ಅಕ್ಕಮಹಾದೇವಿ ಜಯಂತಿ ವಿಶೇಷ

ಗಿರಿಜಾ ಇಟಗಿ

ಅಕ್ಕನನ್ನು ಸ್ಮರಿಸುತಾ

ಹನ್ನೆರಡನೆಯ ಶತಮಾನಕ್ಕೆ
ಇತಿಹಾಸದಲ್ಲಿ ಪ್ರಮುಖ ಸ್ಥಾನವಿದೆ. ಈ ಕಾಲದಲ್ಲಿ ನಡೆದ ಚಳವಳಿ ಯಾರದೋ ಹಿತಾಸಕ್ತಿಗಾಗಿ ನಡೆಯದೇ ಸಹಜವಾಗಿ ನಡೆದದು.ಈ ಶತಮಾನದಲ್ಲಿ ಹುಟ್ಟಿಕೊಂಡ ಬದಲಾವಣೆಯ ಹರಿಕಾರರಲ್ಲಿ ಶಿವಶರಣೆಯರ ಪಾತ್ರವೂ ಅಷ್ಟೆ ಪ್ರಮುಖವಾದದು.
ಅದರಲ್ಲಿ ಮೇರುಗಿರಿಯಾಗಿ ಅಕ್ಕಮಹಾದೇವಿ ನಮ್ಮ ಕಣ್ಣೆದುರು ನಿಲ್ಲುತ್ತಾಳೆ.

ಇವಳ ಧೋರಣೆ‌, ಜೀವನ ಪ್ರೀತಿಗಳು ಇಂದಿಗೂ ಎಂದೆಂದಿಗೂ ಪ್ರಸ್ತುತ ಹಾಗು ದಾರಿದೀಪಗಳಾಗಿವೆ.ಮಹಿಳಾ ಸಂಕುಲಕ್ಕಂತೂ ಈಕೆ ಮಾರ್ಗದರ್ಶಿ ಹಾಗು ಸ್ಪೂರ್ತಿದಾಯಕವಾಗಿದ್ದಾಳೆ.

ಹನ್ನೆರಡನೆಯ ಶತಮಾನದ ಹೊತ್ತಿಗೆ ಸ್ತ್ರೀಯರ ಸ್ಥಾನಮಾನಗಳು ಸಂಕೀರ್ಣ ಸ್ಥಿತಿಯಲ್ಲಿದ್ದು ಹಲವಾರು ಧರ್ಮಶಾಸ್ತ್ರಗಳು ಅನೇಕ ಕಟ್ಟುಪಾಡುಗಳನ್ನು ವಿಧಿಸಿ ಅವಳನ್ನು ಅದರಲ್ಲಿ ಬಂಧಿಯಾಗಿಸಿದವು.

ಇಂತಹ‌ ಸ್ಥಿತಿಯಲ್ಲಿ ‌”ಆತ್ಮಕ್ಕೆ‌ ಲಿಂಗಬೇಧವಿಲ್ಲ” ಎಂದು ದಿಟ್ಟವಾಗಿ ತಿಳಿಹೇಳುತ್ತಾ,ಸ್ತ್ರೀಪರ ಆಂದೋಲನವನ್ನು ಹುಟ್ಟುಹಾಕುತ್ತಾಳೆ ಮಹಾದೇವಿಯಕ್ಕ.
ಸಾಮಾಜಿಕ ಹಾಗು ಧಾರ್ಮಿಕ ನೆಲೆಯಲ್ಲಿ ಸ್ತ್ರೀ ಸಮಾನಳು ಎಂಬ ತತ್ವವನ್ನು ಪ್ರಥಮವಾಗಿ ಅರಹುತ್ತಾಳೆ.

ಅಕ್ಕಮಹಾದೇವಿಯ ಪ್ರಸ್ತುತ ಸಂಖ್ಯೆಯಲ್ಲಿ 434 ವಚನಗಳು ದೊರೆತಿದ್ದು ಕನ್ನಡ ಸಾಹಿತ್ಯದಲ್ಲಿ ಮತ್ತು ಕಾವ್ಯಕ್ಷೇತ್ರದಲ್ಲಿ ಮೈಲುಗಲ್ಲಾಗಿ ನಿಲ್ಲುತ್ತವೆ.

ಅವಳು ಕೇವಲ ವ್ಯಕ್ತಿಯಾಗದೇ ದಿಟ್ಟ ನಿಲುವಿನ ಶಕ್ತಿಯಾಗಿ ನಿಲ್ಲುವದು ಅವಳ ವಿಶಿಷ್ಟವಾದ ವ್ಯಕ್ತಿತ್ವದಿಂದ.
ಅವಳು ವಿಭಿನ್ನವಾದ ನಿಲುವಿನಿಂದ.

ಉಡುತಡಿಯ ನಿರ್ಮಲಶೆಟ್ಟಿ ಸುಮತಿಯ ಪುತ್ರಿಯಾಗಿ ಗುರುಲಿಂಗದೇವರ ಹತ್ತಿರ‌ ಶಿವದೀಕ್ಷೆಯನ್ನು ಪಡೆದು ಶಿವಭಕ್ತಳಾಗಿ ಧ್ಯಾನ ಶಿವಪೂಜೆಯಲ್ಲಿ ಸಮಯ ಕಳೆಯುತ್ತಾ ಚೆನ್ನಮಲ್ಲಿಕಾರ್ಜುನನೇ ತನ್ನ ಪತಿಯೆಂದು ನಿಶ್ವಯಿಸಿಕೊಂಡು…ತನ್ನ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡು

ಸಾವಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆ….ಎಂದು ಸ್ಪಷ್ಟವಾಗಿ ತನ್ನ ಮನದಾಸೆಯನ್ನು ನಿರ್ಭಿತಿಯಿಂದ ನುಡಿದು ಕೌಶಿಕನನ್ನು ನಿರಾಕರಿಸುತ್ತಾಳೆ.

ತನ್ನ ತಂದೆತಾಯಿಗಳಿಗೆ ತನ್ನಿಂದ ಸಂಕಷ್ಟ ಬೇಡವೆಂದು ಬಗೆದು ಮೂರು ಕರಾರುಗಳನ್ನು ವಿಧಿಸುತ್ತಾಳೆ.
ಆ ಕರಾರುಗಳಿಗೆ‌ ಮೀರಿದಾಗ ಭವಿಯ ಸಂಗ ಕಡಿಯಿತೆಂದು ಅರಮನೆಯನ್ನು ತೊರೆದು ನಡೆಯುತ್ತಾಳೆ.

ಇಲ್ಲಿಂದ ಮಹಾದೇವಿಯ ಬದುಕಿನ‌ ಒಂದು ಘಟ್ಟ ಮುಗಿದು ಸಾಧನೆಯ ಮಾರ್ಗಕೆ ಕಾಲಿಡುತ್ತಾಳೆ.
ನಿಜವಾದ ಅಂತಃಸತ್ವ ಕಂಡುಬರುವದು ಇಲ್ಲಿಂದಲೇ.

ಇಲ್ಲಿ ಅವಳು ಆಯ್ಕೆ ಮಾಡಿಕೊಂಡದ್ದು ವಿಚಾರ ಸ್ವಾತಂತ್ರ್ಯವನ್ನು ಧಿಕ್ಕರಿಸಿದ್ದು ಗಂಡನನ್ನು.
ಈ ಸಂದರ್ಭದಲ್ಲಿ ಅವಳು ಎಲ್ಲಾ ಮಹಿಳೆಯರಂತೆ ಟೀಕೆ- ಟಿಪ್ಪಣಿಗಳಿಗೆ ಒಳಗಾಗುತ್ತಾಳೆ.
ಸಾಧನೆಯ ಹಾದಿಯಲ್ಲಿ ಯಾವುದು ಸುಲಭವಾಗಿ ಒಲಿಯುವದಿಲ್ಲ.
ಇಲ್ಲಿ ಅವಳ ವಚನಗಳು ಆತ್ಮನಿವೇದನೆಯಂತೆ ಕಂಡುಬಂದು…ಅವಳ ಬದುಕನ್ನುಅವಳ ಆತ್ಮಸ್ಥೈರ್ಯವನ್ನು,ಸ್ಥಿರತೆಯನ್ನು ವ್ಯಕ್ತಪಡಿಸುತ್ತವೆ.

ಆರೂ ಇಲ್ಲದವಳೆಂದು ಅಳಿಗೊಳಲು ಬೇಡ ಕಂಡೆಯಾ
ಏನು ಮಾಡಿದರೂ ನಾನಂಜುವಳಲ್ಲ

ಏನ್ನುವಲ್ಲಿ ತನ್ನ ಗಟ್ಟಿತನವನ್ನು,ತನುಮನದ ಶುದ್ಧತೆಯನ್ನು

ಹಸಿವಾದೊಡೆ ಭಿಕ್ಷಾನಗಳುಂಟು
ತೃಷೆಯಾದೊಡೆ ಕೆರೆಬಾವಿಗಳುಂಟು….. ಆತ್ಮಸಂಧಾನಕೆ ನೀನೆನಗುಂಟು

ಚಂದನವ ಕಡಿದು ಕೊರೆದು ತೇದಡೆ
ನೊಂದೆನೆಂದು ಕಂಪ ಬಿಟ್ಟಿತ್ತೆ….

ಎನ್ನುವಲ್ಲಿ ಕಷ್ಟಕ್ಕೆ‌ ಒಡ್ಡಿಕೊಂಡಷ್ಟು ಚಿನ್ನವಾಗಿ ಹೊರಹೊಮ್ನುವೆ ಎಂಬ ಅವಳ ನಿಲುವು ಇಂದಿನ ಪ್ರತಿಯೊಬ್ಬ ಸ್ರ್ತೀಕುಲಕ್ಕೆ ಆತ್ಮಸ್ಥೈರ್ಯವನ್ನು ನೀಡುತ್ತದೆ.
ಓಟ್ಟಾರೆಯಾಗಿ ಅವಳ ಜೀವನಾನುಭವವೇ ವಚನಗಳಲ್ಲಿ ಹರಿದು ಬಂದಿರುವದು….ಅವು ವ್ಯಕ್ತಿಗೆ ಎದುರಾಗುವ ಎಲ್ಲ ತೊಡಕು ಸಮಸ್ಯೆ, ನೋವುಗಳನ್ನು ಎದುರಿಸುವ ಸಾಮರ್ಥ್ಯವನ್ನು ಕೊಡುತ್ತವೆ.

‘ಅಕ್ಕ ಕೇಳವ್ವಾ ನಾನೊಂದು ಕನಸ ಕಂಡೆ’ ಎಂಬ ವಚನದಲ್ಲಿ ಅಮೂರ್ತವಾದ ದೇವರನ್ನು ಮೂರ್ತಿಕರಿಸಿದ್ದಾಳೆ.

ಅನುಭವ ಮಂಟಪದಲ್ಲಿ ಅಲ್ಲಮಪ್ರಭುಗಳು ಒಡ್ಡಿದ ಪರೀಕ್ಷೆಯಲ್ಲಿ ಅವಳ ಸ್ಪಷ್ಟ ನಿಲುವು ಭಕ್ತಿ,ಜ್ಞಾನ,ವೈರಾಗ್ಯಗಳ ಬಗೆ ಗೌರವ ಭಾವನೆ ಮೂಡಿಸುತ್ತದೆ.
“ಅರಿವಿಂಗೆ ಕಿರಿದುಂಟೆ” ಎಂಬ ಆದರಣೆಗೆ ಒಳಗಾಗುತ್ತಾಳೆ

ಅಲ್ಲಿಂದ ಕದಳಿ ಬನಕೆ ಹೊರಟ ಅಕ್ಕ ಪ್ರಕೃತಿ ಯೊಂದಿಗೆ ಸ್ಪಂದಿಸಿದಾಳೆ.

ಅಳಿಸಂಕುಲವೇ,ಮಾಮರವೇ….

‘ಚಿಲಿಮಿಲಿ ಎಂದೋಡುವ ಗಿಳಿಗಳಿರಾ’….ಎಂದು ಪ್ರಕೃತಿಯೊಡನೆ ಮಾತನಾಡಿಸುತ್ತಾ ತನ್ನ ನಿವೇದನೆಯನ್ನು ಅವುಗಳಲ್ಲಿ ತೋಡಿಕೊಳ್ಳುತ್ತಾಳೆ.

ಇಂದಿನ ಮಹಿಳೆಯರಿಗೆ ಆತ್ಮಸ್ಥೈರ್ಯ,ಮಾನಸಿಕ ಧೃಡತೆ,ಹೆಣ್ಣುಗಂಡಿನ ಸಮಾನತೆ,ಹೆಣ್ಣು ಮಾಯೆಯಲ್ಲ,ಹೆಣ್ಣಿನ ನಿರ್ಧಾರ, ಧಾರ್ಮಿಕ ಸಾಮಾಜಿಕ ಸ್ಥಾನಮಾನದಲ್ಲಿ ಸಮಾನತೆ,ಆಹಾರ ಕ್ರಮ,ಅಧ್ಯಾತ್ಮಿಕ ನಿಲುವು….ಈ ಎಲ್ಲಾ ಅಂಶಗಳು ಮಾನಸಿಕ ದೌರ್ಬಲ್ಯವನ್ನು ಕಿತ್ತೆಸೆದು ದೈಹಿಕ,ಮಾನಸಿಕ,ಸಾಮಾಜಿಕ, ಅಧ್ಯಾತ್ಮಿಕ ಶಕ್ತಿಯನ್ನು ಇಮ್ಮಡಿಗೊಳಿಸಲು ಅಕ್ಕನ ಜೀವನ ದರ್ಶನ ಬೆಳಕಾಗಿದೆ.


One thought on “

Leave a Reply

Back To Top