ಅಕ್ಕಮಹಾದೇವಿ ಜಯಂತಿ ವಿಶೇಷ

ಹಮೀದಾ ಬೇಗಂ ದೇಸಾಯಿ

ವೈರಾಗ್ಯ ನಿಧಿ ಅಕ್ಕ ಮಹಾದೇವಿ…

ಹನ್ನೆರಡನೆಯ ಶತಮಾನ ಕನ್ನಡ ನಾಡು ಕಂಡ ಸುವರ್ಣ ಕಾಲ. ಮಹಾ ಮಾನವತಾ ವಾದಿ ಬಸವಣ್ಣನವರ ಸಮಾಜೋ- ಧಾರ್ಮಿಕ ಕ್ರಾಂತಿ ನ ಭೂತೋ ನಭವಿಷ್ಯತಿ..! ಮಹಿಳಾ ಸ್ವಾತಂತ್ರ್ಯಕ್ಕೆ ,ಸಮಾನತೆಗೆ ನೀಡಿದ ಪ್ರೋತ್ಸಾಹ , ಮಹಿಳೆಯರು ಸಬಲರಾಗಿ ಅನುಭವ ಮಂಟಪದಲ್ಲಿ ವಿಶ್ವ ವಿಖ್ಯಾತ ಅನುಭಾವಿಗಳು, ವಚನಕಾರ್ತಿಯರು ಮೂಡಿ ಬಂದರು. ಶಿವಶರಣೆಯರು ಅಂದಾಕ್ಷಣ ಮೊಟ್ಟ ಮೊದಲು ನೆನಪಾಗುವ ಹೆಸರು ಅಕ್ಕ ಮಹಾದೇವಿ. ಅಕ್ಕ ಪದಕ್ಕೆ ಪರ್ಯಾಯವಾಗಿ ನಿಂದವಳು ಮಹಾದೇವಿ. ಅಕ್ಕ ಪದದೊಂದಿಗೆ ಜ್ಞಾನಿ, ವಿರಾಗಿಣಿ, ತ್ಯಾಗಮಯಿ, ಅನುಭಾವಿ ಎಂಬರ್ಥಗಳು ಒಡಗೂಡುವಂತೆ ಬಾಳಿದವಳು ಅಕ್ಕ ಮಹಾದೇವಿ.
ಕನ್ನಡ ವನದ ಕೋಗಿಲೆಯಾಗಿ, ಸ್ತ್ರೀ ಬದುಕಿಗೆ ಹೊಸ ತಿರುವು ತಂದ ಹೆಣ್ತನದ ಹೆಮ್ಮೆ ಅಕ್ಕ ಮಹಾದೇವಿ. ಶಿವಮೊಗ್ಗೆಯ ಉಡುತಡಿಯಲ್ಲಿ ಜನಿಸಿ, ಕಾಮುಕ ರಾಜ ಕೌಶಿಕನ ಪ್ರಭುತ್ವ ದಬ್ಬಾಳಿಕೆಯನ್ನು ಧಿಕ್ಕರಿಸಿ, ಕೆಡುವೊಡಲ ನಶ್ವರತೆಯನ್ನು ಅವನಿಗೆ ಮನದಟ್ಟು ಮಾಡಿ, ದಿಗಂಬರದ ದಿವ್ಯಾಂಬರೆಯಾಗಿ, ಕಲ್ಯಾಣದ ಅನುಭವ ಮಂಟಪಕ್ಕೆ ಸಾಗಿ, ಕದಳಿಯಲ್ಲಿ ಚೆನ್ನಮಲ್ಲಿಕಾರ್ಜುನನೊಡಗೂಡಿದ ಅಕ್ಕನ ಜೀವನ- ಸಂದೇಶ ಮಹಿಳಾ ಕುಲಕ್ಕೆ ಭರವಸೆಯ ಬೆಳಕು, ನಿಜ ಜೀವನದ ಹೊಳಪು..! ಪರಿಶುದ್ಧತೆಯ ಬಿಳುಪು ನೀಡುವ ಸನ್ಮಾರ್ಗದರ್ಶಿನಿ ಅಕ್ಕ ಮಹಾದೇವಿ. ಪರಮಾರ್ಥಕ್ಕೆ ಪ್ರಾಣ ಪಣವಿಟ್ಟ ವೀರ ವಿರಾಗಿಣಿ, ಭಕ್ತಿ-ವಿರಕ್ತಿ-ಜ್ಞಾನಗಳು ಮುಪ್ಪುರಿಗೊಂಡ ದಿವ್ಯ ಶಕ್ತಿರೂಪ ಅಕ್ಕ..! ಅಕ್ಕನ ವಚನಗಳು ಸದಾ ಕಾಲಕ್ಕೂ ಕೈ ದೀವಿಗೆಗಳು..! ಅಕ್ಕನ ವಚನಗಳನ್ನು ಕುರಿತು ಚೆನ್ನಬಸವಣ್ಣನವರ ಮೆಚ್ಚುಗೆ ಮಾತುಗಳು ಹೀಗಿವೆ.
ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ
ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ
ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ
ಅಜಗಣ್ಣನ ಐದು ವಚನಕ್ಕೆ ಕೂಡಲ ಚೆನ್ನಸಂಗಯ್ಯನಲ್ಲಿ ಒಂದು ವಚನ ನಿರ್ವಚನ ಕಾಣಾ

ಅಕ್ಕನ ದೃಷ್ಟಿಯಲ್ಲಿ ಕದಳಿ ಎಂಬುದು ಕಾಯ ಮನಗಳನ್ನಾವರಿಸಿದ ಶಬ್ದ ಸ್ಪರ್ಶಾದಿ ವಿಷಯಂಗಳು..ಅವಳ ಒಂದು ವಚನದಲ್ಲಿ ನೋಡಬಹುದು

ಕದಳಿ ಎಂಬುದು ತನು
ಕದಳಿ ಎಂಬುದು ಮನ
ಕದಳಿ ಎಂಬುದು ವಿಷಯಂಗಳು
ಕದಳಿಯೆಂಬುದ ಗೆದ್ದು ತಾವೆ ಬದುಕಿ ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು
ಭವಗೆಟ್ಟು ಬಂದಮಗಳೆಂದು ಕರುಣದಿಂ ತೆಗೆದು
ಬಿಗಿದಪ್ಪಿದಡೆ ಚನ್ನಮಲ್ಲಿಕಾರ್ಜುನನ ಹೃದಯ ಕಮಲದಲ್ಲಿ ಅಡಗಿದೆನು

ಅಕ್ಕ ಮಹಾದೇವಿ ಕನ್ನಡ ನಾಡಿಗೆ ಮಾತ್ರವಲ್ಲ, ಇಡೀ ಜಗತ್ತಿನ ಮಹಿಳಾ ಸಾಧಕರಲ್ಲಿಯೇ ಅಗ್ರಗಣ್ಯಳಾದ ಅಪೂರ್ವ ವ್ಯಕ್ತಿ. ಹೆಣ್ತನದ ಪರಿಪೂರ್ಣ ಸ್ವರೂಪವನ್ನು ಉಜ್ವಲವಾಗಿ ಬೆಳಗಿ ತೋರಿದ ಮಹಾಶಕ್ತಿ. ಈ ಜಗತ್ತೆಂಬ ಕದಳಿಯಲ್ಲಿ ಅದೊಂದು ಪರಿಮಳಿತ ಕರ್ಪುರದ ಪರಂಜ್ಯೋತಿ..!


2 thoughts on “

  1. ಅಕ್ಕನ ಕುರಿತು ಒಳ್ಳೆಯ ಚಿಂತನೆ ಮೇಡಂ

Leave a Reply

Back To Top