ಅಕ್ಕಮಹಾದೇವಿ ಜಯಂತಿ ವಿಶೇಷ

ಕೆ.ಶಶಿಕಾಂತ

ಮಹಾದೇವಿ ಅಕ್ಕ

ಶ್ರೀದೇವಿಯಲ್ಲ, ಸತಿದೇವಿಯಲ್ಲ
ಹುಲಿ ಸಿಂಹಗಳನೇರಿ
ಜಗಕೆ ಭಯ ಬಿತ್ತಿದವಳಲ್ಲ
ಕೆಂಗಣ್ಣು ಕೆಕ್ಕರಿಸಿ
ತಲೆಗೂದಲನೆಲ್ಲ ಹರಡಿಸಿ
ತ್ರಿಶೂಲವನ್ಹಿಡಿದು
ಗಂಡುಗಳೆದೆಯ ನಡುಗಿಸಿದವಳಲ್ಲ
ಆದರೂ ಜಗವೆಲ್ಲ
ತಲೆ ಬಾಗಿದೆಯಲ್ಲ…..!
ನಮ್ಮ ಮಹಾದೇವಿ.

ಕೆಡುವ ತನುವಿಡಿದ
ಮೋಹದ ಗಂಡನನಳಿದು
ಮಿರುಗುವ ಕಾಯವ
ಕರ್ರನೆ ಕಂದಿಸಿ,
ಪೀತಾಂಬರವ ಬಿಸುಟು
ದಿವ್ಯಾಂಬರವ ಹೊದ್ದ
ಚೆಲುವ ಚೆನ್ನನ ಅರಸಿ
ಜಗವೆಲ್ಲ ಸುಳಿದಾಡಿದ
ಅಪ್ರತಿಮ ಪ್ರೇಯಸಿ
ನಮ್ಮ ಮಹಾದೇವಿ.

ಹರಿವ ನದಿ,ಬೆಳೆದ ಮರ
ಬೆಳಕನರಿಯದ ಗಿರಿ ಗಹ್ವರ
ಮೊದಲಾದ ಬಂಧನದ
ವಿಳಾಸಗಳನಳಿದು
ಚಿನ್ಮಯದ ಚಿದ್ಬೆಳಕಿನಲಿ
ಪರಮನ ವಿಳಾಸದ
ಫಲಕ ಕಟ್ಟಿದವಳು
ನಮ್ಮ ಮಹಾದೇವಿ.

ಮೈಮನಗಳ ಭ್ರಾಂತಿಗೀಡಾಗಿ
ಸಾವು ನೋವಿನ ಹಂಗಿನಲಿ
ತೊಳಲಾಡಿ
ನರಳುವ ಲೋಕದ ಬಾಳು
ಜೊಳ್ಳು ಜೊಳ್ಳೆಂದರುಹಿ
ನೂರು ಮಾಯೆಗಳ
ಮರುಳತನವ ನೀಗಿ
ಮಹಾದೇವನಿಗೊಲಿದ
ನಮ್ಮ ಮಹಾದೇವಿ.

ಓದು ವಾದಗಳಲ್ಲಿ
ಮಣಭಾರದ ಹೊತ್ತಿಗೆಗಳಲಿ
ನಲ್ಲ ಚೆನ್ನನಿಹನೆಂಬ
ಹುಸಿಯನತಿಗಳೆದು
ಯೋಗ ಧ್ಯಾನದಲಿ
ಬಟ್ಟಬಯಲಿನಲಿ
ಮಹಾಬೆಳಗಾಗಿ
ಹೊಳೆವುದನು ತೋರಿದ
ನಿಬ್ಬೆರಗಿನ ನೀರೆ
ನಮ್ಮ ಮಹಾದೇವಿ

ಬಸವರು ಕಟ್ಟಿದ
ಕಲ್ಯಾಣಕೆ ಕಣ್ಣಾದ
ಇಷ್ಟಲಿಂಗಯ್ಯನ
ಸಿರಿಮುಡಿಗೆ ಹೂವಾದ
ಅಲ್ಲಯ್ಯನ ಶಿವಯೋಗಕೆ
ಮಹಿಮೆಯ ಅರಿವಾದ
ಶರಣ ಗಣದ ಕಣ್ಮಣಿ
ನಮ್ಮ ಮಹಾದೇವಿ


One thought on “

  1. ತುಂಬಾ ಅರ್ಥಪೂರ್ಣವಾದ ಕವನ ಸರ್ ಅಕ್ಕಮಹಾದೇವಿಗೆ ಹೇಳಿ ಮಾಡಿಸಿದಂತ ಕವನ

Leave a Reply

Back To Top