ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಕ್ಕಮಹಾದೇವಿ ಜಯಂತಿ ವಿಶೇಷ

ಇಂದಿರಾ ಮೋಟೆಬೆನ್ನೂರ.

*ಅಕ್ಕ”

ಬೆಡಗಿನಲಿ ಉಡುತಡಿಯ ಮುತ್ತೊಂದು ತೂಗಿರಲು
ಪಾಡಿಹುದು ಜಗವೆಲ್ಲ ಭಕ್ತಿಯಲಿ ಮಿಂದು
ಮೂಡಿಹುದು ಎಲ್ಲೆಡೆಯು ನವಕಾಂತಿ ನವಸ್ಪರ್ಶ
ಬೇಡುತಲಿ ಶಾಂತಿಯನು ಇಂದುವದನೆ.

ಅನುಭಾವ ಸಂಪದವು ಅಕ್ಕನಾ ವಚನಗಳು
ದಿನದಿನವು ಬೆಳಗುವವು ಸುಜ್ಞಾನ ಹಣತೆ
ಪ್ರತಿದಿನವು ಅರಿವಿನಲಿ ಅರಳುತಲಿ ಪರಿಮಳವು
ತನುಮನವು ಸಾರ್ಥಕವು ಇಂದುವದನೆ

ತಿಮಿರವನು ಕಳೆಯುತಲಿ ತಿರೆಯಲ್ಲಿ ತಿರುಗುತಲಿ
ಸುಮನಗಳ ವಿಕಸಿಸುತ ವೈರಾಗ್ಯ ದೀಪ
ತಮವಳಿಸಿ ಶಶಿಯಂತೆ ಅರಿವಿನಾ ಚಂದ್ರಿಕೆ
ಘಮವನ್ನು ಹಂಚಿದಳು ಇಂದುವದನೆ

ಇನಿದನಿಯ ಕೋಗಿಲೆಯ ಬಳಿಸಾರಿ ಕೇಳಿಹಳು
ತನಿಹಾಲ ಮಲ್ಲಯ್ಯ ಎಲ್ಲಿಹನು ಪೇಳು
ಅನುದಿನವು ಸಾವಿರದ ಚೆಲುವನನು ನೆನೆಯುತಲಿ
ಅನುಭಾವ ಮಲ್ಲಿಗೆಯು ಇಂದುವದನೆ

ಮಾನಿನಿಯ ವೈರಾಗ್ಯ ವಚನದಲಿ ಹೊಮ್ಮಿರಲು
ಕಾನನದಿ ನವಿಲೊಂದು ಗರಿಗೆದರಿ ನಲಿಯೆ
ವಿನಯದಾ ಮೂರುತಿಯು ನಯವಾದ ನಡೆನುಡಿಯೆ
ಮನದಲ್ಲಿ ನೆಲೆಸಿಹಳು ಇಂದುವದನೆ

ಹೊತ್ತಿಸುತ ಹಣತೆಗಳ ಎದೆಗೂಡ ತಾಣದಲಿ
ಬತ್ತದಾ ಅರಿವಿನಾ ಪ್ರಭೆಯಾಗಿ ಬೆಳಗಿ
ಬಿತ್ತುತಲಿ ಬೆಳಕನ್ನು ಕದಳಿಯಲಿ ಕರ್ಪೂರ
ಮುತ್ತಂತೆ ಕರಗಿತಾ ಇಂದುವದನೆ


_ಇಂದಿರಾ ಮೋಟೆಬೆನ್ನೂರ.

About The Author

Leave a Reply

You cannot copy content of this page

Scroll to Top