ಪುಸ್ತಕ ಸಂಗಾತಿ
ಅನಸೂಯ ಜಹಗೀರದಾರರವರ
ಗಜಲ್ ಸಂಕಲನ
ಆತ್ಮಾನುಸಂಧಾನ
ಅನುದಿನವೂ ಅನುಸಂಧಾನ
ಅಮೂರ್ತವಾದ ಭಾವನೆಗಳಿಗೆ ಅಕ್ಷರಗಳ ಮುಖಾಂತರ ರೂಪ ಕೊಡುವ ಏಕೈಕ ಸಾಧನವೆಂದರೆ ಅದು ಸಾಹಿತ್ಯ. ಈ ಹಿನ್ನೆಲೆಯಲ್ಲಿ ಸಾಹಿತ್ಯವೆಂದರೆ ಬಾಹ್ಯ ಅಲಂಕಾರಿಕ ವಸ್ತುವಲ್ಲ, ಆಂತರಿಕ ತುಡಿತ.
ಈ ಅರ್ಥದಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ಕೊಪ್ಪಳ ಜಿಲ್ಲೆಯ ಶಿಕ್ಷಕಿ ಅನಸೂಯ ಜಾಗೀರದಾರ ಅವರು. ಮುಖಪುಟದಲ್ಲಿ ಪರಿಚಿತರಾದ ಸಶಕ್ತ ಕವಯತ್ರಿ. ಸಮಾಜದ ಓರೆಕೋರೆಗಳಿಗೆ ಮುಖಾಮುಖಿಯಾಗುವ ನಿರ್ಭೀತ ಸಾಹಿತ್ಯವನ್ನು ರಚಿಸುವಲ್ಲಿ ಅನಸೂಯ ಅವರು ಮುಂಚೂಣಿಯಲ್ಲಿದ್ದಾರೆ. ಅವರ ಕವನಗಳನ್ನು ಓದಿದಾಗ.. ನಮ್ಮ ಮನಸ್ಸು ನಮ್ಮೊಂದಿಗೆ ಸಂವಾದಕ್ಕಿಳಿದ ತಾಜಾ ಅನುಭವ ನನಗಾಗಿದ್ದಿದೆ. ಇತ್ತೀಚೆಗೆ ಅವರ ಸಾಹಿತ್ಯದ ನಡಿಗೆ ಗಜ಼ಲ್ ರಚನೆಯತ್ತ ಮುಖಮಾಡಿ, ಅಲ್ಲಿಯೂ ತಮ್ಮ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದೆ. ಮತ್ತು ಆತ್ಮಾನುಸಂಧಾನ ಎನ್ನುವ ಗಜ಼ಲ್ ಗುಚ್ಛವನ್ನು ನಮ್ಮೆಲ್ಲರ ಓದಿಗೆ ಕೊಟ್ಟಿದ್ದಾರೆ.
ಸಂಕಲನದ ಹೆಸರೇ ಸೂಚಿಸುವಂತೆ ಎಂತದೋ ವಿರೋಧಾಭಾಸವಿದ್ದರೂ ಕವಿಮನವು ಆತ್ಮದೊಂದಿಗಿನ ಅನುಸಂಧಾನಕ್ಕೆ ಸಹಿ ಹಾಕಿದೆ. ಯಾಕೋ ನಿರ್ಲಿಪ್ತತೆ ತಣ್ಣಗಿನ ಭಾವದಲ್ಲಿ ಹೆಚ್ಚಿನ ಸಮಾಧಾನ ಕಂಡುಕೊಂಡ ಹಾಗಿದೆ. ಇದಕ್ಕೆ ಪೂರಕ ಶೇರ್ ಗಳನ್ನು ನೋಡೋಣ.
ಗಜ಼ಲ್. 1)
ಬೆನ್ನಹಿಂದೆ ನಿನ್ನವರೇ ನಿನ್ನ ಇರಿವಾಗ ದೂಷಿಸಲೇನಿದೆ ಹೋಗಲಿ ಬಿಡು
ಕಾಣುವ ಕಂಗಳು ಮೋಸಹೋದಾಗ ನೋಟದಲ್ಲೇನಿದೆ ಹೋಗಲಿ ಬಿಡು
ಗಜ಼ಲ್. 12.
ಇತ್ತೀಚಿನ ದಿನಗಳಲ್ಲಿ ವಾದ ಮಾಡಲಾರೆ ಸುಮ್ಮನಿದ್ದು ಬಿಡುತ್ತೇನೆ
ಕಾಗೆ ಬಿಳಿಯೆಂದವರಿಗೆ ಸಾಕ್ಷ್ಯ ನೀಡಲಾರೆ ಸುಮ್ಮನಿದ್ದು ಬಿಡುತ್ತೇನೆ
ಅನಸೂಯ ಅವರ ಬಹುತೇಕ ಗಜ಼ಲ್ ಗಳು ಛೋಟಿ ಬೆಹರ್ ನಲ್ಲಿವೆ. ಗಜ಼ಲ್ ಭಾವಗಳಾದ ಪ್ರೀತಿ, ವಿರಹ, ವಾಲಿಕೆ, ಓಲೈಕೆ ಎಲ್ಲವೂ ಅಲ್ಲಲ್ಲಿ ಬಂದು ಓದುಗರ ಮನಸನ್ನು ತಂಬಲು ಮಾಡುತ್ತವೆ.
ಗಜ಼ಲ್. 2)
ಮುಡಿದ ಮೊಗ್ಗುಗಳು ಬಾಡಿದವು ಅವನು ಬರಲಿಲ್ಲ
ಇರುಳ ತಾರೆಗಳು ಮರುಗಿದವು ಅವನು ಬರಲಿಲ್ಲ
ಗಜ಼ಲ್. 15.
ನನ್ನೆದೆಯ ಪದವೊಂದು ಹಾಡಾಗಿದೆ ತಿಳಿಯದೆ ನಿನಗೆ
ಪ್ರತಿಯೊಂದು ಅಕ್ಷರವೂ ದನಿಯಾಗಿದೆ ತಿಳಿಯದೆ ನಿನಗೆ
ಒಟ್ಟಾರೆಯಾಗಿ ಗಜ಼ಲ್ ಗಳನ್ನು ಅವಲೋಕಿಸಿದಾಗ ಜೀವನದ ಪ್ರತಿ ಬಣ್ಣವನ್ನು ಪ್ರತಿಫಲಿಸುವ ಕಾಮನಬಿಲ್ಲಿನ ಬಿಂಬ ಗೋಚರಿಸುತ್ತದೆ. ಈಗಾಗಲೇ ತಮ್ಮ ಬರಹಗಳಿಂದ ರಾಜ್ಯದಲ್ಲಿ ಪರಿಚಿತರಾಗಿರುವ ಅನಸೂಯ ಜಾಗೀರದಾರ ಅವರು..ಈ ಗಜ಼ಲ್ ಗಂಧವನ್ನು ಎಲ್ಲೆಡೆ ಹರಡಿ ಜನಮಾನಸದಲ್ಲಿ ಅಜರಾಮರಾಗಲೆಂದು ಹಾರೈಸುತ್ತೇನೆ.
---------------------
ಶಮಾ. ಜಮಾದಾರ.
ಧನ್ಯವಾದಗಳು ಮೇಡಮ್.