ರಮೇಶ ಸಿ ಬನ್ನಿಕೊಪ್ಪ ಹಲಗೇರಿ,ಲಹರಿ-ಮೈಮನ ತಣಿಸುವ ಪ್ರೀ ವೆಡ್ಡಿಂಗ್ ಶೂಟಿಂಗ್ ನ ಆ…ಕ್ಷಣಗಳು..

ಲಹರಿ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಮೈಮನ ತಣಿಸುವ ಪ್ರೀ ವೆಡ್ಡಿಂಗ್

ಶೂಟಿಂಗ್ ನ ಆ…ಕ್ಷಣಗಳು..

ಮೈಸೂರು…

ಎಂದರೆ ಸಾಕು ನೆನಪಾಗುವುದು ದಸರಾ ಹಬ್ಬದ ಸಡಗರ..!! ದಸರಾ ಹಬ್ಬದ ಸಡಗರದಂತೆ ನಿತ್ಯವೂ ನೂತನ ಜೋಡಿಗಳ ಪ್ರೀ ವೆಡ್ಡಿಂಗ್ ಶೂಟಿಂಗ್ ನ ಕ್ಷಣಗಳು, ಮೈ ರೋಮಾಂಚನಗೊಳ್ಳುತ್ತವೆ. ರಾಜ ಮಹಾರಾಜರ ಕಾಲದಿಂದಲೂ ಅಭಿವೃದ್ಧಿಗೊಳ್ಳುತ್ತಲೇ ಬಂದಿರುವ ಸಾಂಸ್ಕೃತಿಕ ನಗರವಿದು ಮೈಸೂರು..!! ಪ್ರಜಾಪ್ರಭುತ್ವದ ಸರ್ಕಾರಗಳು ಕೂಡ ಸಾಕಷ್ಟು ಅಭಿವೃದ್ಧಿಯನ್ನು ಈ ಭಾಗದಲ್ಲಿ ಮಾಡುತ್ತಿವೆ. ಹತ್ತರಿಂದ ಇಪ್ಪತ್ತು ಕಿಲೋಮೀಟರಿನೊಳಗೆ ಒಂದೊಂದು ತಾಲೂಕುಗಳು..! ನಮ್ಮಲ್ಲಿ ಈಗೀಗ ಕಣ್ಣು ಬಿಟ್ಟು ತಾಲೂಕುಗಳ ಉದಯ..!! ಅಲ್ಲಿಯ ಅನೇಕ ಗ್ರಾಮಗಳು, ನಗರದ ವಾರ್ಡಗಳು ಮೂಲ ಸೌಕರ್ಯಗಳನ್ನು ಒಳಗೊಂಡು ತುಂಬಾ ಅಭಿವೃದ್ಧಿ ಕಂಡಿವೆ. ಅಲ್ಲಲ್ಲಿ ಕೆಲವು ಕಡೆ ಗ್ರಾಮೀಣ ಭಾಗದಲ್ಲಿ ಇನ್ನು ಅಭಿವೃದ್ಧಿಯಾಗಬೇಕಾದ ಅಗತ್ಯವಿದ್ದರೂ ನಮ್ಮ ಉತ್ತರ ಕರ್ನಾಟಕದ ಭಾಗಕ್ಕೆ ಹೋಲಿಸಿಕೊಂಡಾಗ ಅದನ್ನು ಅಭಿವೃದ್ಧಿ ಎಂದೇ ಪರಿಗಣಿಸಬಹುದಾಗಿದೆ.

ಇಷ್ಟೆಲ್ಲಾ ನಾನು ಯಾಕೆ ಮೈಸೂರು ಮತ್ತು ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆ ಪರಿಚಯ ಮಾಡಿದೆನೆಂದರೆ…?

ಮೊನ್ನೆ ನಮ್ಮ ಭಾಮೈದನನ ಫ್ರೀ ವೆಡ್ಡಿಂಗ್ ಅಂದರೆ ಮದುವೆ ಪೂರ್ವ ವಿಡಿಯೋ ಚಿತ್ರೀಕರಣಕ್ಕಾಗಿ ಮೈಸೂರಿಗೆ ಹೋಗಬೇಕಾದ ಸಂದರ್ಭ ಬಂದಿತ್ತು. ಮೈಸೂರಿನ ಚಿತ್ರೀಕರಣದ ತಂಡದ ಭರತರವರು, “ನಾಳೆ ನೀವು ಬೆಳಗ್ಗೆ 5:30 ರಿಂದ 6 ಗಂಟೆಯೊಳಗೆ ಅರಮನೆಯ ಮುಂಭಾಗದಲ್ಲಿ ಜೋಡಿಗಳು ಬರಬೇಕೆಂದು ಸೂಚನೆಯನ್ನು ನೀಡಿದರು”, ಹಾಗೆಯೇ ಅವರ ಸಲಹೆಯನ್ನ ಪರಿಗಣಿಸಿ ನಮ್ಮ ಭಾಮೈದನ ಜೋಡಿಗಳು ಶೂಟಿಂಗ್ ಗಾಗಿ ಮೈಸೂರಿಗೆ ನಸುಕಿನಲ್ಲಿಯೇ ಹೋದರು.

ಅದು ಇರಲಿ, ಸ್ವಲ್ಪ ಸಮಯದ ನಂತರ ನಾವು ಮೈಸೂರಿನ ಅರಮನೆಯ ಕಡೆಗೆ ಧಾವಿಸಿದೇವು. ಆಗಲೇ ಸಮಯ 8 ಗಂಟೆ ಆಗಿತ್ತು. ಅಲ್ಲಿ ಮುಂಜಾನೆಯಿಂದಲೂ ಅರಮನೆಯ ಸುತ್ತಮುತ್ತ ನೋಡಿದಾಗ ನನಗೆ ಆಶ್ಚರ್ಯವೋ ಆಶ್ಚರ್ಯವಾಯಿತು. ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಸನ್ನಿವೇಶಗಳನ್ನು ನೋಡುವುದು ತುಂಬಾ ಅಪರೂಪ. ನಮ್ಮಲ್ಲಿಯ ಕೆಲವು ಕೆಲವು ಶ್ರೀಮಂತರು, ಆಸಕ್ತಿಯಿರುವವರು, ಆರ್ಥಿಕವಾಗಿ ಸಬಲಿರುವವರು ಅಲ್ಲೊಂದು ಇಲ್ಲೊಂದು ಫ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳುವುದನ್ನು ಕೇಳಿದ್ದೆವು. ಮತ್ತು ಇತ್ತೀಚಿಗೆ ಅದನ್ನು ನೋಡುತ್ತಿದ್ದೇವೆ. ಆದರೆ ಅರಮನೆಯ ನಗರ ಮೈಸೂರಿನಲ್ಲಿ ಮದುವೆಯ ಈ ಸೀಸನ್ (ಸುಗ್ಗಿ) ಯ ಈ ಕಾಲದಲ್ಲಿ ಏನಿಲ್ಲವೆಂದರೂ ಒಂದು ದಿನಕ್ಕೆ 10 ರಿಂದ 12 ಜೋಡಿಗಳ ಪ್ರೀ ವೆಡ್ಡಿಂಗ್ ಶೂಟ್ ಅರಮನೆಯ ಮೈದಾನದ ಮುಂದೆ ನಡೆಯುತ್ತಿದ್ದನ್ನು ನೋಡಿ ಮೈರುಮಾಂಚನಗೊಂಡಿತು…!! ಹೌದಲ್ಲ ಎಷ್ಟೊಂದು ತಂಡಗಳು, ಎಷ್ಟೊಂದು ಜೋಡಿಗಳು ತಮ್ಮ ತಮ್ಮದೇ ಆಗಿರುವ ಚಿತ್ರೀಕರಣದಲ್ಲಿ ತುಂಬಾ ಬಿಜಿಯಾಗಿದ್ದರು.

ಜೋಡಿಗಳ ಜೊತೆಗೆ ಹೋದ ನನ್ನಂತವರು ಅವರಿಗೆ ಸಹಾಯಕರಾಗಿಯೋ ಅವರ ಭಾವ ಭಂಗಿಗಳನ್ನು ನೋಡಿಯೇ ಕಣ್ಣ್ಮನ ತುಂಬಿಕೊಳ್ಳುತ್ತಿದ್ದೆವು. ಥೇಟ್, ಸಿನೇಮಾದಲ್ಲಿ ಚಿತ್ರೀಕರಣ ನಡೆದಂತೆ..!!

ಇಲ್ಲಿಯೂ ಕೂಡ ಜೋಡಿಗಳಿಗೆ ವಿವಿಧ ಬಣ್ಣ ಬಣ್ಣದ ಡ್ರೆಸ್ ಗಳನ್ನು ಧರಿಸಿಕೊಂಡು ಬರಲು ಸೂಚಿಸಿ, ವಿವಿಧ ಭಾವ ಭಂಗಿಗಳನ್ನು ಮಾಡಲು ವಿಡಿಯೋಗ್ರಾಫರ್, ಫೋಟೋಗ್ರಾಫರ್ ನಿರ್ದೇಶನ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ತುಂಬಾ ಟ್ರೆಂಡ್ ಆಗಿರುವ ಸಿನೇಮಾ ಹಾಡುಗಳನ್ನು ಬಳಸಿ ಎಡಿಟ್ ಮಾಡಲು ಆ ರೀತಿಯ ವಿಡಿಯೋಗಳ ಚಿತ್ರೀಕರಣ ಮಾಡುವುದು ವಾಡಿಕೆಯಾಗಿದೆ.

ಕೆಲವು ಜೋಡಿಗಳಿಗೆ ಮನಸ್ಸಿಲ್ಲದಿದ್ದರೂ, ಮನೆಯವರ ಒತ್ತಾಯಕ್ಕೋ, ಗೆಳೆಯರ ಅಥವಾ ಸಂಬಂಧಿಕರ ಮಾತಿಗೋ, ಜೋಡಿಗಳಲ್ಲಿ ಒಬ್ಬರಿಗೆ ಇಷ್ಟವಾದ ಈ ಪ್ರೀ ವೆಡ್ಡಿಂಗ್ ಶೂಟಿಂಗ್ ಸಲುವಾಗಿಯೋ, ಗೆಳೆಯರ ಅಥವಾ ಸಂಬಂಧಿಕರ ಕೊಂಕು ಮಾತಿಗೋ…ಅಂತೂ ಇಂತೂ ಫ್ರೀ ವೆಡ್ಡಿಂಗ್ ಶೂಂಟಿಗೆಗೆ ಬಂದಿರುತ್ತಾರೆ.

ಅಂತಹ ತಂಪಾದ ವಾತಾವರಣದ ನಾಡಿನಲ್ಲಿ ಮೈಸೂರಿನ ಸುತ್ತಮುತ್ತಲ ಪ್ರದೇಶದಲ್ಲಿ ಅಂದು ಎಳೆ ಬಿಸಿಲು ಕಳೆದು, ಬೇಸಿಗೆಯ ಬಿಸಿಲು ಚಾಚಿಕೊಂಡಿತ್ತು. ಶೂಟಿಂಗ್ ತಂಡದ ಸದಸ್ಯರೆಲ್ಲರೂ ಬೆವರು ಹನಿಗಳೊಂದಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಜೋಡಿಗಳ ವಿವಿಧ ಭಾವಚಿತ್ರಗಳು ವಿಡಿಯೋಗಳನ್ನು, ಚೀತ್ರಿಕರಣ ಮಾಡುತ್ತಿದ್ದರು. ಬೆಳಗಿನ ಅವಧಿಯಲ್ಲಿಯೇ ಅರಮನೆಯ ಮುಂದೆ ಯಾಕೆ ಚೀತ್ರಿಕರಣ ಮಾಡಬಹುದು.? ಎನ್ನುವ ಕುತೂಹಲಕ್ಕೆ ಕಾರಣವಾಗಿತ್ತು ನನಗೆ. ಆಗ ಜನಸಂದಣಿ ಇಲ್ಲದ, ತಂಪಾದ ವಾತಾವರಣವಿರುತ್ತದೆ. ರಾಜ ಮಹಾರಾಜರು ಕಟ್ಟಿರುವ ಸುಂದರ ವೈಭವದ ಅರಮನೆಯನ್ನು ಸೆರೆ ಹಿಡಿಯಲು ಹೇಳಿ ಮಾಡಿಸಿದ ಸ್ಥಳವಾಗಿತ್ತು. ಆ ಕಾರಣದಿಂದ ನಸುಕಿನಲ್ಲಿಯೇ ಚಿತ್ರೀಕರಣಕ್ಕೆ ಎಲ್ಲಾ ಜೋಡಿಗಳು ಆಗಮಿಸುತ್ತಿದ್ದು ಸಾಮಾನ್ಯವಾಗಿತ್ತು. ಸಿನಿಮಾ ಚಿತ್ರೀಕರಣ ನೋಡಿದಂತೆ ಚಿತ್ರೀಕರಿಸಲಾಗುತ್ತಿತ್ತು. ಕೆಲವು ಭಾವ ಭಂಗಿಗಳನ್ನು ನೋಡಿದಾಗ.. ರೋಮಾಂಚನ..!!

ನಮ್ಮ ಬದುಕಿನಲ್ಲಿಯೂ ಸದಾ ನೆನಪುಗಳು ಹಚ್ಚಹಸಿರಾಗಿರಲೆಂದು , ಮನದಲ್ಲಿ ತೇವವಾಗಿ ಉಳಿಯುವ ಸಲುವಾಗಿ ಜೋಡಿಗಳು ಫ್ರೀ ವೆಡ್ಡಿಂಗ್ ಶೂಂಟಿಗೆಗೆ ಅಣಿಯಾಗಿರುತ್ತಾರೆ.

ಮುಂಜಾನೆ ಅವಧಿ ಕಳೆದ ತಕ್ಷಣವೇ ಮೊದಲ ಷೆಡ್ಯೂಲ್ ಮುಗಿದಂತೆ. ತಕ್ಷಣ ಆಯಾ ಕಪಲ್ ಗಳನ್ನು, ಪೋಷಕರನ್ನು ತಿಂಡಿ (ಟಿಫನ್) ಗಾಗಿ ಸಮಯ ಬಿಡುವು ಕೊಡುತ್ತಾರೆ.

ನಂತರ, ಮೈಸೂರಿನ ಸುತ್ತಮುತ್ತ ಇರುವ ಬೇರೆ ಬೇರೆ ಸ್ಥಳಗಳನ್ನು ಶೂಟಿಂಗ್ ಗಾಗಿ ಆಯಾ ಚಿತ್ರೀಕರಣದ ತಂಡಗಳು ಆಯ್ಕೆ ಮಾಡಿಕೊಂಡಿರುತ್ತಾರೆ. ಪಾಂಡವಪುರದಲ್ಲಿ ಕೆಲಸ ಮಾಡುವ ನಮ್ಮ ಭಾವಮೈದ ಸುನಿಲ್ ಪಾಟೀಲ್ ಹಾಗೂ ಗೌತಮಿಯವರ ಜೋಡಿಯ ಫ್ರೀ ವೆಡ್ಡಿಂಗ್ ಶೂಟಿಂಗಾಗಿ, ನನ್ನ ಆತ್ಮೀಯ ಸ್ನೇಹಿತ ಸಮೀರ್ ಶಿರಹಟ್ಟಿ ಅವರ ಸಲಹೆ ಮೇರೆಗೆ ಮೈಸೂರಿನ ಭರತ್ ಎನ್ನುವವರ ವಿಡಿಯೋ ಚಿತ್ರೀಕರಣದ ತಂಡಕ್ಕೆ ಆ ಕೆಲಸವನ್ನು ಮಾಡಲು ವಿನಂತಿಸಿಕೊಳ್ಳಲಾಗಿತ್ತು. ತಂಡದಲ್ಲಿ ಸ್ನೇಹಪೂರ್ವಕವಾದ ವಾತಾವರಣವಿತ್ತು. ಆಯಾ ತಂಡದ ಸದಸ್ಯರು ಒಬ್ಬರಿಗೊಬ್ಬರು ತಮಾಷೆ ಮಾಡುತ್ತಲೇ ಕಾಲೆಳೆಯುವ ಸ್ನೇಹಮಯ ವಾತಾವರಣ ನೋಡಿದಾಗ ವೃತ್ತಿ ಬದುಕಿನಲ್ಲಿಯೂ ಸದಾ ನಗುನಗುತ್ತಾ ಇರಬೇಕು ಎನ್ನುವ ಪಾಠ ನಮಗೆ ಸಿಕ್ಕಿತು. ಚಿತ್ರಿಕರಣಕ್ಕೆ ಅರಮನೆಯ ನಂತರ ಮೈಸೂರು ಸಮೀಪದ ಬ್ಯಾತನಹಳ್ಳಿ ಅರಣ್ಯ ಪ್ರದೇಶದ ಬ್ಯಾತನಹಳ್ಳಿ ಮೈನ್ಸ್ ಕ್ವಾರಿಗೆ ಹೋದೆವು. ಅಲ್ಲಿ ಹಲವಾರು ವಿವಿಧ ಭಂಗಿಯ ಚಿತ್ರೀಕರಣ ಮಾಡಲಾಯಿತು. ಆಳವಾದ ಕಂದರವಿದೆಯೆಂದು ಅಲ್ಲಿಯವರಿಂದ ತಿಳಿಯಿತು. ಆ ಸುತ್ತಮುತ್ತಲಿನ ಪರಿಸರದಲ್ಲಿ ಕುಡಿಯಲು ನೀರು ಸಿಗದಂತಹ ಪ್ರದೇಶ. ಇದನ್ನು ಮನಗಂಡು ಐದು ಲೀಟರ್ ನೀರು ತೆಗೆದುಕೊಂಡು ಹೋಗಿದ್ದೆವು. ಕೇವಲ ನೀರು ಕುಡಿದು ಬೆವರು ಒರೆಸಿಕೊಳ್ಳುತ್ತಾ, ತಮ್ಮ ಕಾಯಕದಲ್ಲಿ ತೊಡಗಿದ ಗೆಳೆಯರು ಭಕ್ತವತ್ಸಲ್ ಸರ್ ಫೋಟೋಗ್ರಾಫರ್ ಕಮ್ ವಿಡಿಯೋಗ್ರಾಫರ್ ತುಂಬಾ ಆಸಕ್ತಿಯಿಂದ ಸೆರೆ ಹಿಡಿಯುತ್ತಿದ್ದರು.

ಹಾಗೆ ದೂರದಿಂದಲೇ ವಿವಿಧ ಭಂಗಿಗಳನ್ನು ತಮ್ಮ ಡ್ರೋನ್ ಕ್ಯಾಮೆರಾದ ಮೂಲಕ ಚೀತ್ರಿಕರಣ ಮಾಡುತ್ತಿದ್ದ ಕಿರಣ್ ಸರ್ ಅವರು, ತಮ್ಮ ಬದುಕನ್ನು ಕಟ್ಟಿಕೊಂಡಿರುವ ಬಗ್ಗೆ ವೈಯಕ್ತಿಕ ವಿಷಯವನ್ನು ಸ್ನೇಹಪೂರಕವಾಗಿ ನನ್ನೊಂದಿಗೆ ಹಂಚಿಕೊಂಡರು. ಹಾಗೆಯೇ ಅತ್ಯಂತ ಮೃದು ಸ್ವಭಾವದ ಪ್ರಮೋದ್ ಸರ್ ಚಿತ್ರೀಕರಣ ಮಾಡುತ್ತಲೇ ತಮ್ಮ ವೃತ್ತಿ ಬದುಕಿನ ಅನುಭವಗಳನ್ನು, ಖಾಸಗಿ ವಿಷಯಗಳನ್ನು ತಮ್ಮ ಸ್ನೇಹಿತರೊಡನೆ ಹಂಚಿಕೊಳ್ಳುತ್ತಿದ್ದರು. ಅಲ್ಲದೇ ಚಿತ್ರೀಕರಣಕ್ಕೆ ಬೇಕಾದ ಅಗತ್ಯ ಸಿದ್ಧತೆಗಳು, ಇಷ್ಟೇ ದೂರದಿಂದ ಇಷ್ಟೆ ಲೆನ್ಸ್ ಗಳನ್ನು ಬಳಸಿಕೊಂಡು ಇಂತಹದೇ ಡ್ರೆಸ್ ಗಳನ್ನು ಜೋಡಿಗಳಿಗೆ ಧರಿಸಲು ತಿಳಿಸುತ್ತದೆ. ಎರಲ್ಲರೂ ತಮ್ಮ ವೃತ್ತಿ ನೈಪುಣ್ಯವನ್ನು ಹಂಚಿಕೊಂಡು ಕಲ್ಲು ಕ್ವಾರೆಯಲ್ಲಿಯ ಚಿತ್ರೀಕರಣ ಮುಗಿಸಿದರು.

ಸುಮಾರು ಮಧ್ಯಾಹ್ನ 2 ಗಂಟೆ ಅವರಿಗೆ ಬಿಸಿಲು ತುಂಬಾ ಇದೆ ಎಂದೇ ಭಾವಿಸಿಕೊಂಡಿದ್ದರು. ಆದರೆ ಉತ್ತರ ಕರ್ನಾಟಕದಿಂದ ಹೋದ ನಮಗೆ ಅಂತಹ ಅನುಭವ ಆಗಲೇ ಇಲ್ಲ ಏಕೆಂದರೆ ಬಿಸಿಲು ನಮಗೆ ಸಾಮಾನ್ಯವಾಗಿತ್ತು. ನಂತರ ಬ್ಯಾತಹಳ್ಳಿಗೆ ಸಮೀಪವಿರುವ ಫಾರ್ಮ್ ಹೌಸ್ ಗೆ ಮನೆಯಲ್ಲಿಯ ಚಿತ್ರೀಕರಣಕ್ಕಾಗಿ ಕಿರಣ್ ಸರ್ ಅವರ ತಂಡವನ್ನು ಬಿಟ್ಟು, ಭಕ್ತ ವತ್ಸಲ್, ಪ್ರಮೋದ್ ಸರ್ ಹಾಗೂ ಶ್ರೀನಿವಾಸ ಜೊತೆಗೆ ಬ್ಯಾತಹಳ್ಳಿಗೆ ಬಂದು ತಂಪಾದ ಎಳೆ ನೀರನ್ನು ಕುಡಿದು ಹಾಗೆಯೇ ಅಲ್ಲಿರುವವರಿಗೂ ಎಳನೀರು, ಹಣ್ಣನ್ನು ತೆಗೆದುಕೊಂಡು ಪುನಃ ಮತ್ತೆ ಚೀತ್ರಿಕರಣದ ಫಾರ್ಮ ಹೌಸಿಗೆ ಮರಳಿದೆವು.

ಎಳನೀರು ಕುಡಿದು ಹಣ್ಣುಗಳನ್ನು ತಿನ್ನುತ್ತಲೆ ಚಿತ್ರೀಕರಣದ ತಂಡ ವಿಶ್ರಾಂತಿಗೆ ಜಾರಿದ ಸಮಯದಲ್ಲಿ, ಮತ್ತೆ ಜೋಡಿಗಳು ಚಿತ್ರೀಕರಣಕ್ಕೆಂದು ಶೃಂಗಾರಗೊಂಡರು. ಫಾರ್ಮ್ ಹೌಸಿನ ಮನೆಯನ್ನು ಕರ್ಲಿ ಆಟ್೯ ಬಳಸಿಕೊಂಡು ಪೇಂಟನ್ನು ತುಂಬಾ ಅಚ್ಚುಕಟ್ಟಾಗಿ ಗ್ರಾಮೀಣ ಸೊಗಡನ್ನು ಬಿಂಬಿಸುವಂತೆ ಶೃಂಗಾರಗೊಳಿಸಿದ್ದರು. ಮನೆಯ ಬಳಿ ನೀರಿನ ತೊಟ್ಟಿಯನ್ನು ಬಾವಿಯ ರೂಪದಲ್ಲಿ ಪೇಂಟ್ ಮಾಡಲಾಗಿತ್ತು. ಅಲ್ಲಿಯ ಅನೇಕ ಭಾವ ಬಂಗಿಗಳನ್ನು ಚೀತ್ರಿಕರಿಸಿದರು.
ಫಾರ್ಮ್ ಹೌಸಿನಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕರಂಗಯ್ಯನವರನ್ನು ಪ್ರೀತಿಯಿಂದಲೇ ಮಾತನಾಡಿಸುತ್ತಾ, ಚಾಮುಂಡಿ ಕ್ಷೇತ್ರದ ಅನೇಕ ವಿಷಯಗಳನ್ನು, ಅಲ್ಲಿಯ ಕೃಷಿಗೆ ಸಂಬಂಧಿಸಿದ ವಾತಾವರಣವನ್ನು ಅವರ ಅನುಭವದ ಮಾತುಗಳ ಮೂಲಕ ಕೇಳಿ ಖುಷಿಪಟ್ಟೇನು.

ನಂತರ ಮುಂದಿನ ಚಿತ್ರೀಕರಣಕ್ಕಾಗಿ ‘ಸಾಗರಕಟ್ಟೆ’ ಎನ್ನುವ ಸ್ಥಳಕ್ಕೆ ಹೋಗಬೇಕಾಗಿದ್ದರಿಂದ ಮೈಸೂರಿನ ಬೋಗಾದಿ, ಇಲವಾಲದ ಪ್ರದೇಶಗಳನ್ನು ದಾಟಿಕೊಂಡು ಹೋಗುವ ಮುನ್ನ ಡಾ. ರಾಜಕುಮಾರ್ ಹೆಸರಿನ ಹೋಟೆಲ್ ನಲ್ಲಿ ಸವಿಯಾದ, ರುಚಿಯಾದ ಊಟವನ್ನು ಮಾಡಿಕೊಂಡು ಪಯಣ ಮುಂದುವರಿಸಿದೆವು.

ಕಾವೇರಿ ನದಿಯ ಹಿನ್ನೀರಿನ ಪ್ರದೇಶವೇ ಸಾಗರಕಟ್ಟೆ..! ಆಳವಿಲ್ಲದ ನದಿಯ ಹಿನ್ನೀರು ಹರಡಿಕೊಂಡು ವಿಶಾಲವಾದ ಮೈದಾನದಂತೆ ಭಾಸವಾಯಿತು. ನೀರಿನ ಪಕ್ಕದಲ್ಲಿಯ ದಡದ ಅಂಚಿನಲ್ಲಿ ಡ್ರೋಣ್ ಕ್ಯಾಮೆರಾ, ಸ್ಟೀಲ್ ಕ್ಯಾಮೆರಾಗಳನ್ನು ಬಳಸಿಕೊಂಡು ವಿವಿಧ ಭಂಗಿಗಳಲ್ಲಿ ಚಿತ್ರೀಕರಣ ಮಾಡಲಾಯಿತು.

ನಾವು ದೂರದಲ್ಲಿಯೇ ಕುಳಿತುಕೊಂಡು ಎಲ್ಲವನ್ನು ವೀಕ್ಷಿಸಿದೇವು. ಆಗಲೇ ಸೂರ್ಯ ತನ್ನ ತಾಯಿ ಒಡಲಿಗೆ ಹೋಗಲು ಆತುರನಾಗಿದ್ದನು. ಕತ್ತಲೆಂಬ ಕತ್ತಲು ಭೂಮಿಗೆ ಬರಲು ತವಕಿಸುತ್ತಿತ್ತು. ಕತ್ತಲಲ್ಲಿಯೂ ಕೂಡ ತಮ್ಮ ಬೆಳಕಿನ ಆಯುಧಗಳನ್ನು ಬಳಸಿಕೊಂಡು, ಬೆಳಕಿನ ಅನೇಕ ಪರಿಕರಗಳಿಂದ ಸುಂದರವಾದ ಚಿತ್ರೀಕರಣ ಮುಂದುವರಿಸಿದ್ದರು. ಆಗಲೇ.. ಸಮಯ ಏಳುವರೆ ಆಗ್ತಾ ಬಂದಿತ್ತು. ಎಂಟುವರೆಗೆ ಬಸ್ ಇರುವುದನ್ನು ಗಮನಿಸಿ, ಊರ ಕಡೆಗೆ ಹೋಗಲು ಸಿದ್ಧತೆ ಮಾಡಿಕೊಂಡೆವು. ಇಡಿ ತಂಡದೊಂದಿಗೆ ಗ್ರೂಪ್ ಫೋಟೋ ತೆಗೆದುಕೊಳ್ಳಬೇಕೆನ್ನುವ ನನ್ನ ಕನಸು ಕನಸಾಗಿಯೇ ಉಳಿಸಿದರು ಭಕ್ತವತ್ಸಲ್ ಸರ್..!! “ಯಾವಾಗ್ಲಾದ್ರೂ ಮೈಸೂರಿಗೆ ಬಂದರೆ ಫೋನ್ ಮಾಡಿ ಸರ್ ಭೇಟಿಯಾಗೋಣ..” ಎನ್ನುವ ಅವರ ಪ್ರೀತಿಯ ಮಾತುಗಳು, ಚಿತ್ರೀಕರಣದ ಪಯಣದೂದ್ದಕ್ಕೂ ಹರಟೆಯ, ತಮಾಷೆಯ ಮಾತುಗಳು, ಮೈಸೂರು ಸೊಗಡಿನ ಗಂಡು ಭಾಷೆಯ ಮೃದುತನವು ಎಲ್ಲವೂ ನನ್ನನ್ನು ಸೆಳೆಯಿತು. ಯಾಕೋ ಮೈಸೂರು ಮತ್ತೆ ಮತ್ತೆ ನೆನಪಾಗುತ್ತಿದೆ. ಆ ಫ್ರೀವೆಡ್ಡಿಂಗ್ ಶೂಟಿಂಗ್ ನ ಕ್ಷಣಗಳು.. ! ವಿವಿಧ ಬಣ್ಣ ಬಣ್ಣದ ಚಿಟ್ಟಗಳಂತಿದ್ದ (ಕಪಲ್) ಜೋಡಿಗಳು..!! ಚುಮುಚುಮು ಹಕ್ಕಿಗಳ ಕಲರವದೊಂದಿಗೆ ಉದಯಿಸುವ ಸೂರ್ಯನ ಸ್ವಾಗತಕ್ಕೆ ಸಿದ್ಧವಾಗಿ ನಿಂತ ಅರಮನೆಗಳು..!! ಅರಮನೆಯ ಮೇಲೆ ಹಾರಿ ಹೋಗುವ ಸ್ವಾತಂತ್ರ್ಯದ ಸಂಕೇತವಾಗಿರುವ ಹಕ್ಕಿಗಳ ದಂಡು..!! ಕರ್ನಾಟಕ ರಾಜ್ಯದಲ್ಲಿಯೇ ಸ್ವಚ್ಛತೆ ಮತ್ತು ಸುಂದರಕ್ಕೆ ಹೆಸರಾದ ಮೈಸೂರಿನ ಸೌಂದರ್ಯಕ್ಕೆ ಸೋಲದವರೇ ಇಲ್ಲವೆನ್ನಬಹುದು..!!

ಆದರೂ…

ಮೈಸೂರಿನಷ್ಟೇ ಶ್ರೀಮಂತವಾದ ಸೌಂದರ್ಯ ನಮ್ಮ ಹಂಪಿ, ಸಂಡೂರು, ಕಪ್ಪತ್ತು ಗುಡ್ಡ, ತುಂಗಭದ್ರಾ ನದಿ, ತುಂಗಭದ್ರಾ ಹಿನ್ನೀರು, ಪಂಪಾವನ, ಅಂಜನಾದ್ರಿ ಇನ್ನೂ ಹತ್ತು ಹಲವಾರು ಇವೆ. ನಾವು ಬಳಸಿಕೊಂಡಿಲ್ಲ , ಬಳಸಿಕೊಳ್ಳಬೇಕು ಅಷ್ಟೇ..!!

ಇಂತಹ ಹಲವಾರು ಕ್ಷಣಗಳಿಗೆ ಸಾಕ್ಷಿಯಾದ ಫ್ರೀ ವೆಡ್ಡಿಂಗ್ ಶೂಟಿಂಗ್ ನ ಪಯಣದ ನೆನಪುಗಳ ಮೆಲುಕು ಹಾಕುವಿಕೆ…

ಇದರ ಮಧ್ಯ ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ವಿಡಿಯೋ ಚಿತ್ರೀಕರಣಕ್ಕಾಗಿ ರೂಪಗೊಂಡಿರುವ ಆಯಾ ತಂಡಗಳ ಬೆವರ ಹನಿಗಳ ಪರಿಶ್ರಮ…!! ವಿಶೇಷವಾಗಿ ನಮ್ಮ ತಂಡದ ಭರತ್ ಸರ್, ಪ್ರಮೋದ್ ಸರ್, ಭಕ್ತವತ್ಸಲ ಸರ್, ಕಿರಣ್ ಸರ್ ಅಲ್ಲದೆ ಸಹಾಯಕನಾಗಿ ಬಂದ ತಮಾಷೆ ಮಾಡುತ್ತಲೇ ಎಲ್ಲರ ಪ್ರೀತಿಯ ಮಾತುಗಳನ್ನು ಕೇಳುವ ಶ್ರೀನಿವಾಸ್ ನ ಜೊತೆಗೆ ಕಳೆದ ಆ ಮಧುರ ಕ್ಷಣಗಳು…!! ಇದೆಲ್ಲದಕ್ಕೂ ಸಾಕ್ಷಿಯಾಂತಿದ್ದ ನಮ್ಮ ಶ್ರೀಮತಿಯವರಾದ ವಿಜಯಲಕ್ಷ್ಮೀ, ಅತ್ತಿಗೆಯವರಾದ ದ್ರಾಕ್ಷಾಯಣಮ್ಮ, ನನ್ನ ಮುದ್ದು ಮಗಳು ಬಿ ಆರ್ ಸಮತ, ಎಲ್ಲರೊಡನೆ ಬೆರೆತ ಮೈಸೂರಿನ ಫ್ರೀ ವೆಡ್ಡಿಂಗ್ ಪಯಣದ ನೆನಪುಗಳು ಮರೆಯಲಾರದಂತಹವು..!!

ಗೆಳೆಯರೇ,
ನೀವು ಯಾವಾಗಲಾದರೂ ಮೈಸೂರಿಗೆ ಹೋದಾಗ ಮುಂಜಾನೆಯ ಸಮಯದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ನೋಡಲು ಮರೆಯದೆ ಹೋಗಿ ಬನ್ನಿ… ಅಲ್ಲೊಂದು ಹೊಸ ಲೋಕದ ಪುಳಕ ನಿಮಗೂ ದಕ್ಕೀತೂ…
ಅಂತಹ ಮರೆಯಲಾರದ ನೆನಪುಗಳನ್ನು ಕಟ್ಟಿಕೊಡುವ ಮೈಸೂರಿನ ಚಿತ್ರೀಕರಣದ ತಂಡಕ್ಕೆ ನಮ್ಮ ಕುಟುಂಬದಿಂದ ಪ್ರೀತಿಯ ಶುಭ ಹಾರೈಕೆಗಳು.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

2 thoughts on “ರಮೇಶ ಸಿ ಬನ್ನಿಕೊಪ್ಪ ಹಲಗೇರಿ,ಲಹರಿ-ಮೈಮನ ತಣಿಸುವ ಪ್ರೀ ವೆಡ್ಡಿಂಗ್ ಶೂಟಿಂಗ್ ನ ಆ…ಕ್ಷಣಗಳು..

  1. ನಿಮ್ಮ ಆಕರ್ಷಕ ಶೈಲಿ ನಮ್ಮಲ್ಲೂ ಪುಳಕ ತಂದಿದ್ದು ನಿಜ. ಪ್ರಿವೆಡ್ಡಿಂಗ್ ಶೂಟಿಂಗ್ ಇಷ್ಟು ವ್ಯಾಪಕವಾಗಿ ಬೆಳೆದಿದೆ ಎಂಬುದು ನಿಮ್ಮ ಲೇಖನದಿಂದ ಅರ್ಥವಾಯಿತು.
    ಅಭಿನಂದನೆಗಳು.

Leave a Reply

Back To Top