ಕಾವ್ಯ ಸಂಗಾತಿ
ಆದಪ್ಪ ಹೆಂಬಾ ಮಸ್ಕಿ
ಉಘೇ…ಉಘೇ
ಕಲ್ಲುಕುಟಿಗರ ಮನೆ
ಕ್ಷಮಿಸಿ… ಗುಡಿಸಲದು
ಹಿತ್ತಲಿನಲಿ ಗಟಾರು
ಅದರಲಿ ಊರಿನೆಲ್ಲ
ಕೊಚ್ಚೆ ನೀರಿನ ಹರಿವು
ಹೆಸರು ರಾಜ ಕಾಲುವೆ
ಅದು ಫುಟ್ ಪಾತೇ
ಅಂಗಳವೂ ಇದೆ
ಅಲ್ಲಿ ಅಡ್ಡಾದಿಡ್ಡಿ ಬಿದ್ದಿವೆ
ಧೂಳಿಡಿದ ಆಕಾರವಿಲ್ಲದ
ತರಹಾವೇರಿ ಕಲ್ಲುಗಳು
ಕಲ್ಲು ಗುಂಡುಗಳು
ಸುತ್ತಿಗೆಯ ಹೊಡೆತಕ್ಕೆ
ಸಿಕ್ಕು ಚೂರಾದ
ಕಲ್ಲು ನುಚ್ಚು ಗಳು ||
ಅಲ್ಲೇ ಒಪ್ಪವಾಗಿಟ್ಡಿಹರು
ಚೆಂದನೆಯ ಚಿಕ್ಕ ಚಿಕ್ಕ
ಒಳ್ಳು-ಕಲ್ಲುಗಳನ್ನು
ರುಬ್ಬಲು ಬಾರದ ಮಾದರಿ
ಮಿನಿ ರುಬ್ಬು ಗುಂಡುಗಳನ್ನು
ಬೀಸಲು ಬಾರದ ಆಟಿಕೆ
ಬೀಸುಕಲ್ಲುಗಳನ್ನು
ಉಳಿ ಪೆಟ್ಟಿಗೆ ಅರಳಿದ
ಹನುಮ,ಗಣಪ,ಭಾಗ್ಯ ಲಕ್ಷ್ಮಿ, ಸರ್ಪಕಲ್ಲುಗಳೂ
ಇವೆ ಎನ್ನಿ
ಮಾರಾಟಕ್ಕಿವೆ ದೇವ ಮೂರ್ತಿಗಳು ! ||
ಆ ತಾಯಿ ತುಂಬು ಬಸುರಿ
ಹರಿದ ಕೌದಿಯ ನೆರಳಿನಡಿ
ಕಟೆಯುತ್ತಿದ್ದಾಳೆ ಏನನ್ನೋ
ಬಿದ್ದಿದೆ ಅರ್ಧ ಅರಳಿದ ಹನುಮ ಕಲ್ಲು
ಮೂರು ವರ್ಷದ ಮಗ
ಮಾಸಿದ ಅಂಗಿ
ಚೆಡ್ಡಿ ಇಲ್ಲದವನ
ಉಚ್ಚೆಯ ಅಭಿಷೇಕ
ಆ ಕಾಲಿಲ್ಲದ ಹನುಮ ಮೂರ್ತಿಯ ಮೇಲೇ
ದೇವರಲ್ಲವನು ಅವರ ಪಾಲಿಗೆ
ಬದುಕು ||
ನಾಲ್ಕೇ ದಿನಗಳು ಉರುಳಿವೆ
ಅದೇ
ಹನುಮನ ಕಯ್ಯಿ, ಕಾಲು,
ಮೂಗೇ ತುಂಬಿದ ಮೂತಿ, ಗದೆ, ಬಾಲ ಎಲ್ಲ ಅರಳಿವೆ
ಈಗದು ಕಲ್ಲಲ್ಲ
ಮೂರ್ತಿ!
ಹನುಮ ದೇವನ ಮೂರ್ತಿ!
ಮೂತ್ರಾಭಿಷೇಕಗೊಂಡುದಕೆ
ಈಗ ಕ್ಷೀರಾಭಿಷೇಕ,
ಗಂಧ-ಕುಂಕುಮದ ಖಳೆ
ಪುಷ್ಪಾಲಂಕಾರ, ಮಹಾಪೂಜೆಯ ಸಂಸ್ಕಾರ
ಸಾಷ್ಟಾಂಗ ನಮಸ್ಕಾರ…….
ಫುಟ್ ಪಾತಿನಲಿ
ಉಳಿ ಪೆಟ್ಟು ತಿಂದು
ಕಲ್ಲಲರಳಿದ
ಹನುಮನಿಗೆ ಕೈ ಮುಗಿದು
ಉಘೇ ಅನ್ನಬೇಕೆ ?
ಸುಮ್ಮನಿರಬೇಕೆ ?
ದಿಕ್ಕರಿಸಬೇಕೆ ?
ಮಡದಿಯ ಸಮಾಧಾನವ ನೆನೆದು
ಕೈ ಏಳುತಿವೆ ಮನಸ್ಸಿಲ್ಲದೇ
ಉಘೇ….ಉಘೇ…..