ಕಾವ್ಯ ಸಂಗಾತಿ
ಚಂದ್ರಾವತಿ ಬಡ್ಡಡ್ಕ
ಮತ್ತೆ ಬಂದಿದೆ ಚುನಾವಣೆ
ಮತ್ತೆ ಬಂದಿದೆ ಚುನಾವಣೆ ನಾನೂ ಗೇಯಬೇಕು;
ಸಾಕಷ್ಟು ಮೇಯಬೇಕು
ಗೆಲ್ಲಬೇಕು ನಾನು, ಇದಕೆ ಬೇಕು, ಮಂತ್ರ ತಂತ್ರ ಕುತಂತ್ರ
ಚೆಲ್ಲುವುದಷ್ಟೆ ಅಲ್ಲ ಹಣ;
ನಮಗೆ ಗೊತ್ತುಂಟು ಉರುಳಿಸಲು ಹೆಣ
ಅವರದೋ ಇವರದೋ ಇನ್ಯಾರದೋ
ಉರುಳಬೇಕು ಅಷ್ಟೆ; ಯಾರಿಗಾದರೂ ಲಾಭ ಲಾಭವೇ!
ರಸ್ತೆಗಳಿಗೆಲ್ಲ ಆಗಬೇಕು ದುರಸ್ತಿ, ಅದು
ಹೇಗಾದರೂ ಆಗಲಿ; ಯಾರಪ್ಪನ ಆಸ್ತಿ
ನೀನು ಯಾರಾದರೇನು ಅಣ್ಣಾ, ನಿನಗೂ ಇರಲಿ ಒಂದು ಬಣ್ಣ
ಜನರ ಬವಣೆಯದು ಅವರ ಕರ್ಮ; ನಮಗೆ ಬೇಕಿರುವುದೀಗ ಧರ್ಮ!
ತಿಳಿದುಕೊಂಡಿದ್ದೇವೆ ಮರ್ಮ; ಯಾವುದೂ ಅಲ್ಲ ಅಧರ್ಮ
ನೀತಿ ನಿಯಮ ಎಲ್ಲ ಇಲ್ಲಿ ವಿಭ್ರಾಂತಿ
ಗದ್ದುಗೆ ಏರುವುದಷ್ಟೆ ರಾಜನೀತಿ!
ಗೆದ್ದವಗೆ ಗದ್ದುಗೆ ಉಳಿಸಿಕೊಳ್ಳುವ ಭೀತಿ
ಬಿದ್ದವಗೆ ಗೆದ್ದವರ ಬೀಳಿಸುವ ಛಾತಿ
ಆಪರೇಷನ್ನೋ, ಸೋಟುಕೇಸೋ, ರೆಸಾರ್ಟೋ
ಯಾವುದಾದರೂ ಸರಿ ಮಾಡಿಕೊಳ್ಳಬೇಕು ಬುನಾದಿ
ಮತ್ತೆ ಬಂದಿದೆ ಚುನಾವಣೆ, ರಂಗೇರುತ್ತಿದೆ ರಂಗಸ್ಥಳ
ರಬ್ಬರಿಗಿಲ್ಲ ರೇಟು, ಅಡಿಕೆಗೇನೋ ಉಂಟು
ಆದಕೋ ಹಳದಿ ರೋಗ, ಎಲೆಚುಕ್ಕಿಯ ಗೀಟು
ರೈತರ ಬವಣೆ ತಪ್ಪಿದ್ದುಂಟೇ, ಬೇಸಾಯ ಮಾಡಿದವ ಬೇಗ ಸಾಯ
ಆ ಪಕ್ಷ – ಈ ಪಕ್ಷಗಳ ಬಣ್ಣಬಣ್ಣದ ಆಶ್ವಾಸನೆ
ಪರಿಹರಿಸುವೆವು ನಾವ್ ನಿಮ್ಮೆಲ್ಲ ಸಮಸ್ಯೆ
ಕೇಳಲು ಬಹಳ ಮಜಾವುಂಟು, ನಮಗೆ ಗೊತ್ತುಂಟು
ಗೆದ್ದಮೇಲೆ ನೀವು ಇದ ಮರೆವುದುಂಟು
ಅವನಂತವ ಇವನಿಂತವ ಆರೋಪ ಆಟಾಟೋಪ
ಮರೆಯಲ್ಲಿ ಎಲ್ಲರೂ, ಒಂದೇ ಮೇಜಿನ ಸುತ್ತ ಮೇಜವಾನಿ
ಎಲ್ಲರ ಉದ್ದೇಶ ಒಂದೇ ಜನೋದ್ಧಾರ, ಸುಭಿಕ್ಷ ಸರಕಾರ
ಗೆದ್ದಮೇಲೆ ಖಂಡಿತ ಮೂಡುವುದು ಸುಭಿಕ್ಷೆ, ಆಗುವುದು ಉದ್ಧಾರ
ಪ್ರಶ್ನೆ ಒಂದೇ ಅದು ಯಾರ ಉದ್ಧಾರ? ಎಲ್ಲಿ ಸುಭಿಕ್ಷೆ? ಯಾರಿಗೆ ಭಿಕ್ಷೆ
ಮತ್ತೆ ಬಂದಿದೆ ಚುನಾವಣೆ ಗೇಯಬೇಕು, ಸಾಕಷ್ಟು ಮೇಯಬೇಕು!