ಅಕ್ಕಮಹಾದೇವಿ ಜಯಂತಿ ವಿಶೇಷ
ವೈರಾಗ್ಯ ಪಥದ ವಿರಾಗಿಣಿ ಅಕ್ಕಮಹಾದೇವಿ
ಆಶಾ ಎಸ್ ಯಮಕನಮರಡಿ
ಶರಣರ ವಚನಗಳೆಂದರೆ ಬದುಕಿನ ಸತ್ಯ ದರ್ಶನ ಮಾಡಿಸುವ ಅನುಭಾವದ ನುಡಿಮುತ್ತುಗಳು.
ನೀರೊಳಗೆ ಹುಟ್ಟುವ ಲವಣ,ಮಂಜುಗಡ್ಡೆ
ಮತ್ತೆ ನೀರಿನಲ್ಲಿ ಕರಗಿ ಒಂದಾಗುವವು.ಆದರೆ ನೀರಿನ ಹನಿಇಂದ
ನಿರ್ಮಾಣಗೊಂಡ ಮುತ್ತು ಮಾತ್ರ ಮತ್ತೆ ನೀರಿನಲ್ಲಿ ಕರಗದೆ ಇರುವಂತೆ ಅನುಭಾವಿಗಳ ಆದರ್ಶ ಬದುಕೆನ್ನುವುದನ್ನು ಅವರ ವಚನಳಿಂದಲೆ
ತಿಳಿಯಬಹುದು. ಅಂತಹ ಶ್ರೇಷ್ಠ ವಚನಗಾರರ ಸಾಲಿನಲ್ಲಿ ಮೊದಲಗೆ
ನಿಲ್ಲುವವರೆ ಹೆಣ್ಕುಲದ ಕಣ್ಮನಿ ಅಕ್ಕಮಹಾದೇವಿ.
ಕ್ರಿ.ಶ.1150 ರ ಕಾಲಾವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಗ್ರಾಮದಲ್ಲಿ ನಿರ್ಮಲ ಶೆಟ್ಟಿ ,ಸುಮತಿ ದಂಪತಿಗಳ ಪುಣ್ಯ ಉದರದಲ್ಲಿ ವೈಶಾಖ ಶುದ್ಧ ಹುಣ್ಣಿಮೆ ದಿನದಂದು ಪೂರ್ಣ ಚಂದ್ರನ ತೇಜಸ್ಸನ ಪುಂಜವೆ ಮೈದೆಳದಂತೆ ಜನಿಸಿಬಂದ ಕನ್ಯಾರತ್ನವೆ ಮಹಾದೇವಿ.ತಂದೆತಾಯಿಯರಂತೆ ಶಿವಭಕ್ತೆ ಆಗಿದ್ದ ಮಹಾದೇವಿ ಬಾಲ್ಯದಿಂದಲೆ ಭಕ್ತಿ ಜ್ಞಾನ ವೈರಾಗ್ಯವನ್ನು ಮೈಗೂಡಿಸಿಕೊಂಡೆ ಬೆಳೆದವರು.ಅಪ್ರತಿಮ ಸೌಂದರ್ಯ ಹೊಂದಿದ್ದ ಮಹಾದೇವಿ ವಸಂತಕ್ಕೆ ಕಾಲಿಟ್ಟಾಗ ಮಹಾದೇವಿಯ ಸೌಂದರ್ಯಕ್ಕೆ ಮನಸೋತ ಉಡುತಡಿಯ ದೊರೆ ಕೌಶಿಕ ಒತ್ತಾಯಪೂರ್ವಕವಾಗಿ ತನ್ನ ಅಧಿಕಾರ ದರ್ಪದಿಂದ ಮಹಾದೇವಿಯನ್ನು ವಿವಾಹವಾಗಿ ಅರೆ ಮನೆಗೆ ಕರೆತಂದರು ಆಧ್ಯಾತ್ಮ ಪಥದ ಪಥಿಕಳಾದ ಮಹಾದೇವಿಗೆ ಅರಮನೆಯ ವೈಭವ ಸೆರೆಮನೆಯ ವಾಸದಂತಾಗುತ್ತದೆ.ಮಹಾದೇವಿಯ ಆಧ್ಯಾತ್ಮ ಭಕ್ತಿ ಜೀವನಕ್ಕೆ ತಾನೆಂದು ಅಡ್ಡಿಮಾಡಲಾರೆ ಎಂಬ ಕರಾರನ್ನು ರಾಜ ಕೌಶಿಕ ಮುರಿದಾಗ ಮಹಾದೇವ ಅರಮನೆಯನ್ನು ತೊರೆದು ತನ್ನ ಆರಾಧ್ಯ ದೈವ ಚೆನ್ನಮಲ್ಲಿಕಾರ್ಜುನ ಲಿಂಗರೂಪವನ್ನು ಕರಸ್ಥಲದಲ್ಲಿ ಹಿಡಿದು ಲಿಂಗಾಂಗ ಸಾಮರಸ್ಯ ಸಾಧನೆಯಂತೆ ಶರಣಸತಿ ಲಿಂಗಪತಿ ಎನ್ನುವ ಭಾವದಲ್ಲಿ
ಪರಮವಿರಾಗಿಯಾಗಿ ಅರಮನೆಯ ವೈಭವ ತಮ್ಮ ಸರ್ವಾಲಂಕಾರ ಕಳಚಿ ವೈರಾಗ್ಯದ ಸಂಕೇತವಾದ ಕಪ್ಪುಕಂಬಳಿಯಹೊದ್ದು (ಕೂದಲಿಗೆ ಬಟ್ಟೆ ಕಂಬಳಿ) ಚೆನ್ನಮಲ್ಲಿಕಾರ್ಜುನನ ಅರಸುತ್ತಾ ಲೋಕವನ್ನೆಲ್ಲಾ ಸುತ್ತುತ್ತ ಬಸವಕಲ್ಯಾಣಕ್ಕೆ ಬಂದು ಸೇರುವಲ್ಲಿ ಮಹಾದೇವಿ ಎದುರಿಸಿದ ಕಷ್ಟ ನೋವು ಅವಮಾನಗಳೆಲ್ಲಾ ಮುಂದೆ ಅವರ ವಚನಗಳಲ್ಲಿ ಹರಳುಗಟ್ಟಿದವು. ಪತಿಯನ್ನೆ ತೊರೆದು ಲೋಕವನ್ನೇ ಎದುರಿಸಿ ದಿಟ್ಟ ಬದುಕಿನ ದಾರಿಯಲ್ಲಿ ಗಟ್ಟಿ ಹೆಜ್ಜೆಯನೂರಿ ಕನ್ನಡದ ಹೆಣ್ಣುಮಗಳೊಬ್ಬಳು ಮೊಟ್ಟಮೊದಲ ಬಾರಿಗೆ ತಮ್ಮ ವೈಚಾರಿಕ ಸ್ವಾತಂತ್ರ್ಯವನ್ನು
ನಿರ್ಭಿಡೆಇಂದ ಜಗಕ್ಕೆ ಹಾಕಿದ ಸವಾಲಿನಂತೆ ಸಾಧಿಸಿ ಬದುಕಿತೊರಿದ್ದು ಇತಿಹಾಸದಲ್ಲಿಯೇ ದಾಖಲಾಗಿದೆ.
ಬಸವ ಕಲ್ಯಾಣಕ್ಕೆ ಬಂದಾಗ ಮೊದಲು ಪುರ ಪ್ರವೇಶ ಮಾಡಿದಾಗ ಶರಣು ಕಿನ್ನರಿಬೊಮ್ಮನವರ ಸವಾಲಿನಂತಹ ಪ್ರಶ್ನೆಗಳಿಗೆಲ್ಲಾ ದಿಟ್ಟತನದಿಂದ ಸಮರ್ಥವಾಗಿ ಉತ್ತರಿಸಿದ ಸ್ಥಳ ಕುರುಹನ್ನು ಇಂದಿಗೂ ನಾವು ಕಲ್ಯಾಣ ಪಟ್ಟಣದ ಬಂದವರು ಓಣಿ ಎನ್ನುವಲ್ಲಿ ನೋಡಬಹುದು. ಮಹಾದೇವಿಯವರು ನಡೆದ ಸ್ಥಳಗಳೆಲ್ಲಾ ಪಾವನ ಕ್ಷೇತ್ರಗಳಾಗಿವೆ.ಅಣ್ಣ ಬಸವಣ್ಣನವರನ್ನು ಕಂಡು ತಮ್ಮ ಆಧ್ಯಾತ್ಮ ಬದುಕಿನ ನೆಲೆಯ ಅರಿಯುವ ಆಶಯದಲ್ಲಿ ಅನುಭವ ಮಂಟಪಕ್ಕೆ ಬಂದಾಗ ಅಲ್ಲಿ ಪ್ರಭುದೇವ, ಬಸವಣ್ಣ, ಚನ್ನಬಸವಣ್ಣ ಹೀಗೆ ಎಲ್ಲಾ ಮಹಾನ್ ಸಾಧಕರು ಕೇಳಿದ ಎಲ್ಲ ಪ್ರಶ್ನೆಗಳಿಗೂ ದಿಟ್ಟತನದಿ ಉತ್ತರಿಸಿದ ಮಾತುಗಳೆಲ್ಲಾ ವಚನಗಳಾಗಿವೆ.ಅಂತಹ ಮಹಾನ್ ಜ್ಞಾನಿಗಳ ಎದಿರು ತನ್ನನ್ನು ಹೆಣ್ಣುರೂಪದ ಗಂಡೆಂಬುದನ್ನು ಸಾಬೀತು ಪಡಿಸುವಲ್ಲಿ,”ನಾಮದಲ್ಲಿ ಹೆಣ್ಣೆಂದು ಹೆಸರಾದರೇನು ಭಾವಿಸಲು ತಾನು ಗಂಡು ರೂಪ” ಎಂದು ಅತ್ಯಂತ ಸ್ಪಷ್ಟವಾಗಿ ಉತ್ತರಿಸಿದ ಮಹಾದೇವಿಯವರ ಘನವ್ಯಕ್ತಿತ್ವಕ್ಕೆ ಶರಣೆಂದ ಪ್ರಭುದೇವರು “ಅಕ್ಕ” ನೆಂಬ ಬಿರುದು ನೀಡಿ ಹರಿಸಿದಾಗ ಮಹಾದೇವಿ ಜಗಕ್ಕೆಲ್ಲಾ ಅಕ್ಕಮಹಾದೇವಿ ಯಾಗುತ್ತಾರೆ.
ವ್ಯಕ್ತಿಯ ಒಳಗೆ ಸುಳಿವ ಆತ್ಮಕ್ಕೆ ಹೆಣ್ಣು ಗಂಡೆಂಬ ಭೇದವಿಲ್ಲಾ ಹೀಗಾಗಿ ಪುರುಷ ಮತ್ತು ಸ್ತ್ರೀ ಸರ್ವ ವಿಧದಲ್ಲಿಯು ಸಮಾನರು ಎಂಬ ವಿಚಾರಕ್ಕೆ ಒಂದು ನಿಜ ಅಸ್ತಿತ್ವವನ್ನು ಕೊಟ್ಟ ಕಾಲ ಇದಾಗಿತ್ತು.ಸಾಮಾಜಿಕ ಧಾರ್ಮಿಕ ವೈಚಾರಿಕ ಎಲ್ಲದರಲ್ಲಿ ಸಮಾನತೆಯ ಪಡೆವ ಹಕ್ಕು ಹೆಣ್ಣಿಗೂ ಇದೆ ಎಂಬುದನ್ನು ತಮ್ಮ ಬದುಕಿನಲ್ಲಿ ಬದುಕಿತೊರಿ ಸಾಧನೆಗೈದ ಅಕ್ಕಮಹಾದೇವಿಯವರ
ಅನುಭಾವದ ನುಡಿಗುಚ್ಛಗಳಾದ ವಚನಗಳು ಎಲ್ಲರಿಗೂ ಮಾದರಿ ಆದಂತಹುಗಳು.
ಶ್ರೇಷ್ಠ ಶರಣ ಚನ್ನಬಸಣ್ಣನವರೆ ಅಕ್ಕನವರ ವಚನಗಳ ಶ್ರೇಷ್ಠತೆಯನ್ನು ತಮ್ಮ ಒಂದು ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ.
“ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ
ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತುವಚನ
ಪ್ರಭುದೇವರ ಹತ್ತುವಚನಕ್ಕೆ ಅಜಗಣ್ಣನ ಐದು ವಚನ
ಮಹಾದೇವಯಕ್ಕನ ಒಂದು ವಚನ ನಿರ್ವಚನ”
ಈ ವಚನವೇ ಅಕ್ಕಮಹಾದೇವಿಯವರ ದಿವ್ಯ ಜ್ಞಾನವನ್ನು ಪರಿಚಯಿಸುತ್ತದೆ.
ಅನುಭವ ಮಂಟಪದಲ್ಲಿನ ಎಲ್ಲಾ ಮಹಾನ್ ಶರಣರ ಕರುಣೆಯ ಪಡೆದ ಬಗೆಯನ್ನು ಅಕ್ಕ ತಮ್ಮ ವಚನದಲ್ಲಿ ಹೀಗೆ ಹೇಳುತ್ತಾರೆ.
“ಬಸವಣ್ಣನ ಭಕ್ತಿ, ಚೆನ್ನಬಸವಣ್ಣ ಜ್ಞಾನ
ಮಡಿವಾಳಯ್ಯನ ನಿಷ್ಠೆ,ಪ್ರಭುದೇವರ ಜಂಗಮ ಸ್ಥಲ
ಅಜಗಣ್ಣನ ಐಕ್ಯಸ್ಥಲ,ನಿಜಗುಣನ ಆರೂಢ ಸ್ಥಲ
ಸಿದ್ಧರಾಮಯ್ಯನ ಸಮಾಧಿ ಸ್ದಲ
ಇಂತಿವರ ಕರುಣಪ್ರಸಾದ ಎನಗಾಯಿತು ಚೆನ್ನಮಲ್ಲಿಕಾರ್ಜುನ”
ಹೀಗೆ ಘನಮಹಿಮರ ಕರುಣೆಯ ಸಿರಿಹೊತ್ತು ಚೆನ್ನಮಲ್ಲಿಕಾರ್ಜುನನ್ನು ಅರಸುತ್ತ ನಡೆದ ಅಕ್ಕ ಶ್ರೀ ಶೈಲದೆಡೆಗೆ ತನ್ನ ಪಯಣ ಬೆಳೆಸುವಾಗ ನೆರೆದ ಪುರದ ಜನರಿಗೆ
“ನಿಮ್ಮ ಮಂಡೆಗೆ ಹೂವ ತರೆನಲ್ಲದೆ ಹುಲ್ಲತಾರೆನು” ಎಂದು ಭರವಸೆಯ ನೀಡುವಲ್ಲಿ ಹೆಣ್ಣಾದ ತನ್ನ ಹೊಣೆಗಾರಿಕೆಯನ್ನು ತಾವ ಕುಂದಿಲ್ಲದೆ ನಿರ್ವಹಿಸುವೆ ಎನ್ನುವಲ್ಲಿ ಅತ್ಯಂತ ಸ್ಪಷ್ಟವಾಗಿ ನೆರನುಡಿಗಳಲ್ಲಿ ತಮ್ಮ ವಚನದ ಮೂಲಕ ತಿಳಿಸುತ್ತಾರೆ. ಲೋಕದ ನಿಂದೆ ನಿಷ್ಠುರಗಳೆನೆಲ್ಲಾ ಹೇಗೆ ಎದುರಿಸಬೇಕೆಂಬುದನ್ನು “ಬೆಟ್ಟದಾ ಮೇಲೊಂದು ಮನೆಯ ಮಾಡಿ” ಎನ್ನುವ ತಮ್ಮ ವಚನದಲ್ಲಿ ಅರುಹಿದ ಅಕ್ಕನವರ ಬದುಕಿನಷ್ಠೆ ಅವರ ವಚನಗಳು ಸಾಂತ್ವನ ನೀಡುತ್ತವೆ.
ತನ್ನ ಆರಾಧ್ಯ ದೈವ ಚೆನ್ನಮಲ್ಲಿಕಾರ್ಜುನ
ಲೌಕಿಕರ ಗಂಡಂದಿರಂತೆ ಹುಟ್ಟುಸಾವಿನ ಬಂಧನದಲ್ಲಿ ಸಿಲುಕಿದವನಲ್ಲಾ.
ತಾನೋಲಿದ ಪತಿಗೆ ಸಾವಿಲ್ಲಾ ಕೇಡಿಲ್ಲಾ ರೂಹಿಲ್ಲಾ ಎಂಬುದನ್ನು ಅಕ್ಕ ತಮ್ಮ ವಚನದಲ್ಲಿ ನಿರೂಪಿಸಿದ್ದಾರೆ. ಅಂತಹ ಅಪರೂಪದ ಆತ್ಮಸಂಗಾತಿಯನ್ನರಸುತ್ತ ಶ್ರೀ ಶೈಲಕ್ಕೆ ನಡೆದ ಅಕ್ಕಾ ಮಾರ್ಗಮಧ್ಯದಲ್ಲಿ ಇರುವ ಗಿಡ ಮರ ಬಳ್ಳಿ ಪಶು ಪಕ್ಷಿ ಸಂಕುಲಕ್ಕೆಲ್ಲಾ ತನ್ನ ಗಂಡನ ಕುರುಹುಗಳನ್ನು ತಿಳಿಸುತ್ತಾ ತಾವು ಕಂಡಿರಾ ಎಂದು ಕೇಳುತ್ತಲೆ ಪಯಣಿಸುವ ದೃಷ್ಯ ಅವರ ವಚನಕಾವ್ಯದಲ್ಲಿ ದೃಶ್ಯಕಾವ್ಯ ದಂತೆ ಗೋಚರಿಸುತ್ತದೆ.
ಹೀಗೆ ಮಹಾದೇವಿಯಾವರು ಅಕ್ಕಮಹಾದೇವಿಯಾಗುವರೆಗಿನ ವೈರಾಗ್ಯ ಆಧ್ಯಾತ್ಮದ ಪಯಣದ ಪ್ರತಿಯೊಂದು ಸಂಗತಿಗಳು “ಚೆನ್ನಮಲ್ಲಿಕಾರ್ಜುನ” ಎನ್ನುವ ಅಂಕಿತನಾಮದಲ್ಲಿ ಸಹಸ್ರ ವಚನಗಳಾಗಿವೆ ಆದರೆ ದಾಖಲೆಯಾಗಿ ದೊರಕಿರುವ ವಚನಗಳ ಸಂಖ್ಯೆ ಕೇವಲ 354. ವಚನಗಳನ್ನು ಹೊರತುಪಡಿಸಿ
ಯೋಗಾಂಗ ತ್ರಿವಿಧಿ, ಸೃಷ್ಟಿಯ ವಚನ,ಮಂತ್ರಗೋಪ್ಯಗಳೆಂಬ ಸಣ್ಣ ಕೃತಿಗಳನ್ನು ಅಕ್ಕ ರಚಿಸಿರುವುದಾಗಿ ಸಂಶೋಧಕರು ಉಲ್ಲೇಖಿಸಿದ್ದಾರೆ.
ಮಹಾದೇವಿಅಕ್ಕನವರು ಒಬ್ಬ ಶ್ರೇಷ್ಠ ವಚನಗಾರ್ತಿಯೊಂದಿಗೆ ಶ್ರೇಷ್ಠ ಕನ್ನಡದ ಮೊದಲ ಕವಿಯತ್ರಿ ಎನ್ನುವುದರಲ್ಲಿ ಯಾವ ಸಂದೇಹವು ಇಲ್ಲಾ. ಇವರ ವಚನಗಳಲ್ಲಿ ಜೀವನದ ಪ್ರತಿ ಹಂತದ ಅನುಭವಗಳು ಭಾವಲಹರಿಗಳಾಗಿ ಹರಿದು ಭಾವಗೀತೆಯ ಛಾಯೆಯಲ್ಲಿ ಮೂಡಿಬಂದಿವೆ . ಅತ್ಯಂತ ಸರಳ ಸಹಜ ಭಾವಪೂರಿತ ವಚನಗಳು ಮನಮುಟ್ಟುವ ಗೀತೆಗಳಾಗಿ ಎಲ್ಲರಲ್ಲಿ ನಾವು ಚೈತನ್ಯವನ್ನು ತುಂಬುತ್ತವೆ.
ಅಕ್ಕಮಹಾದೇವಿಯರ ಘನವೈರಾಗ್ಯದ ಜೀವನ ಹಾಗೂ ಸಾಧನೆ ಬದುಕು ಅಂದಿಗೂ ಇಂದಿಗೂ ಮುಂದೆಯೂ ಕೂಡಾ ನಿತ್ಯ ನಿರಂತರ ಸತ್ಯದರ್ಶನ ತೋರುವ ದಾರಿದೀವಿಗೆಯಾಗಿದೆ. ಸರ್ವ ಸಮಾನತೆಯ ಹೆಗ್ಗುರುತಾಗಿದ ಅಕ್ಕಮಹಾದೇವಿ ಅವರ ಜಯಂತಿ ಉತ್ಸವದ ಈ ಸುದಿನ ಎಲ್ಲಾ ಮಹಿಳೆಯರಿಗೆ ಹೆಮ್ಮೆಯ ಹೆಗ್ಗುರುತಿನ ದಿನವಾಗಿದೆ.ಎಲ್ಲರಿಗೂ ಅಕ್ಕನ ಜಯಂತಿಯ ಹಾರ್ದಿಕ ಶುಭಾಶಯಗಳು.
ಆಶಾ ಎಸ್ ಯಮಕನಮರಡಿ
ಅಕ್ಕಾ ಅರ್ಥಪೂರ್ಣ ಅಭಿನಂದನೆಗಳು.
ಧನ್ಯವಾದಗಳು ತಮಗೆ
ಅರ್ಥ ಪೂರ್ಣ ಲೇಖನ.
ಹಮೀದಾ ಬೇಗಂ.
ತುಂಬಾ ಧನ್ಯವಾದಗಳು ಮೇಡಂ