ಅರ್ಚನಾ ಯಳಬೇರು-ಗಜಲ್

ಕಾವ್ಯಸಂಗಾತಿ

ಅರ್ಚನಾ ಯಳಬೇರು

ಗಜಲ್

ಹೃದಯ ತಂತಿಗಳು ಅದುರುತ್ತಿವೆ ಭಾವ ವೀಣೆಯನು ನುಡಿಸು ಬಾ
ಒಲವಿನ ಕುಸುಮಗಳು ಬಾಡುತ್ತಿವೆ ಪ್ರೀತಿ ತುರುಬಿಗೆ ಮುಡಿಸು ಬಾ

ಕೇಳುತಿದೆ ಸೋಕುತಿರುವ ಮಂದ ಮಾರುತದಲ್ಲೂ ನಿನ್ಹೆಸರ ತನನ
ನುಡಿವ ನಲ್ಮೆಯ ಸೊಲ್ಲು ಸೊಲ್ಲನು ಮಿಡಿವ ಮೌನಕೆ ತೊಡಿಸು ಬಾ

ಯುಗವಾಗುತಿದೆ ಕ್ಷಣ ಕ್ಷಣವು ನಿನ್ನೊಲವ ಕುಡಿನೋಟದ ಸೆಳತದಿ
ಕುಂದಿದ ಆನನಕೆ ಕೆಂದಾವರೆಯ ಕಡು ಚೆಲುವನು ಕೊಡಿಸು ಬಾ

ಸುಳಿವು ನೀಡದೆ ಬರೆದಿರುವೆ ನನ್ನೆದೆಯಲಿ ಅನುರಾಗ ಪಲ್ಲವಿಯನು
ಮಜ್ಜಿಸುತಿರುವೆನು ವಿರಹದ ಆಳದಲಿ ಪ್ರೇಮ ಧಾರೆಯ ಹರಿಸು ಬಾ

ಶೃಂಗರಿತಳು ‘ಅರ್ಚನಾ’ ಹುಸಿ ಮುನಿಸಿನ ಲಜ್ಜೆಯ ಆಲಿಂಗನದಲಿ
ಸವಿಸ್ವರ್ಶದ ಸೌಖ್ಯದಲಿ ಮುದಗೊಂಡ ಕಾಮನೆಗಳ ಅರಳಿಸು ಬಾ


Leave a Reply

Back To Top