ಅಕ್ಕಮಹಾದೇವಿ ಜಯಂತಿ ವಿಶೇಷ

ಪ್ರೊ ರಾಜನಂದಾ ಘಾರ್ಗಿ

ಪರಮ ವೈರಾಗ್ಯ ಮೂರ್ತಿ ಅಕ್ಕಮಹಾದೇವಿ

ಪುರುಷ ಪ್ರಧಾನ ಸಂಸ್ಕೃತಿಯ ವಿರುದ್ಧ ಬಂಡೆದ್ದ ಪ್ರಪಂಚದ ಮೊಟ್ಟ ಮೊದಲನೆಯ ಶರಣೆ ಅಕ್ಕಮಹಾದೇವಿ ಎಂದು ಹೇಳಬಹುದು. ಸ್ತ್ರೀ ವಚನಕಾರರಲ್ಲಿ ಅಗ್ರಸ್ಥಾನ ಅಕ್ಕಮಹಾದೇವಿಯದಾಗಿದೆ. ಚಿಕ್ಕವಯಸ್ಸಿನಲ್ಲಿಯೇ ಅಗಾಧವಾದ ಅಧ್ಯಾತ್ಮಿಕತೆಯ ತುತ್ತತುದಿಗೆ ಏರಿದ್ದು ಅಕ್ಕನ ವಚನಗಳಲ್ಲಿ ಸ್ಪಷ್ಟವಾಗಿದೆ. ಬಸವಣ್ಣನವರಂತೆಯೇ ಅಕ್ಕನದು ಭಕ್ತಿಯ ಮಾರ್ಗ. ರೂಪ ಯೌವನಗಳ ಮಾಯೆಗಳಿಗಾಗಿ ಮಹಾದೇವಿ ಮರುಳಾಗದೆ ತನ್ನ ಪ್ರೇಮವನ್ನು ಚೆನ್ನಮಲ್ಲಿಕಾರ್ಜುನನಿಗೆ ಧಾರೆಯೆರೆದು ವಿರಾಗಿಣಿ ಯಾದವಳು. ದಿಗಂಬರಯಾಗಿ ತನು ಬೆತ್ತಲೆ ಮನ ಬೆತ್ತಲೆ ಭಾವ ಬೆತ್ತಲೆ ಎಲ್ಲಾ ಭಾವನೆಗಳಿಂದ ಎಂಬ ನಿರ್ವಾಣವನ್ನು ಹೊಂದಿದ್ದಳು. ಕಲ್ಯಾಣದ ಅನುಭವ ಮಂಟಪದಲ್ಲಿ ಪ್ರಭುದೇವರು ಅಕ್ಕಮಹಾದೇವಿಯನ್ನು ಪರೀಕ್ಷಿಸಲು ನಿಜವಾಗಿಯೂ ದೇಹದ ಮೋಹ ಅಳಿದಿದ್ದರೆ ಸೀರೆಯನ್ನು ಬಿಟ್ಟು ಕೂದಲನ್ನು ಮರೆ ಮಾಡಿಕೊಂಡಿರುವುದು ಏತಕ್ಕೆ ಎಂದು ಕೇಳಿದಾಗ ಆಕೆಯ ಉತ್ತರ-  
 “ಪಲ ಒಳಗೆ ಪಕ್ವ ವಾಗಿದೆಯಲ್ಲದೆ ಹೊರಗಣ ಸಿಪ್ಪೆ ಒಪ್ಪಗೊಡದು ಕಾಮ ಮುದ್ದೆಯ ಕಂಡು ನಿಮಗೆ ನೋವಾದೀತೆಂದು ಆ ಭಾವದಿಂದ ಮುಚ್ಚಿದೆ ಇದಕ್ಕೆ ನೋವೇಕೆ ಕಾಡದಿರಣ್ಣ ಚೆನ್ನಮಲ್ಲಿಕಾರ್ಜುನನ ದೇವರ ದೇವನ ಒಳಗಾದವಳ” 

 ಅವಳ ದೃಢತೆಯನ್ನು ನೋಡಿ ಮೆಚ್ಚಿ ಆಕೆಯನ್ನು ಸತ್ಕರಿಸಿ ಅಕ್ಕ ಎಂಬ ಬಿರುದನ್ನು ನೀಡುತ್ತಾರೆ. 
‘ಯೋಗಿಗೆ ಯೋಗಿಣಿಯಾದಳು ಮಾಯೆ ಜೋಗಿಗೆ ಜೋಗಿಣಿ ಯಾದಳು ಮಾಯೆ  
ಶ್ರವಣಿಗೆ ಕಂತಿ ಯಾದಳು ಮಾಯೆ ಯತಿಗೆ ಪರಾರ್ಥವಾದಳು ಮಾಯೆ
ಹೆಣ್ಣಿಗೆ ಗಂಡು ಮಾಯೆ ಗಂಡಿಗೆ ಹೆಣ್ಣು ಮಾಯೆ  
ನಿಮ್ಮ ಮಾಯೆಗೆ ನಾ ನಂಜುವಳಲ್ಲ ಚೆನ್ನಮಲ್ಲಿಕಾರ್ಜುನ’  ಎಂದು ಅಕ್ಕಮಹಾದೇವಿ ದೇವರಿಗೆ ಸವಾಲು ಹಾಕುವ ಧೈರ್ಯ ತೋರಿಸುತ್ತಾಳೆ. ಇಡೀ ಜಗತ್ತು ಸ್ತ್ರೀಗೆ ಮಾಯೆ ಎಂಬ ಪಟ್ಟ ಕಟ್ಟಿದಾಗ ಅದನ್ನು ವಿರೋಧಿಸಿ ಮಾಯೆಯನ್ನು ವಿಭಿನ್ನವಾಗಿ ಅರ್ಥೈಸುತ್ತಾಳೆ ಹಾಗೆಯೇ ಗಂಡಿಗೆ ಹೆಣ್ಣು ಮಾಯೆ ಆದರೆ ಹೆಣ್ಣಿಗೆ ಗಂಡು ಕೂಡ ಮಾಯೆ ಎಂದು ಹೇಳುತ್ತಾಳೆ. 
          ಅಕ್ಕಮಹಾದೇವಿ ತನ್ನ ಇನ್ನೊಂದು ವಚನದಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸ್ಥಿತಪ್ರಜ್ಞತೆಯ ಬಗ್ಗೆ ಹೀಗೆ ಹೇಳುತ್ತಾಳೆ.
‘ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿ ದೊಡಂತಯ್ಯ 
 ಸಮುದ್ರದ ತಡಿಯಲ್ಲಿ ಮನೆಯ ಮಾಡಿ ನೆರೆ ತೊರೆಗಳಿಗಂಜಿದೊಡೆಂತಯ್ಯ ಸಂತೆಯಲೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ 
 ಚೆನ್ನಮಲ್ಲಿಕಾರ್ಜುನ ದೇವ ಕೇಳಯ್ಯ ಈ ಲೋಕದ ಒಳಗೆ ಹುಟ್ಟಿದ ಬಳಿಕ ಸ್ತುತಿ ನಿಂದೇಗಳುಬಂದಡೆ ಕೋಪಗೊಳ್ಳದೇ ಸಮಾಧಾನಿಯಾಗಿರಬೇಕು’  

ಅಕ್ಕ ಮಹಾದೇವಿ 12ನೇ ಶತಮಾನದಲ್ಲಿ ತನ್ನ ವೈಚಾರಿಕತೆಯನ್ನು ಮೆರೆದು ತನ್ನ ಶಿವಾನುಭವಗಳನ್ನು ಸೈದ್ಧಾಂತಿಕ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ವಚನಗಳನ್ನು ರಚಿಸಿ ಆಧ್ಯಾತ್ಮಿಕ ಸಾಧನೆಯನ್ನ ತೋರಿದ್ದಾಳೆ.
ಅಕ್ಕಮಹಾದೇವಿಯನ್ನು ಕನ್ನಡದ ಪ್ರಥಮ ಮಹಿಳಾ ಕವಿಯಿತ್ರಿಯಾಗಿ, ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸ ಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಮಲ್ಲಿಕಾರ್ಜುನನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ.


ಪ್ರೊ ರಾಜನಂದಾ ಘಾರ್ಗಿ

Leave a Reply

Back To Top