ಭಾಗ್ಯ.ಎಂ.ವಿ.-ಗಜಲ್

ಕಾವ್ಯ ಸಂಗಾತಿ

ಗಜಲ್

ಭಾಗ್ಯ.ಎಂ.ವಿ.

ಬಿಸಿಲಿನಲಿ ಬೆಂದರೂ ಬಿತ್ತಿದ ಕನಸುಗಳು ಬಾಡಲಿಲ್ಲ
ಕಂಬನಿಯಲಿ ಮಿಂದರೂ ತೆರೆದ ನಯನಗಳು ಸೋಲಲಿಲ್ಲ

ಮುಳ್ಳು ಹಾದಿಯಲಿ ನೆತ್ತರ ಹೆಜ್ಜೆಯ ಗುರುತುಗಳೆಷ್ಟೋ!
ಗಾಯಗಳು ಬಾಧಿಸಿದರೂ ನಡೆವ ಕಾಲುಗಳು ನಿಲ್ಲಲಿಲ್ಲ

ಮನದ ಮಡಿಕೆಯ ತುಂಬಾ ಹೆಪ್ಪುಗಟ್ಟಿತ್ತು ದುಃಖ!
ಕೊರಳು ಬಿಕ್ಕಳಿಸಿದರೂ ನುಡಿವ ಮಾತುಗಳು ತೊದಲಲಿಲ್ಲ

ವೇದನೆಯ ಗುಳ್ಳೆಗಳೇ ಮೆಹಂದಿಯಾಗಿತ್ತು ಅಂಗೈಗಳಿಗೆ!
ದುಡಿದು ಸವೆದಿದ್ದರೂ ಭರವಸೆಯ ರೇಖೆಗಳು ಅಳಿಸಲಿಲ್ಲ

ಹಸಿದ ಹೊಟ್ಟೆಗೆ ಗೊತ್ತಿತ್ತು ಖಾಲಿ ತಟ್ಟೆಯ ಸದ್ದಿನ ಹಾಡು !
ಹಿಡಿ ಅನ್ನ ಉಂಡರೂ ದುಡಿವ ರಟ್ಟೆಗಳು ಕುಸಿಯಲಿಲ್ಲ

ಇಟ್ಟ ಗುರಿ ನೆಟ್ಟ ನೋಟ ದಿಟ್ಟ ನಡೆ ಭಾಗ್ಯದ ದಿಕ್ಕು ತೋರಿತ್ತು!
ಪ್ರವಾಹದಲಿ ಈಜಿದರೂ ನಾಳೆಯ ನಿರೀಕ್ಷೆಗಳು ಮುಳುಗಲಿಲ್ಲ


4 thoughts on “ಭಾಗ್ಯ.ಎಂ.ವಿ.-ಗಜಲ್

Leave a Reply

Back To Top