಕೃಷ್ಣೆ , ಪಯಸ್ವಿನಿಯು
ಪಾವನ ನದಿಯೊಳಗದ್ದಿ
ಈ ಕನ್ನಡ ನಾಡಲ್ಲಿ

ಹೆಜ್ಜೆಯಲಿ ನಾಟ್ಯವೊ, ತಾಳಮೇಳೈಸಿ
ಉಕ್ತಿಯಲ್ಲಿ ಭಾವವೋ ಸತ್ಯದ ಪಥವೇರಿ
ಮನಸ್ಸಿನ ಜಾಡ್ಯಕ್ಕೆ ಸರ್ವಜ್ಞನ ಜ್ಞಾನವು
ಧ್ವನಿಸುವವು ಕಲ್ಲು , ಮರ, ಬಂಡೆಗಳೂ !
ಈ ಕನ್ನಡ ನಾಡಲ್ಲಿ

ಉದಿಸಿದರಂದು ಲೇಖನಿಗೆ ಬೆರಳಾಗಿ ಕವಿ ಪುಂಗವರು ಪಂಪ ,ರನ್ನ, ಪೊನ್ನರು
ಲೋಕ ಜ್ಞಾನವನು ಅಕ್ಷರವಾಗಿಸಿದರು
ರಸ ಋಷಿಗಳ ಮಹಾತ್ಮರ ಬೀಡಿನ ಈ ಕನ್ನಡ ನಾಡಲ್ಲಿ

ಕನ್ನಡವೇ ಉಸಿರು , ನೆಲ ತುಂಬ ಹಸುರು
ಕಲೆ , ಸಂಸ್ಕೃತಿಗೆ ತವರಾದ ಬಿಡು ಶಿಲ್ಪಿಯುಳಿಗೆ ಶರಣಾದ ಕೆತ್ತನೆಯು ಹಬ್ಬವು ಪ್ರತಿದಿನವೂ ಮನೆಮನೆಗಳಲ್ಲಿ
ಈ ಕನ್ನಡ ನಾಡಲ್ಲಿ

ಪುಣ್ಯವಿದು ಈ ಜನ್ಮ ಕನ್ನಡ ನಾಡಲ್ಲಿ ಕನ್ನಡಾಂಬೆಯ ಮಡಿಲಲ್ಲಿ ಶಿರವೆತ್ತಿ ನಡೆಯಲು
ಹಾರುತಿದೆ ಏರುತ್ತಿದೆ ಕನ್ನಡದ ಬಾವುಟವು
ಅಭಿನಮಿಸುವೆನು ನಿತ್ಯವೂ ಈ ಕನ್ನಡ ನಾಡಿಗೆ… ಈ ಕನ್ನಡ ನಾಡಿಗೆ


ಮೋಹನ್ ಹೊಸ್ಮಾರ್

3 thoughts on “ಮೋಹನ್ ಹೊಸ್ಮಾರ್ ಕವಿತೆ- ಕನ್ನಡ ನಾಡಿನಲ್ಲಿ

Leave a Reply

Back To Top